IRCTC Tickets On EMI: ರೈಲ್ವೆಯಿಂದ ಹೊಸ ಕೊಡುಗೆ, ಈಗಲೇ ಪ್ರಯಾಣಿಸಿ, ನಂತರ ಪಾವತಿ ಮಾಡಿ
ಈ ಯೋಜನೆ ಮೂಲಕ ಪ್ರಯಾಣಿಕರು ರೈಲ್ವೆ ಟಿಕೆಟ್ಗೆ ಇಎಂಐ ಸೌಲಭ್ಯ ಪಡೆಯಬಹುದಾಗಿದೆ ಎಂದು ಐಆರ್ಸಿಟಿಸಿ ತಿಳಿಸಿದೆ.
ನವದೆಹಲಿ: ಈಗಲೇ ಪ್ರಯಾಣಿಸಿ, ಆಮೇಲೆ ಪಾವತಿಸಿ ಅಥವಾ ಟ್ರಾವೆಲ್ ನೌ ಪೇ ಲೇಟರ್ (TNPL) ಎಂಬ ಹೊಸ ಯೋಜನೆಯನ್ನು ಭಾರತೀಯ ರೈಲ್ವೆಯ (Indian Railway) ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಘೋಷಿಸಿದೆ. ಹಣಕಾಸು ಸೇವೆ ಒದಗಿಸುವ ಕ್ಯಾಷ್ಇ ಸಂಸ್ಥೆಯ ಸಹಯೋಗದಲ್ಲಿ ಈ ಸೇವೆ ನೀಡಲಾಗುತ್ತದೆ. ಇದರ ಮೂಲಕ ಪ್ರಯಾಣಿಕರು ರೈಲ್ವೆ ಟಿಕೆಟ್ಗೆ ಇಎಂಐ (EMI) ಸೌಲಭ್ಯ ಪಡೆಯಬಹುದಾಗಿದೆ ಎಂದು ಐಆರ್ಸಿಟಿಸಿ ತಿಳಿಸಿದೆ. ತಕ್ಷಣವೇ ಟಿಕೆಟ್ ಕಾಯ್ದಿರಿಸಿ ಮೂರರಿಂದ ಆರು ತಿಂಗಳ ವರೆಗಿನ ಇಎಂಐ ಸೌಲಭ್ಯವನ್ನು ಪ್ರಯಾಣಿಕರು ಪಡೆಯಬಹುದಾಗಿದೆ.
ಕ್ಯಾಷ್ಇ ಪಾವತಿ ಆಯ್ಕೆಯೊಂದಿಗೆ ಐಆರ್ಸಿಟಿಸಿ ಆ್ಯಪ್ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಇನ್ನೂ ಸರಳವಾಗಲಿದೆ. ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎನ್ನಲಾಗಿದೆ. ತತ್ಕಾಲ್ ಮತ್ತು ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಐಆರ್ಸಿಟಿಸಿ ಆ್ಯಪ್ನ ಚೆಕೌಟ್ ಪೇಜ್ನಲ್ಲಿ ಇಎಂಐ ಪಾವತಿ ಆಯ್ಕೆ ಲಭ್ಯವಾಗಲಿದೆ. ಐಆರ್ಸಿಟಿಸಿ ಆ್ಯಪ್ ಸುಮಾರು 9 ಕೋಟಿ ಡೌಲ್ಲೋಡ್ ಆಗಿದ್ದು, ಪ್ರತಿ ದಿನ 15 ಲಕ್ಷ ಟಿಕೆಟ್ಗಳನ್ನು ಈ ಆ್ಯಪ್ ಮೂಲಕ ಕಾಯ್ದಿರಿಸಲಾಗುತ್ತಿದೆ.
ಇದನ್ನೂ ಓದಿ: Indian Railways: ಗುಜರಿ ಮಾರಾಟದಿಂದ ರೈಲ್ವೆ ಇಲಾಖೆಗೆ 6 ತಿಂಗಳಲ್ಲಿ 2,582 ಕೋಟಿ ರೂ. ಆದಾಯ!
ದೇಶದ ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ಇನ್ನುಮುಂದೆ ಇಎಂಐ ಮೂಲಕ ಪಾವತಿ ಮಾಡಿ ರೈಲು ಪ್ರಯಾಣ ಮಾಡುವುದು ಬಹಳ ಸುಲಭವಾಗಿದೆ. ನಮ್ಮ ಸಂಸ್ಥೆಯು ಐಆರ್ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಘೋಷಿಸಲು ಬಹಳ ಸಂತಸವಾಗುತ್ತಿದೆ. ಈ ಯೋಜನೆ ಡಿಜಿಟಲ್ ಇಎಂಐ ಪಾವತಿ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲಿದೆ. ಬಹಳ ಸರಳವಾಗಿ ಪಾವತಿ ಮಾಡುವಂತೆ ಇಎಂಐ ಆಯ್ಕೆಯನ್ನು ನೀಡಲಾಗಿದೆ ಎಂದು ಕ್ಯಾಷ್ಇ ಸ್ಥಾಪಕ ಅಧ್ಯಕ್ಷ ವಿ. ರಮಣ್ ಕುಮಾರ್ ತಿಳಿಸಿದ್ದಾರೆ.
ಹೇಗೆ ಕಾರ್ಯನಿರ್ವಹಿಸುತ್ತದೆ?:
ಕ್ಯಾಷ್ಇ ಸಂಸ್ಥೆಯು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆಲ್ಗಾರಿದಂ ಪ್ಲಾಟ್ಫಾರ್ಮ್ ‘ಸೋಷಿಯಲ್ ಲೋನ್ ಕ್ವೊಟೆಂಟ್ (SLQ)’ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇಎಂಐ ಸೌಲಭ್ಯ ಪಡೆಯುವ ವ್ಯಕ್ತಿಯ ಪಾವತಿ ಸಾಮರ್ಥ್ಯ ಹೇಗಿದೆ ಎಂಬುದನ್ನು ಆತನ ಸಾಮಾಜಿಕ ಮತ್ತು ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಎಸ್ಎಲ್ಕ್ಯು ಲೆಕ್ಕಹಾಕುತ್ತದೆ. ಬಳಿಕ ಆತ ಇಎಂಐ ಸೌಲಭ್ಯಕ್ಕೆ ಅರ್ಹನೇ ಅಥವಾ ಅಲ್ಲವೇ ಎಂಬ ಮಾಹಿತಿ ಒದಗಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ