ಥುತ್!.. ಈ ಹಾಳು ಕೊರೊನಾ ಬಂದು ನಮ್ಮ ಲೈಫೇ ಒಂಥರಾ ಲಾಕ್ಡೌನ್ ಆಗೋಯ್ತು. ಆಗಸದಲ್ಲಿ ಹಾರಾಡೋ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಟ್ರಿಪ್, ಪಿಕ್ನಿಕ್ ಅಂತಾ ಎಲ್ಲಾ ಕಡೆ ಸುತ್ತಾಡುತ್ತಿದ್ದ ನಮಗೆ ಇದೀಗ ಎಲ್ಲೂ ಹೋಗೋಕೆ ಆಗ್ತಿಲ್ಲ ಅಂತಾ ಬೇಜಾರು ಇದ್ರೆ ಚಿಂತೆ ಬೇಡ. ನಿಮಗಾಗಿ ಬಂದಿದೆ ಒಂದು ವಿನೂತನ ಟ್ರಿಪ್.
ಹೌದು, ಅಡ್ವೆಂಚರ್ಸ್ ಓವರಲ್ಯಾಂಡ್ ಅನ್ನೋ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿ ಪ್ರೇಮಿಗಳಿಗಾಗಿ ಒಂದು ವಿಭಿನ್ನ ಬಸ್ ಸೇವೆಯನ್ನು ಮೇ 2021ರಿಂದ ಶುರು ಮಾಡ್ತಿದೆ. ಅದೂ ಅಂತಿಂಥ ಬಸ್ ಅಲ್ಲ. ಈ ಬಸ್ ಸೇವೆ ಇರೋದು ಬರೋಬ್ಬರಿ 20 ಸಾವಿರ ಕಿ.ಮಿ. ದೂರವಿರುವ ದೆಹಲಿ ಮತ್ತು ಲಂಡನ್ ನಡುವೆ.
ಯೆಸ್, ನೀವು ಸರಿಯಾಗೇ ಓದಿದ್ರೀ. ಅಡ್ವೆಂಚರ್ಸ್ ಓವರಲ್ಯಾಂಡ್ ಕಂಪನಿಯು ಜಗತ್ತಿನ ಪ್ರಪ್ರಥಮ ಹಾಪ್ ಆನ್ ಹಾಪ್ ಆಫ್ ಬಸ್ ಸೇವೆ (ಎಲ್ಲಿ ಬೇಕಾದ್ರು ಇಳಿದು ನಂತರ ಬರುವ ಬಸ್ನ ಏರಬಹುದು) ಆರಂಭಿಸಲು ಮುಂದಾಗಿದೆ. ಲಂಡನ್ ಮತ್ತು ದೆಹಲಿ ನಡುವಿನ ಪ್ರಯಾಣವನ್ನು ಪ್ರತಿ ಬಸ್ 70 ದಿನಗಳಲ್ಲಿ ಪೂರ್ಣಗೊಳಿಸಲಿದೆ.
ಷರತ್ತುಗಳು ಅನ್ವಯ, ಯಾವುವು?
ಎರಡು ಖಂಡ, 18 ದೇಶಗಳಲ್ಲಿ ಸಾಗುತ್ತಾ ಲಂಡನ್ ತಲುಪುವ ಈ ಬಸ್ ಸೇವೆ ಬಳಸಲು ಇಚ್ಛಿಸುವವರಿಗೆ ಚೀನಾ, ಮ್ಯಾನ್ಮಾರ್, ಉಜ್ಬೇಕಿಸ್ತಾನ, ತಜಿಕಿಸ್ತಾನ, ರಷ್ಯಾ, ಬೆಲ್ಜಿಯಂ, ಜರ್ಮನಿ ಹೀಗೆ ಮತ್ತಷ್ಟು ದೇಶಗಳನ್ನು ಸುತ್ತಾಡುವ ಅವಕಾಶ ಸಹ ನೀಡಲಾಗುವುದು. ಆದರೆ, ಕಂಪನಿಯ ಸಂಸ್ಥಾಪಕ ತುಷಾರ್ ಅಗರ್ವಾಲ್ರ ಪ್ರಕಾರ ಈ ಬಸ್ ಪ್ರವಾಸ ಕೈಗೊಳ್ಳಲು ಕೆಲ ಷರತ್ತುಗಳು ಅನ್ವಯಿಸಲಿದೆ. ಅವು ಹೀಗಿವೆ.
1. ನಿಮ್ಮ ಪಾಸ್ಪೋರ್ಟ್ ಜನವರಿ 2020ರ ವರೆಗೆ ಸಿಂಧುತ್ವ ಹೊಂದಿರಬೇಕು
2. ಪಾಸ್ಪೋರ್ಟ್ನಲ್ಲಿ 20 ಹಾಳೆಗಳು ಖಾಲಿ ಇರಲೇಬೇಕು (10 ದೇಶಗಳ ವೀಸಾ ಪ್ರಕ್ರಿಯೆಗಾಗಿ)
ಅಷ್ಟೇ ಅಲ್ಲ, ಈ ಪ್ರವಾಸದಲ್ಲಿ ನೀವು 70 ದಿನಗಳ ಕಾಲ ಬಸ್ನಲ್ಲೇ ಕೂತಿರಲ್ಲ. 25 ದಿನಗಳ ಕಾಲ ಟ್ರೆಕ್ಕಿಂಗ್ ಹಾಗೂ ಪ್ರವಾಸಕ್ಕೆಂದು ಓಡಾಡಲು ಅವಕಾಶ ಸಹ ಇರುತ್ತದೆ.
ಜೊತೆಗೆ, 70 ದಿನಗಳ ಪ್ರಯಾಣವಾಗಿರೋದ್ರಿಂದ ಪ್ರತಿ ಬಸ್ನಲ್ಲೂ ಉಚಿತ Wi-Fi, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ವೈಯಕ್ತಿಕ ಮನರಂಜನಾ ವ್ಯವಸ್ಥೆ, ಉತ್ತಮ ಸೀಟಿಂಗ್ ಮತ್ತು ತಿಂಡಿ ಪಾನೀಯಗಳನ್ನು ತಂಪಾಗಿರಿಸಲು ಫ್ರಿಡ್ಜ್ ಸೇರಿದಂತೆ ಮತ್ತಷ್ಟು ಸವಲತ್ತುಗಳನ್ನು ನೀಡಲಿದ್ದಾರೆ. ಓಹ್, ಅಂದ ಹಾಗೆ, ಈ ಬಸ್ನ ಟಿಕೆಟ್ ದರ 15 ಲಕ್ಷ ರೂಪಾಯಿ, ಅಷ್ಟೇ!