D. R. Bendre : ‘ಆವು ಈವಿನ ನಾವು ನೀವಿಗೆ ಆನು ತಾನದ ತನನನಾs’ ನಾಕುತಂತಿಯೊಳಗೆ ಅಡಗಿಹುದು ಈ ಹೂರಣ

|

Updated on: Feb 01, 2022 | 7:22 PM

NaakuTanti : ‘ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು.’ ಸುನಾಥ

D. R. Bendre : ‘ಆವು ಈವಿನ ನಾವು ನೀವಿಗೆ ಆನು ತಾನದ ತನನನಾs’ ನಾಕುತಂತಿಯೊಳಗೆ ಅಡಗಿಹುದು ಈ ಹೂರಣ
‘ತಿಳೀತದೇನೋ ಇದು ಸುಲಭಕ್ಕ?’ ಬೇಂದ್ರೆ
Follow us on

ದ. ರಾ. ಬೇಂದ್ರೆ | D. R. Bendre | ನಾಕು ತಂತಿ | Naaku Tanti : ‘ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ 60 ವರ್ಷ. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲವನ್ನು ಹಾಗೂ ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ‘ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು. ಬೇಂದ್ರೆಯವರ ‘ನಾಕು ತಂತಿ’ ಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ‘ಅಂಬಿಕಾತನಯದತ್ತ’ನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಇದರ ನೆಲೆಯು! 

ಸುನಾಥ (ಸುಧೀಂದ್ರ ದೇಶಪಾಂಡೆ), ಲೇಖಕರು, ಧಾರವಾಡ

*

ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ:

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ಆವು ಅಂದರೆ ಗೋವು(=ಕಾಮಧೇನು). (ಆವಿನ ಬಹುವಚನವೆ ಆವುಗಳು=ಆಕಳು). ಆವು ಈಯುತ್ತಿದೆ, ಅಂದರೆ ಏನನ್ನು ಈಯುತ್ತಿದೆ (ಪ್ರಸವಿಸುತ್ತಿದೆ)?

ಆವು ಈಯುತ್ತಿರುವದು:-ನಾನು ಹಾಗು ನೀನು ಜೊತೆಯಾಗಿ ಸೃಷ್ಟಿಸಿದ ‘ಆನು’ವನ್ನು.
‘ಆನು’(= ಈ ಸೃಷ್ಟಿ) ಇದು ‘ತಾನು’ವಿನ(=ದೇವರ) ತನನನಾ(=ಸಂತೋಷ).

ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು. ನಾನು ಎಂದರೆ ಆತ್ಮಾ(=ಪುರುಷ) . ನೀನು ಎಂದರೆ ಪ್ರಕೃತಿ. ಇವರ ಕೂಸೇ ಈ ಸೃಷ್ಟಿ. ತಾನು ಎಂದರೆ ಇದನ್ನೆಲ್ಲ ಒಳಗೊಂಡ ದೈವಿ ಚೈತನ್ಯ. ಇನ್ನೂ ಒಂದು ಅರ್ಥ ಇಲ್ಲಿ ಹೊಮ್ಮುತ್ತದೆ. ನಾನು ಎಂದರೆ ಕವಿ; ನೀನು ಎಂದರೆ ಕಾವ್ಯಪ್ರಜ್ಞೆ. ಕವನ ಇವರೀರ್ವರ ’ಆನು=ಸೃಷ್ಟಿ’. ಆನು ಎನ್ನುವ ಕಾವ್ಯಸೃಷ್ಟಿಯ ’ತಾನ’ ಅಂದರೆ ಸಂಗೀತದ, ತನನನಾs ಎಂದರೆ ಆನಂದಲಹರಿ.

ಎರಡನೆಯ ನುಡಿ ಈ ರೀತಿಯಾಗಿದೆ:

ನಾನು ನೀನಿನ 
ಈ ನಿನಾನಿಗೆ 
ಬೇನೆ ಏನೋ? 
ಜಾಣಿ ನಾs

 

ಈ ಸಾಲುಗಳನ್ನು ಈ ರೀತಿಯಾಗಿ ಅರ್ಥೈಸಬಹುದು. ನಾನು ಹಾಗು ನೀನು ಇವುಗಳಿಂದ ಸೃಷ್ಟಿಯಾದ ಈ ನೀ+ನಾ+ಆನಿಗೆ, ಯಾವ ಬೇನೆ (=ಪ್ರಸವವೇದನೆ) ಬೇಕು ಎನ್ನುವದನ್ನು ನಾನು (ಜಾಣಿ=ಜ್ಞಾನಿ) ತಿಳಿದಿದ್ದೇನೆ. ಅಂದರೆ ಕವಿ ಹಾಗು ಕಾವ್ಯಪ್ರಜ್ಞೆ ಸೃಷ್ಟಿಸುತ್ತಿರುವ ಈ ಕಾವ್ಯಕ್ಕೆ ಬೇಕಾಗುವಂತಹ ಹೆರಿಗೆಯ ಬೇನೆಯನ್ನು ನಾನು ತಿಳಿದಿದ್ದೇನೆ. ಈನ್ ಎನ್ನುವದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಆದುದರಿಂದ ಈ ಸೃಷ್ಟಿ ಅರ್ಥಾತ್ ಕಾವ್ಯವು ತೇಜಸ್ವಿಯಾಗಿದೆ ಎನ್ನುವುದು ಇಲ್ಲಿಯ ಅರ್ಥ.

(ನಾಕುತಂತಿಯ ಮುಂದಿನ ಭಾಗದ ಒಳಹೂರಣಕ್ಕಾಗಿ ನಿರೀಕ್ಷಿಸಿ)

ನಾಕುತಂತಿಯ ಕವನ ಇಲ್ಲಿದೆ : D. R. Bendre : ‘ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’! ನಾಕುತಂತಿಯ ಒಳಹೂರಣ ಸುನಾಥರಿಂದ

Published On - 5:32 pm, Tue, 1 February 22