ಮುಂಬೈ: ಸತತ ಆರನೇ ದಿನವೂ ಅಲ್ಪ ಗಳಿಕೆ ದಾಖಲಿಸುವ ಮೂಲಕ ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ (BSE) ಮತ್ತು ಎನ್ಎಸ್ಇ ನಿಫ್ಟಿ (NSE nifty) ವಾರದ ವಹಿವಾಟು ಮುಕ್ತಾಯಗೊಳಿಸಿವೆ. ಆ್ಯಕ್ಸಿಸ್ ಬ್ಯಾಂಕ್ (Axis Bank) ಹಾಗೂ ಐಸಿಐಸಿಐ ಬ್ಯಾಂಕ್ (ICICI Bank) ಷೇರು ಮೌಲ್ಯಗಳು ಉತ್ತಮ ಗಳಿಕೆ ದಾಖಲಿಸಿವೆ. ಹಲವು ದಿನಗಳ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಹೆಚ್ಚು ಖರೀದಿ ಮಾಡಿದರು. ಇವರು 1,864.79 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿರು.
ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.18ರಷ್ಟು ಅಥವಾ 104.25 ಅಂಕ ಏರಿಕೆ ಕಂಡು 59,307.15ರಲ್ಲಿ ವಹಿವಾಟು ಕೊನೆಗೊಳಿಸಿದೆ. ಇದರೊಂದಿಗೆ ಸತತ ಆರನೇ ದಿನವೂ ಗಳಿಕೆ ದಾಖಲಿಸಿದಂತಾಗಿದೆ. ಒಂದು ಹಂತದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 59,590.93ರ ವರೆಗೂ ಏರಿಕೆ ಕಂಡು ಗಮನ ಸೆಳೆದಿತ್ತು.
ಇದನ್ನೂ ಓದಿ: Share Market Highlights: ಅಲ್ಪ ಗಳಿಕೆಯೊಂದಿಗೆ ವಹಿವಾಟು ಮುಗಿಸಿದ ಷೇರುಪೇಟೆ
ಎನ್ಎಸ್ಇ ನಿಫ್ಟಿ ಶೇಕಡಾ 0.07ರಷ್ಟು ಅಥವಾ 12.35 ಅಂಶ ಚೇತರಿಕೆ ಕಂಡು 17,576.30ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.
ಶೇಕಡಾ 8.96 ಗಳಿಕೆ ಕಂಡ ಆ್ಯಕ್ಸಿಸ್ ಬ್ಯಾಂಕ್:
ಸೆನ್ಸೆಕ್ಸ್ನಲ್ಲಿ ಆ್ಯಕ್ಸಿಸ್ ಬ್ಯಾಂಕ್ ಶೇಕಡಾ 8.96 ಗಳಿಕೆ ದಾಖಲಿಸಿದೆ. ಗುರುವಾರದ ವಹಿವಾಟಿನಲ್ಲಿ ಕಂಪನಿಯು ಶೇಕಡಾ 66.29ರ ಏರಿಕೆ ಕಂಡಿತ್ತು. ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ನ ನಿವ್ವಳ ಲಾಭ 5,625.25 ಕೋಟಿ ಆಗಿದ್ದು, ಕಂಪನಿಯ ಷೇರು ವಹಿವಾಟಿನಲ್ಲಿ ಚೇತರಿಕೆಗೆ ನೆರವು ನೀಡಿದೆ.
ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯುನಿಲೀವರ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೆಸ್ಲೆ, ಟೈಟಾನ್ ಆ್ಯಂಡ್ ಅಲ್ಟ್ರಾಟೆಕ್ ಸಿಮೆಂಟ್ ಈ ವಾರದ ಪ್ರಮುಖ ಗಳಿಕೆದಾರ ಕಂಪನಿಗಳಾಗಿವೆ.
ಮತ್ತೊಂದೆಡೆ ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್, ಇಂಡಸ್ಇಂಡ್ ಬ್ಯಾಂಕ್ ಹಾಗೂ ಲ್ಯಾರ್ಸನ್ & ಟರ್ಬೊ ನಷ್ಟ ಅನುಭವಿಸಿದವು.
ಮುಹೂರ್ತ ವಹಿವಾಟು (Diwali Muhurat Trading):
ದೀಪಾವಳಿ ಪ್ರಯುಕ್ತ ಸೋಮವಾರ ಸಂಜೆ 6.15 ರಿಂದ 7.15 ರವರೆಗೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು ನಡೆಯಲಿದೆ. ಈ ವಹಿವಾಟಿನಲ್ಲಿ ಭಾಗಿಯಾಗಲು ವಹಿವಾಟುದಾರರು ಕಾತರದಿಂದ ಕಾಯುತ್ತಿದ್ದಾರೆ. ಮುಹೂರ್ತ ವಹಿವಾಟಿನಲ್ಲಿ ಭಾಗಿಯಾಗುವುದರಿಂದ ಹಾಗೂ ಖರೀದಿ ಮಾಡುವುದರಿಂದ ವರ್ಷವಿಡೀ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆಯಾಗಲಿದೆ ಎಂಬ ನಂಬಿಕೆ ಹೂಡಿಕೆದಾರರಲ್ಲಿದೆ. ಪ್ರತಿ ವರ್ಷ ದೀಪಾವಳಿಯಂದು ಒಂದು ಗಂಟೆ ಅವಧಿಗೆ ಮುಹೂರ್ತ ವಹಿವಾಟು ನಡೆಸಲಾಗುತ್ತದೆ.
ಕಚ್ಚಾ ತೈಲ ಬೆಲೆ ಇಳಿಕೆ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.37ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ 92.02 ಡಾಲರ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Fri, 21 October 22