Stock Market Updates: ಬಿಎಸ್ಇ ಬಿಗ್ ಜಂಪ್; 62 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
BSE Sensex; ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ವಹಿವಾಟು ಏಕಾಏಕಿ ಜಿಗಿದಿದ್ದು, 62,000 ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.
ಮುಂಬೈ: ಕಳೆದ ಕೆಲವು ದಿನಗಳಿಂದ ಅಸ್ಥಿರ ವಹಿವಾಟು ನಡೆಸುತ್ತಿರುವ ದೇಶೀಯ ಷೇರು ಮಾರುಕಟ್ಟೆಗಳಲ್ಲಿ (Stock Market) ಬುಧವಾರವೂ ಅದೇ ಟ್ರೆಂಡ್ ಮುಂದುವರಿದಿದೆ. ಆರಂಭದ ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) ವಹಿವಾಟು ಏಕಾಏಕಿ ಜಿಗಿದಿದ್ದು, 62,000 ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. 12 ಗಂಟೆ ವೇಳೆಗೆ 73.02 ಅಂಶ ಚೇತರಿಕೆಯೊಂದಿಗೆ 61,946.01 ರಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ ಎನ್ಎಸ್ಇ ನಿಫ್ಟಿ (NSE Nifty) 18,427ರ ವರೆಗೂ ಚೇತರಿಕೆ ದಾಖಲಿಸಿತ್ತು. 12 ಗಂಟೆ ವೇಳೆಗೆ 3 ಅಂಶ ಚೇತರಿಕೆಯೊಂದಿಗೆ 18,406.40ರಲ್ಲಿ ವಹಿವಾಟು ನಡೆಸುತ್ತಿದೆ. ಸ್ಮಾಲ್ಕ್ಯಾಪ್ ಷೇರುಗಳು ಉತ್ತಮ ವಹಿವಾಟು ದಾಖಲಿಸುತ್ತಿವೆ. ಬಿಎಸ್ಇ ಮಿಡ್ಕ್ಯಾಪ್ ವಹಿವಾಟಿನಲ್ಲಿ ತುಸು ಇಳಿಕೆ ಕಂಡುಬಂದಿದೆ.
ನಿಫ್ಟಿಯಲ್ಲಿ ತೈಲ ಮತ್ತು ಅನಿಲ ಕ್ಷೇತ್ರದ ಉದ್ದಿಮೆಗಳ ಷೇರುಗಳು ಕುಸಿದಿವೆ. ಎಫ್ಎಂಸಿಜಿ, ಫೈನಾನ್ಶಿಯಲ್ ಷೇರುಗಳ ವಹಿವಾಟಿನಲ್ಲೂ ಕುಸಿತ ಕಂಡುಬಂದಿದೆ. ಆಟೊ, ಪಿಎಸ್ಬಿ ಷೇರುಗಳು ಗಳಿಕೆ ದಾಖಲಿಸಿವೆ. ಭಾರತ್ ಎಲೆಕ್ಟ್ರಾನಿಕ್ಸ್ ಷೇರು ಮೌಲ್ಯದಲ್ಲಿ ಶೇಕಡಾ 2ರಷ್ಟು ಚೇತರಿಕೆ ಕಾಣಿಸಿದೆ.
ಬಿಎಸ್ಇಯಲ್ಲಿ ಕೋಟಕ್ ಮಹೀಂದ್ರಾ, ರಿಲಯನ್ಸ್, ಐಸಿಐಸಿಐ, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್ ಷೇರುಗಳು ಹೆಚ್ಚಿನ ವಹಿವಾಟು ನಡೆಸುತ್ತಿವೆ. ಕೋಟಕ್ ಮಹೀಂದ್ರಾ, ಡಾ. ರೆಡ್ಡೀಸ್ ಲ್ಯಾಬ್ಸ್, ಟಿಸಿಎಸ್ ಹಾಗೂ ವಿಪ್ರೋ ಷೇರುಗಳ ಮೌಲ್ಯದಲ್ಲಿ ವೃದ್ಧಿಯಾಗಿದೆ. ಹಿಂಡಾಲ್ಕೊ, ಅಪೋಲೊ ಹಾಸ್ಪಿಟಲ್ಸ್, ಜೆಎಸ್ಡಬಲ್ಯೂ ಸ್ಟೀಲ್, ಬಜಾಜ್ ಪೈನಾನ್ಸ್ ಷೇರು ಮೌಲ್ಯದಲ್ಲಿ ಇಳಿಕೆಯಾಗಿದೆ.
ರೂಪಾಯಿ ಮೌಲ್ಯದಲ್ಲಿ ಮತ್ತೆ ಕುಸಿತ
ಕಳೆದ ಕೆಲವು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದ್ದ ರೂಪಾಯಿ ಮೌಲ್ಯ ಮತ್ತೆ ಕುಸಿಯಲಾರಂಭಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನ ಸಂದರ್ಭ ರೂಪಾಯಿ ಮೌಲ್ಯ 66 ಪೈಸೆ ಇಳಿಕೆಯಾಗಿ 81.57 ಆಗಿದೆ.
ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಐಪಿಒ ಗಳಿಕೆ
ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪನಿಯ ಷೇರುಗಳು ಬುಧವಾರ ಎನ್ಎಸ್ಇಯಲ್ಲಿ ಲಿಸ್ಟಿಂಗ್ಗೆ ಬಂದಿದ್ದು, ಇನೀಷಿಯಲ್ ಪಬ್ಲಿಕ್ ಆಫರಿಂಗ್ ದರಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಸುಳಿವು ದೊರೆತಿದೆ. ಎನ್ಎಸ್ಇಯಲ್ಲಿ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಮೊದಲ ವಹಿವಾಟಿನಲ್ಲೇ ಶೇಕಡಾ 8ರಷ್ಟು ಹೆಚ್ಚಳವಾಗಿ 322.80 ರೂ.ನಲ್ಲಿ ವಹಿವಾಟು ನಡೆಸಿದೆ. ಬಿಎಸ್ಇಯಲ್ಲಿ ಶೇಕಡಾ 7ರ ಮೌಲ್ಯ ವೃದ್ಧಿಯೊಂದಿಗೆ 321.15 ರೂ.ನಲ್ಲಿ ವಹಿವಾಟು ನಡೆಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ