Freedom Fighters: ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು; ಇದು ನಿಮ್ಮೂರಿನಲ್ಲೇ ನಡೆದ ಸ್ವಾತಂತ್ರ್ಯ ಹೋರಾಟದ ಕೈಗನ್ನಡಿ

Suryanath Kamath: 3,200ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಇತಿಹಾಸಕಾರ ಸೂರ್ಯನಾಥ ಕಾಮತ್ ಅವರು 800ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ದಾಖಲಿಸಿದ್ದಾರೆ.

Freedom Fighters: ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು; ಇದು ನಿಮ್ಮೂರಿನಲ್ಲೇ ನಡೆದ ಸ್ವಾತಂತ್ರ್ಯ ಹೋರಾಟದ ಕೈಗನ್ನಡಿ
ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು ಸಂಪುಟ ಮತ್ತು ಡಾ ಸೂರ್ಯನಾಥ ಕಾಮತ್Image Credit source: twitter.com/kul_guru & ವಾರ್ತಾ ಇಲಾಖೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 05, 2022 | 3:58 PM

ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ (Freedom Movment of India) ಚಳವಳಿಯು ಯಾವುದೋ ನಿರ್ದಿಷ್ಟ ವರ್ಗ ಅಥವಾ ಜಾತಿಗೆ ಸೇರಿದವರು ಆಳುವವರ ವಿರುದ್ಧ ಸಿಡಿದೆದ್ದ ಸಂಘರ್ಷವಲ್ಲ. ಇದು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆಯೆರೆದ ತ್ಯಾಗಿಗಳ ನೇತೃತ್ವದಲ್ಲಿ ನಡೆದ ಜನಸಂಗ್ರಾಮ. ಸಾಮಾನ್ಯ ಜನರೇ ಸೈನಿಕರೂ ಆಗಿ ದೇಶದ ಪರ ಹೋರಾಡಿದ ಅಪರೂಪದ ಇತಿಹಾಸ ನಮ್ಮದು. ದೇಶ-ಕಾಲಕ್ಕೆ ತಕ್ಕಂತೆ ಕ್ಷಾತ್ರ ತೇಜಸ್ಸಿನ ಶಸ್ತ್ರ ಸಂಘರ್ಷ, ಅಹಿಂಸಾ ಹೋರಾಟಗಳು ಜೊತೆಜೊತೆಗೆ ಸಾಗಿದವು. ಆದರೆ ಎರಡೂ ಮಾರ್ಗ ಹಿಡಿದ ಹೋರಾಟಗಾರರ (Freedom fighters) ಉದ್ದೇಶ ಇದ್ದುದು ಇಷ್ಟೇ; ‘ನಮ್ಮ ದೇಶ ಸ್ವಾತಂತ್ರ್ಯವಾಗಬೇಕು. ಮುಂದಿನ ತಲೆಮಾರು ಬ್ರಿಟಿಷರ ಹಂಗಿಲ್ಲದೇ ಬೆಳೆಯಬೇಕು. ಭಾರತದ ಭವಿಷ್ಯ ಉಜ್ವಲವಾಗಬೇಕು’. ಹೀಗಾಗಿಯೇ ನಮ್ಮೂರು-ನಿಮ್ಮೂರುಗಳಲ್ಲಿಯೂ ಸ್ವಾತಂತ್ರ್ಯ ಹೋರಾಟದ ರಣಕಹಳೆ ಮೊಳಗಿದ್ದವು. ಭಾರತದ ಯಾವ್ಯಾವುದೋ ಮೂಲೆಗಳಲ್ಲಿ ನಡೆದ ಹೋರಾಟಗಳನ್ನು ನೆನಪಿಸಿಕೊಳ್ಳುವ ನಾವು ನಮ್ಮ ಕರ್ನಾಟಕದಲ್ಲಿ, ನಮ್ಮ ಜಿಲ್ಲೆ, ನಮ್ಮ ತಾಲ್ಲೂಕಿನಲ್ಲೇ ನಡೆದ ಹೋರಾಟಗಳನ್ನು ಮರೆತಿದ್ದೇವೆ. ಏನು ಮಾಡುವುದು? ಇದು ದುರಂತ.

ಕೋಟ್ಯಂತರ ಜನರು ಪಾಲ್ಗೊಂಡ, ತ್ಯಾಗ-ಬಲಿದಾನಗಳಿಂದ ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿಸಿದ ಇಂಥ ಜನಸಂಗ್ರಾಮಗಳ ದಾಖಲಾತಿ ಇತಿಹಾಸಕಾರರಿಗೆ ಸದಾ ಸವಾಲು. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮುಂಚೂಣಿ ನಾಯಕರು ವಿದ್ಯಾವಂತರು, ಚೆನ್ನಾಗಿ ಓದಿಕೊಂಡವರು ಆಗಿದ್ದರು. ಆದರೆ ಅವರ ಬೆನ್ನಿಗೆ ನಿಂತು ಬಲ ತುಂಬಿದವರಲ್ಲಿ ಬಹುತೇಕರು ಜೀವನಾನುಭವದಿಂದ ಬಾಳು ಬೆಳಗಿಸಿಕೊಂಡ ಜೀವಗಳು. ಆದರೆ ಅಕ್ಷರ ಜ್ಞಾನದಿಂದ ದೂರವಿದ್ದವರು. ಭಾರತದ ಇತಿಹಾಸದಲ್ಲಿ ಕೆಲವೇ ನಾಯಕರ, ಕೆಲವೇ ಊರುಗಳ ಹೆಸರು ಪ್ರಸ್ತಾಪವಾಗಲು, ಅಗಣಿತ ಜನರು ಇತಿಹಾಸದ ದಾಖಲೆಗಳಿಂದ ದೂರ ಉಳಿಯಲು ಈ ಅಂಶವೇ ಮುಖ್ಯ ಕಾರಣ.

‘ಕರ್ನಾಟಕದ ಸಂಕ್ಷಿಪ್ತ ಇತಿಹಾಸ’ ಪುಸ್ತಕದ ಮೂಲಕ ಇತಿಹಾಸ ಕೃತಿಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ದೃಢವಾಗಿ ಮೂಡಿಸಿದ ಖ್ಯಾತ ಇತಿಹಾಸಕಾರರಾದ ಡಾ. ಸೂರ್ಯನಾಥ ಕಾಮತ್ ಅವರು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ನಿರೂಪಣೆಯಲ್ಲಿ ಇದ್ದ  ಮಿತಿಗಳನ್ನು ಅರಿತವರು. ಬಹುಜನರ ಹೋರಾಟಗಳು ದಾಖಲಾಗದೆ ಕಣ್ಮರೆಯಾಗಬಾರದು ಎಂದು ದೃಢ ಸಂಕಲ್ಪದಿಂದ ದೊಡ್ಡ ಪ್ರಯತ್ನಕ್ಕೆ ಮುಂದಾದರು. ಅವರ ಸತತ ಪ್ರಯತ್ನದ ಫಲವಾಗಿ ಕರುನಾಡಿಗೆ ಸಿಕ್ಕ ಕೊಡುಗೆ “ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು”. ಮೂರು ಸಂಪುಟಗಳಲ್ಲಿ ಪ್ರಕಟವಾಗಿರುವ 3,200ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಕಾಮತರು 800ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ದಾಖಲಿಸಿದ್ದಾರೆ.

ಕಂಪ್ಯೂಟರ್, ಸ್ಮಾರ್ಟ್​ಫೋನ್, ವಾಟ್ಸ್ಯಾಪ್​ ಬಳಕೆ ಆರಂಭವಾಗುವ ಮೊದಲೇ ಸಿದ್ಧಗೊಂಡಿದ್ದ “ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು” ಕರ್ನಾಟಕದ ಯಾವೆಲ್ಲಾ ಊರುಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು, ಯಾವ್ಯಾವ ಊರಲ್ಲಿ ಯಾವೆಲ್ಲಾ ಹೋರಾಟಗಾರರು ಎಂತೆಂಥ ಚಳವಳಿ ಸಂಘಟಿಸಿದ್ದರು ಎಂದು ಅರಿಯಲು ಇರುವ ಏಕೈಕ ಅಧಿಕೃತ ಆಕರವಾಗಿ ಇಂದಿಗೂ ಪ್ರಾಮುಖ್ಯತೆ ಪಡೆದಿದೆ. ಇಂಗ್ಲಿಷ್ ಸೇರಿದಂತೆ ಯಾವುದೇ ಭಾರತೀಯ ಭಾಷೆಯಲ್ಲಿ ಜನಸಾಮಾನ್ಯರ ತ್ಯಾಗ ಬಲಿದಾನವನ್ನು ಯಥಾವತ್ತಾಗಿ ಅವರದೇ ನುಡಿಗಳಲ್ಲಿ ಕಟ್ಟಿಕೊಡುವ ಇಷ್ಟು ಬೃಹತ್ ಕೃತಿ ಪ್ರಕಟವಾದ ನಿದರ್ಶನವಿಲ್ಲ ಎಂದು ಇತಿಹಾಸಜ್ಞರು ಈ ಕೃತಿಯ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತಾರೆ. ಈ ಕೃತಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ, ಕನ್ನಡದ ಇತಿಹಾಸ ಸಾಹಿತ್ಯಕ್ಕೆ ಸೂರ್ಯನಾಥ ಕಾಮತರು ನೀಡಿದ ಮೌಲಿಕ ಕೊಡುಗೆಯಾಗಿ ಕಂಗೊಳಿಸುತ್ತಿದೆ.

Swatantrya-Sangrama-Inside-

‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಕೃತಿಯ ಒಳಪುಟ

ಪಾತ್ರಗಳೇ ಬರೆದ ಕಥೆ

ಇತಿಹಾಸಕಾರನೊಬ್ಬ ಅನ್ಯಮೂಲಗಳಿಂದ ಇತಿಹಾಸವನ್ನು ಬರೆಯುವುದು ಬೇರೆ, ಇತಿಹಾಸವೇ ತಾನಾಗಿ ಮೈದಳೆದು ಕೃತಿಯೊಂದರ ಭಾಗವಾಗುವುದು ಬೇರೆ. ಕನ್ನಡದಲ್ಲಿ ಪ್ರಕಟವಾಗಿರುವ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಸಂಪುಟಗಳು ಎರಡನೇ ಮಾದರಿ. ಇಲ್ಲಿ ಇತಿಹಾಸವಾಗಬೇಕಿದ್ದ ವ್ಯಕ್ತಿಗಳು ತಾವಾಗಿಯೇ ತಮ್ಮ ಕಥೆಗಳನ್ನು ಬರೆದುಕೊಂಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಷ್ಟೇ ಆಗಿರಲಿಲ್ಲ. ಅದಕ್ಕೆ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಬೌದ್ಧಿಕ ಆಯಾಮಗಳೂ ಇದ್ದವು. ಸ್ವಾತಂತ್ರ್ಯ ಹೋರಾಟಗಾರರು ಸಹ ಒಂದಲ್ಲ ಒಂದು ರೀತಿ ಈ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಅಂಶವೂ ಈ ಸಂಪುಟಗಳಲ್ಲಿ ದಾಖಲಾಗಿದೆ.

ಪಂಜಾಬ್​ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಷ್ಟೇ ಭೀಕರವಾಗಿ ನಡೆದದ್ದು ಗೌರಿಬಿದನೂರು ತಾಲ್ಲೂಕು ವಿದುರಾಶ್ವತ್ಥ ಹತ್ಯಾಕಾಂಡ. ಬರ್ಡೋಲಿಯಲ್ಲಿ ನಡೆದ ಕರನಿರಾಕರಣ ಚಳವಳಿಗೆ ಸರಿಸಮನಾಗಿ ನಡೆದದ್ದು ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಹೋರಾಟ. ಗಾಂಧಿ ಪ್ರೇರಣೆಯಂತೆ ಕರ್ನಾಟಕದಲ್ಲಿಯೂ ಹರಿಜನೋದ್ಧಾರ ಹಾಗೂ ಕೋಮುಸೌಹಾರ್ದಕ್ಕಾಗಿ ಶ್ರಮಿಸಿದವರೂ ಸಾಕಷ್ಟು ಜನರಿದ್ದರು. ಆದರೆ ಹಲವು ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ಮೌನವಾಗಿವೆ. ಕೆಲವರ ಹೆಸರನ್ನು ಸಮಾಜ ತನ್ನೂರಿನ ರಸ್ತೆ ಅಥವಾ ಕಟ್ಟಡಗಳಿಗೆ ನಾಮಕಾರಣ ಮಾಡಿ ನೆನಪು ಮಾಡಿಕೊಂಡಿದೆಯಾದರೂ, ಹೊಸ ತಲೆಮಾರಿಗೆ, ಅಷ್ಟೇಕೆ ಅವರ ಕುಟುಂಬ ಸದಸ್ಯರಿಗೇ ತಮ್ಮ ಪೂರ್ವಜರ ತ್ಯಾಗ-ಹೋರಾಟಗಳ ಪರಿಚಯ ಇಲ್ಲ. ಕರ್ನಾಟಕದ ಯಾವುದೇ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ಕೃತಿಯಲ್ಲಿ ವಿವರಗಳಿವೆ. ಹೀಗಾಗಿಯೇ ಈ ಪುಸ್ತಕಕ್ಕೆ ಸಾರ್ವಕಾಲಿಕ ಮಹತ್ವ ಬಂದಿದೆ.

Swatantrya-Sangrama-Inside1

ಕರ್ನಾಟಕದ 800ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು 3,200 ಪುಟಗಳಲ್ಲಿ ಸಂಗ್ರಹಿಸಲಾಗಿದೆ.

ಸಂಪಾದಕನ ತಪಸ್ಸು

3,000ಕ್ಕೂ ಹೆಚ್ಚು ಪತ್ರಗಳನ್ನು ಬರೆಯುವುದು, 800ಕ್ಕೂ ಹೆಚ್ಚು ಮಂದಿಯ ಬರಹಗಳನ್ನು ಎಡಿಟ್ ಮಾಡಿ, ಪ್ರೂಫ್ ತಿದ್ದಿ ಪ್ರಕಟಿಸುವುದು ಎಂದರೆ ಹುಡುಗಾಟಿಕೆಯ ಮಾತಲ್ಲ. ತಪಸ್ಸಿನಂಥ ತಾಳ್ಮೆ, ಶ್ರದ್ಧೆ, ಅಧ್ಯಯನಶೀಲತೆ ಎಲ್ಲಕ್ಕೂ ಮಿಗಿಲಾಗಿ ದೇಶಭಕ್ತಿ ಬೇಕು. ಈ ನಾಲ್ಕೂ ಅಂಶಗಳು ಮಿಳಿತಗೊಂಡಿದ್ದ ಕಾರಣದಿಂದಲೇ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ರೀತಿಯ ಮಹತ್ವದ ಕೃತಿಯೊಂದನ್ನು ಕನ್ನಡ ಸಾರಸ್ವತ ಲೋಕಕ್ಕೆ ಸೂರ್ಯನಾಥ ಕಾಮತರು ಕೊಡುಗೆಯಾಗಿ ಕೊಡಲು ಸಾಧ್ಯವಾಯಿತು.

ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ವಿವರಗಳು ಲಭ್ಯವಿಲ್ಲದಿರುವುದನ್ನು ಮನಗಂಡ ಸೂರ್ಯನಾಥ ಕಾಮತರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರತ್ಯಕ್ಷದರ್ಶಿಗಳು ತಮ್ಮ ನೆನಪುಗಳನ್ನು ಹಂಚಿಕೊಳ್ಳಬೇಕೆಂದು 12ನೇ ನವೆಂಬರ್ 1972ರಂದು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯೂ ಅಗಾಧವಾಗಿತ್ತು. ಕೇವಲ ಒಂದೂವರೆ ವರ್ಷಗಳಲ್ಲಿ ಸ್ಮೃತಿಗಳ ಮೊದಲ ಸಂಪುಟ ಪ್ರಕಟವಾಗಿತ್ತು. ‘ಇದು ಇತಿಹಾಸವೇನೂ ಅಲ್ಲ; ಇತಿಹಾಸ ರಚನೆಗೆ ನೆರವಾಗುವ ದಾಖಲೆಗಳು ಮಾತ್ರ’ ಎನ್ನುವ ವಿನಮ್ರ ಅರಿಕೆಯೊಂದಿಗೆ ಈ ಸಂಪುಟಗಳನ್ನು ಇತಿಹಾಸಕಾರ ಕಾಮತರು ಕನ್ನಡ ನಾಡಿಗೆ ಅರ್ಪಿಸಿದರು.

ಬೆಂಗಳೂರಿನ ಮಿಥಿಕ್ ಸೊಸೈಟಿ, ವಿಶ್ವವಿದ್ಯಾಲಯಗಳು ಮತ್ತು ಕರ್ನಾಟಕದ ಎಲ್ಲ ಪ್ರಮುಖ ಗ್ರಂಥಾಲಯಗಳಲ್ಲಿ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಸಂಪುಟಗಳು ಲಭ್ಯವಿದೆ. ಇಂಥ ಮಹತ್ವದ ಕೃತಿಯನ್ನು ತಿರುವಿ ಹಾಕಲು, ನಮ್ಮೂರಿನ ನಿಜವಾದ ನಾಯಕರನ್ನು ಸ್ಮರಿಸಲು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವು ಅತ್ಯುತ್ತಮ ಸಂದರ್ಭ. ಹೊರಗೆಲ್ಲೂ ಈ ಪುಸ್ತಕಗಳು ಮಾರಾಟಕ್ಕೆ ಲಭ್ಯವಿಲ್ಲ. ನಮ್ಮ ಸರ್ಕಾರ, ಅಕಾಡೆಮಿಗಳು ಅಥವಾ ವಿಶ್ವವಿದ್ಯಾಲಯಗಳು ಈ ಕೃತಿಯ ಮರುಮುದ್ರಣಕ್ಕೆ ಮುಂದಾದರೆ ಅದೊಂದು ಸಾರ್ಥಕ ಪ್ರಯತ್ನವಾದೀತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 5 August 22