ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನನ್ನ ಎಂ.ಎಸ್ಸಿ ಪ್ರಾಕ್ಟಿಕಲ್ಸ್ ಪರೀಕ್ಷೆ ಏಪ್ರಿಲ್ 1969 ರಲ್ಲಿ ಮುಗಿಯಿತು. ಬೆಳಕಿಲ್ಲದ ಭವಿಷ್ಯದ ಹೊಸ್ತಿಲಿನಲ್ಲಿ ನಾನು ನಿಂತಿದ್ದೆ. ನನಗಿದ್ದಿದೊಂದೇ ಆಸೆ: ಪಿಎಚ್.ಡಿ ಡಿಗ್ರಿ ಪಡೆದುಕೊಂಡು ಅಮೆರಿಕಾಗೆ ಹೋಗಬೇಕೆಂದು. ಆದರೆ ಸ್ಕಾಲರ್ಶಿಪ್ನ ಸಹಾಯವಿಲ್ಲದೆ ಡಾಕ್ಟರೇಟ್ ಮಾಡಲು ನನ್ನ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಸಹಕಾರಿಯಾಗಿರಲಿಲ್ಲ. ಯಾವ ದಾರಿಯೂ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಥಿಯರಿ ಪರೀಕ್ಷೆ ಮುಗಿದ ಮೇಲೆ ಎಂ.ಎಸ್ಸಿ ಎರಡನೇ ವರ್ಷದ ವರ್ಷದ ವಿದ್ಯಾರ್ಥಿಗಳು ವಿಭಾಗ ಮುಖ್ಯಸ್ಥರನ್ನು ಭೇಟಿ ಮಾಡಿ ಕಾಲೇಜು ಲೆಕ್ಚರರ್ ಕೆಲಸದ ಬಗ್ಗೆ ಸಹಾಯ ಕೇಳುವುದು ವಾಡಿಕೆ. ಅವರಾದರೊ ಆದಷ್ಟು ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುತ್ತಿದ್ದರು. ಎಲ್ಲರಂತೆ ನಾನೂ ಹೋಗಿ ವಿಭಾಗ ಮುಖ್ಯಸ್ಥರಾದ ಪ್ರೊ.ರಾವ್ ಅವರನ್ನು ಭೆಟ್ಟಿಯಾದೆ. ಅಷ್ಟು ಹೊತ್ತಿಗಾಗಲೇ ನಾನು ಪ್ರಾಣಿ ಶರೀರಕ್ರಿಯಾ ಶಾಸ್ತ್ರದಲ್ಲಿ ಉತ್ತಮ ವಿದ್ಯಾರ್ಥಿ ಎಂದು ಗುರುತಿಸಲ್ಪಟ್ಟಿದ್ದೆ. ನನ್ನ ಕನಸುಗಳು ತುಂಬಾ ಇದ್ದವು. ನಾನು ಎಚ್ಒಡಿಗೆ ನನಗೆ ಬೋಧನೆಯಲ್ಲಿ ಆಸಕ್ತಿ ಇಲ್ಲವೆಂದೂ, ನನಗೇನಿದ್ದರೂ ಸಂಶೋಧನೆಯಲ್ಲಿ ತೀವ್ರಾಸಕ್ತಿ ಇದೆಯೆಂದೂ, ಆದರೆ ಸ್ಕಾಲರ್ಷಿಪ್ ಇಲ್ಲದೆ ಪಿಎಚ್.ಡಿ ಸಂಶೋಧನೆ ಮಾಡಲು ಸಾಧ್ಯವಿಲ್ಲವೆಂದು ಹೇಳಿದೆ. ನಾನು ಎಂ.ಎಸ್ಸಿ ಮುಗಿದ ಕಾಲದಲ್ಲಿ (1969) ಸಂಶೋಧನೆಗೆ ಫೆಲೋಶಿಪ್ ಸಿಗುವುದು ಇಂದಿನಷ್ಟು ಸುಲಭವಿರಲಿಲ್ಲ . ಆದರೆ ನಾನು ಆಸೆ ಬಿಡಲಿಲ್ಲ . ದೇವರು ದಾರಿ ತೋರಿಸ್ತಾನೆಂದು ನಂಬಿದ್ದೆ.
ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)
(ಕಥನ 12)
ಏಪ್ರಿಲ್ 1969 ರಲ್ಲಿ ಕೊನೆಯ ಪ್ರಾಕ್ಟಿಕಲ್ ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ನನ್ನ ತಾಯಿಯ, ತಮ್ಮ ತಂಗಿಯರ ಮುಖ ದೊಡ್ಡದಾಗಿ ಅರಳಿತ್ತು. ಕಾರಣ ನನ್ನ ಹೆಸರಿಗೊಂದು ರಿಜಿಸ್ಟರ್ಡ್ ಪೋಸ್ಟ್ ಬಂದಿತ್ತು ನಾನು ಬೆಂಗಳೂರಿನ AG’s ಆಫೀಸಿನಲ್ಲಿ ಗುಮಾಸ್ಧೆಯಾಗಿ ಆಯ್ಕೆಯಾಗಿದ್ದೇನೆಂದೂ, ತಿಂಗಳಿಗೆ ಸುಮಾರು ಮುನ್ನೂರು ರೂಪಾಯಿಯಷ್ಟು ಸಂಬಳವೆಂದೂ ಅದರಲ್ಲಿ ನಮೂದಿಸಿತ್ತು. ನಾನು B.Sc. ನಂತರ ಕೆಲಸ ಹುಡುಕುತ್ತಿದ್ದ ವೇಳೆಯಲ್ಲಿ AG’s ಆಫೀಸಿನ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದೆ. ಅದರ ಫಲ ಈಗಿನ ನೇಮಕಾತಿ. ನನಗೆ ಎಷ್ಟೋ ಸಲ ಆ ದೇವರು ಕವಲು ದಾರಿ, ನೇರ ದಾರಿ, ಬಳಸು ದಾರಿ, ಡೊಂಕು ದಾರಿ ತೋರಿಸಿದ್ದಾನೆ ಅನ್ನಿಸುತದೆ. ಈಗೊಂದು ಕವಲು ದಾರಿ ತೋರಿಸಿಕೊಟ್ಟಿದ್ದ. ಸಂಜೆ ತಂದೆ ಮನೆಗೆ ಬಂದಾಗ ಅವರಿಗೆ ಪತ್ರ ನೋಡಿ ತುಂಬಾ ಸಂತೋಷವಾಯಿತು. AG’s ಕಚೇರಿ ಎಂದರೆ ಕೇಂದ್ರ ಸರಕಾರದ ಹುದ್ದೆ, ಬೆಂಗಳೂರಿನಿಂದ ವರ್ಗಾವಣೆಯೇ ಇಲ್ಲ, ಆಫೀಸ್ ಮನೆಗೆ ಹತ್ತಿರವಾಗಿದೆ ಮತ್ತು AG’s ಆಫೀಸಿನ ಆಂತರಿಕ ಪರೀಕ್ಷೆಗಳನ್ನು ಪಾಸು ಮಾಡಿಕೊಂಡರೆ, ಭಡ್ತಿ ಮೇಲೆ ಭಡ್ತಿ ಸಿಕ್ಕು ನಾನು ನಿವೃತ್ತಿ ಹೊಂದುವ ಮುನ್ನ ಆಡಿಟರ್ ಜನರಲ್ ಆಗುವುದು ಗ್ಯಾರಂಟಿ, ಭವಿಷ್ಯ ತುಂಬಾ ಭವ್ಯವಾಗಿರುತ್ತೆ ಎಂದು ಹೇಳಿದರು.
M.Sc. ರಿಸಲ್ಟ್ ಬರೋದಕ್ಕೆ ಇನ್ನು ಎರಡು ತಿಂಗಳಾದರೂ ಬೇಕಿತ್ತು. ಹಿಂದೆ ಮುಂದೆ ನೋಡದೆ, ಕೇವಲ ಮಾಸಿಕ ಸಂಬಳದ ಮೇಲೆ ಕಣ್ಣಿಟ್ಟು, ಅದರಿಂದ ನನ್ನ ಕುಟುಂಬಕ್ಕೆ ಸಹಾಯವಾಗುವುದೆಂದು ನಾನು ಮಾರನೇ ದಿನವೇ AG’s ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕೆಲಸವೇನೂ ಕಷ್ಟ ಇರಲಿಲ್ಲ. ಕೂಡುವುದು, ಕಳೆಯುವುದು, ಟ್ಯಲಿ ಮಾಡುವುದು. Cross check ಮಾಡುವುದು, ಆಗಾಗ್ಗೆ ಸ್ವಲ್ಪ ಪತ್ರ ವ್ಯವಹಾರ ಇಷ್ಟೇ. ಹುಡುಗಿಯರು ತುಂಬಾ ಕಡಿಮೆ ಇದ್ದರು. ಅವರಲ್ಲೇ ಎರಡು ಗುಂಪುಗಳಿದ್ದವು. ನಾನು ವಾಣಿ ಗುಂಪಿಗೆ ಸೇರಿದೆ. ಕೆಲಸಕ್ಕೆ ಸೇರಿದ ಎರಡು ತಿಂಗಳಲ್ಲೇ ಆಫೀಸ್ ಚುನಾವಣೆಗಳು ಬಂದವು. ಒಂದು ಪೋಸ್ಟ್ ಹೆಂಗಸರಿಗೆ ಮೀಸಲಾಗಿತ್ತು. ಅಲ್ಲಿಯವರೆಗೆ ವಾಣಿ ಎಂಬಾಕೆ ಸ್ತ್ರೀಯರ ಪ್ರತಿನಿಧಿಯಾಗಿದ್ದರು. ಒಂದು ಗುಂಪಿಗೆ ಅವರು ಮುಂದುವರಿಯುವುದು ಇಷ್ಟವಿರಲಿಲ್ಲ. ನಾನು ವಾಣಿ ಗುಂಪಿನಲ್ಲಿ ಹೆಚ್ಚು ಪಳಗಿದ್ದೆ. ವಿಚಿತ್ರವೆಂಬಂತೆ ಎರಡೂ ಗುಂಪಿನವರೂ ಅವಿರೋಧವಾಗಿ ನಾನೇ ಮಹಿಳಾ ಪ್ರತಿನಿಧಿಯಾಗಬೇಕೆಂದು ಒತ್ತಡ ಹಾಕಿದರು. ಆದರೆ AG’s ಆಫೀಸು ನನ್ನ ಭವಿಷ್ಯವಾಗಿರಲಿಲ್ಲವಾಗದ ಕಾರಣ ನಾನು ನಯವಾಗಿಯೇ ಅವರ ಬೇಡಿಕೆಯನ್ನ ತಿರಸ್ಕರಿಸಿದೆ. ಇಲ್ಲಿ ಬಂದ ಸಂಬಳದಲ್ಲಿ ನನ್ನ ಸ್ವಂತ ಖರ್ಚಿಗೆ ಸ್ವಲ್ಪ ಹಣ ಇಟ್ಟುಕೊಂಡು ಉಳಿದಿದ್ದನ್ನು ನಮ್ಮ ತಾಯಿಯ ಕೈಗೆ ಕೊಟ್ಟೆ . ಕೊನೆಗೂ ನನ್ನ ಸಂಸಾರಕ್ಕೆ ಹಣ ಸಹಾಯ ಮಾಡಬೇಕೆಂಬ ನನ್ನ ಆಸೆ ಫಲಿಸಿತು.
ಸುಮಾರು ಎರಡು ತಿಂಗಳ ನಂತರ M.Sc. ಫಲಿತಾಂಶ ಬಂದು ನಾನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದೆ. AG’s ಆಫೀಸಿನಲ್ಲಿ ಕೆಲಸ ಕೆಲವು ದಿನ ಮುಂದುವರೆದ ಮೇಲೆ ನನ್ನ ಭವಿಷ್ಯದ ದಿಕ್ಕು ಬದಲಾಯಿಸಿತು. ಸಂಶೋಧನೆಯ ನನ್ನ ಆಶಯ ಇನ್ನೂ ಹಚ್ಚಹಸಿರಾಗಿತ್ತು. ಆದರೆ ಫೆಲೋಶಿಪ್? ದೇವರನ್ನು ಬೇಡುವುದರ ಹೊರತು ನನಗೆ ಬೇರೆ ದಾರಿ ಕಾಣಲಿಲ್ಲ. ಕೆಲವು ದಿನಗಳ ನಂತರ ನನ್ನ ಅದೃಷ್ಟ ಖುಲಾಯಿಸಿತು. ತಕ್ಷಣ ನಾನು ಪ್ರಾಣಿಶಾಸ್ತ್ರದ ವಿಭಾಗದ ಮುಖ್ಯಸ್ಥರನ್ನು ಕಾಣಬೇಕೆಂದು ಕರೆ ಬಂತು. ವಿಭಾಗದಲ್ಲಿದ್ದ ಲೆಕ್ಚರರ್ ಡಾ. ಆರ್.ವಿ. ಕೃಷ್ಣಮೂರ್ತಿಯವರಿಗೆ CSIR ನಿಂದ (Council of Scientific and Industrial Research) ಒಂದು ಸಂಶೋಧನಾ ಯೋಜನೆ ಮಂಜುರಾಗಿದೆಯೆಂದೂ, ಅದರಲ್ಲಿ ಒಂದು Junior Research Fellow ಹುದ್ದೆ, ತಿಂಗಳಿಗೆ ಮುನ್ನೂರು ರೂಪಾಯಿ ಫೆಲೋಶಿಪ್ ಸಮೇತ ಇದೆಯೆಂದೂ, ಅದನ್ನು ನನಗೆ ಕೊಡಲು ನಿರ್ಧರಿಸಿರುವುದಾಗಿಯೂ ಹೇಳಿದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಜೀವನದ ಒಂದು ಅತಿ ಮುಖ್ಯವಾದ, ನನ್ನ ಬದುಕಿನ ದಿಕ್ಕನ್ನೇ ಬದಲಿಸಲಿರುವ ಕಠಿಣ ನಿರ್ಧಾರ ನಾನು ಕೈಗೊಳ್ಳಬೇಕಾಗಿತ್ತು. AG’s ಆಫೀಸಿನ, ಕೇಂದ್ರ ಸರ್ಕಾರದ, ಖಾಯಂ ಹುದ್ದೆಯೋ ಅಥವಾ ನನ್ನ ಆಸೆಯ, ಆದರೆ PhD ನಂತರ ಮತ್ತೇ ಕೆಲಸ ಹುಡುಕುವ ಅನಿಶ್ಚಿತವೋ ಅಥವಾ ಅದೃಷ್ಟ ಚೆನ್ನಾಗಿದ್ದರೆ ವಿದೇಶಕ್ಕೆ ಹೋಗುವ ಅವಕಾಶವೋ? ಅಪ್ಪನಿಗಂತೂ AGs ಬಿಡುವುದು ಸುತರಾಮ್ ಇಷ್ಟವಿರಲಿಲ್ಲ. ಅವರಿಗೆ ನನ್ನ ಕನಸುಗಳನ್ನ ಬಿಚ್ಚಿಟ್ಟೆ. PhD. ಆದ ಮೇಲೆ ವಿದೇಶಕ್ಕೆ ಹೋಗಲು ಬೇಕಾದಷ್ಟು ಅವಕಾಶಗಳಿವೆಯೆಂದು, ಒಂದು ಸಲ ನಾನು ಅಮೆರಿಕಾಗೆ ಹೋದರೆ ಕೇವಲ ನನ್ನ ಸಂಶೋಧನೆಯಲ್ಲಿ ಪ್ರಗತಿ ಮಾತ್ರವಲ್ಲ ನನ್ನ ಸಂಪಾದನೆಯೂ ಹೆಚ್ಚುವುದೆಂದೂ ಅವರನ್ನು ಒಪ್ಪಿಸಿದೆ.
ಆದರೆ ಸಂಶೋಧನೆಯ ದಾರಿಯೇನೂ ಸುಗಮವಾಗಿರಲಿಲ್ಲ. ವಿಷಯವೇನೋ ತುಂಬಾ ಆಕರ್ಷಕವಾಗಿತ್ತು. ಅತಿ ಕಡಿಮೆ ಉಷ್ಣಾಂಶದಲ್ಲಿ ಬದುಕುವ ಪ್ರಾಣಿಗಳ (ಕಪ್ಪೆಯ) ಶರೀರ ಕ್ರಿಯೆಗಳಲ್ಲಿ ಆಗುವ ಬದಲಾವಣೆಗಳೇನು ಮತ್ತು ಈ ಸಂಶೋಧನೆಯಿಂದ ಹಿಮಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಯಾವ ರೀತಿ ಸಹಾಯ ಈ ಸಂಶೋಧನೆಯಿಂದ ಉಪಯೋಗವಾಗಬಹುದು ಎಂಬ ಮುಖ್ಯ ಧ್ಯೇಯವಾಗಿತ್ತು. 1960 ದಶಕದಲ್ಲಿ ಈ ಬಗೆಯ ಬಾಹ್ಯ ಉಷ್ಣಾಂಶಕ್ಕೆ ಮನುಷ್ಯನೂ ಸೇರಿದಂತೆ ಪ್ರಾಣಿಗಳೂ ಹೊಂದಿಕೊಳ್ಳಲು ಹೇಗೆ ಸಾಧ್ಯ? ಹೊಂದಿಕೊಳ್ಳಬೇಕಾದರೆ ಶರೀರದೊಳಗಿನ ಕ್ರಿಯೆಗಳು ಯಾವ ರೀತಿ ಬದಲಾವಣೆಯಾಗುತ್ತವೆ ಮತ್ತು ಅವುಗಳನ್ನು ನಿಯಂತ್ರಿಸುವ ಆಂತರಿಕ ಮೂಲ ಶಕ್ತಿ ಯಾವುದು ಎಂಬ ಸಂಶೋಧನೆ ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಕೊನೆಗೂ ಫೆಲೋಶಿಪ್ ಜೊತೆಗೆ ನನಗೆ ಇಷ್ಟವಾದ ಸಂಶೋಧನಾ ಕ್ಷೇತ್ರ ಪವಾಡತಂತೆ ದೊರಕ್ಕಿದ್ದವು. ತಕ್ಷಣವೇ AG’s ಆಫೀಸಿನ ನನ್ನ ಹುದ್ದೆಗೆ ರಾಜೀನಾಮೆ ಕೊಟ್ಟು ಸೆಂಟ್ರಲ್ ಕಾಲೇಜಿಗೆ PhD ಮಾಡಲು ಉತ್ಸಾಹದಿಂದ ಹಿಂದಿರುಗಿದೆ. ಆಗಾಗಲೇ ಮೂರು ಮಹಿಳೆಯರು physiology ಲ್ಯಾಬ್ನಲ್ಲಿ ಸಂಶೋಧನೆ ಮಾಡುತ್ತಿದ್ದರು. ಇಬ್ಬರು ಎರೆಹುಳುವಿನ ಮೇಲೆ, ಒಬ್ಬರು ಬಸವನ ಹುಳುವಿನ ಮೇಲೆ ಮತ್ತು ನಾಲ್ಕನೆಯವಳಾಗಿ ನಾನು ಕಪ್ಪೆಗಳ ಮೇಲೆ ಸಂಶೋಧನೆ ಮಾಡಬೇಕಾಗಿತ್ತು.
ಪ್ರತಿ PhD ಮಾಡುವ ವಿದ್ಯಾರ್ಥಿಯ ಬದುಕು ಮುಳ್ಳಿನ ಮೇಲಿನ ಹಾಸಿಗೆಯಂತೆ. ಸಂಕಷ್ಟಗಳು ನೂರಾರು. ಫೆಲೋಶಿಪ್ ಸಿಕ್ಕು ಸಂಶೋಧನೆ ಮಾಡಿ ದೊಡ್ಡ ವಿಜ್ಞಾನಿಯಾಗೇತ್ತೇನೆಂಬ ಆಸೆಗಳು ಫಲಿಸಲು ಶ್ರಮ, ಅದೃಷ್ಟ, ಮಾರ್ಗದರ್ಶಕರ ಸೂಕ್ತ ದಿಗ್ದರ್ಶನ ಎಲ್ಲಾ ಬೇಕು. ನಾನು ಕಠಿಣ ಶ್ರಮಕ್ಕೆ ಸಿದ್ದಳಾಗಿದ್ದೆ. ಅದೃಷ್ಟವಶಾತ್ ಫೆಲೋಶಿಪ್ ಸೇರಿದ ಮೊದಲ ದಿನದಿಂದಲೇ ಸಿಕ್ಕಿತ್ತು. ಉತ್ಸಾಹದಿಂದ ಸೇರಿಕೊಂಡ ನನಗೆ ಮೊಟ್ಟ ಮೊದಲ ಬಾರಿಗೆ ದೊಡ್ಡದೊಂದು ಸವಾಲು ಎದುರಾಯಿತು.
(ಮುಂದಿನ ಕಥನ 14.8.2022)
ಅಂಕಣದ ಎಲ್ಲಾ ಭಾಗಗಳನ್ನೂ ಓದಲು ಕ್ಲಿಕ್ ಮಾಡಿ
Published On - 11:46 am, Sun, 7 August 22