ಬೆಂಗಳೂರು: ನಗರದಲ್ಲಿ ಹಲವಾರು ವಿವಾಹ ಸಮಾರಂಭಗಳನ್ನು ನಾವು ನೋಡಿರುತ್ತೇವೆ. ಬಹಳಷ್ಟು ಮದುವೆಗಳಿಗೂ ಹೋಗಿ ನವಜೋಡಿಗೆ ಶುಭ ಹಾರೈಸಿರುವುದೂ ಉಂಟು. ಆದರೆ, ನಮ್ಮ ಉದ್ಯಾನ ನಗರಿಯಲ್ಲಿ ಅಪರೂಪದ ಒಂದು ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಹೌದು, ಇದು ನಗರದ ಶಾರ್ಟ್ ಬಟ್ ಸ್ವೀಟ್ ಲವ್ ಕಂ ಮ್ಯಾರೇಜ್ ಸ್ಟೋರಿ. ನಗರದ ಇಬ್ಬರು ಕುಬ್ಜರು ತಮ್ಮ ಸ್ನೇಹಿತರ ಹಾಗೂ ಕುಟುಂಬಸ್ಥರ ಸಮಕ್ಷಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಸೋಮವಾರ ಕೋರಮಂಗಲದ ಸೋಮೇಶ್ವರ ದೇವಸ್ಥಾನದಲ್ಲಿ ಮದುವೆ ಆದ ಕುಬ್ಜ ಜೋಡಿ ಬೈರಪ್ಪ ಹಾಗೂ ರೂಪಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ.
ಮೂಲತಃ ಕೊಪ್ಪಳ ಮೂಲದ ಬೈರಪ್ಪ ಹಾಗೂ ಬೆಳಗಾವಿ ಮೂಲದ ರೂಪಾ ಖಾಸಗಿ ಕೆಫೆಯೊಂದರಲ್ಲಿ ಕೆಲಸ ಮಾಡ್ತಿದ್ದರು. ಅಗ, ಬೈರಪ್ಪಗೆ ರೂಪಾಳನ್ನು ನೋಡಿ ಲವ್ ಆಗೋಯ್ತೆ ನಿನ್ನ ಮ್ಯಾಲೆ ಎಂದು ಸೀದಾ ಹೋಗಿ ರೂಪಾಗೆ ಮೇಲೆ ಪ್ರಪೋಸ್ ಮಾಡಿಬಿಟ್ಟನಂತೆ!
ಆದರೆ, ಇದರಿಂದ ಕೊಂಚ ಅಚ್ಚರಿಗೊಂಡ ರೂಪಾ ತಕ್ಷಣ ಉತ್ತರ ಕೊಟ್ಟಿಲ್ಲ. ಬೈರಪ್ಪ ಪ್ರಪೋಸ್ ಮಾಡಿದ ಒಂದು ತಿಂಗಳ ನಂತರ ಪ್ರಪೋಸಲ್ ಒಪ್ಪಿಕೊಂಡಿದ್ದಾಳೆ. ಇವರಿಬ್ಬರ ಲವ್ ಕಂ ವೆಡ್ಡಿಂಗ್ ಸ್ಟೋರಿಗೆ ನಾಂದಿ ಹಾಡಿದ ಕೆಫೆ ಮಾಲೀಕರೇ ಖುದ್ದು ನಿಂತು ಇಬ್ಬರ ಮದುವೆ ನೆರವೇರಿಸಿದ್ದಾರೆ. ಅಂದ ಹಾಗೆ, ಲಾಕ್ಡೌನ್ ವೇಳೆ ತನ್ನ ಕೆಲಸ ಕಳೆದುಕೊಂಡಿದ್ದ ಬೈರಪ್ಪ, ನಂತರ ಕೆಫೆಯಲ್ಲಿ ಉದ್ಯೋಗ ಪಡೆದುಕೊಂಡಿದ್ರು.