ಬೆಂಗಳೂರು: ಅಡಕೆಗೆ ಹೋದ ಮಾನ ಆನೆ ಕೊಟ್ಟರು ಸಿಗದು ಎಂಬ ಗಾದೆ ಲೋಕದಲ್ಲಿ ಚಾಲ್ತಿಯಲ್ಲಿದೆ. ಆದರೆ ಅಡಕೆಯಲ್ಲಿರುವ ಹಲವು ಬಗೆಯ ಪ್ರಯೋಜನಗಳನ್ನು ನೀವು ಅರಿತರೆ, ಇನ್ನು ಮುಂದೆ ಅಡಕೆಯನ್ನು ಆನೆಯೊಂದಿಗೆ ಹೋಲಿಸುವುದನ್ನು ಖಂಡಿತ ಕಡಿಮೆ ಮಾಡುತ್ತೀರಾ. ಹೌದು.. ಇಲ್ಲೊಬ್ಬ ಪ್ರಾಧ್ಯಾಪಕರು ಅಡಕೆ ಮೇಲೆ ಸಂಶೋಧನೆ ನಡೆಸಿ, ಅಡಕೆಯಿಂದಿರುವ ನಾನಾ ಬಗೆಯ ಉಪಯೋಗಗಳನ್ನು ಸಾರ್ವಜನಿಕರ ಮುಂದಿರಿಸಿದ್ದಾರೆ. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ನ್ಯಾನೋ ಮೆಟಿರಿಯಲ್ಸ್ ಆ್ಯಂಡ್ ಡಿಸ್‌ಪ್ಲೇಸ್ ಬಿಎಸ್‌ಎನ್ Centre for Nano-Materials & Displays ಕೇಂದ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಗುರುಮೂರ್ತಿ ಹೆಗ್ಡೆ ಅವರು ಈ ವಿಶಿಷ್ಠ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ ಕೇವಲ ತಾಂಬೂಲ ಹಾಗೂ ಮನುಷ್ಯನಿಗೆ ವಿಷವುಣಿಸುತ್ತಿದ್ದ ಗುಟ್ಕಾಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಅಡಕೆಯನ್ನು ನಾನಾ ಕೆಲಸಗಳಿಗೆ ಬಳಕೆಯಾಗುವಂತೆ ಮಾರ್ಪಾಡು ಮಾಡಿ ಜನಸ್ನೇಹಿ ವಸ್ತುವನ್ನಾಗಿ ಮಾಡಿದ್ದಾರೆ.
ಗುರುಮೂರ್ತಿಯವರ ಅನ್ವೇಷಣೆಯ ಪ್ರಕಾರ ಅಡಕೆಯನ್ನು ನ್ಯಾನೋ ಪಾರ್ಟಿಕಲ್ ಆಗಿ ಪರಿವರ್ತಿಸಿ ಒಡೆಯದ ಹಾಗೂ ತುಂಬಾ ಹಗುರವಾದ ಗಾಜು, ಮುರಿಯದ ಪೈಪ್, ಬ್ಯಾಟರಿ, ಹೆಂಗಸರು ಬಳಸುವ ಬಳೆ ಹಾಗೂ ಕಾರ್ಖಾನೆಗಳಲ್ಲಿನ ಕಲುಷಿತ ನೀರನ್ನು ಶುದ್ಧೀಕರಿಸುವ ಪರಿಕರವನ್ನು ಅಭಿವೃದ್ಧಿಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಬೊಬ್ಬಿಗದ್ದೆಯವರಾಗಿರುವ ಡಾ. ಗುರುಮೂರ್ತಿ ಹೆಗ್ಡೆ ಅವರು ಪ್ರಸ್ತುತ ಅಡಕೆ ಬೆಳೆಗಾರರೂ ಆಗಿದ್ದಾರೆ.
ಮುರಿಯದ, ಒಡೆಯದ ಗಾಜು..
ಡಾ. ಗುರುಮೂರ್ತಿ ಹೆಗ್ಡೆ ಅವರು ಅಭಿವೃದ್ಧಿಪಡಿಸಿರುವ ಈ ಗಾಜು, ಈಗ ನಾವುಗಳು ಬಳಸುತ್ತಿರುವ ಗಾಜಿನಂತಲ್ಲ. ಅಡಕೆಯಿಂದ ತಯಾರಾಗಿರುವ ಈ ಗಾಜು ಎಷ್ಟೇ ಎತ್ತರದಿಂದ ಬಿದ್ದರೂ ಒಡೆಯುವುದಿಲ್ಲ ಹಾಗೂ ಮುರಿಯುವುದಿಲ್ಲ. ಸಾಮಾನ್ಯ ಗಾಜುಗಳನ್ನ ಹಿಪಾಕ್ಸಿ ಹಾಗೂ ಹಾರ್ಡ್ನರ್ ಬಳಸಿ ಮಾಡುತ್ತಾರೆ. ಇದರಿಂದ ಅತೀ ಉಷ್ಣಾಂಶದಲ್ಲಿ ಹಿಪಾಕ್ಸಿ ಕರಗುತ್ತದೆ.
ಆದರೆ ನಾವು ಅಭಿವೃದ್ಧಿಪಡಿಸಿರುವ ಈ ಗಾಜಿನಲ್ಲಿ ಮೇಲಿನ ಅಂಶಗಳ ಜೊತೆಗೆ ಅಡಿಕೆಯನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ತಯಾರಾದ ಗಾಜು 200 ಡಿಗ್ರಿ ಸೆಲ್ಸಿಯಸ್ ಬೆಂಕಿಯಲ್ಲೂ ಕರಗುವುದಿಲ್ಲ. ಸುಲಭವಾಗಿ ರಂಧ್ರ ಮಾಡಬಹುದು ಹಾಗೂ ರಂಧ್ರ ಕೊರೆಯುವಾಗ ಗಾಜಿನ ಮೇಲೆ ಯಾವುದೇ ಬಿರುಕು ಸಹ ಮೂಡುವುದಿಲ್ಲ. ಆದರೆ ಸಾಮಾನ್ಯ ಗಾಜಿನಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ ಈ ಗಾಜು ಆಸಿಡ್ ಫ್ರೂಫ್ ಆಗಿದ್ದು, ಆಸಿಡ್ನಲ್ಲಿಯೇ ಮುಳುಗಿಸಿದರೂ ಸಹ ಇದಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಈ ಗಾಜು ಸಾಮಾನ್ಯ ಗಾಜಿಗಿಂತ ಬಹಳ ಹಗುರ, ಸದೃಢ ಮತ್ತು ಅಗ್ಗದ ಬೆಲೆಗೆ ಸಿಗುತ್ತದೆ. ಹಾಗೆಯೇ ಅಡಕೆ ಬಳಸಿ ಮಾಡಿದ ಗಾಜನ್ನು ಊಟದ ಟೇಬಲ್ ಮೇಲೂ ಬಳಸಬಹುದು. ಕಾಲೇಜುಗಳಲ್ಲಿ ಬರೆಯುವ ಬೋರ್ಡ್ಗಳಾಗಿಯೂ ಬಳಸಬಹುದಾಗಿದೆ. ಹಾಗೂ ಕೊಠಡಿಗಳ ಬಾಗಿಲುಗಳನ್ನಾಗಿಯೂ ಉಪಯೋಗಿಸಬಹುದಾಗಿದೆ. ಮಾಮೂಲಿ ಗಾಜಿನ ಬಾಗಿಲುಗಳಿಗಿಂತ ಇದು ತುಂಬಾ ಹಗುರ ಹಾಗೂ ಕಡಿಮೆ ದರದಲ್ಲೂ ಸಿಗುತ್ತದೆ.
ಏರೋಸ್ಪೇಸ್ಗೆ ಬಹಳ ಸಹಾಯಕಾರಿ..
ಏರೋಸ್ಪೇಸ್ ಉದ್ಯಮದಲ್ಲಿ ಈ ಗಾಜು ತುಂಬಾ ಸಹಾಯಕ್ಕೆ ಬರುತ್ತದೆ. ಬಾಹ್ಯಕಾಶಕ್ಕೆ ಹಾರಿಬಿಡುವ ನೌಕೆಗಳಿಗೆ ತೀರಾ ಹಗುರವಾದ ವಸ್ತುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ಈ ಗಾಜು ತುಂಬಾ ಹಗುರವಾಗಿರುವುದರಿಂದ ಆ ಉದ್ಯಮಕ್ಕೆ ನೆರವಾಗಲಿದೆ. ಅಲ್ಲದೆ 200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದಾಗಲೂ ಈ ಗಾಜಿಗೆ ಯಾವುದೇ ಹಾನಿಯಾಗದಿರುವುದು ಮತ್ತೊಂದು ಧನಾತ್ಮಕ ವಿಚಾರವಾಗಿದೆ.
ಬುಲೆಟ್ ಫ್ರೂಫ್ ಜಾಕೆಟ್ನಲ್ಲಿ ಬಳಸಬಹುದು..
ಅಡಕೆಯಿಂದ ಬುಲೆಟ್ ಫ್ರೂಫ್ ಜಾಕೆಟ್ಗಳನ್ನು ತಯಾರಿಸುವ ಸಲುವಾಗಿ ಈಗ ಸಂಶೋಧನೆಗಳು ನಡೆಯುತ್ತಿವೆ. ಅದರಲ್ಲೇನಾದರು ಸಕಾರಾತ್ಮಕ ಫಲಿತಾಂಶ ಬಂದಲ್ಲಿ ಇದು ಭಾರತದ ಸೈನಿಕರಿಗೆ ಬಹಳ ಸಹಕಾರಿಯಾಗಲಿದೆ. ಅಲ್ಲದೆ ವಿವಿಐಪಿ ವ್ಯಕ್ತಿಗಳ ರಕ್ಷಣೆಯ ಸಲುವಾಗಿ ಅವರು ಪ್ರಯಾಣಿಸುವ ಕಾರುಗಳಲ್ಲಿನ ಕಿಟಕಿಗಳಿಗೆ ಇದನ್ನು ಬಳಸಬಹುದು. ಹಾಗೆಯೇ ಸಾರ್ವಜನಿಕ ಸಾರಿಗೆಗಳಾದ ಬಸ್ಗಳ ಸೈಡ್ ವಿಂಡೋಗಳಲ್ಲಿ ಈ ಗಾಜನ್ನು ಬಳಸಬಹುದು. ಇದರಿಂದ ಗಲಭೆಗಳು ನಡೆದಾಗ ಸಾರ್ವಜನಿಕರು ಬಸ್ಗಳ ಮೇಲೆ ಕಲ್ಲು ತೂರಿದರು ಸಹ ಬಸ್ಸಿನ ಗಾಜಿಗೆ ಯಾವುದೇ ಹಾನಿಯಾಗುವುದಿಲ್ಲ.
ಒಡೆಯದ ಪೈಪ್ಗಳ ನಿರ್ಮಾಣ..
ಇದೆ ತಂತ್ರಜ್ಞಾನ ಬಳಸಿ ಅಡಕೆಯಿಂದ ಪೈಪ್ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದ್ದು, ಈ ಪೈಪ್ಗಳು ಸಾಮಾನ್ಯ ಪೈಪ್ಗಳಿಗಿಂತ ಭಿನ್ನವಾಗಿವೆ. ಎಷ್ಟೇ ವರ್ಷ ಕಳೆದರು ಈ ಪೈಪ್ ಒಡೆಯುವುದಿಲ್ಲ. ಹಾಗೆಯೇ ಬಿಸಿಲಿನಲ್ಲಿ ಒಣಗಿದರೂ ಸಹ ಹಾಳಾಗುವುದಿಲ್ಲ. ಹೀಗಾಗಿ ಅಡಕೆಯಿಂದ ಮಾಡಿದ ಪೈಪ್ಗಳನ್ನು ದೊಡ್ಡ ದೊಡ್ಡ ಕಟ್ಟಡ, ಸಾಮಾನ್ಯ ಮನೆಗಳಲ್ಲಿನ ಶೌಚಾಲಯಗಳಿಗೆ ಬಳಸುವ ಪೈಪ್ಗಳನ್ನಾಗಿ ಬಳಸಬಹುದಾಗಿದೆ. ಅಲ್ಲದೆ ಈ ಪೈಪ್ಗಳನ್ನು ಕೃಷಿ ವಲಯದಲ್ಲೂ ಬಳಸಬಹುದಾಗಿದೆ.
ಹೆಂಗಸರು ತೊಡುವ ಬಳೆಗಳು..
ಅಡಕೆಗಳಿಂದ ಹೆಂಗಸರ ಪ್ರಮುಖ ಅಲಂಕಾರಿಕ ವಸ್ತುವಾದ ಬಳೆಗಳನ್ನು ತಯಾರಿಸಲಾಗಿದೆ. ಈ ಬಳೆಗಳ ವಿಶೇಷತೆಯೆಂದರೆ, ಸಾಮಾನ್ಯ ಬಳೆಗಳಂತೆ ಒಡೆಯುವುದಿಲ್ಲ ಹಾಗೂ ಸ್ಕ್ರ್ಯಾಚ್ ಸಹ ಆಗುವುದಿಲ್ಲ. ಜೊತೆಗೆ ಉಳಿದ ಬಳೆಗಿಂತ ತುಂಬಾ ಹಗುರವಾಗಿದೆ.
ಅಗ್ಗದ, ಉತ್ತಮ ಗುಣಮಟ್ಟದ ಬ್ಯಾಟರಿ..
ಇದೆಲ್ಲದರ ಜೊತೆಗೆ ಅಡಕೆಯಿಂದಲೆ ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಬ್ಯಾಟರಿಯನ್ನೂ ಅಭಿವೃದ್ದಿಪಡಿಸಲಾಗಿದೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳು ಭಾರತಕ್ಕೆ ಲಗ್ಗೆ ಇಡುವುದು ಖಚಿತ. ಆದರಿಂದ ಈಗ ಪ್ರಸ್ತುತ ವಾಹನಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿಗಳ ಅರ್ಧಕ್ಕಿಂತ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಬ್ಯಾಟರಿ ತಯಾರಿಸಲಾಗಿದೆ. ಇದರಿಂದ ಅಡಕೆ ಬ್ಯಾಟರಿಗಳು ವಾಹನ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿವೆ. ಅಡಕೆಯಿಂದ ತಯಾರದ ಬ್ಯಾಟರಿಗಳಿಂದ ಒಂದು ಎಲ್ಈಡಿ ಬಲ್ಬ್ ಉರಿಯುವ ಸಾಮರ್ಥ್ಯ ಇದೆ. ಹಾಗೆಯೇ ಬ್ಯಾಟರಿ ಚಾಲಿತ ಗೊಂಬೆಗಳ ತಯಾರಿಕೆಯಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ.
ಕೈಗಾರಿಕೆಗಳ ಕೊಳಚೆ ನೀರಿನ ಶುದ್ಧಿಕಾರಕ..
ಅಡಕೆ ನ್ಯಾನೋ ಪಾರ್ಟಿಕಲ್‌ನ ಬಹುಮುಖ್ಯ ಸಂಶೋಧನೆ ಎಂದರೆ ನೀರು ಶುದ್ಧಿಕಾರಕ. ಬೆಂಗಳೂರಿನ ಬಹುತೇಕ ಕೈಗಾರಿಕೆಗಳು ತಾವು ಬಳಸಿ ಕೆರೆಕಟ್ಟೆಗಳಿಗೆ ಹರಿಯ ಬಿಡುವ ಕೊಳಚೆ ನೀರನ್ನು ಇದರಿಂದ ಶುದ್ಧೀಕರಿಸಿ ಮರುಬಳಕೆ ಮಾಡಬಹುದಾಗಿದೆ. ಅಡಕೆಯಿಂದ ತಯಾರಿಸಿರುವ ನ್ಯಾನೋ ಪಾರ್ಟಿಕಲ್ ವಸ್ತುವನ್ನು ಆ ಕಲುಷಿತ ನೀರಿನಲ್ಲಿ ಹಾಕಿದಾಗ, ನೀರು ಪೂರ್ಣ ಶುದ್ಧಿಗೊಳ್ಳುತ್ತದೆ. ಆ ಮೂಲಕ ಕೆರೆ, ಕಟ್ಟೆ, ನದಿಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಬಹುದಾಗಿದೆ.
ಔಷಧ ಉದ್ಯಮದಲ್ಲಿ ಬಳಕೆ..
ಔಷಧ ಉದ್ಯಮಗಳಲ್ಲಿ ಪೆಲಾಡಿಯಂ ಕಾರ್ಬನ್ ಕೆಟಲಿಸ್ಟ್‌ಗೆ ಬದಲಾಗಿ ಅಡಕೆಯ ನ್ಯಾನೋ ಪಾರ್ಟಿಕಲನ್ನು ಬಳಸಬಹುದು ಎಂಬುದನ್ನು ಸಂಶೋಧನೆಯಿಂದ ಈಗಾಗಲೇ ದೃಢಪಡಿಸಲಾಗಿದೆ. ಅನಾರೋಗ್ಯಕ್ಕೆ ತುತ್ತಾದವರಿಗೆ ನೀಡುವ ಮಾತ್ರೆಗಳ ತಯಾರಿಕೆಯಲ್ಲಿ ಪೆಲಾಡಿಯಂ ಕಾರ್ಬನ್ ಬಹುಮುಖ್ಯ ಪಾತ್ರವಹಿಸುತ್ತದೆ. ಹೀಗಾಗಿ ಈ ಪೆಲಾಡಿಯಂ ಕಾರ್ಬನ್ನ ಬದಲಾಗಿ ಅಡಕೆ ನ್ಯಾನೋ ಪಾರ್ಟಿಕಲನ್ನು ಬಳಸಬಹುದಾಗಿದೆ. ಇದು ಪೆಲಾಡಿಯಂಗಿಂತ ಅಗ್ಗದ ದರದಲ್ಲಿ ಲಭ್ಯವಾಗುತ್ತದೆ.
ಹಳ್ಳಿ ಬಾಗದಲ್ಲೂ ಈ ಉದ್ಯಮ ತೆರೆಯಲಿದೆ..
ಅಡಕೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದು ಹಳ್ಳಿಗಳ ಭಾಗದಲ್ಲಿ ಹೀಗಾಗಿ ಈ ವಸ್ತುಗಳ ತಯಾರಿಕಾ ಘಟಕವನ್ನು ಹಳ್ಳಿಗಳಲ್ಲಿ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ ಡಾ. ಗುರುಮೂರ್ತಿ. ಇದರಿಂದ ಆ ಭಾಗದ ರೈತರಿಗೆ ಅಡಕೆ ಮಾರಾಟದಲ್ಲಾಗುತ್ತಿರುವ ವೆಚ್ಚವನ್ನು ತಗ್ಗಿಸುವುದಲ್ಲದೆ ರೈತರಿಗೆ ಹೆಚ್ಚಿನ ಆದಾಯ ತಂದುಕೊಡಲಿದೆ. ಜೊತೆಗೆ ಅಡಕೆಯನ್ನು ನಾವು ಈ ಉದ್ಯಮದಲ್ಲಿ ಬಳಸುವುದರಿಂದ ಆಡಕೆಯಿಂದ ತಯಾರಾಗುವ ಇತರೆ ಉತ್ಪನ್ನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಸಂಶೋಧಕರು.
ಪರಿಸರಕ್ಕೆ ಹಾನಿಕಾರಕವಲ್ಲ..
ಪ್ಲಾಸ್ಟಿಕ್ನಂತೆ ಅಡಕೆಯಿಂದ ತಯಾರಾದ ವಸ್ತುಗಳು ಪರಿಸರಕ್ಕೆ ಹಾನಿಕಾರಕವಲ್ಲ. ಅಡಕೆಯಿಂದ ತಯಾರಿಸಲಾದ ವಸ್ತುಗಳು ಆಕಸ್ಮಿಕವಾಗಿ ಬೆಂಕಿ ತಗುಲಿ ಭೂಮಿಯೊಳಗೆ ಸೇರಿದರೂ ಸಹ ಈ ವಸ್ತುಗಳು ನಾನ್ ಟಾಕ್ಸಿಕ್ ಅಂಶ ಹೊಂದಿರುವುದರಿಂದ ಮಣ್ಣಿಗೆ, ಪರಿಸರಕ್ಕೆ ಹಾಗೂ ಅಂತರ್ಜಲಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಜೊತೆಗೆ ಅಡಕೆಯ ನ್ಯಾನೋ ಪಾರ್ಟಿಕಲನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ನಡೆಸುತ್ತಿರುವ ಸಂಶೋಧನೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ. ಕಾಂಕ್ರಿಟ್ ರಸ್ತೆಗಳಲ್ಲಿ ನ್ಯಾನೋ ಪಾರ್ಟಿಕಲನ್ನು ಬಳಸುವುದರಿಂದ ರಸ್ತೆಗಳ ಸಾಮರ್ಥ್ಯ ಶೇ. 30 ಹೆಚ್ಚಲಿದೆ ಎಂದು ತಿಳಿದುಬಂದಿದೆ.
ಡಾ. ಗುರುಮೂರ್ತಿಯವರ ಇತರೆ ಸಂಶೋಧನೆಗಳು..
ಹ್ಯಾಂಡ್ ಸ್ಯಾನಿಟೈಸರ್..
ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ ಡಾ. ಗುರುಮೂರ್ತಿಯವರು ಅಭಿವೃದ್ದಿಪಡಿಸಿರುವ ಹ್ಯಾಂಡ್ ಸ್ಯಾನಿಟೈಸರ್ ಸಾಧನದಲ್ಲಿ ನಾವು ಕೇವಲ ನೀರು ಹಾಗೂ ಉಪ್ಪನ್ನು ಹಾಕಿ ಮೊಬೈಲ್ ಚಾರ್ಜ್ರ್ನಿಂದ ಆ ಸಾಧನಕ್ಕೆ ವಿದ್ಯುತ್ ಒದಗಿಸಿದರೆ ಸಾಕು, ಕೆಲ ಸೆಕೆಂಡ್ಗಳ ನಂತರ ನಮಗೆ ಉತ್ತಮ ಗುಣಮುಟ್ಟದ ಹ್ಯಾಂಡ್ ಸ್ಯಾನಿಟೈಸರ್ ಸಿಗಲಿದೆ.
ನ್ಯಾನೋ ಪಾರ್ಟಿಕಲ್ನಿಂದ ಫೋರ್ ಕ್ಲಿನರ್..
ಮಾರುಕಟ್ಟೆಯಲ್ಲಿ ಸಿಗುವ ಫ್ಲೋರ್ ಕ್ಲೀನರ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಯಾವುದೇ ಸಾಕ್ಷಿ ಇರುವುದಿಲ್ಲ. ಆದರೆ ಇವರು ತಯಾರಿಸಿರುವ ಫೋರ್ ಕ್ಲಿನರ್, ಆಂಟಿ ಬ್ಯಾಕ್ಟೀರಿಯಲ್ ಎಂಬುದು ವೈಜ್ಞಾನಿಕವಾಗಿ ಸಾಭೀತಾಗಿದೆ.