ಕಾಡುವ ಬಡತನದ ನಡುವೆ ಸಾಲ ತೀರಿಸಲು ಇದ್ದ ಎರಡು ಮೂರು ಎಕರೆ ಜಮೀನನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಮಾತನಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ನಂಬಲೇಬೇಕು. ಅವರು ಬೇರೆಯಾರೂ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿಯ ಡಾ.ಮಧುಕೇಶ್ವರ ಹೆಗಡೆ. ಇವರು ಜೇನು ಸಾಕಾಣಿಕೆಯಲ್ಲಿ ಮಾಡಿದ ಸಾಧನೆಯೇ ಇಂದು ಪ್ರಧಾನಿಯವರು ಗುರುತಿಸುವಂತೆ ಮಾಡಿದೆ. ಅಷ್ಟಕ್ಕೂ ಮೋದಿ ಅವರು ಮಧುಕೇಶ್ವರ ಅವರ ಬಗ್ಗೆ ಹೇಳಿದ್ದೇನು? ಮೋದಿಯವರ ಮಾತುಗಳ ನಂತರ ಏನಾಯ್ತು ಎಂಬೂದರ ಬಗ್ಗೆ ಟಿವಿ9 ವಿಶೇಷ ಲೇಖನದಲ್ಲಿ ಹೇಳುತ್ತೇವೆ.
ಸಣ್ಣ ವಯಸ್ಸಿನಲ್ಲೇ ಜೇನು ಸಾಕಾಣಿಕೆ ಮೇಲೆ ಅತಿಯಾದ ಒಲವನ್ನು ಹೊಂದಿದ್ದ ಮಧುಕೇಶ್ವರ ಅವರು ಜೇನು ಸಾಕಾಣಿಕೆ ಮಾಡಿ ದೇಶದಲ್ಲೇ ಹೆಸರು ಗಳಿಸುವಂತಾಗಿದೆ. ಇತ್ತೀಚೆಗೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮೋದಿಯವರು ಶ್ಲಾಘನೆ ವ್ಯಕ್ತಪಡಿಸಿದ್ದರು. “50 ಜೇನು ಪೆಟ್ಟಿಗೆಗಳಿಗಾಗಿ ಸರ್ಕಾರದಿಂದ ಸಬ್ಸಿಡಿ ಪಡೆದಿದ್ದರು. ಇದೀಗ ಅವರು 800ಕ್ಕೂ ಹೆಚ್ಚು ಜೇನು ಪಟ್ಟಿಗೆಗಳನ್ನು ಹೊಂದಿದ್ದಾರೆ. ಜೇನಿನಿಂದ ಬೈ ಪ್ರಾಡಕ್ಟ್ ಮಾಡುವ ಮೂಲಕ ಮಧುಕೇಶ್ವರ ಎಂಬ ಹೆಸರಿಗೆ ಅನ್ವರ್ಥವಾಗಿದ್ದಾರೆ” ಎಂದು ಪ್ರಧಾನಿ ಹೇಳಿದ್ದರು. ಮೋದಿಯವರಿಂದ ಈ ಶ್ಲಾಘನೆ ವ್ಯಕ್ತವಾಗುತ್ತಿದ್ದಂತೆ ಮಧುಕೇಶ್ವರ ಅವರ ಹೆಸರು ಕೂಡ ಖ್ಯಾತಿ ಪಡೆಯಿತು. ಇವರು ಯಾರು ಎಂಬ ಹುಡುಕಾಟಗಳು ಕೂಡ ನಡೆದವು. ಸಾವಿರಾರು ದೂರವಾಣಿ ಕರೆಗಳು ಕೂಡ ಬರಲು ಆರಂಭವಾದವು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಸಾಧನೆಯನ್ನು ಪ್ರಧಾನಿಯವರು ಕೊಂಡಾಡಿದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಧುಕೇಶ್ವರ್ ಅವರು ಮೋದಿಯವರನ್ನು ದೇವರೆಂದು ಕೊಂಡಾಡಿದ್ದಾರೆ. ಅಲ್ಲದೆ, ಲಕ್ಷಾಂತರ ಜೇನು ಕೃಷಿಕರ ನಡುವೆ ನನ್ನನ್ನು ಆಯ್ಕೆ ಮಾಡಿರುವುದು ಅಚ್ಚರಿಯಾಗಿದೆ. ಮೋದಿಯವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ನಾನು ಕನಸು ಕೂಡ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮೋದಿಯ ಶ್ಲಾಘನೆಯ ನಂತರ ಬಂದ ಸಾವಿರಾರು ಕರೆಗಳು
ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಧುಕೇಶ್ವರ ಅವರ ಬಗ್ಗೆ ಮಾತನಾಡಿದ ನಂತರ ಅವರ ಹೆಸರು ಇನ್ನಷ್ಟು ಖ್ಯಾತಿ ಪಡೆಯಿತು. ಮಹಾರಾಷ್ಟ್ರ, ಗೋವಾ ಸೇರಿದಂತೆ ಕೆಲವೊಂದು ರಾಜ್ಯಗಳ ಜನರು ದೂರವಾಣಿ ಕರೆ ಮಾಡಿ ಮಾಹಿತಿ ಕಲೆಹಾಕಿಕೊಂಡಿದ್ದಾರೆ. ರಾಜ್ಯದ ಜನರು ಸೇರಿದಂತೆ ಅನೇಕ ಸ್ಥಳೀಯರು ದೂರವಾಣಿ ಮೂಲಕ ಹಾಗೂ ವಾಟ್ಸ್ಆ್ಯಪ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹೀಗೆ ಒಟ್ಟು 2 ರಿಂದ 3 ಸಾವಿರ ದೂರವಾಣಿ ಕರೆಗಳು ಬಂದಿವೆ ಎಂದು ಮಧುಕೇಶ್ವರ ಅವರ ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ನಿಲ್ಲದ ಮಧುಕೇಶ್ವರ ಅವರ ಸಾಧನೆ ಇತರರಿಗೆ ಪ್ರೇರಣೆಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಮನ್ ಕೀ ಬಾತ್ ನಂತರ ಅನೇಕರು ಕರೆ ಮಾಡಿ ಮಧುಕೇಶ್ವರ್ ಬಳಿ ಜೇನು ಸಾಕಾಣಿಕೆಯ ತರಬೇತಿ ಪಡೆಯುವ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಧುಕೇಶ್ವರ ಅವರು ಕುಮಠ ರಸ್ತೆಯಲ್ಲಿರುವ ಕಲ್ಲಳ್ಳಿ ಮನೆ ಬ್ರಾಂಚ್-3 ಮತ್ತು ತಾರುಗೋಡಿಯಲ್ಲಿರುವ ಕಲ್ಲಳ್ಳಿ ಬ್ರಾಂಚ್ನ ಬೀ ರಿಸರ್ಚ್ ಸೆಂಟರ್ ಹನಿ ಶಾಪ್ನಲ್ಲಿ ಉಚಿತವಾಗಿ ತರಬೇತಿ ನೀಡಲು ಮುಂದಾಗಿದ್ದಾರೆ. ಈಗಾಗಲೇ 2ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ಪಡೆಯಲು ಮುಂದೆ ಬಂದಿದ್ದು, 7-8 ಜನರ ತಂಡದಂತೆ ತರಬೇತಿ ನೀಡಲು ಮುಂದಾಗಿದ್ದಾರೆ.
ಮೋದಿ ಹೆಸರಿನಲ್ಲಿ ತರಬೇತಿ ಕೇಂದ್ರ
ಅನೇಕ ಕಡೆಗಳಲ್ಲಿ ತನ್ನ ಜಮೀನು ಹೊಂದಿರುವ ಮಧುಕೇಶ್ವರ್, ಹುಬ್ಬಳ್ಳಿ ರೋಡ್ನಲ್ಲಿರುವ ತನ್ನ ಜಮೀನಿನಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಿ ಅದಕ್ಕೆ ಮಾನ್ಯ ನರೇಂದ್ರ ಮೋದಿ ಬೀ ಕೀಪಿಂಗ್ ಟ್ರೈನಿಂಗ್ ಸೆಂಟರ್ ಕಲ್ಲಳ್ಳಿ ಮನೆ ಬ್ರಾಂಚ್-4 ಎಂದು ಹೆಸರನ್ನು ಇಡುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಮೋದಿಯವರನ್ನು ಭೇಟಿಯಾಗಿ ಮಾತನಾಡುವ ಕನಸು ಕಟ್ಟಿಕೊಂಡಿದ್ದಾರೆ.
ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಮಧುಕೇಶ್ವರ ಅವರನ್ನು ಶ್ಲಾಘಿಸಿದ ನಂತರ ಇವರ ಜೇನಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ವತಃ ಮಧುಕೇಶ್ವರ ಅವರು ಹೇಳುವಂತೆ, ಮೋದಿಯವರ ಶ್ಲಾಘನೆ ನಂತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆನ್ಲೈನ್ನಲ್ಲೂ ಒಂದಷ್ಟು ಆರ್ಡರ್ಗಳು ಬರಲು ಆರಂಭವಾಗಿವೆ.
Published On - 9:45 am, Sat, 6 August 22