ಒಣಗಾಳಿ ಬಿರುಬಿಸಿಲು ರಾಜಸ್ಥಾನ, ಜೈಸಲ್ಮೇರ್, ಮಧ್ಯಪ್ರದೇಶ ಹರಿಯಾಣ, ಉತ್ತರಪ್ರದೇಶವನ್ನು ಅಸಹನೀಯಗೊಳಿಸಿದೆ. ನಿಸರ್ಗದ ಆಟವನ್ನು ಬಲ್ಲವರಾರು? ಇಂಥದ್ದೇ ಒಣ ಹವಾಮಾನ, ಅಕಾಲ ಮಳೆ 2017ರಲ್ಲೂ ತಾಪಮಾನವನ್ನು ಗಣನೀಯವಾಗಿ ಹೆಚ್ಚಿ ಬೆಳೆ ನಾಶವಾಗಿದ್ದು, ಎಲ್ಲೆಡೆಯೂ ತ್ರಾಹಿ ತ್ರಾಹಿ ಎನಿಸಿದ್ದು ಈಗ ಮತ್ತೆ ಪುನರಾವರ್ತನೆಯಾಗುತ್ತಿದೆ. ಈ ಹವಾಮಾನ ಇನ್ನೂ ಎರಡು ವಾರಗಳ ಕಾಲ ಇರುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಜನಸಾಮಾನ್ಯರ ಗತಿ? ರೈತರ ಗತಿ? ದುಡಿದುಣ್ಣುವ ಬಡವರಿಗೆ ಈಗಾಗಲೇ ಅಡುಗೆ ಅನಿಲದ ಝಳ ತಾಕಿದೆ. ಅದೇ ಅಸಹನೀಯವಾಗಿರುವಾಗ ಇನ್ನು ಈ ಸೂರ್ಯನ ದಾಂಗುಡಿಯನ್ನು ಹೇಗೆ ಸಹಿಸುತ್ತಾರೋ ಈ ರಸ್ತೆ ಬದಿಯೇ ಬೀಡುಬಿಟ್ಟಿರುವ ಅಸಂಖ್ಯಾತ ಪಾಪದ ಜನ.
ದೆಹಲಿಯಲ್ಲಿ ಏಪ್ರಿಲ್ ತಿಂಗಳೆಂದರೆ ಚಳಿ ಕಳೆದು ಚೈತ್ರ ಆಗಮಿಸುವ ಸುಗ್ಗಿಯ ಕಾಲ. ಕಡು ಚಳಿಗಾಲದ ಪ್ರಕೋಪಕ್ಕೆ ಈಡಾಗಿ ಎಲೆ ಉದುರಿ ಬೋಳಾಗಿದ್ದ ಮರಗಳಲ್ಲಿ ಚಿಗುರೆಲೆಗಳು ಕುಡಿಯೊಡೆವ ಕಾಲ. ಕಿಶೋರ ಪ್ರಕೃತಿಗೆ ತಾರುಣ್ಯ ಚಿಮ್ಮುವ ಕಾಲ. ಆಫೀಸಿಗೆ ಹೋಗುವ ಮುಂಜಾವಿನ ಪ್ರಯಾಣದಲ್ಲಿ ನನ್ನ ಕಣ್ಸೆಳೆಯುವುದು ಈ ಪ್ರಕೃತಿಯ ವಿಸ್ಮಯಗಳೇ. ಇವೇ ನನ್ನ ಸಂಗಾತಿಗಳು. ಹೆದ್ದಾರಿಯ ನಡುವಿನ ಡಿವೈಡರಿನಲ್ಲಿ ಬೆಳೆದ ಜಾಮೂನು, ಬೇವು, ಅರಳಿ, ಬಕಾನಾ, ಹೊಂಗೆ, ಇನ್ನೂ ಅನೇಕ ಹೆಸರು ಗೊತ್ತಿರದ ಮರಗಳಲ್ಲಿ ಎಳೆ ಮಗುವಿನ ಕೆಂಪಾದ ಪುಟ್ಟ ಪಾದಗಳಂತಹ ಎಲೆಗಳು ಯಾವಾಗ ಮೂಡಿದವೋ ಗೊತ್ತೇ ಆಗಲಿಲ್ಲವಲ್ಲ ಎಂದು ಚಕಿತಗೊಳ್ಳುತ್ತಿರುತ್ತೇನೆ. ಆ ಬೆಳಗಿನ ಹೊಂಬಣ್ಣದಲ್ಲಿ ಅದ್ದಿ ತೆಗೆದಂತಿರುವ ಎಳೆ ಪಾದಗಳಂಥ ಎಲೆಗಳು ಬಿಸಿಲಿಗೆ ಮಿರ ಮಿರನೇ ಮಿರುಗುತ್ತಿರುತ್ತವೆ. ಹಸಿ ಬಾಣಂತಿ ಎರೆದುಕೊಂಡು ಹಿತವಾದ ಬಿಸಿಲಿಗೆ ಮೈಕಾಸಿಕೊಳ್ಳುತ್ತಿರುವಂತೆ ಇಡೀ ಮರದ ತುಂಬ ಮೈತುಂಬಿಕೊಂಡ ಕೆಂದೆಲೆ, ತಿಳಿಗೆಂಪು, ತಿಳಿಹಸಿರು ಬಣ್ಣದ ಎಲೆಗಳು ಕಣ್ಣಿಗೆ ಆಹ್ಲಾದವನ್ನುಂಟು ಮಾಡುತ್ತಿರುತ್ತವೆ.
ಚಳಿಯ ಹಿಮಗಾಳಿಗೆ ಪೂರ್ತಿಯಾಗಿ ಒಣಗಿ ಬರೀ ಒಣಕಡ್ದಿಗಳ ರೆಂಬೆ ಕೊಂಬೆಗಳ ಅಸ್ಥಿಪಂಜರವಾದ ಗುಲ್ಮೊಹರ್ ಮತದಲ್ಲಿ ಫಾಲ್ಗುಣ ಬರುತ್ತಲೂ ಸಣ್ಣ ಸಣ್ಣ ಕುಂಚದಂಥ ಎಲೆಗಳು ಮೂಡತೊಡಗುತ್ತವೆ. ಎರಡು ವಾರ ಕಳೆಯುವುದರಲ್ಲಿ ಒಣರೆಂಬೆಗಳ ಮೇಲೆ ಹಸಿರು ಪುಕ್ಕದ ಹಕ್ಕಿಗಳು ರೆಕ್ಕೆ ಬಿಡಿಸಿ ಕುಳಿತಿರುವಂತೆ ಗುಲಮೊಹರ್ ಎಲೆ ತುಂಬಿಕೊಳ್ಳುತ್ತಿತ್ತು. ಇನ್ಯಾವುದೋ ಮರದಲ್ಲಿ ಸಣ್ಣ ಸಣ್ಣ ಕಪ್ಪು ಬಾವಲಿಗಳು ಉದುರಿ ಬಿದ್ದಂತೆ ಕೆಲವು ಇನ್ನೂ ಟೊಂಗೆಗೆ ಜೋತು ಬಿದ್ದಂತೆ ಕಪ್ಪು ಕಪ್ಪು ಒಣ ಕಾಯಿಗಳು ಬಿದ್ದಿರುತ್ತಿದ್ದವು.
ದಿಲ್ಲಿಯ ರಿಂಗ್ ರೋಡಿನ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೂ ಬೆಳೆದು ನಿಂತ ಬೂರುಗದ ಮರಗಳಲ್ಲಿ ನಿಗಿ ನಿಗಿಸುವ ಕೆಂಡದಂಥ ಕೆಂಪು, ಕಡುಗೆಂಪು, ಕೇಸರಿ ತರಹಾವರಿ ಬೆಂಕಿಯ ಹೂಗಳನ್ನು ನೋಡುವುದೇ ಒಂದು ಹಬ್ಬ. ಆ ಹೂಗಳೆಲ್ಲ ಉದುರಿ ನೆಲಕ್ಕೆಲ್ಲ ಕೆಂಪು ಹಾಸನ್ನು ಹಾಸಿದಂತೆ ಚೆಂದವೆನಿಸಿದರೆ ಅದೇ ವಾಹನಗಳು ಓಡಾಡಿ ದಪ್ಪ ಪಕಳೆಯ ದಪ್ಪ ತೊಟ್ಟಿನ ಕೆಂಪು ಹೂಗಳನ್ನು ನುರಿದು ಅಂಟುಅಂಟಾಗಿ ಡಾಂಬರು ರಸ್ತೆಗೆ ಮೆತ್ತಿಕೊಂಡಿರುತ್ತಿತ್ತು. ಇಲ್ಲಿ ಇದನ್ನು ಸೆಂಬಲ್, ಸಿಂಬಲ್, ಸಂಸ್ಕೃತದಲ್ಲಿ ಶಾಲ್ಮಲಿಯಾಗಿರುವ ಬೂರುಗದ ಹೂವರಳಿದವೆಂದರೆ ಮಾರ್ಚ ಬಂತು ಫಾಲ್ಗುಣ ಕಳೆದು ಚೈತ್ರ ಆಗಮಿಸುತ್ತಿದೆ ಎಂದರ್ಥ. ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬದಂದು ಬೇವಿನ ಹೂಗಳು ಅರಳಿದರೆ ಉತ್ತರದಲ್ಲಿ ಹಬ್ಬ ಕಳೆದ ಬಳಿಕ ಅರಳುತ್ತಿದ್ದವು. ಬೇವಿನಮರದ ನಕಲಿ ಮರ ಬಕಾನಾ ನಸುಬಿಳಿ ನೇರಳೆ ಮಿಶ್ರಿತ ಗಮಗುಡುವ ಹೂಬಿಟ್ಟಿರುತ್ತದೆ.
ಚಳಿಗಾಲದ ರಮ್ಯತೆಯನ್ನು ಆಸ್ವಾದಿಸುವ ಮುನ್ನವೇ ಅಯ್ಯೋ ಕಳೆದೇಹೋಯ್ತಾ ಎನಿಸುತ್ತಿದೆ. ದೆಹಲಿಯ ಹವಾಮಾನ ಪೂರ್ತಿ ಬದಲಾಗಿ ಹೋಗಿದೆ. ಎಲ್ಲಿತ್ತು ಈ ರಣ ಬಿಸಿಲು! ಯಾಕಾಗಿ ನಿಸರ್ಗದ ಈ ವೈಪರಿತ್ಯ ಈ ಮುನಿಸು? ಯಾಕಾಗಿ ಈ ಸೂರ್ಯ ಇಷ್ಟು ಸಿಟ್ಟಲ್ಲಿದ್ದಾನೆ! ಈ ವರ್ಷ ಜನವರಿಯ ಚಳಿಯ ದಿನಗಳಲ್ಲೂ ಮಧ್ಯಾಹ್ನ ಮಾರ್ಚ್ ತಿಂಗಳಿನ ಬಿಸಿಲಂತೆ ಚುರುಗುಡುವ ಬಿಸಿಲಿತ್ತು. ಆಗ ಅನಿಸಿದ್ದಿಲ್ಲ ಹೋಳಿಹುಣ್ಣಿವೆಗೆ ಎಲ್ಲಾ ದಾಖಲೆಗಳನ್ನು ಮುರಿದು ಮನುಷ್ಯನ ಅಹಂಕಾರವನ್ನು ಮುರಿದು ಹಾಕುವ ಬಿಸಿಲು ಹೀಗೆ ರಣಕಹಳೆ ಮೊಳಗಿಸಬಹುದೆಂದು ಊಹಿಸಿದ್ದಿಲ್ಲ.
ಅವತ್ತು ರೈತ ಆಂದೋಲನಕ್ಕಾಗಿ ಟಿಕ್ರಿಗೆ ಹೋಗುವ ದಿನ ಬೆಳಿಗ್ಗೆ ಎದುರಿಗಿನ ವ್ಯಕ್ತಿ, ಗಿಡಮರಗಳು ಮಸುಕಾಗಿ ಬರುವ ವಾಹನಗಳು ಏನೂ ಕಾಣದಂಥ ದಟ್ಟ ಮಂಜು ಕವಿದಿತ್ತು. ಅದೇ ಮಧ್ಯಾಹ್ನದ ಹೊತ್ತಿಗೆ ತೊಟ್ಟಿದ್ದ ಬೆಚ್ಚಗಿನ ಕೋಟನ್ನೂ ಕಿತ್ತು ಬಿಸಾಕಬೇಕೆನ್ನುವಷ್ಟು ಚುರುಗುಡುವ ಬಿಸಿಲು. ಮೇ ಈಗಲೇ ಬಂತಾ ಎನಿಸ್ತಿದೆ. ಹವಾಮಾನ ಬದಲಾವಣೆ ಹಿಂದೆಂದಿಗಿಂತಲೂ ಹೆಚ್ಚು ವೇಗದಲ್ಲಿ ಆಗುತ್ತಿದೆ, ಹೀಗೇ ಆದರೆ ಹೇಗೆ ಎಂದು ಆತಂಕವಾಗುವಂತಿದೆ ಇಲ್ಲಿನ ಬಿಸಲೀಗ.
ಫಾಲ್ಗುಣ ಮಾಸದ ಹುಣ್ಣಿವೆ ಎಂದರೆ ಹೋಳಿ ಹುಣ್ಣಿವೆ. ಚೈತ್ರದ ಆಗಮನ. ರೈತರಿಗೆ ರಾಬಿ ಬೆಳೆ ಕೈಗೆ ಬರುತ್ತದೆನ್ನುವ ಸುಗ್ಗಿಯ ಹಿಗ್ಗು. ಬೆಳೆದು ನಿಂತ ಗೋಧಿಗೆ ತೇವಾಂಶ ಬೇಕು. ನವಿರಾದ ಕುಳಿರ್ ಚಳಿಯಿರಬೇಕು, ಇಬ್ಬನಿ ಹನಿಯುವ ಇರುಳು, ತೆಳುವಾದ ಮಂಜು ಕವಿದಿರುವ ಬೆಳಗು, ಶೀತ ವಾತಾವರಣ ಮಣ್ಣನ್ನು ತೇವವಾಗಿರಿಸುವುದರಿಂದ ರಾಬಿ ಬೆಳೆ ಸಮೃದ್ಧವಾಗುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಈಗ ಇಲ್ಲಿ ಹೋಳಿಯ ದಿನದಂದೇ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂಥ ಬಿಸಿಲು ಜನರನ್ನು ಹೈರಾಣಾಗಿಸಿದೆ.
ಹದವಾದ ತೇವದಲ್ಲಿ ಗುಂಡುಗುಂಡಾಗಿ ಮೈತುಂಬಿಕೊಂಡು ನಳನಳಿಸಬೇಕಿದ್ದ ಗೋಧಿ ತೆನೆ ಸಮಯಕ್ಕಿಂತ ಬೇಗ ಒಣಗಿ ಕಾಳು ಸೊರಗಿ ಹೀಚಲಾಗಿ ಕಟಾವಿಗೆ ಬಂದು ನಿಂತಿದೆ ಎನ್ನುತ್ತಿದ್ದ ಅಲೀಗಢದ ಒಬ್ಬ ರೈತ ಕುಟುಂಬದ ಸಹೋದ್ಯೋಗಿ. ಪೂರ್ವದ ಗಾಳಿ ಬೀಸಿದ್ದರೆ ಇಷ್ಟು ನಾಶವಾಗ್ತಿರಲಿಲ್ಲ. ಪುರವಾಯಿ ಚಲತೀ ತೋ ಗೇಹೂಂ ಖರಾಬ್ ನಹೀ ಹೋತಿ–ಪೂರ್ವದಿಂದ ಬೀಸುವ ಗಾಳಿ ತಂಪಾಗಿರುತ್ತದೆ. ಈಗ ಪಶ್ಚಿಮದಿಂದ ಬೀಸುತ್ತಿರುವ ಧೂಳು ತುಂಬಿದ ಆಂಧಿ (dust storm) ಬಿರುಗಾಳಿ ಎಲ್ಲವನ್ನೂ ನುಂಗಿ ಹಾಕಿತು ಎಂದು ಸಂಕಟಪಡುತ್ತಿದ್ದ.
ಒಣಗಾಳಿ ಬಿರುಬಿಸಿಲು ರಾಜಸ್ಥಾನ, ಜೈಸಲ್ಮೇರ್, ಮಧ್ಯಪ್ರದೇಶ ಹರಿಯಾಣ, ಉತ್ತರಪ್ರದೇಶವನ್ನು ಅಸಹನೀಯಗೊಳಿಸಿದೆ. ನಿಸರ್ಗದ ಆಟವನ್ನು ಬಲ್ಲವರಾರು? ಇಂಥದ್ದೇ ಒಣ ಹವಾಮಾನ, ಅಕಾಲ ಮಳೆ 2017ರಲ್ಲೂ ತಾಪಮಾನವನ್ನು ಗಣನೀಯವಾಗಿ ಹೆಚ್ಚಿ ಬೆಳೆ ನಾಶವಾಗಿದ್ದು, ಎಲ್ಲೆಡೆಯೂ ತ್ರಾಹಿ ತ್ರಾಹಿ ಎನಿಸಿದ್ದು ಈಗ ಮತ್ತೆ ಪುನರಾವರ್ತನೆಯಾಗುತ್ತಿದೆ. ಈ ಹವಾಮಾನ ಇನ್ನೂ ಎರಡು ವಾರಗಳ ಕಾಲ ಇರುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಜನಸಾಮಾನ್ಯರ ಗತಿ? ರೈತರ ಗತಿ? ದುಡಿದುಣ್ಣುವ ಬಡವರಿಗೆ ಈಗಾಗಲೇ ಅಡುಗೆ ಅನಿಲದ ಝಳ ತಾಕಿದೆ. ಅದೇ ಅಸಹನೀಯವಾಗಿರುವಾಗ ಇನ್ನು ಈ ಸೂರ್ಯನ ದಾಂಗುಡಿಯನ್ನು ಹೇಗೆ ಸಹಿಸುತ್ತಾರೋ ಈ ರಸ್ತೆ ಬದಿಯೇ ಬೀಡುಬಿಟ್ಟಿರುವ ಅಸಂಖ್ಯಾತ ಪಾಪದ ಜನ.
ನಾನೂ ಹೊಸದಾಗಿ ದಿಲ್ಲಿಗೆ ಬಂದಾಗ ಮಾರ್ಚಿನಿಂದ ಜುಲೈವರೆಗೂ ಇಲ್ಲಿನ ಬಿಸಿಲು ಸೆಕೆ, ಧೂಳಿನ ಬಿರುಗಾಳಿಯಿಂದ ಬೇಸತ್ತಿದ್ದೆ. ಅಕ್ಕ ಪಕ್ಕದವರನ್ನು ನಾನು ಕೇಳುತ್ತಿದ್ದ ಪ್ರಶ್ನೆ ಒಂದೇ. ಇಲ್ಲಿ ಮಳೆ ಬರುವುದಿಲ್ಲವೇ? ಯಾವಾಗ ಬರುತ್ತದೆ? ಅವರೆಲ್ಲ ‘ಬರುತ್ತೆ ಬರುತ್ತೆ ತಡಕೋ ಜುಲೈಗೆ ಬರ್ತದೆ’ ಎಂದು ಸಮಾಧಾನಿಸುತ್ತಿದ್ದುದು ಈಗ ನೆನಪಾಗುತ್ತಿದೆ.
ಈ ಪೂರ್ವದ ಗಾಳಿಯಾದರೂ ಬೀಸಬಾರದೆ, ಪೂರ್ವದ ಪುರವಾಯಿ ಎನ್ನುವ ಪದವೇ ಎಷ್ಟು ಹಿತವೆನಿಸುತ್ತಿದೆ.
‘ಚುಪಕೇ ಚುಪಕೇ ಚಲ್ ರೀ ಪುರವೈಯ್ಯಾ’
‘ಜಬ ಬಹೇಲಾ ಪವನ ಪುರವಾಯೀ ಲೇಬೆ ಅಮವಾ ಕೀ ಪೇಡ ಅಂಗಡಾಯಿ’
‘ಪೂರ್ವದ ಗಾಳಿ ಬೀಸುವಾಗ ಮಾವಿನ ಮರ ಮೈಮುರಿಯುತ್ತದೆ’ ಎಂದು ಬಿಹಾರಿ ಹೆಂಗಳೆಯರು ಗುನುಗುನಿಸತೊಡಗುತ್ಟಾರೆ. ಕಿವಿಯಾಲಿಸಿ ಕೇಳಿಸಿಕೊಂಡರೆ ಸೈ, ಹಾಡು ಅಂದರೆ ನಾಚಿಕೊಳ್ಳುತ್ತಾರೆ ಥೇಟ್ ಮಾಗಿಯ ಮೊಗ್ಗಂತೆ. ನೀವೂ ಕೇಳಿರುತ್ತೀರಿ, ‘ಜಿಗ್ರಿ ದೋಸ್ತ್’ ಸಿನೆಮಾದ ನಾಯಕ ‘ಮೇರೆ ದೇಶ್ ಮೇ ಪವನ ಚಲೀ ಪುರವಾಯಿ ಮೇರೆ ದೇಶ ಮೇ’ ನನ್ನ ದೇಶದಲ್ಲಿ ಪೂರ್ವದ ಗಾಳಿ ಬೀಸಿತು ಅಂತ ಸಂಭ್ರಮಿಸ್ತಾನೆ. ಈಗ ನನ್ನ ದೇಶದ ಈ ತಂಗಾಳಿ ಎಲ್ಲಿ ಹೋಯಿತೋ ಯಾವ ದೇಶಕ್ಕೆ ವಲಸೆ ಹೋಯಿತೋ ಎನ್ನುವಂತಾಗಿದೆ.
‘ಪೂರಬ್ ಸೇ ಮಸ್ತಾನಿ ಪುರವಾಯಿ ಚಲೀ, ಮೆಹಕೆ ಪುಲೋಂ ಕಿ ಗಲೀ’
ಪೂರ್ವದಿಂದ ಗಾಳಿ ಬೀಸಿತು, ಹೂಗಳ ಓಣಿ ಘಮಘಮಿಸಿತು ಎನ್ನುವ ಗೀತೆಗಳು ಸಾವಿರಾರು ಇರಬಹುದು. ಅರ್ಥಾತ್ ಈ ಪೂರ್ವದ ಗಾಳಿಗೆ ಅದೆಷ್ಟು ಜೀವಕಾರುಣ್ಯವಿರಬೇಕು. ಪೂರ್ವ ದಿಕ್ಕಿನ ಕಲ್ಪನೆ ಅದೆಷ್ಟು ಸೊಗಸಾಗಿದೆ. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದಾ ನುಣ್ಣನೆ ಎರಕಾವ ಹೊಯ್ದ’ ಅದೇ ಮುತ್ತಿನ ನೀರು ಎರಕ ಹೊಯ್ಯಬೇಕು ಗೋಧಿ ಕಾಳು ತುಂಬಿಕೊಳ್ಳುವುದಕ್ಕೆ ಪೂರ್ವದ ಗಾಳಿ ಸೋಕಬೇಕು. ಮತ್ತೆ ಜೀವ ತುಂಬಿಕೊಳ್ಳುವುದಕ್ಕೆ. ದುಂಡು ಮಲ್ಲಿಗೆ ಜೂನಿನಲ್ಲಿ ಹೂಬಿಡುತ್ತಿತ್ತು. ಕಾಡು ಬೇವು ಏಪ್ರಿಲ್ನಲ್ಲಿ ಘಮಘಮಿಸುತ್ತಿತ್ತು. ಸಫೇದಾ ಮಾವಿನ ಹಣ್ಣು ಮೇ ತಿಂಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು ಈಗಾಗಲೇ ಸಂತೆಯಲ್ಲಿ ಮಾವು ಲಗ್ಗೆಯಿಟ್ಟಿದೆ. ತಡವಾಗಿ ಹೂ ಬಿಡಬೇಕಿದ್ದವು ಈಗಾಗಲೇ ಹೂಬಿಟ್ಟಿವೆ. ಎಲ್ಲವೂ ತನ್ನ ಸಮಯಕ್ಕಿಂತ, ತನ್ನ ಅವಧಿಗಿಂತ ಮೊದಲೇ ಬಂದುಬಿಟ್ಟಿದೆ.
ಒಂದು ಕಾಲಕ್ಕೆ ದೆಹಲಿಯನ್ನೂ ದೆಹಲಿಯ ಸುತ್ತಮುತ್ತಲನ್ನೂ ತಂಪಾಡುತ್ತಿದ್ದ ಅರಾವಳಿ ಬೆಟ್ಟ ಪ್ರದೇಶಗಳನ್ನು ಈ ಮಾನವ ನೆಲಸಮ ಮಾಡಿದ, ಇದ್ದ ಕಾಡುಗಳನ್ನು ನುಂಗಿ ನೀರು ಕುಡಿದು ಎಲ್ಲವನ್ನೂ ತನ್ನ ವಾಸಕ್ಕೆ, ತನ್ನ ಉದ್ಯಮಕ್ಕೆ, ತನ್ನ ಹೊಟ್ಟೆಗೆಂದು ಅನುಕೂಲ ಮಾಡಿಕೊಂಡ. ಈಗ ಪ್ರಕೃತಿ ಮುನಿದರೆ ಏನು ಮಾಡುತ್ತಾನೆ ಈ ಮಹಾ ಕುತಂತ್ರಿ, ಮಹಾ ಸ್ವಾರ್ಥಿ ಮನುಷ್ಯ?
ಈ ಮನುಷ್ಯನನ್ನು ನೋಡಿ – ಅವಧಿಗಿಂತ ಮೊದಲೇ ಮುಪ್ಪಡರದಂತೆ ಮಾಡಲು ಆ್ಯಂಟಿ ಏಜಿಂಗ್ ಪ್ರಸಾಧನಗಳನ್ನು ಅವಿಷ್ಕಾರ ಮಾಡಿದ್ದಾನೆ. ಎಲ್ಲ ಗೆದ್ದ ಮನುಷ್ಯ ತನಗೆ ಚಿರಯೌವ್ವನವನ್ನು ಅಪೇಕ್ಷಿಸುವ ಮನುಷ್ಯ ಪ್ರಕೃತಿಯನ್ನು ನಿಯಂತ್ರಿಸುವ ಅಸ್ತ್ರವನ್ನು ಮಾತ್ರ ಕಂಡುಹಿಡಿಯಲಾಗಿಲ್ಲ. ಪ್ರಕೃತಿಗೆ ಶರಣಾಗದೇ ಯಾವ ಜೀವಿಗೂ ಉಳಿವಿಲ್ಲ.
ಈ ಪರಿಸರ ವಿನಾಶದ ಹೊಣೆಗಾರರು ನಾವೇ, ಝಳವುಣ್ಣುವವರೂ ನಾವೇ. ಸದ್ಯ ರಾಜಸ್ಥಾನದ ಮರುಭೂಮಿಯಿಂದ ಭೋರೆಂದು ಬೀಸುವ ಈ ಧೂಳಿನ ಸುಂಟರಗಾಳಿ ಎಲ್ಲಾದರೂ ಸಮುದ್ರಯಾನಕ್ಕೆ ಹೊರಟುಹೋಗಲಿ. ಪೂರ್ವದ ಪುರವಾಯಿ ಇತ್ತ ಬೀಸಲಿ ಸಾಕು.
ಇದನ್ನೂ ಓದಿ :Humanity; ನಾನೆಂಬ ಪರಿಮಳದ ಹಾದಿಯಲಿ: ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?
Published On - 2:51 pm, Fri, 2 April 21