Stock Market Updates: ಎರಡನೇ ದಿನವೂ ಮುಂದುವರಿದ ಗಳಿಕೆಯ ಓಟ; ಈ ಕಂಪನಿಗಳಿಗೆ ಲಾಭ

| Updated By: Ganapathi Sharma

Updated on: Nov 23, 2022 | 5:36 PM

ಸೆನ್ಸೆಕ್ಸ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಡಾ. ರೆಡ್ಡೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸನ್ ಫಾರ್ಮಾ, ಮಾರುತಿ, ಎನ್​​ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳಿಕೆ ದಾಖಲಿಸಿವೆ.

Stock Market Updates: ಎರಡನೇ ದಿನವೂ ಮುಂದುವರಿದ ಗಳಿಕೆಯ ಓಟ; ಈ ಕಂಪನಿಗಳಿಗೆ ಲಾಭ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಕೆಲವು ದಿನಗಳ ಕುಸಿತದ ಬಳಿಕ ಮಂಗಳವಾರ ಹಳಿಗೆ ಮರಳಿದ್ದ ದೇಶೀಯ ಷೇರುಪೇಟೆಗಳು (Stock Markets) ಬುಧವಾರವೂ ಗಳಿಕೆಯ ಓಟ ಮುಂದುವರಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ನಡೆದ ಉತ್ತಮ ವಹಿವಾಟು, ಬ್ಯಾಂಕಿಂಗ್ ಷೇರುಗಳ ವಹಿವಾಟಿನಲ್ಲಿ ಚೇತರಿಕೆಯ ಕಾರಣ ದೇಶೀಯ ಷೇರುಪೇಟೆಗಳು ಅಲ್ಪ ಚೇತರಿಕೆಯೊಂದಿಗೆ ದಿನದ ವಹಿವಾಟು ಮುಗಿಸಿವೆ. ಬಿಎಸ್​ಇ ಸೆನ್ಸೆಕ್ಸ್ (BSE Sensex) 91.62 ಅಂಶ, ಅಂದರೆ ಶೇಕಡಾ 0.15ರಷ್ಟು ಗಳಿಕೆ ದಾಖಲಿಸಿ 61,510.58ರಲ್ಲಿ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 61,780.90ರ ವರೆಗೂ ವಹಿವಾಟು ದಾಖಲಿಸಿತ್ತು. ಎನ್​​​ಎಸ್​ಇ ನಿಫ್ಟಿ (NSE Nifty) ಶೇಕಡಾ 0.13ರಷ್ಟು, ಅಂದರೆ 23.05 ಅಂಶ ಚೇತರಿಸಿ 18,267.25ರಲ್ಲಿ ದಿನದ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಡಾ. ರೆಡ್ಡೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸನ್ ಫಾರ್ಮಾ, ಮಾರುತಿ, ಎನ್​​ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳಿಕೆ ದಾಖಲಿಸಿವೆ. ಪವರ್​ಗ್ರಿಡ್, ಟೆಕ್ ಮಹೀಂದ್ರಾ, ಟೈಟಾನ್, ಭಾರ್ತಿ ಏರ್​ಟೆಲ್ ಹಾಗೂ ಬಜಾಜ್ ಫಿನ್​ಸರ್ವ್ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 697.83 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: Mutual Fund: ಸಾಲುಸಾಲು ಎನ್​ಎಫ್​ಒ ಘೋಷಿಸಿದ ಫಂಡ್​ಹೌಸ್​ಗಳು; ಕೋಟಕ್​ ಸಿಲ್ವರ್, ಎಚ್​ಡಿಎಫ್​ಸಿ ಬ್ಯುಸಿನೆಸ್ ಸೈಕಲ್ ಪ್ರಮುಖ ಆಕರ್ಷಣೆ

ಏಷ್ಯಾದಾದ್ಯಂತ ಮಾರುಕಟ್ಟೆ ವಹಿವಾಟಿನಲ್ಲಿ ಬುಧವಾರ ಚೇತರಿಕೆ ಕಂಡುಬಂದಿದೆ. ಸಿಯೋಲ್, ಶಾಂಘೈ, ಹಾಂಗ್​ಕಾಂಗ್ ಷೇರು ಮಾರುಕಟ್ಟೆಗಳು ಉತ್ತಮ ವಹಿವಾಟು ನಡೆಸಿವೆ. ಯುರೋಪ್​ನಲ್ಲಿಯೂ ಮಧ್ಯಾಹ್ನ ನಂತರದ ಸೆಷನ್ ವೇಳೆಗೆ ಮಾರುಕಟ್ಟೆ ಚೇತರಿಸಿಕೊಂಡಿದೆ. ವಾಲ್​ಸ್ಟ್ರೀಟ್ ಮಂಗಳವಾರ ದಿನದ ಅಂತ್ಯದ ವೇಳೆಗೆ ಗಳಿಕೆಯೊಂದಿಗೆ ವಹಿವಾಟು ಮುಗಿಸಿದೆ.

ಕಚ್ಚಾ ತೈಲ ಬೆಲೆ ಹೆಚ್ಚಳ, ಕುಸಿದ ರೂಪಾಯಿ ಮೌಲ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 1.05ರಷ್ಟು ಹೆಚ್ಚಾಗಿ 89.29 ಡಾಲರ್​​ಗೆ ಮಾರಾಟವಾಯಿತು.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಕುಸಿದು 81.85ರಲ್ಲಿ ವಹಿವಾಟು ಕೊನೆಗೊಳಿಸಿದೆ. ಆಮದುದಾರರಿಂದ ಡಾಲರ್​ಗೆ ಹೆಚ್ಚಿದ ಬೇಡಿಕೆ, ಕಚ್ಚಾ ತೈಲ ಬೆಲೆ ಹೆಚ್ಚಳ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಯಿತು.

ಇಂಟರ್​ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 81.81ರಲ್ಲಿ ವಹಿವಾಟು ಆರಂಭಿಸಿತ್ತು. ಒಂದು ಹಂತದಲ್ಲಿ ಗರಿಷ್ಠ 81.74 ಹಾಗೂ ಕನಿಷ್ಠ 81.87ಕ್ಕೆ ಕುಸಿದಿತ್ತು. ಕೊನೆಯಲ್ಲಿ 81.85ರಲ್ಲಿ ವಹಿವಾಟು ಮುಗಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ