ಹಾದಿಯೇ ತೋರಿದ ಹಾದಿ ; ಬೀದಿಯನ್ನೇ ನೋಡದ ಮಂಡ್ಯದ 105ರ ನಿಂಗಮ್ಮ ಬೀದಿಯಲ್ಲಿಯೇ ಬದುಕುವಂತಾಯಿತು

|

Updated on: Feb 03, 2022 | 10:26 AM

Mandya : ‘ಗಂಡ ಮದ್ದೂರಯ್ಯ ನಾನು ನಡದ್ರೆ ನನ್ನ ಕಾಲು ಮಣ್ಣಾಗುತ್ತೇನೋ ಅನ್ನುವಂಗೆ ನೋಡ್ಕೋತಿದ್ರು. ನನ್ನಿಂದ ಅಡುಗೆ ಕೂಡ ಮಾಡಿಸ್ತಿರಲಿಲ್ಲ, ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಸ್ನಾನ ಮಾಡಿಸಿ ಅಡುಗೆ ಮಾಡಿಟ್ಟು ಅವರು ಕೆಲಸಕ್ಕೆ ಹೋಗ್ತಿದ್ರು.’ ನಿಂಗಮ್ಮ

ಹಾದಿಯೇ ತೋರಿದ ಹಾದಿ ; ಬೀದಿಯನ್ನೇ ನೋಡದ ಮಂಡ್ಯದ 105ರ ನಿಂಗಮ್ಮ ಬೀದಿಯಲ್ಲಿಯೇ ಬದುಕುವಂತಾಯಿತು
105ರ ಮಂಡ್ಯದ ನಿಂಗಮ್ಮ
Follow us on

ಹಾದಿಯೇ ತೋರಿದ ಹಾದಿ | Haadiye Torida Haadi : ಮೊದಲೆಲ್ಲ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಕೆಂಗೇರಿ, ಬಿಡದಿ, ನಾಗಮಂಗಲ, ರಾಮನಗರ, ಕುಣಿಗಲ್ ಮುಂತಾದ ಕಡೆಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡಿ ಮಕ್ಕಳನ್ನು ಸಾಕಿ ಸಲುಹಿದೆ. ಮೂವತ್ತು ವರ್ಷದ ಹಿಂದೆ ನಡೆದ ಅಪಘಾತವೊಂದರಲ್ಲಿ ಬಲಗಾಲಿನ ಮಂಡಿ ಜಜ್ಜಿ ಹೋಗಿದೆ, ಎಡಗೈ ಮೂಳೆ ಮುರಿದಿದೆ, ರಾಡ್ ಹಾಕಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರು ತಿಂಗಳು ಚಿಕಿತ್ಸೆ ಪಡೆದುಕೊಂಡು ಹುಷಾರಾಗಿದ್ದೇನೆ. ಒಂದು ಕಾಲನ್ನು ಮಡಚಿ ಕೂರಲು ಆಗದು. ಸಾವರಿಸಿಕೊಂಡು ಓಡಾಡಬಹುದು. ಎಡಗೈ ಮೂಳೆ ಮುರಿದಿರುವುದರಿಂದ, ಒಂದು ಕೈಯಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ತುಂಬ ನೋವು ಅಂದಾಗ ಅಮೃತಾಂಜನ್ ತಿಕ್ಕಿ ನೋವನ್ನು ಕಡಿಮೆ ಮಾಡಿಕೊಳ್ಳುತ್ತೇನೆ. ಹಂಗೂ ಕಡಿಮೆಯಾಗದಿದ್ದಲ್ಲಿ ನೋವಿನ ಮಾತ್ರೆ ತೆಗೆದುಕೊಳ್ಳುತ್ತೇನೆ. ನೋವಿದೆಯೆಂದು ಸುಮ್ಮನೆ ಕೂತರೆ ಹೊಟ್ಟೆ ಕೇಳಬೇಕಲ್ಲ? ಎನ್ನುತ್ತಾರೆ ಮಂಡ್ಯದ 105 ವರ್ಷದ ನಿಂಗಮ್ಮ.

ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್​

*

(ಹಾದಿ – 4)

‘ನೋವಿದೆ, ವಯಸ್ಸಾಗಿದೆ ಎಂದು ಸುಮ್ಮನೆ ಕೂತರೆ ಹೊಟ್ಟೆ ಕೇಳಬೇಕಲ್ಲಮ್ಮ ದಿನಕ್ಕೆ ಹತ್ತು ಹದಿನೈದು ಪೊಟ್ಟಣ ಕಡಲೆಕಾಯಿ ಮಾರಿ ಬದುಕುತ್ತಿದ್ದೇನೆ.’ ನಿಂಗಮ್ಮ

ಬೆಂಗಳೂರಿನ ಮೆಜೆಸ್ಟಿಕ್ಕಿನಿಂದ ರೈಲಿನಲ್ಲಿ ಪ್ರಯಾಣ ಮಾಡಿ ಮಂಡ್ಯದಲ್ಲಿ ಇಳಿದು ತುರುಗನೂರು ತಲುಪಿ ಬನ್ನೂರು ಬಸ್ ಹತ್ತಲು ಹೊರಟ ದಾರಿಯಲ್ಲಿ ಅಯ್ಯಪ್ಪ ದೇವಸ್ಥಾನದ ಎದುರು ಗಮನ ಸೆಳೆದದ್ದು ಮುಖದ ತುಂಬ ನೆರಿಗೆ, ಕಾಲು ಮಡಿಚಲು ಆಗದೆ ನೇರ ನೀಡಿಕೊಂಡು ಕಡಲೆಕಾಯಿ ವ್ಯಾಪಾರ ಮಾಡುತ್ತಿರುವ ನಿಂಗಮ್ಮಜ್ಜಿ. ಅವಳ ಪಾದಗಳ ಬಿರುಕುಗಳು ಕಥೆ ಹೇಳಲು ಶುರು ಮಾಡಿದವು.

‘ನನಗೀಗ ನೂರೈದು ವರ್ಷ ಕಣವ್ವ. ಕಾಲ ಮಾಡವ.. ಕಾಲ ಮಾಡವ.. ಕಾಲ ಮಾಡ್ಕಂಡ್ ಒಂದು ದಿನ ಗೊಟಕ್ ಅನ್ನುವ (ಇರುವಷ್ಟು ದಿನ ಬದುಕು ಸಾಗಿಸಿ ಹೋಗುವುದು). ಯಜಮಾನರಿಲ್ಲ ಮಕ್ಕಳಿಲ್ಲ. ಹೊಟ್ಟೆಪಾಡು ಏನ್ ಮಾಡಣವ್ವ ಕಡಲೆಕಾಯಿ ವ್ಯಾಪಾರ ಮಾಡ್ತೀನಿ. ನನಗಾಗ ಹನ್ನೆರಡು ವರ್ಷ ತುಂಬಿದಾಗ ಮದುವೆ ಮಾಡಿದ್ರು, ಮದುವೆಯಾದ ಮೇಲೇನೇ ನಾನು ಋತುಮತಿಯಾಗಿದ್ದು. ಆಗಿನ ಕಾಲದಲ್ಲಿ ಶಾಲೆ ಇಲ್ಲ ಹೀಗಾಗಿ ಶಿಕ್ಷಣ ಸಿಗಲಿಲ್ಲ. ಬಸ್​ಗಳೂ ಇರಲಿಲ್ಲ. ಎಲ್ಲಿಗೆ ಹೋದರೂ ನಡೆದುಕೊಂಡು ಹೋಗಬೇಕು, ಬರಬೇಕು. ಗಂಡ ಬೇಗನೇ ತೀರಿಹೋದರು. ಮಕ್ಕಳೂ ತೀರಿಹೋದರು.

ಹೊಟ್ಟೆಪಾಡು, ಕಡಲೆಕಾಯಿ ವ್ಯಾಪಾರ ಮಾಡ್ತೀನಿ. ನಾರಯಣಪ್ಪ, ಚಿನ್ನಮ್ಮ, ಲಕ್ಷ್ಮಿ, ನರಸಮ್ಮ, ಚಿಕ್ಕ ವಯಸ್ಸಿನಲ್ಲಿ ತೀರಿದ ಒಂದು ಹೆಣ್ಣು ಮಗು ಸೇರಿ ನಾಲ್ಕು ಹೆಣ್ಣು ಒಂದು ಗಂಡು ಒಟ್ಟು ಐದು ಮಕ್ಕಳು ಮತ್ತು ಏಳು ಜನ ಮೊಮ್ಮಕ್ಕಳಿದ್ದರು. ನಾರಾಯಣಪ್ಪನಿಗೆ ಬಿಪಿ ಹೆಚ್ಚಾಗಿ, ಚಿನ್ನಮ್ಮನಿಗೆ ಗಂಟಲು ಕ್ಯಾನ್ಸರ್ ಆಗಿ, ಲಕ್ಷ್ಮಿಗೆ ಜ್ವರ ಬಂದು ಹೀಗೆ ಮಕ್ಕಳು ಕಾಯಿಲೆಬಿದ್ದು ಹೆತ್ತವರು ವಯಸ್ಸಾಗಿ ಎಲ್ಲರೂ ತೀರಿ ಹೋದರು. ಮೊಮ್ಮಕ್ಕಳು ಮದುವೆ ಆಗಿ ಅವರವರ ಜೀವನ ನೋಡಿಕೊಂಡು ಹೋಗಿದ್ದಾರೆ. ಅವರ್ಯಾರೂ ಇದುವರೆಗೆ ಬಂದು ನೋಡಿಲ್ಲ ನನ್ನ ಕಷ್ಟಸುಖ ಕೇಳಿಲ್ಲ.

ಪಿಂಚಣಿಯೂ ಈಗಿಲ್ಲ.

ನನ್ನ ಗಂಡ ಮದ್ದೂರಯ್ಯ ನಾನು ನಡದ್ರೆ ನನ್ನ ಕಾಲು ಮಣ್ಣಾಗುತ್ತೇನೋ ಅನ್ನುವಂಗೆ ನೋಡ್ಕೋತಿದ್ರು. ಮದ್ವೆಯಾದಾಗ ನಾನು ಚಿಕ್ಕವಳಾದ್ದರಿಂದ ನನ್ನಿಂದ ಅಡುಗೆ ಕೂಡ ಮಾಡಿಸ್ತಿರಲಿಲ್ಲ, ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಸ್ನಾನ ಮಾಡಿಸಿ ಅಡುಗೆ ಮಾಡಿಟ್ಟು ಅವರು ಕೆಲಸಕ್ಕೆ ಹೋಗ್ತಿದ್ರು. ನಾನು ಮನೇಲಿದ್ದು ಮಕ್ಳನ್ನ ನೋಡ್ಕಂಡಿರ್ತಿದ್ದೆ. ಆದ್ರೆ ಆ ದ್ಯಾವ್ರು ಈ ಸುಖಾನ ಬೇಗನೇ ಕಿತ್ಕಂಬಿಟ್ಟ. ಒಂದಿನ ಅವ್ರು ಕೆಲಸಕ್ಕೆ ಹೋದಾಗ ತೆಂಗಿನ ಮರದಿಂದ ಬಿದ್ದು ತೀರೋಗ್ಬಿಟ್ರು. ಅವಾಗಿಂದ ನನ್ನ ಬದುಕು ದಿನದಿನಕ್ಕೂ ನರಕವಾಯ್ತಾ ಹೋಯ್ತು. ಮಕ್ಳನ್ನ ಬೆಳಸೋಕೆ ತುಂಬಾನೇ ತೊಂದ್ರೆಯಾಯ್ತು. ಮನೆ ಹೊರಗಿನ ಬೀದಿಗಳನ್ನೇ ನೋಡ್ದಿರೋಳು ಬೀದೀಲೆ ಬದುಕೋಹಾಗಾಯ್ತು.

ಮೊದ್ಲೆಲ್ಲ ಒಂಚೂರು ಒಳ್ಳೆ ವ್ಯಾಪಾರವಾಗ್ತಿತ್ತು. ಈಗ ಜನ ವ್ಯಾಪಾರ ಮಾಡೋದಿರ್ಲಿ ಸರಿಯಾಗಿ ಮಾತಾಡೋದೂ ಕಷ್ಟ. ಯಾರೋ ಒಂದಷ್ಟು ಪುಣ್ಯಾತ್ಮರ ಐದತ್ತು ರೂಪಾಯಿಯ ವ್ಯಾಪಾರ ಹೊಟ್ಟೆಗೆ ಗಂಜಿಯಾಯ್ತದೆ. ಸದ್ಯ ಈಗ ಮಂಡ್ಯದಲ್ಲಿ ಉಳಿದಿರುವ ಅಂಗವಿಕಲ ಮೊಮ್ಮಗ ಮಂಜಣ್ಣನೊಂದಿಗೆ (ಮಗಳ ಮಗ) ವಾಸವಿದ್ದೇನೆ. ಆ ಶಿವ ನನ್ನ ಇನ್ನೂ ಬದುಕಿಸಿದ್ದಾನೆ. ಕಿವಿ ಚೆನ್ನಾಗಿ ಕೇಳಿಸುತ್ತದೆ. ಮೈಸೂರಿನ ಕ್ಯಾಂಪ್ ಒಂದರಲ್ಲಿ ಒಂದು ಕಣ್ಣು ಆಪರೇಷನ್ ಮಾಡಿಸಿಕೊಂಡಿದ್ದೆ, ಇನ್ನೊಂದು ಕಣ್ಣು ಸ್ವಲ್ಪ ಕಾಣುತ್ತೆ. ದುಡಿದು ಒಂದಷ್ಟು ಹಣ ಕೂಡಿಸಿ, ಜೊತೆಗೆ ಸ್ವಲ್ಪ ಸಾಲ ಮಾಡಿ ಮೊಮ್ಮಗ ಮಂಜಣ್ಣನಿಗಾಗಿ 12 /20 ಸೀಟ್ ಮನೆ ಕಟ್ಟಿಸಿದ್ದೇನೆ.

ಮೊಮ್ಮಗ ನನ್ನ ಬಟ್ಟೆ ಒಗೆದುಕೊಡುತ್ತಾನೆ, ಊಟ ಮಾಡಲು ಆಗದು. ಹೆಚ್ಚೆಂದರೆ ಒಂದೆರಡು ತುತ್ತು ಅನ್ನ ತಿನ್ನಬಹುದು. ಅದಕ್ಕೆ ಹಣ್ಣಿನ ರಸ, ಬ್ರೆಡ್ ಇಂಥದೆಲ್ಲಾ ಮೊಮ್ಮಗ ತಂದುಕೊಡುತ್ತಾನೆ. ಇಂದಿರಾ ಕಾಲೋನಿ, ನಂದ ಟಾಕೀಸ್ ಹಿಂಭಾಗದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ಬೆಳಗ್ಗೆ ಎಂಟು ಗಂಟೆಗೆ ನಡೆದುಕೊಂಡೇ ವ್ಯಾಪಾರಕ್ಕೆ ಬರುತ್ತೇನೆ.

ಮೊದಲೆಲ್ಲ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಕೆಂಗೇರಿ, ಬಿಡದಿ, ನಾಗಮಂಗಲ, ರಾಮನಗರ, ಕುಣಿಗಲ್ ಮುಂತಾದ ಕಡೆಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡಿ ಮಕ್ಕಳನ್ನು ಸಾಕಿ ಸಲುಹಿದೆ. ಮೂವತ್ತು ವರ್ಷದ ಹಿಂದೆ ನಡೆದ ಅಪಘಾತವೊಂದರಲ್ಲಿ ಬಲಗಾಲಿನ ಮಂಡಿ ಜಜ್ಜಿ ಹೋಗಿದೆ, ಎಡಗೈ ಮೂಳೆ ಮುರಿದಿದೆ, ರಾಡ್ ಹಾಕಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರು ತಿಂಗಳು ಚಿಕಿತ್ಸೆ ಪಡೆದುಕೊಂಡು ಹುಷಾರಾಗಿದ್ದೇನೆ. ಒಂದು ಕಾಲನ್ನು ಮಡಚಿ ಕೂರಲು ಆಗದು. ಸಾವರಿಸಿಕೊಂಡು ಓಡಾಡಬಹುದು. ಎಡಗೈ ಮೂಳೆ ಮುರಿದಿರುವುದರಿಂದ, ಒಂದು ಕೈಯಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ತುಂಬ ನೋವು ಅಂದಾಗ ಅಮೃತಾಂಜನ್ ತಿಕ್ಕಿ ನೋವನ್ನು ಕಡಿಮೆ ಮಾಡಿಕೊಳ್ಳುತ್ತೇನೆ. ಹಂಗೂ ಕಡಿಮೆಯಾಗದಿದ್ದಲ್ಲಿ ನೋವಿನ ಮಾತ್ರೆ ತೆಗೆದುಕೊಳ್ಳುತ್ತೇನೆ. ನೋವಿದೆಯೆಂದು ಸುಮ್ಮನೆ ಕೂತರೆ ಹೊಟ್ಟೆ ಕೇಳಬೇಕಲ್ಲ?

ನಮ್ಮ ಕಾಲ ಮೇಲೆ ನಾವು…

ದಿನಕ್ಕೆ ಹತ್ತು ಹದಿನೈದು ಪೊಟ್ಟಣ ಕಡಲೆಕಾಯಿ ಮಾರುತ್ತೇನೆ. ಬದುಕು ದೂಡಬೇಕಲ್ಲ.  ಈಗ ಮೂರು ತಿಂಗಳಿನಿಂದ ಪಿಂಚಣಿ ಕೂಡ ಬಂದಿಲ್ಲ. ಹೀಗೇ ನಿಮ್ಮಂಥ ಯಾರಾದರೂ ಬಂದು ಮಾತನಾಡಿಸಿದರೆ ಸ್ವಲ್ಪ ಸಮಾಧಾನವಾಗುತ್ತದೆ. ಇಷ್ಟು ವರ್ಷದಿಂದಲೂ ಈ ಟಾಕೀಸಿನ ಬಳಿಯೇ ಮಾರುತ್ತ ಕುಳಿತಿದ್ದೇನೆ.

(ಮುಂದಿನ ಹಾದಿ : 17.2.2022)

ಹಿಂದಿನ ಹಾದಿ : Folk Art : ಹಾದಿಯೇ ತೋರಿದ ಹಾದಿ : ಕಹಳೆಗೆ ಇವರ ಉಸಿರು, ಕಹಳೆ ಇವರಿಗೆ ಉಸಿರು, ಕೇಳುಗರಿದ್ದಲ್ಲಿ ಎಲ್ಲ ಹಸಿರು

Published On - 10:22 am, Thu, 3 February 22