ಮುಂಬೈ: ಕಳೆದ ವಾರ ಉತ್ತಮ ಗಳಿಕೆ ದಾಖಲಿಸಿದ್ದ ದೇಶೀಯ ಷೇರುಪೇಟೆಗಳಲ್ಲಿ (Stock Market) ವಹಿವಾಟು ಮತ್ತೆ ಕುಸಿದಿದೆ. ಗುರುವಾರದ ವಹಿವಾಟಿನ ಕೊನೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) 419.85 ಅಂಶ ಕುಸಿದು 60,613.70ರಲ್ಲಿ ವಹಿವಾಟು ಮುಗಿಸಿತು. ಎನ್ಎಸ್ಇ ನಿಫ್ಟಿ (NSE Nifty) 121 ಅಂಶ ಕುಸಿದು 18,036 ರಲ್ಲಿ ವಹಿವಾಟು ಕೊನೆಗೊಳಿಸಿತು. ಇದರೊಂದಿಗೆ, ದೇಶೀಯ ಷೇರುಪೇಟೆಗಳಲ್ಲಿ ಸತತ ಎರಡನೇ ದಿನ ಕುಸಿತವಾಗಿದೆ.
ಶೇಕಡಾ 5ರಷ್ಟು ಕುಸಿದ ಟಾಟಾ ಮೋಟರ್ಸ್ ಷೇರು ಮೌಲ್ಯ
ಟಾಟಾ ಮೋಟರ್ಸ್ ಷೇರು ಮೌಲ್ಯವು ಗುರುವಾರದ ವಹಿವಾಟಿನ ಕೊನೆಯಲ್ಲಿ ಶೇಕಡಾ 4.80 ರಷ್ಟು ಕುಸಿಯಿತು. ಬಿಎಸ್ಇಯಲ್ಲಿ ಕಂಪನಿಯ ಷೇರುಗಳು ತಲಾ 412.20 ರೂ. ನಂತೆ ವಹಿವಾಟು ನಡೆಸಿದವು. ಎನ್ಎಸ್ಇಯಲ್ಲಿ ಶೇಕಡಾ 4.61ರ ಕುಸಿತ ಕಂಡು ಪ್ರತಿ ಷೇರಿಗೆ 413.20 ರೂ.ನಂತೆ ವಹಿವಾಟು ನಡೆಸಿತು.
ಇದನ್ನೂ ಓದಿ: Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್ಕ್ಯಾಪ್ ಮ್ಯೂಚುವಲ್ ಫಂಡ್ಗಳಿವು
ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಟಾಟಾ ಮೋಟರ್ಸ್ ಫಲಿತಾಂಶ ಬುಧವಾರ ಪ್ರಕಟಗೊಂಡಿತ್ತು. ಕಂಪನಿಯು 898 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು. ತ್ರೈಮಾಸಿಕ ಫಲಿತಾಂಶದ ಬೆನ್ನಲ್ಲೇ ಷೇರುಪೇಟೆಯಲ್ಲಿಯೂ ಕಂಪನಿಯ ವಹಿವಾಟು ಮುಗ್ಗರಿಸಿದೆ.
ಉಳಿದಂತೆ ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ಸರ್ವ್, M&M, ಟೈಟಾನ್ ಆ್ಯಂಡ್ ಕಂಪನಿ ಷೇರುಗಳು ಕುಸಿತ ದಾಖಲಿಸಿದರೆ, ಹೀರೊ ಮೋಟರ್ಕಾರ್ಪ್, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿದವು.
ಮತ್ತೆ ಕುಸಿದ ರೂಪಾಯಿ
ಕಳೆದ ಕೆಲವು ದಿನಗಳಿಂದ ಚೇತರಿಕೆ ದಾಖಲಿಸಿ ಭರವಸೆ ಮೂಡಿಸಿದ್ದ ರೂಪಾಯಿ ಮೌಲ್ಯ ಗುರುವಾರ ಕುಸಿದಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 30 ಪೈಸೆ ಇಳಿಕೆಯಾಗಿ 81.77ರಲ್ಲಿ ವಹಿವಾಟು ಮುಗಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ