30ನೇ ವಯಸ್ಸಿನಲ್ಲಿ ಈ 10 ಬದಲಾವಣೆ ಮಾಡಿಕೊಂಡ್ರೆ 60ನೇ ವಯಸ್ಸಿನಲ್ಲಿ ನೆಮ್ಮದಿಯಾಗಿ ಇರ್ತೀರಿ

| Updated By: Skanda

Updated on: Aug 09, 2021 | 8:39 AM

ನೀವು ನಿಮ್ಮ ಬದುಕಿನ 30ರಿಂದ 40ನೇ ವರ್ಷವನ್ನು ಹೇಗೆ ಕಳೀತೀರಿ ಎನ್ನುವುದು ನಿಮ್ಮ 60ರಿಂದ 70ನೇ ವರ್ಷಗಳು ಹೇಗಿರುತ್ತವೆ ಎನ್ನುವುದನ್ನು ನಿರ್ಧರಿಸುತ್ತದೆ.

30ನೇ ವಯಸ್ಸಿನಲ್ಲಿ ಈ 10 ಬದಲಾವಣೆ ಮಾಡಿಕೊಂಡ್ರೆ 60ನೇ ವಯಸ್ಸಿನಲ್ಲಿ ನೆಮ್ಮದಿಯಾಗಿ ಇರ್ತೀರಿ
30ನೇ ವಯಸ್ಸು ಬದುಕಿಗೆ ಮಹತ್ತರ ತಿರುವ ಕೊಡುವ ಕಾಲಘಟ್ಟ (Image Courtesy: Sachiho, through creativecommons)
Follow us on

ನೀವು ನಿಮ್ಮ ಬದುಕಿನ 30ರಿಂದ 40ನೇ ವರ್ಷವನ್ನು ಹೇಗೆ ಕಳೀತೀರಿ ಎನ್ನುವುದು ನಿಮ್ಮ 60ರಿಂದ 70ನೇ ವರ್ಷಗಳು ಹೇಗಿರುತ್ತವೆ ಎನ್ನುವುದನ್ನು ನಿರ್ಧರಿಸುತ್ತದೆ. ನೀವು ಈಗಿನ್ನೂ 30 ವರ್ಷಕ್ಕೆ ಕಾಲಿಟ್ಟಿದ್ದರೆ, ಇನ್ನೇನು ಇಡುವುದರಲ್ಲಿದ್ದರೆ ಈ ಬರಹ ಪೂರ್ತಿ ಓದಿ. ಹದಿಹರೆಯ ಹೇಗೆ ಬದುಕಿನ ಅತ್ಯಂತ ಮುಖ್ಯ ವಯೋಮಾನ ಎನಿಸಿಕೊಂಡಿದೆಯೋ, 30ರ ವಯೋಮಾನವೂ ಅಷ್ಟೇ ಮುಖ್ಯ ಎನಿಸಿಕೊಂಡಿದೆ. ಈ ಹಂತದಲ್ಲಿ ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೂ ನಿಮ್ಮ ಮುಂದಿನ ದಿನಗಳು ಹೆಚ್ಚು ಸಂತಸದಾಯಕವಾಗಿರುತ್ತವೆ.

1) ಜೀವನಶೈಲಿ ಸುಧಾರಿಸಲಿ
ನೀವು ಧೂಮಪಾನದ ಚಟ ಅಂಟಿಸಿಕೊಂಡಿದ್ದರೆ ಮೊದಲು ಬಿಟ್ಟುಬಿಡಿ. ನಿಮ್ಮ ಮೂಳೆಯ ಸಾಂದ್ರತೆ, ರೋಗನಿರೋಧಕ ಶಕ್ತಿಯ ಮೇಲೆ ಧೂಮಪಾನದ ಚಟ ನೇರ ಪರಿಣಾಮ ಬೀರುತ್ತದೆ. ಬಿಸ್ಕೀಟ್, ಕೇಕ್, ಚಿಪ್ಸ್​, ಕೋಲಾದಂಥ ಜಂಕ್ ಫುಡ್​ ಎಂದಿಗೂ ನಿಮ್ಮ ಸ್ಟ್ರೆಸ್ ಬಸ್ಟರ್ ಆಗಬಾರದು. ಅವು ವೃಥಾ ಹಣ ವೆಚ್ಚಕ್ಕೆ ದಾರಿ ಮಾಡಿಕೊಡುವ ಜೊತೆಗೆ ನಿಮ್ಮ ದೇಹಕ್ಕೆ ಕ್ಯಾಲೊರಿಗಳ ಭಾರವನ್ನೂ ಹೇರುತ್ತವೆ. ಆರೋಗ್ಯಕ್ಕೂ ಕಂಟಕ.

2) ಸಂಬಂಧಗಳನ್ನು ಸರಿಪಡಿಸಿಕೊಳ್ಳಿ
ಬದುಕು ನಿಧಾನವಾಗಿ ಮಧ್ಯಮಗತಿಗೆ ಹೊರಳಿಕೊಳ್ಳುವ ಹೊತ್ತು ಅದು. ಹರೆಯದ ಮುಂಗೋಪದಲ್ಲಿ ಯಾರ ಜೊತೆಗಾದರೂ ಜಗಳ ಮಾಡಿಕೊಂಡಿದ್ದರೆ, ಮಾತು ಬಿಟ್ಟಿದ್ದರೆ ಮತ್ತೆ ಮಾತಾಡಲು, ಸಂಬಂಧ ಸರಿಪಡಿಸಿಕೊಳ್ಳಲು ಒಂದು ಪ್ರಯತ್ನ ಮಾಡಿನೋಡಿ. ಸೋಲು-ಗೆಲುವಿನ ಹಮ್ಮುಬಿಮ್ಮುಗಳನ್ನು ಸಂಬಂಧಗಳ ವಿಚಾರದಲ್ಲಿ ತರಬೇಡಿ. ಮನಸ್ಸು ಖುಷಿಯಾಗಿದ್ದರೆ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ. ಇದು ಸಾಧ್ಯವಾಗಲು ಸಂಬಂಧಗಳ ನಿರ್ವಹಣೆ ಬಹಳ ಮುಖ್ಯ.

3) ದೈಹಿಕ ಚಟುವಟಿಕೆಗೆ ಗಮನ ಕೊಡಿ
ಸ್ವಸ್ಥ ದೇಹದಲ್ಲಿ ಮಾತ್ರ ಸ್ವಸ್ಥ ಮನಸ್ಸು ಇರಲು ಸಾಧ್ಯ. ಒಂದೇ ಕಡೆ ಕುಳಿತು ಕೆಲಸ ಮಾಡುವ ಪೈಕಿ ನೀವಾಗಿದ್ದರೆ, ಪ್ರತಿದಿನ ಸ್ವಲ್ಪವಾದರೂ ವ್ಯಾಯಾಮ ಶುರು ಮಾಡಿ. ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಮ್ಮ ದೇಹವನ್ನು ಸರಿಪಡಿಸಿಕೊಳ್ಳಲೂ ಇದು ಅತ್ಯುತ್ತಮ ವಯೋಮಾನ. ಬೊಜ್ಜು ನಿಯಂತ್ರಿಸದಿದ್ದರೆ ನಿಮ್ಮ ದೇಹಸ್ಥಿತಿ ಹದಗೆಡುತ್ತದೆ. ದೇಹದ ಸುಸ್ಥಿತಿಗೆ ವ್ಯಾಯಾಮ, ಮನಸ್ಸಿನ ಸದೃಢತೆಗೆ ಯೋಗ-ಪ್ರಾಣಾಯಾಮ ಮತ್ತು ಧ್ಯಾನ ಅತ್ಯುತ್ತಮ ಆಯ್ಕೆ.

4) ಕಾಸು ಎಷ್ಟು ಉಳಿಸಿದ್ದೀರಿ?
30ನೇ ವಯಸ್ಸು ಎನ್ನುವುದು ನಿಮ್ಮ ಬದುಕಿನಲ್ಲಿ ಹಲವು ಕಾರಣಗಳಿಗೆ ತಿರುವು ಕೊಡುವ ಹಂತ. ಈ ಹೊತ್ತಿಗೆ ನಿಮಗೆ ಕೆಲಸ ಸಿಕ್ಕಿರುತ್ತೆ, ನೀವು ಆರಂಭಿಕ ಹಂತದಿಂದ ಅಂದರೆ ಕಲಿಕೆಯ ಹಂತದಿಂದ ಮುಂದಕ್ಕೆ ಸಾಗಿರುತ್ತೀರಿ. ಸಂಬಳ ಹೆಚ್ಚಾಗಿರುತ್ತದೆ. ಏಕಾಂಗಿಯಾಗಿದ್ದ ನೀವು ವಿವಾಹ ಬಂಧನದ ಮೂಲಕ ಜಂಟಿಯಾಗುವ ಅವಧಿಯೂ ಇದು ಹೌದು. ನಿಮ್ಮ ಜವಾಬ್ದಾರಿ ಹೆಚ್ಚಾಗುವ ಈ ಹೊತ್ತಿನಲ್ಲಿ ನಿಮ್ಮ ಉಳಿತಾಯದ ಬಗ್ಗೆಯೂ ನೀವು ಗಮನ ಕೊಡಬೇಕಲ್ಲವೇ? ಬ್ಯಾಂಕ್ ಅಕೌಂಟ್​ಗಳು ಎಷ್ಟಿವೆ? ಜೀವವಿಮೆ, ಆರೋಗ್ಯ ವಿಮಾ ಪಾಲಿಸಿ ಖರೀದಿಸಿರಾ? ಆರ್​ಡಿ ಅಥವಾ ಎಫ್​ಡಿ ಬಗ್ಗೆ ತಿಳಿದುಕೊಂಡಿದ್ದೀರಾ? ಈ ತಲೆಮಾರಿಗೆ ತಕ್ಕಂತೆ ಮ್ಯೂಚುವಲ್ ಫಂಡ್ ಅಥವಾ ಷೇರುಪೇಟೆಯಲ್ಲಿ ಉಳಿತಾಯ ಆರಂಭಿಸಿದ್ದೀರಾ? ಈ ಪ್ರಶ್ನೆಗಳನ್ನು ನೀವು 30ನೇ ವರ್ಷದಲ್ಲಿ ಕೇಳಿಕೊಳ್ಳಲೇಬೇಕು.

5) ಬದುಕಿನ ಗುರಿ ಕಂಡುಕೊಳ್ಳಿ
ಹೊಸ ಮನೆ ಖರೀದಿಸಬೇಕೆ? ಮಕ್ಕಳು ಬೇಕು ಎನಿಸುತ್ತಿದೆಯೇ? ಇನ್ನಷ್ಟು ಓದುವ ಆಸೆ ಮೂಡಿದೆಯೇ? ಕೆಲಸ ಬದಲಿಸಬೇಕು ಎನಿಸುತ್ತಿದೆಯೇ? ಸಂಗೀತವೋ, ನೃತ್ಯವೋ ಇನ್ಯಾವುದೋ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎನ್ನಿಸುತ್ತಿದೆಯೇ? 30ನೇ ವಯಸ್ಸಿನಲ್ಲಿ ಅಲ್ಲದಿದ್ದರೆ ಇನ್ಯಾವಾಗ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ಯತ್ನಿಸುತ್ತೀರಿ? 30 ಎನ್ನುವುದು ತೀರಾ ಚಿಕ್ಕದು ಅಲ್ಲ, ತೀರಾ ದೊಡ್ಡದು ಅಲ್ಲದ ವಯಸ್ಸು. ಬದುಕಿನ ಮಾರ್ಗದಲ್ಲಿ ಏನೋ ಕಳೆದುಕೊಂಡೆವು, ಅದನ್ನು ಮತ್ತೆ ಹುಡುಕಿಕೊಳ್ಳಬೇಕು ಎನಿಸಿದರೆ ಇದು ಅತ್ಯುತ್ತಮ ಅವಕಾಶ.

6) ದೇಹಕ್ಕೆ ತುಸು ವಿಶ್ರಾಂತಿ ಕೊಡಿ
ಮಹತ್ವಾಕಾಂಕ್ಷೆಯ ಬೆನ್ನುಹತ್ತುವ ಆಕಾಂಕ್ಷೆ ಬೆಳೆದಿದ್ದರೆ ನಿದ್ದೆ ಮಾಡುವುದು ಎಂದರೆ ಸಮಯ ವ್ಯರ್ಥ ಮಾಡಿದಂತೆ ಎಂದು ನಿಮಗೆ ಅನ್ನಿಸಬಹುದು. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ನಿಮ್ಮ ದೇಹವನ್ನು ನೀವೇ ಶೋಷಿಸಿಕೊಂಡಂತೆ. ನಿದ್ದೆ ಮಾಡುವಾಗ ನಿಮ್ಮ ದೇಹ ಮತ್ತು ಮನಸ್ಸುಗಳು ಪುನಶ್ಚೇತನಗೊಳ್ಳುತ್ತವೆ. ಮಾನಸಿಕ ಒತ್ತಡ, ಆಘಾತಗಳ ಜೊತೆಗೆ ಶಾರೀರಿಕ ಶ್ರಮವೂ ಪರಿಹಾರವಾಗುತ್ತದೆ. ಎಂಥ ಮಹತ್ವ ಜವಾಬ್ದಾರಿಯಿದ್ದರೂ, ಎಷ್ಟೇ ಘನಂದಾರಿ ಕನಸನ್ನು ನೀವು ಬೆನ್ನು ಹತ್ತಿದ್ದರೂ ಸರಿ, ಪ್ರತಿದಿನ ನಿದ್ದೆಗೆ ಕನಿಷ್ಠ 6 ಗಂಟೆ ಮೀಸಲಿಡಿ.

7) ಹಲ್ಲು ಹುಷಾರು
ವ್ಯಾಯಾಮ ಮತ್ತು ಸೂಕ್ತ ಆಹಾರ ಕ್ರಮಗಳಿಂದ ದೇಹವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆ ಹಲ್ಲಿನ ಆರೋಗ್ಯವನ್ನೂ ಗಮನದಲ್ಲಿರಿಸಿಕೊಳ್ಳಿ. ರಾತ್ರಿ ಮಲಗುವ ಮೊದಲು ಹಲ್ಲುಜ್ಜು ಎನ್ನಲು ನಿಮ್ಮ ಅಮ್ಮನೋ ಅಪ್ಪನೋ ಈಗ ನಿಮಗೆ ಹೇಳುವುದಿಲ್ಲ. ನೀವೇ ಮರೆಯದೇ ಆ ಕೆಲಸ ಮಾಡಬೇಕು. ಹಲ್ಲು ಹಾಳಾದಾಗ ತೆರುವ ಬಿಲ್​ ಮೊತ್ತದ ಜೊತೆಗೆ ಅನುಭವಿಸುವ ನೋವೂ ಅತಿಹಿಂಸೆ ಕೊಡುತ್ತದೆ.

8) ತಿರುಗಾಡಿ
ಬದುಕಿನ ಬಗ್ಗೆ, ಜಗತ್ತಿನ ಬಗ್ಗೆ ಎಂದಿಗೂ ಕುತೂಹಲ ಕಳೆದುಕೊಳ್ಳಬೇಡಿ. ಬೈಕ್​ ಮೇಲೆ ಲಾಂಗ್​ರೈಡ್ ಹೊರಡಲು, ಕಾರಿನಲ್ಲಿ ದೇಶ ಸುತ್ತಲು ಇದು ಸರಿಯಾದ ವಯಸ್ಸು. ದೂರದೂರ ಸಂಚಾರ ಹೋಗಿ, ಬೆಟ್ಟಗುಡ್ಡ ಹತ್ತಿ, ಸಾಗರದಲ್ಲಿ ಡೈವ್ ಮಾಡಿ. ಬದುಕನ್ನು ಶ್ರೀಮಂತಗೊಳಿಸುವುದು ಇಂಥ ಅನುಭವಗಳು. ಬದುಕಿನ ದೊಡ್ಡ ಆಸ್ತಿಯೂ ಇದೇ.

9) ಡೈರಿ ಬರೆದುಕೊಳ್ಳಿ
ಬದುಕು ಅಂದ್ರೇನು? ಶೇ 10 ನಿಮ್ಮ ಕ್ರಿಯೆ, ಶೇ 90 ಅದರ ಪರಿಣಾಮಗಳಿಗೆ ನೀವು ತೋರುವ ಪ್ರತಿಕ್ರಿಯೆ. ನಿಮ್ಮ ಬದುಕಿನ ಅತ್ಯುತ್ತಮ ಗಳಿಗೆಗಳನ್ನು ದಾಖಲಿಸಿ. ದಿನಕ್ಕೆ ಒಂದು ಪುಟವಾದರೂ ಡೈರಿ ಬರೆಯಿರಿ. ಡೈರಿ ಬರೆಯುವುದು ಎಂದರೆ ನಮ್ಮೊಡನೆ ನಾವೇ ಮಾತನಾಡಿಕೊಂಡಂತೆ. ನಿಮಗೆ ನೀವೇ ಅತ್ಯುತ್ತಮ ಗೆಳೆಯ/ಗೆಳತಿ ಎನ್ನುವುದನ್ನು ನೆನಪಿಸಿಕೊಳ್ಳುವ ಚಟುವಟಿಕೆಯಿದು. ಒಂದು ದಿನದಲ್ಲಿ ಏನೆಲ್ಲಾ ಆಯ್ತು ಎನ್ನುವ ಬಗ್ಗೆ ಒಂದೆರೆಡು ನಿಮಿಷ ಯೋಚಿಸಿ, ಅದನ್ನು ದಾಖಲಿಸಿ, ತಪ್ಪು ಕಂಡಿದ್ದನ್ನು ಸರಿಪಡಿಸಿಕೊಳ್ಳುವುದು ಉತ್ತಮ ಮನುಷ್ಯರಾಗಲು ನಾವು ಮಾಡುವ ಅತ್ಯುತ್ತಮ ಪ್ರಯತ್ನ ಆಗಬಲ್ಲದು.

10) ಮಾತಾಡಿ
ಸಂವಹನಕ್ಕೆ ಇರುವ ಅವಕಾಶಗಳು ಹೆಚ್ಚಾದಂತೆ ಮನುಷ್ಯರು ಪರಸ್ಪರ ಬೆರೆಯುವುದು, ಮಾತನಾಡುವುದೇ ಕಡಿಮೆಯಾಗುತ್ತಿದೆ. ಮಾತನಾಡಲು, ಆಪ್ತರನ್ನು ಭೇಟಿಯಾಗಲು ಎಂದೇ ಪ್ರತಿದಿನ ಒಂದಿಷ್ಟು ಸಮಯ ಮೀಸಲಿಟ್ಟುಕೊಳ್ಳಿ. ನಿಮ್ಮ ಕುಟುಂಬದ ಸದಸ್ಯರು, ಗೆಳೆಯ/ಗೆಳತಿಯರ ಪಟ್ಟಿ ಸಿದ್ಧಪಡಿಸಿಕೊಂಡು, ಯಾವುದೇ ಉದ್ದೇಶವಿಲ್ಲದೆ ಫೋನ್ ಮಾಡಿ ಕಷ್ಟಸುಖ ವಿಚಾರಿಸಿ. ಸಂಬಂಧಗಳು ಸುಧಾರಿಸುವ ಜೊತೆಗೆ ನಿಮ್ಮ ಮನಸ್ಸು ಎಷ್ಟು ಪ್ರಫುಲ್ಲವಾಗುತ್ತದೆ ಎಂಬುದನ್ನು ಗಮನಿಸಿ. ಸಂಬಂಧಗಳು ತಾಜಾ ಆಗಿ ಉಳಿಯಲು ನಿಯಮಿತ ಸಂವಹನ ಅತ್ಯುತ್ತಮ ಮಾರ್ಗ.

(ಮಾಹಿತಿ: ಲೈಫ್ ಹ್ಯಾಕ್ ಮತ್ತು ಇತರ ವೆಬ್​ಸೈಟ್​ಗಳು)

ಇದನ್ನೂ ಓದಿ: Stress free life: ಬದುಕಿನಲ್ಲಿ ಏನಿದ್ದರೇನು ನೆಮ್ಮದಿಯೇ ಇಲ್ಲದಿದ್ದರೆ; ಖುಷಿಖುಷಿ ಬದುಕಿಗೆ ಈ 11 ಸೂತ್ರ ನೆನಪಿಟ್ಟುಕೊಳ್ಳಿ

ಇದನ್ನೂ ಓದಿ: Will: ನೆಮ್ಮದಿಯ ಬದುಕಿಗೆ ವಿಲ್ ಬೇಕು: ವಿಲ್ ಮಾಡುವುದು ಹೇಗೆ?

(If you are at the age of 30 years then check these 10 lifestyle changes that are needed)