ಮುಂಬೈ: ದೀಪಾವಳಿ (Diwali) ರಜೆಗಳು, ಕಂಪನಿಗಳ ತ್ರೈಮಾಸಿಕ ಫಲಿತಾಂಶ (Quarter results), ತಿಂಗಳ ಕೊನೆಯ ದಿನಗಳು, ಈ ಎಲ್ಲ ಅಂಶಗಳು ಷೇರುಪೇಟೆಯ (Stock Market) ಮುಂದಿನ ವಾರದ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ವಿದೇಶಿ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ರೂಪಾಯಿ ಮೌಲ್ಯದಲ್ಲಿನ ಏರಿಳಿ ಹಾಗೂ ಡಾಲರ್ ಮೌಲ್ಯ ವೃದ್ಧಿಯೂ ನಿರ್ಣಾಯಕವಾಗಬಹುದು ಎಂದು ಅವರು ಹೇಳಿದ್ದಾರೆ.
ರಜೆಗಳ ಕಾರಣದಿಂದಾಗಿ ಮುಂದಿನ ವಾರ ಹೆಚ್ಚಿನ ವಹಿವಾಟು ನಡೆಯುವುದಿಲ್ಲ. ಸೋಮವಾರ, ಅಕ್ಟೋಬರ್ 24ರಂದು ಸಂಜೆ ಒಂದು ಗಂಟೆಯ ಮುಹೂರ್ತ ಟ್ರೇಡಿಂಗ್ ನಡೆಯಲಿದೆ. ಈ ಅವಧಿಯಲ್ಲಿ ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ರೆಲಿಗೇರ್ ಬ್ರೋಕಿಂಗ್ನ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿರುವುದಾಗಿ ‘ಝೀ ಬ್ಯುಸಿನೆಸ್’ ವರದಿ ಮಾಡಿದೆ.
ವಹಿವಾಟಿನಲ್ಲಿ ಚಂಚಲತೆ ಕಾಣಬಹುದು. ಹೊರತುಪಡಿಸಿದರೆ ಜಾಗತಿಕ ಮಾರುಕಟ್ಟೆಗಳ ವಹಿವಾಟಿನ ಮೇಲೆ ಗಮನ ಇರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Share Market Highlights: ಅಲ್ಪ ಗಳಿಕೆಯೊಂದಿಗೆ ವಾರದ ವಹಿವಾಟು ಮುಗಿಸಿದ ಷೇರುಪೇಟೆ
ಗಳಿಕೆಯ ದೃಷ್ಟಿಯಿಂದ ನೋಡಿದರೆ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ನಂಥ ಕಂಪನಿಗಳು ಹೆಚ್ಚು ವಹಿವಾಟು ನಡೆಸುವ ನಿರೀಕ್ಷೆ ಇದೆ. ಇವುಗಳನ್ನು ಹೊರತುಪಡಿಸಿ ಟಾಟಾ ಕೆಮಿಕಲ್ಸ್, ಡಾ. ರೆಡ್ಡೀಸ್ ಲ್ಯಾಬೋರೇಟರಿ, ಮಾರುತಿ, ವೇದಾಂತ ಹಾಗೂ ಟಾಟಾ ಪವರ್ ತಮ್ಮ ಗಳಿಕೆಯನ್ನು ಮುಂದಿನ ವಾರ ಘೋಷಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಯೆಸ್ ಬ್ಯಾಂಕ್ ಹೊರತುಪಡಿಸಿ ಉಳಿದವೆಲ್ಲ ನಿವ್ವಳ ಲಾಭದಲ್ಲಿ ಭಾರಿ ಗಳಿಕೆ ಕಂಡಿವೆ. ಇದು ಮುಂದಿನ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಉಳಿದಂತೆ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಶುಕ್ರವಾರ ಅಲ್ಪ ಗಳಿಕೆಯೊಂದಿಗೆ ಷೇರುಪೇಟೆಯು ವಾರದ ವಹಿವಾಟು ಕೊನೆಗೊಳಿಸಿತ್ತು. ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.18ರಷ್ಟು ಅಥವಾ 104.25 ಅಂಕ ಏರಿಕೆ ಕಂಡು 59,307.15ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಎನ್ಎಸ್ಇ ನಿಫ್ಟಿ ಶೇಕಡಾ 0.07ರಷ್ಟು ಅಥವಾ 12.35 ಅಂಶ ಚೇತರಿಕೆ ಕಂಡು 17,576.30ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ