ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡು ನಿವ್ವಳ ಲಾಭದಲ್ಲಿ ಹೆಚ್ಚಳ ಕಂಡುಬರುತ್ತಿದ್ದಂತೆಯೇ ಷೇರುಪೇಟೆಯಲ್ಲಿ (Stock Market) ಎಲ್ಐಸಿ (LIC) ಷೇರು ಮೌಲ್ಯ ಜಿಗಿತ ಕಂಡಿದೆ. ಇನೀಷಿಯಲ್ ಪಬ್ಲಿಕ್ ಆಫರ್ ಬಳಿಕ ಈವರೆಗೂ ವೃದ್ಧಿ ಕಾಣದ ಎಲ್ಐಸಿ ಷೇರುಗಳು ಈಗ ಏಕಾಏಕಿ ಮೇಲ್ಮುಖವಾಗಿ ಚಲಿಸತೊಡಗಿವೆ. ಸೋಮವಾರದ ಆರಂಭಿಕ ವಹಿವಾಟಿನ ವೇಳೆ ಎಲ್ಐಸಿ ಷೇರಿನ ಮೌಲ್ಯ ಶೇಕಡಾ 9ರಷ್ಟು ವೃದ್ಧಿಯಾಗಿ ಪ್ರತಿ ಷೇರಿನ ಬೆಲೆ 682 ರೂ. ತಲುಪಿತ್ತು. ಇದು ಮೇ ನಂತರ ಕಂಪನಿಯುವ ದಿನವೊಂದರಲ್ಲಿ ಕಂಡ ಅತ್ಯುತ್ತಮ ಗಳಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ವರ್ಷದ ಹಿಂದಿನ 1,434 ಕೋಟಿ ರೂ.ನಿಂದ 15,952 ಕೋಟಿ ರೂ.ಗೆ ಜಿಗಿದಿತ್ತು.
ವ್ಯಾಲ್ಯೂ ಆಫ್ ನ್ಯೂ ಬ್ಯುಸಿನೆಸ್ (VNB) ಹಾಗೂ ಎಂಬೆಡೆಡ್ ವ್ಯಾಲ್ಯೂನಲ್ಲಿ (EV) ಎಲ್ಐಸಿ ಗಣನೀಯ ಬೆಳವಣಿಗೆ ಸಾಧಿಸಿದೆ. ಇದು ಎಲ್ಐಸಿಯನ್ನು ಬಲಿಷ್ಠ ಹೂಡಿಕೆಯ ಸಾಧನವಾಗಿ ಪರಿವರ್ತಿಸಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿರುವುದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ. ಎಲ್ಐಸಿ ಷೇರುಗಳನ್ನು 917 ರೂ. ಗಳಿಕೆಯ ಗುರಿಯೊಂದಿಗೆ ಖರೀದಿಸಬಹುದು ಎಂದು ಸಂಸ್ಥೆ ಸಲಹೆ ನೀಡಿದೆ.
ದೀರ್ಘಾವಧಿ ಹೂಡಿಕೆಗೆ ಈಗಲೇ ಖರೀದಿಸಬಹುದೇ?
ದೀರ್ಘಾವಧಿಯ ಹೂಡಿಕೆ ಗುರಿ ಹೊಂದಿರುವರರು ಎಲ್ಐಸಿ ಷೇರಿನ ಮುಖಬೆಲೆ 700 ರೂ. ತಲುಪುವ ವರೆಗೆ ಕಾಯುವುದು ಉತ್ತಮ. ಪ್ರಸ್ತುತ (ನವೆಂಬರ್ 14ರ ಮಧ್ಯಾಹ್ನ 2 ಗಂಟೆ ವೇಳೆಗೆ) ಬಿಎಸ್ಇಯಲ್ಲಿ ಎಲ್ಐಷಿ ಷೇರು 630 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇದು ಮುಂದಿನ ಕೆಲವು ಅವಧಿಗೆ 580 ರೂ.ವರೆಗೆ ಇಳಿಕೆ ಮತ್ತು 700 ರೂ. ವರೆಗೆ ವೃದ್ಧಿಯಾಗುವ ನಿರೀಕ್ಷೆ ಇದೆ. ಹೀಗಾಗಿ ದೀರ್ಘಾವಧಿಯ ಹೂಡಿಕೆದಾರರು ಈಗಲೇ ಖರೀದಿ ಮಾಡುವುದರ ಬದಲು ತುಸು ಕಾಯುವುದು ಉತ್ತಮ ಎಂದು ಚಾಯ್ಸ್ ಬ್ರೋಕಿಂಗ್ನ ಕಾರ್ಯನಿರ್ವಾಹಕ ನಿರ್ದೇಶಕ ಸುಮಿತ್ ಬಗಾಡಿಯಾ ಸಲಹೆ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ.
ಖರೀದಿಸಿದವರು ಮಾರಬಹುದೇ?
ಸದ್ಯದಲ್ಲೇ ಎಲ್ಐಸಿ ಷೇರು ಮೌಲ್ಯದಲ್ಲಿ 700 ರೂ.ನಿಂದ 720 ರೂ.ವರೆಗೆ ವೃದ್ಧಿ ಕಾಣಬಹುದು. ಯಾರು ಈಗಾಗಲೇ ಈ ಷೇರು ಖರೀದಿಸಿದ್ದಾರೋ ಅಂಥವರು ಸದ್ಯ ಮೌಲ್ಯ ವೃದ್ಧಿಯಾಗಿದೆ ಎಂದು ಮಾರಾಟ ಮಾಡುವ ಬದಲು ಇನ್ನಷ್ಟು ಸಮಯ ಇಟ್ಟುಕೊಳ್ಳುವುದು ಉತ್ತಮ. ಹೊಸ ಹೂಡಿಕೆದಾರರು 720 ರೂ. ಗುರಿ ಮತ್ತು 630 ರೂ. ಕನಿಷ್ಠ ಮೌಲ್ಯದ ಲೆಕ್ಕಾಚಾರದೊಂದಿಗೆ ಖರೀದಿಸಬಹುದು ಎಂದಿದ್ದಾರೆ ಐಐಎಫ್ಎಲ್ ಸೆಕ್ಯುರಿಟೀಸ್ ಸಂಶೋಧಕ, ಉಪಾಧ್ಯಕ್ಷ ಅನುಜ್ ಗುಪ್ತಾ.
ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವ ನಿಟ್ಟಿನಲ್ಲಿ ಉತ್ಪನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡುವಂತೆ ಎಲ್ಐಸಿಗೆ ಸರ್ಕಾರ ಇತ್ತೀಚೆಗೆ ಸೂಚಿಸಿತ್ತು. ಹೂಡಿಕೆದಾರರಿಗೆ ಉತ್ತಮ ಸಂಪತ್ತು ಮರಳಿಸಲು ಗಮನಹರಿಸಬೇಕು. ಉತ್ತಮವಾಗಿ ಕಾರ್ಯನಿರ್ವಹಿಸದ ಉತ್ಪನ್ನಗಳ ಲಾಭದಾಯಕತೆಯನ್ನು ಸುಧಾರಿಸುವುದಕ್ಕಾಗಿ ಯೋಜನೆಗಳನ್ನು ರೂಪಿಸಿ ಅವುಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಹಣಕಾಸು ಸಚಿವಾಲಯವು ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ ಎಲ್ಐಸಿಗೆ ಸೂಚಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
(ತಜ್ಞರ ಅಭಿಪ್ರಾಯ ಆಧಾರಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆಯೇ ಹೊರತು ಇದು ‘ಟಿವಿ9 ಕನ್ನಡ ಡಿಜಿಟಲ್’ನ ಅಭಿಪ್ರಾಯವಲ್ಲ. ಷೇರು ವಹಿವಾಟು ಮಾರುಕಟ್ಟೆ ರಿಸ್ಕ್ಗಳಿಗೆ ಕಾರಣವಾಗುವುದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ಸಲಹೆಗಾರರ ಅಭಿಪ್ರಾಯ ಕೇಳಿಕೊಳ್ಳುವುದು ಉತ್ತಮ)