Stock Market Updates: ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಮುಗಿಸಿದ ಷೇರುಪೇಟೆ

ಅಕ್ಟೋಬರ್ ತಿಂಗಳ ಅಮೆರಿಕದ ಹಣದುಬ್ಬರ ಪ್ರಮಾಣದ ದತ್ತಾಂಶ ಬಿಡುಗಡೆಯಾದ ಬೆನ್ನಲ್ಲೇ ಭಾರತೀಯ ಷೇರುಪೇಟೆ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿತು. ನಿಫ್ಟಿ ಆಟೊದಲ್ಲಿ ತುಸು ಮಟ್ಟಿನ ಕುಸಿತ ಕಂಡುಬಂದಿದ್ದು ಬಿಟ್ಟರೆ ಎಫ್​ಎಂಸಿಜಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಉತ್ತಮ ವಹಿವಾಟು ನಡೆಸಿದವು.

Stock Market Updates: ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಮುಗಿಸಿದ ಷೇರುಪೇಟೆ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Nov 11, 2022 | 6:29 PM

ಮುಂಬೈ: ಹಿಂದಿನ ಎರಡು ವಾರ ಉತ್ತಮ ವಹಿವಾಟು ನಡೆಸಿ, ಈ ವಾರ ಏರಿಳಿತಗಳಿಗೆ ಸಾಕ್ಷಿಯಾಗಿದ್ದ ದೇಶೀಯ ಷೇರುಪೇಟೆ (Stock Market) ವಾರಾಂತ್ಯದ ದಿನ ಉತ್ತಮ ಗಳಿಕೆಯೊಂದಿಗೆ ವಹಿವಾಟು ಮುಗಿಸಿತು. ಅಕ್ಟೋಬರ್ ತಿಂಗಳ ಅಮೆರಿಕದ ಹಣದುಬ್ಬರ ಪ್ರಮಾಣದ ದತ್ತಾಂಶ ಬಿಡುಗಡೆಯಾದ ಬೆನ್ನಲ್ಲೇ ಭಾರತೀಯ ಷೇರುಪೇಟೆ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿತು. ನಿಫ್ಟಿ ಆಟೊದಲ್ಲಿ ತುಸು ಮಟ್ಟಿನ ಕುಸಿತ ಕಂಡುಬಂದಿದ್ದು ಬಿಟ್ಟರೆ ಎಫ್​ಎಂಸಿಜಿ (FMCG), ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು (PSU Bank) ಉತ್ತಮ ವಹಿವಾಟು ನಡೆಸಿದವು. ನಿಫ್ಟಿ (Nifty) ಐಟಿ ಸೂಚ್ಯಂಕ ಶೇಕಡಾ 4ರಷ್ಟು ವೃದ್ಧಿ ದಾಖಲಿಸಿತು. ವಾರಾಂತ್ಯದ ವಹಿವಾಟಿನ ಕೊನೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ (BSE Sensex) 1181.34 ಅಂಶ ಗಳಿಕೆ ದಾಖಲಿಸಿ 61,795.04ರಲ್ಲಿ ವಹಿವಾಟು ಮುಗಿಸಿತು. ಎನ್​ಎಸ್ಇ ನಿಪ್ಟಿ (NSE Nifty) ಕೂಡ ಉತ್ತಮವಾಗಿ ವಹಿವಾಟು ನಡೆಸಿ 321.50 ಅಂಶ ಚೇತರಿಸಿ 18,349.70ರಲ್ಲಿ ವಹಿವಾಟು ಕೊನೆಗೊಳಿಸಿತು.

ಬ್ಯಾಂಕ್ ನಿಫ್ಟಿ ಇದೇ ಮೊದಲ ಬಾರಿಗೆ 42,000 ಗಡಿ ದಾಟಿ ದಾಖಲೆ ಬರೆದಿದೆ. ಬಿಎಸ್​ಇ ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್ ಕ್ರಮವಾಗಿ ಶೇಕಡಾ 0.15, ಶೇಕಡಾ 0.33 ಚೇತರಿಕೆ ದಾಖಲಿಸಿದವು.

ಬಿಎಸ್​ಇಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್, ಎಚ್​ಡಿಎಫ್​ಸಿ, ಇನ್ಫೋಸಿಸ್, ಟೆಕ್​ ಮಹೀಂದ್ರಾ ಹಾಗೂ ಎಚ್​ಸಿಎಲ್ ಟೆಕ್ ಉತ್ತಮ ಗಳಿಕೆ ದಾಖಲಿಸಿದವು. ಈಚೆರ್ ಮೋಟರ್ಸ್, ಬ್ರಿಟಾನಿಯಾ, ಎನ್​ಟಿಪಿಸಿ, ಹೀರೊ ಮೋಟರ್​ಕಾರ್ಪ್, ಎಸ್​ಬಿಐ ಷೇರು ಮೌಲ್ಯಗಳಲ್ಲಿ ಕುಸಿತ ಕಂಡಿತು.

ಡಾಲರ್ ವಿರುದ್ಧ ಚೇತರಿಸಿದ ರೂಪಾಯಿ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ಮತ್ತಷ್ಟು ಬಲಗೊಂಡ ರೂಪಾಯಿ ಮೌಲ್ಯ 62 ಪೈಸೆ ವೃದ್ಧಿಯಾಗಿ 80.78ರಲ್ಲಿ ವಹಿವಾಟು ಕೊನೆಗೊಳಿಸಿತು. ಶುಕ್ರವಾರದ ವಹಿವಾಟಿನ ಒಂದು ಹಂತದಲ್ಲಿ ಮಧ್ಯಾಹ್ನದ ವೇಳೆಗೆ 1 ಪೈಸೆಯಷ್ಟು ಚೇತರಿಕೆಯಾಗಿ 80.69ಕ್ಕೆ ತಲುಪಿದ್ದ ರೂಪಾಯಿ ಮತ್ತೆ ತುಸು ಇಳಿಕೆಯಾಯಿತು. ಕಚ್ಚಾ ತೈಲ ಬೆಲೆ ಇಳಿಕೆ ಸೇರಿದಂತೆ ಹಲವು ಕಾರಣಗಳು ರೂಪಾಯಿ ಬಲವರ್ಧನೆಗೆ ನೆರವಾಗಿವೆ.

ವಾರದ ಹಿಂದೆಯಷ್ಟೇ ಪಾತಾಳಕ್ಕೆ ಕುಸಿದಿದ್ದ ರೂಪಾಯಿ ಮೌಲ್ಯ ಒಂದು ಹಂತದಲ್ಲಿ ಡಾಲರ್ ವಿರುದ್ಧ 83 ತಲುಪಿತ್ತು. ಇದು 83.50 ವರೆಗೆ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು. ಆದರೆ ಜಾಗತಿಕ ಆರ್ಥಿಕ ಅನಿಶ್ಚಿತತೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರು ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ತೋರಿರುವುದು ರೂಪಾಯಿ ಮೇಲೆ ಪ್ರಭಾವ ಬೀರಿದೆ. ಹಾಗೂ ದೇಶೀಯ ಕರೆನ್ಸಿಯ ಬಲವರ್ಧನೆಗೆ ಕಾರಣವಾಗಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ