Share Market Highlights: ಅಲ್ಪ ಗಳಿಕೆಯೊಂದಿಗೆ ವಹಿವಾಟು ಮುಗಿಸಿದ ಷೇರುಪೇಟೆ
ಹಬ್ಬದ ಉತ್ಸಾಹದಲ್ಲಿ ವಹಿವಾಟು ಮುಂದುವರಿಸಿರುವ ಭಾರತೀಯ ಷೇರುಪೇಟೆ ಸತತ ನಾಲ್ಕನೇ ದಿನವೂ ಅಲ್ಪ ಗಳಿಕೆಯೊಂದಿಗೆ ವಹಿವಾಟು ಮುಗಿಸಿದೆ.
ನವದೆಹಲಿ: ಹಬ್ಬದ (Festival) ಉತ್ಸಾಹದಲ್ಲಿ ವಹಿವಾಟು ಮುಂದುವರಿಸಿರುವ (Diwali) ಭಾರತೀಯ ಷೇರುಪೇಟೆ ಸತತ ನಾಲ್ಕನೇ ದಿನವೂ ಅಲ್ಪ ಗಳಿಕೆಯೊಂದಿಗೆ ವಹಿವಾಟು ಮುಗಿಸಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ (BSE) 146.59 ಅಂಶ ಚೇತರಿಕೆ ಕಂಡು 59,107.19 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಎನ್ಎಸ್ಇ ನಿಫ್ಟಿ (NSE Nifty) 25.30 ಅಂಶ ಹೆಚ್ಚಾಗಿ 17,512.25 ರಲ್ಲಿ ವಹಿವಾಟು ಕೊನೆಗೊಳಿಸಿದೆ. ಬಿಎಸ್ಇ ಶೇಕಡಾ 0.25ರಷ್ಟು ಚೇತರಿಕೆ ದಾಖಲಿಸಿದರೆ, ನಿಫ್ಟಿ ಶೇಕಡಾ 0.25ರ ಗಳಿಕೆ ಕಂಡಿದೆ.
ಎಚ್ಡಿಎಫ್ಸಿ, ನೆಸ್ಲೆ ಇಂಡಿಯಾ, ಐಟಿಸಿ, ರಿಲಯನ್ಸ್ ಇಂಡಸ್ಟ್ರೀನ್, ಆ್ಯಕ್ಸಿಸ್ ಬ್ಯಾಂಕ್ಗಳು ನಿಫ್ಟಿಯಲ್ಲಿ ಉತ್ತಮ ಗಳಿಕೆ ದಾಖಲಿಸಿವೆ. ಎನ್ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಎಸ್ಬಿಐ, ಬಜಾಜ್ ಫಿನ್ಸರ್ವ್ ಹಾಗೂ ಕೋಲ್ ಇಂಡಿಯಾ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.
ಇದನ್ನೂ ಓದಿ: Stock Market Updates: ಹಬ್ಬದ ಉತ್ಸಾಹದಲ್ಲಿ ಷೇರುಪೇಟೆ, ನಾಲ್ಕನೇ ದಿನವೂ ಗಳಿಕೆಯ ಓಟ
ವಲಯವಾರು, ಲೋಹಗಳ ಷೇರುಗಳಲ್ಲಿ ತಲಾ ಶೇಕಡಾ 1ರಷ್ಟು ಕುಸಿತವಾಗಿದೆ. ಬಿಎಸ್ಇ ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಸ್ಥಿರವಾಗಿ ವಹಿವಾಟು ನಡೆಸಿವೆ. ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ವಿರುದ್ಧ 82.95ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯದ ವೇಳೆ ರೂಪಾಯಿ ಮೌಲ್ಯ 82.36 ಆಗಿತ್ತು.
ಬಿಎಸ್ಇ, ನಿಫ್ಟಿ ಸಕಾರಾತ್ಮಕ ವಹಿವಾಟು:
ಬುಧವಾರದ ವಹಿವಾಟಿನ ಆರಂಭದಲ್ಲಿಯೂ ಬಿಎಸ್ಇ, ನಿಫ್ಟಿ ಚೇತರಿಕೆ ಹಾದಿಯಲ್ಲೇ ಮುಂದುವರಿದಿದ್ದವು. ಅಮೆರಿಕದ ಮಾರುಕಟ್ಟೆಯಲ್ಲಿ ನಿನ್ನೆಯ ವಹಿವಾಟು ಸಕಾರಾತ್ಮಕವಾಗಿ ಕೊನೆಗೊಂಡಿರುವುದು, ಗೋಧಿ ಸೇರಿದಂತೆ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ಇನ್ನೂ ಅನೇಕ ಅಂಶಗಳು ಮಾರುಕಟ್ಟೆಯ ಚೇತರಿಕೆಗೆ ಕಾಣವಾಗಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ, ಬೇಡಿಕೆ ಕುಸಿತದಿಂದಾಗಿ ಕಚ್ಚಾ ತೈಲದ ಬೆಲೆಯೂ ಇಳಿಕೆಯಾಗಿದೆ. ಸದ್ಯ ಬ್ಯಾರೆಲ್ ಕಚ್ಚಾ ತೈಲದ ದರ 6,846 ರೂ. ಆಗಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ ನವೆಂಬರ್ನಲ್ಲಿ ಪೂರೈಕೆಯಾಗಬೇಕಿರುವ ಕಚ್ಚಾ ತೈಲದ ಬೆಲೆ 17 ರೂ. ಇಳಿಕೆಯಾಗಿದೆ. 5,621 ಬ್ಯಾರೆಲ್ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರೆಲ್ಗೆ 6,846 ರೂ.ನಂತೆ ನಿಗದಿಯಾಗಿದೆ.
‘ರೆಪೊ ದರ ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಮುಂದಿನ ವರ್ಷದ ವೇಳೆಗೆ ರೆಪೊ ದರವನ್ನು ಶೇಕಡಾ 6ರ ಆಸುಪಾಸಿನಲ್ಲಿ ಇರುವಂತೆ ನೋಡಿಕೊಳ್ಳುವ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಶ್ರಮಿಸಲಾಗುವುದು’ ಎಂದು ಆರ್ಬಿಐ ಹಣಕಾಸು ನೀತಿ ಸಮಿತಿ ಸದಸ್ಯೆ ಅಶೀಮಾ ಗೋಯಲ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Wed, 19 October 22