AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು Singles day: ನಮ್ಗ್ ಯಾರ್ ಬೀಳ್ತಾರೆ.. ಅನ್ನೋರಿಗೆ ಈ ವಿಶೇಷ ದಿನ!

ನಮ್ಗ್ ಯಾರ್ ಬೀಳ್ತಾರೆ ಗುರೂ ಅಂತ ರಾಗ ಎಳೆದುಕೊಂಡು ಸಿಂಗಲ್ ಫಾರ್ ಎವರ್ ಅಂತ ಸ್ಟೇಟಸ್ ಹಾಕ್ಕೊಂಡು ಓಡಾಡೋ ಮಹಾನುಭಾವರೆಲ್ಲರನ್ನೂ ಇವತ್ತು ನೀವು ಹುಡುಕಿ ಹುಡುಕಿ ವಿಶ್ ಮಾಡ್ಬೇಕು! ಅರೆ, ಅವ್ರಿಗೆ ಯಾರಾದ್ರೂ ಸಿಕ್ಬಿಟ್ರು ಅನ್ನೋ ಖುಷಿಗೆ ವಿಶ್ ಮಾಡೋದು ಅನ್ಕೊಂಡ್ರಾ? ಛೇ, ಛೇ ಅದಕ್ಕಲ್ಲ ಸ್ವಾಮಿ! ಅವ್ರು ಇನ್ನೂ ಸಿಂಗಲ್ಲಾಗೇ ಉಳ್ದಿದ್ದಾರೆ ಅನ್ನೋ ಕಾರಣಕ್ಕೆ ವಿಶ್ ಮಾಡ್ಬೇಕಾಗಿರೋದು. ಯಾಕಂದ್ರೆ ಇವತ್ತು ಸಿಂಗಲ್ಸ್ ಡೇ. ಕಾಲೇಜು ಕಾರಿಡಾರಿನಿಂದ ಹಿಡಿದು ಊರೂರಿನ ಬೀದಿಯಲ್ಲಿ ಅಲೆದರೂ ಒಂದು ಸರಿಯಾದ ಜೋಡಿ […]

ಇಂದು Singles day: ನಮ್ಗ್ ಯಾರ್ ಬೀಳ್ತಾರೆ.. ಅನ್ನೋರಿಗೆ ಈ ವಿಶೇಷ ದಿನ!
ಸಾಧು ಶ್ರೀನಾಥ್​
|

Updated on:Nov 11, 2020 | 11:09 AM

Share

ನಮ್ಗ್ ಯಾರ್ ಬೀಳ್ತಾರೆ ಗುರೂ ಅಂತ ರಾಗ ಎಳೆದುಕೊಂಡು ಸಿಂಗಲ್ ಫಾರ್ ಎವರ್ ಅಂತ ಸ್ಟೇಟಸ್ ಹಾಕ್ಕೊಂಡು ಓಡಾಡೋ ಮಹಾನುಭಾವರೆಲ್ಲರನ್ನೂ ಇವತ್ತು ನೀವು ಹುಡುಕಿ ಹುಡುಕಿ ವಿಶ್ ಮಾಡ್ಬೇಕು! ಅರೆ, ಅವ್ರಿಗೆ ಯಾರಾದ್ರೂ ಸಿಕ್ಬಿಟ್ರು ಅನ್ನೋ ಖುಷಿಗೆ ವಿಶ್ ಮಾಡೋದು ಅನ್ಕೊಂಡ್ರಾ? ಛೇ, ಛೇ ಅದಕ್ಕಲ್ಲ ಸ್ವಾಮಿ! ಅವ್ರು ಇನ್ನೂ ಸಿಂಗಲ್ಲಾಗೇ ಉಳ್ದಿದ್ದಾರೆ ಅನ್ನೋ ಕಾರಣಕ್ಕೆ ವಿಶ್ ಮಾಡ್ಬೇಕಾಗಿರೋದು. ಯಾಕಂದ್ರೆ ಇವತ್ತು ಸಿಂಗಲ್ಸ್ ಡೇ.

ಕಾಲೇಜು ಕಾರಿಡಾರಿನಿಂದ ಹಿಡಿದು ಊರೂರಿನ ಬೀದಿಯಲ್ಲಿ ಅಲೆದರೂ ಒಂದು ಸರಿಯಾದ ಜೋಡಿ ಸಿಗದೆ, ಒಂಟಿ ಒಂಟಿಯಾಗಿರೋದು ಬೋರೋ ಬೋರು ಅಂತ ಹಾಡುವವರಿಗೂ, ಈ ಲವ್ವು, ಸುತ್ತಾಟದ ಸಹವಾಸಕ್ಕಿಂತ ಒಂಟಿಯಾಗಿರೋದೇ ಲೇಸು ಅಂತ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳೋರಿಗೂ ಈ ದಿನ ಸಮರ್ಪಿತ.

ನಿಮ್ಮ ಗ್ಯಾಂಗಲ್ಲಿ ಈ ರೀತಿಯ ಒಂದು ಅತೃಪ್ತ ಆತ್ಮ ಆದ್ರೂ ಇದ್ದೇ ಇರುತ್ತೆ ನೋಡಿ. ಪಕ್ಕದಲ್ಲಿದ್ದೋರು ಫೋನಲ್ಲಿ ಲವ್ವರ್ ಜೊತೆ ಮಾತಾಡ್ತಿದ್ರೆ ಪಿಳಿಪಿಳಿ ಕಣ್ ಬಿಟ್ಕೊಂಡು, ವಾಟ್ಸಪ್ಪಲ್ಲಿ ಮಧ್ಯರಾತ್ರಿ ಫ್ರೆಂಡ್ ಆನ್ಲೈನ್ ಇದ್ರೆ ತಕ್ಷಣ ಮೆಸೇಜ್ ಹಾಕಿ ಯಾರ್ ಜೊತೆ ಮಾತಾಡ್ತಿದ್ದಿ ಗುರೂ ಅಂತ ಕಾಲೆಳ್ಕೊಂಡು ಕೊನೆಗೆ ನಿಮ್ ಲೈಫ್ ಸೆಟ್ಲಾಗಿದೆ ಬಿಡಿ ಅನ್ನೋ ಹಳಸಿದ ಡೈಲಾಗ್ ಬಿಟ್ಟು ತಾವು ಸಿಂಗಲ್ ಅಂತ ಪ್ರೂವ್ ಮಾಡ್ಕೊಂಡ್ ಬಿಡ್ತಾರೆ.

ಇಂತಹ ಜನರಿಗೆ ಅಂತಾನೇ ನವೆಂಬರ್ 11ನೇ ತಾರೀಖನ್ನು ಸಿಂಗಲ್ಸ್ ಡೇ Singles day ಅಂತ ಘೋಷಿಸಲಾಗಿದೆ. 11/11 ಅಂತ ಬರೆದಾಗ ಒಟ್ಟು ನಾಲ್ಕುಬಾರಿ 1 ಸಾಲಾಗಿ ಬರುವುದರಿಂದ ಈ ದಿನವನ್ನ ಸಿಂಗಲ್ಸ್ ಡೇ ಎಂದು 1993ರಲ್ಲಿ ಘೋಷಿಸಲಾಯಿತಂತೆ.

ಚೀನಾದಲ್ಲಿ ಈ ದಿನ ಅತ್ಯಂತ ಪ್ರಸಿದ್ಧವಾಗಿದ್ದು ಸಿಂಗಲ್ಸ್ ಡೇ ಆಚರಿಸುವುದರ ಜೊತೆಗೆ ಸಿಂಗಲ್ ಲೈಫಿನಿಂದ ವೈವಾಹಿಕ ಜೀವನಕ್ಕೆ ಕಾಲಿಡಲು ಸಹ ಜನ ಈ ದಿನಾಂಕವನ್ನು ಆರಿಸಿಕೊಳ್ಳುತ್ತಾರಂತೆ. ಅದರಲ್ಲೂ 11/11/2011 ರಂದು 4,000ಕ್ಕೂ ಅಧಿಕ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆಂದರೆ ಜನರಿಗೆ ಈ ದಿನದ ಬಗ್ಗೆ ಎಂತಹಾ ಕ್ರೇಜ್ ಇದೆ ಎಂಬುದನ್ನು ನೀವೇ ಊಹೆ ಮಾಡಿ. ಇದರೊಟ್ಟಿಗೆ 11/11 ಬ್ಲೈಂಡ್ ಡೇಟ್ ಪಾರ್ಟಿಗಳಿಗೂ ಫೇವರೇಟ್ ದಿನವಂತೆ. ಜೀವನದಲ್ಲಿ ಒಮ್ಮೆಯೂ ಭೇಟಿಯೇ ಆಗದ ವ್ಯಕ್ತಿಗಳೊಂದಿಗೆ ಡೇಟಿಂಗ್ ಹೋಗುವ ಪರಿಕಲ್ಪನೆಯನ್ನು ಬ್ಲೈಂಡ್ ಡೇಟ್ ಎಂದು ಹೆಸರಿಸಲಾಗಿದ್ದು ಅದಕ್ಕೂ ಈ ದಿನವನ್ನೇ ಬಯಸುವುದು ವಿಶೇಷವಾಗಿದೆ. ಈ ದಿನದ ವಿಶೇಷತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಚೀನಾದ ಅಲಿಬಾಬಾ ಸಂಸ್ಥೆ 11/11ರಂದು ಅತಿ ದೊಡ್ಡ ವಹಿವಾಟನ್ನು ನಡೆಸಿಕೊಂಡು ಬಂದಿದೆ.

ಇದೆಲ್ಲಕ್ಕಿಂತ ಗಮ್ಮತ್ತಿನ ಸಂಗತಿಯೆಂದರೆ ವಿಶ್ವದ ಹಲವು ಭಾಗಗಳಲ್ಲಿ ಏಕಾಂಗಿ ಯುವಕ, ಯುವತಿಯರು ಸಿಂಗಲ್ಸ್ ಡೇ ದಿನ ಒಬ್ಬೊಬ್ಬರೇ ಹೋಗಿ ಕೇಕ್ ಕಟ್ ಮಾಡಿ, ಪಾರ್ಟಿ ಮಾಡಿ ತಮ್ಮ ಒಂಟಿ ಬದುಕನ್ನು ಎಂಜಾಯ್ ಮಾಡ್ತಾರಂತೆ! ಒಟ್ಟಿನಲ್ಲಿ ನಮ್ಗ್ಯಾರ್ ಬೀಳ್ತಾರೆ ಗುರೂ ಅನ್ನೋ ಜನರೆಲ್ಲಾ ಸೇರಿ ಒಂದು ವಿಶೇಷ ದಿನಕ್ಕೇ ಕಾರಣವಾಗಿಬಿಟ್ಟಿದ್ದಾರೆ ನೋಡಿ. ಅಂದ್ಹಾಗೆ, ನೀವೇನಾದ್ರೂ ಸಿಂಗಲ್ ಆಗಿದ್ರೆ ನಿಮ್ಗೂ ಹ್ಯಾಪಿ ಸಿಂಗಲ್ಸ್ ಡೇ. ಹಾಂ, ಒಬ್ರೇ ಹೋಗಿ ಕೇಕ್ ಕಟ್ ಮಾಡೋ ಮಜವನ್ನ ಮಿಸ್ ಮಾಡ್ಕೋಬೇಡಿ ಆಯ್ತಾ! -ಸ್ಕಂದ ಆಗುಂಬೆ

Published On - 11:06 am, Wed, 11 November 20