ಸ್ಟೈಲಿಷ್ ಫೋಟೊಶೂಟ್ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ 69ರ ಹರೆಯದ ಸಿನಿಮಾ ನಟಿ ರಾಜಿನಿ ಚಾಂಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 15, 2021 | 4:44 PM

ಕಳೆದ ಕೆಲವು ವರ್ಷಗಳ ಹಿಂದೆ ಅಂದರೆ 2016ರಲ್ಲಿ ರಾಜಿನಿ 'ಒರು ಮುತ್ತಶ್ಶಿ ಗಧಾ' (ಅಜ್ಜಿಯ ಗದೆ) ಎಂಬ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆಗ ಆಕೆಯ ವಯಸ್ಸು 65.

ಸ್ಟೈಲಿಷ್ ಫೋಟೊಶೂಟ್ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ 69ರ ಹರೆಯದ ಸಿನಿಮಾ ನಟಿ ರಾಜಿನಿ ಚಾಂಡಿ
ರಾಜಿನಿ ಚಾಂಡಿ (ಕೃಪೆ: ಫೇಸ್​ಬುಕ್)
Follow us on

ಮಲಯಾಳಂ ನಟಿ ರಾಜಿನಿ ಚಾಂಡಿ ಇತ್ತೀಚೆಗೆ ಫೇಸ್‌ಬುಕ್​ನಲ್ಲಿ ಗ್ಲಾಮರಸ್ ಫೋಟೊಶೂಟ್ ಚಿತ್ರವನ್ನು ಶೇರ್ ಮಾಡಿದ್ದರು. ಈ ಚಿತ್ರ ವೈರಲ್ ಆಗುವುದರ ಜತೆಗೆ ಹಲವು ವಿದಧ ಟೀಕೆ, ಟ್ರೋಲ್​ಗಳಿಗೆ ಗುರಿಯಾಗಿತ್ತು. ರಾಜಿನಿ ಚಾಂಡಿಗೆ ಈಗ ವಯಸ್ಸು 69. ಬಣ್ಣಬಣ್ಣದ ಸೀರೆಯುಟ್ಟ, ಜಂಪ್ ಸೂಟ್, ಜೀನ್ಸ್, ಶಾರ್ಟ್ಸ್ ಹೀಗೆ ಎಲ್ಲ ರೀತಿಯ ಉಡುಗೆಗಳಲ್ಲಿ ಕಾಣಿಸಿಕೊಂಡಿರುವ ಇವರನ್ನು ಬೋಲ್ಡ್ ಆ್ಯಂಡ್ ಬ್ಯೂಟಿ ಎಂದು ಕೆಲವರು ಬಣ್ಣಿಸಿದರೂ ಕೇರಳದ ಸಂಪ್ರದಾಯವಾದಿಗಳು ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಹುಬ್ಬೇರಿಸಿದ್ದಾರೆ. ಈ ವೈರಲ್ ಫೋಟೊಶೂಟ್ ಬಗ್ಗೆ ಬಿಬಿಸಿ ಜತೆ ಮಾತನಾಡಿದ ರಾಜಿನಿ, ಇದು ಫೋಟೊಗ್ರಾಫರ್ ಆದಿರಾ ಜೋಯ್ ಅವರ ಯೋಜನೆ ಆಗಿತ್ತು ಎಂದಿದ್ದಾರೆ.

ರಾಜಿನಿ ಅಪ್ಪಟ ಭಾರತೀಯ ನಾರಿ. ಮದುವೆಯಾಗಿ ಕುಟುಂಬವನ್ನು ನಿರ್ವಹಿಸಿಕೊಂಡು 60 ವರ್ಷ ಆದರೆ ಅವರು ಅಜ್ಜಿಯಾಗಿ ಬಿಡುತ್ತಾರೆ. ನನ್ನ ಅಮ್ಮನಿಗೆ 65 ವರ್ಷ. ಅವರು ಎಲ್ಲ ಮಹಿಳೆಯರು 60 ವರ್ಷ ದಾಟಿದರೆ ಅನುಭವಿಸುವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ರಾಜಿನಿ ಇದಕ್ಕಿಂತ ಭಿನ್ನ. ಆಕೆ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್, ಫಿಟ್ ಆ್ಯಂಡ್ ಫ್ಯಾಷನೇಬಲ್. ಆಕೆಗೆ 69 ವಯಸ್ಸಾದರೂ 29 ವರ್ಷದವರಂತೆ ಇದ್ದಾರೆ ಅಂತಾರೆ ಆದಿರಾ.

ಕೇರಳದ ಸಾಂಪ್ರದಾಯಿಕ ಸಮಾಜದ ಕಟ್ಟುಪಾಡುಗಳನ್ನು ಮೀರಿ ನಿಂತವರು ರಾಜಿನಿ. ಬ್ಯಾಂಕ್ ಉದ್ಯೋಗಿಯಾಗಿದ್ದ ಗಂಡನ ಜತೆ 10 ವರ್ಷ ಮುಂಬೈನಲ್ಲಿದ್ದು 1995ರಲ್ಲಿ ಕೇರಳಕ್ಕೆ ಮರಳಿದ್ದರು. ತುಟಿಗೆ ಲಿಪ್ ಸ್ಟಿಕ್ ಹಚ್ಚಿ, ಜೀನ್ಸ್ ಧರಿಸಿ ಬಂದ ರಾಜಿನಿಯನ್ನು ಜನರು ಅಚ್ಚರಿಯಿಂದ ನೋಡಿದ್ದರು. ಸ್ಲೀವ್ ಲೆಸ್ ಬ್ಲೌಸ್ ಹಾಕಿದ್ದಕ್ಕೆ ನಿಂದಿಸಿದ್ದರು.

ಕಳೆದ ಕೆಲವು ವರ್ಷಗಳ ಹಿಂದೆ ಅಂದರೆ 2016ರಲ್ಲಿ ರಾಜಿನಿ ‘ಒರು ಮುತ್ತಶ್ಶಿ ಗಧಾ’ (ಅಜ್ಜಿಯ ಗದೆ) ಎಂಬ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆಗ ಆಕೆಯ ವಯಸ್ಸು 65. ಈ ಸಿನಿಮಾದ ನಂತರ ಮತ್ತೆರಡು ಸಿನಿಮಾದಲ್ಲಿ ಕಾಣಿಸಿಕೊಂಡ ರಾಜಿನಿ ಕಳೆದ ವರ್ಷ ಮಲಯಾಳಂ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು.

ಹಿರಿಯ ಜೀವಗಳೂ ಖುಷಿ ಪಡಲಿ
ವಯಸ್ಸಾದರೇನು? ಬದುಕು ಆಸ್ವಾದಿಸಬಹುದು ಅಂತಾರೆ ರಾಜಿನಿ. ಹೆಚ್ಚಿನ ದಂಪತಿ ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿಯೇ ಯೌವನವನ್ನು ಕಳೆದುಕೊಂಡು ಬಿಡುತ್ತಾರೆ. ತಮ್ಮ ಆಸೆ, ಆಗ್ರಹಗಳನ್ನು ಬದಿಗೊತ್ತಿ ಕುಟುಂಬ ನಿರ್ವಹಣೆಯಲ್ಲಿಯೇ ತಲ್ಲೀನರಾಗಿರುತ್ತಾರೆ. ಆಮೇಲೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗುವುದೇ ಇಲ್ಲ. ಅಷ್ಟೊತ್ತಿಗೆ ವಯಸ್ಸು ದಾಟಿರುತ್ತದೆ. ಸಮಾಜ ಏನು ಹೇಳುತ್ತದೆ? ಎಂಬ ಭಯ ಅವರಿಗೆ ಕಾಡಲು ಶುರುವಾಗುತ್ತದೆ. ನನ್ನ ಪ್ರಕಾರ ಇನ್ನೊಬ್ಬರಿಗೆ ನೋವಾಗದೆ ಹಾಗೆ ನೀವು ಏನೇ ಮಾಡಿದರೂ ಅದು ಸರಿ. ಆ ಫೋಟೊಶೂಟ್ ತಮಾಷೆಯಾಗಿಯೇ ಮಾಡಿದ್ದು.

ಡಿಸೆಂಬರ್ ತಿಂಗಳಲ್ಲಿ ನನ್ನ ಬಳಿ ಬಂದ ಆದಿರಾ, ಮಾಡರ್ನ್ ಉಡುಗೆ ತೊಟ್ಟು ಫೋಟೊಶೂಟ್​ನಲ್ಲಿ ಭಾಗಿಯಾಗಲು ಏನಾದರೂ ಅಭ್ಯಂತರವಿದೆಯೇ ಎಂದು ಕೇಳಿದ್ದರು. ನಾನು ನನ್ನ ಯೌವನದಲ್ಲಿಯೇ ಆ ರೀತಿಯ ಉಡುಗೆಗಳನ್ನು ಧರಿಸಿದ್ದೇನೆ. ಸ್ವಿಮ್ ಸೂಟ್ ಧರಿಸಿರುವ ಫೋಟೊ ಕೂಡಾ ಇದೆ. ನನಗೇನೂ ಅಭ್ಯಂತರವಿಲ್ಲ. ಆದರೆ ನನ್ನ ಗಂಡ ಒಪ್ಪಿಗೆ ನೀಡಬೇಕು. ಹಾಗಾದರೆ ಮಾತ್ರ ಫೋಟೊಶೂಟ್​ನಲ್ಲಿ ಭಾಗಿಯಾಗುವೆ ಎಂದಿದ್ದೆ.

ಫೋಟೊಶೂಟ್ ಬಗ್ಗೆ ಆದಿರಾ ನನ್ನ ಪತಿ ಜತೆ ಮಾತನಾಡಿದಾಗ, ಅದು ಆಕೆಯ ಬದುಕು. ಆಕೆಗೆ ಏನು ಇಷ್ಟವೋ ಅದನ್ನು ಮಾಡಲಿ. ನನಗೇನೂ ಸಮಸ್ಯೆ ಇಲ್ಲ ಎಂದಿದ್ದರು. ನನಗಿರುವ ಉಡುಗೆಗಳನ್ನು ಆದಿರಾ ತೆಗೆದುಕೊಂಡು ಬಂದಾಗ ನಿಜವಾಗಿಯೂ ನಾನು ದಂಗಾದೆ. ಸುಮಾರು ವರ್ಷಗಳಿಂದ ನಾನು ಈ ರೀತಿ ಸೆಕ್ಸಿಯಾಗಿ ಕಾಣಿಸಿಕೊಳ್ಳಲಿಲ್ಲ. ಆ ಉಡುಗೆಗಳನ್ನು ಧರಿಸಿದಾಗ ನನಗೇನೂ ಮುಜುಗರ ಆಗಿಲ್ಲ.

ಕೊಚ್ಚಿಯಲ್ಲಿ ನಮ್ಮ ಮನೆಯ ಪಕ್ಕವೇ ಶೂಟಿಂಗ್ ನಡೆದಿದ್ದು. ಸುಮಾರು 20 ಫೋಟೊಗಳನ್ನು ಆದಿರಾ ಕ್ಲಿಕ್ ಮಾಡಿದ್ದರು. ನಾನು ಆ ಫೋಟೊಗಳನ್ನು ಫೇಸ್‌ಬುಕ್, ಇನ್​ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದೆ. ಮಾಧ್ಯಮಗಳು ಆ ಫೋಟೊಗಳನ್ನು ಬಳಸಿಕೊಂಡವು. ಈ ಫೋಟೊ ನೋಡಿದ ಹಲವಾರು ಮಂದಿ ‘ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ’ ಎಂದು ಹೇಳಿದರು. ಇನ್ನು ಕೆಲವರು ಬೋಲ್ಡ್, ಹಾಟ್, ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿದರು. ಕೆಲವರು ನನ್ನ ಆತ್ಮವಿಶ್ವಾಸವನ್ನು ಮೆಚ್ಚಿದರು. ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಆಂಟಿ ಎಂದು ಕೆಲವರು ವಾಟ್ಸ್ಆ್ಯಪ್ ಸಂದೇಶವನ್ನೂ ಕಳಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ನನ್ನ ವಿರುದ್ಧ ಟೀಕಾ ಪ್ರಹಾರ ನಡೆಯಿತು.

ರಾಜಿನಿ ಚಾಂಡಿ

ಕೆಲವರು ನನ್ನನ್ನು ‘ನೀತಿಗೆಟ್ಟವಳು’ ಎಂದು ಜರಿದರು. ‘ನೀನು ಇನ್ನೂ ಸತ್ತಿಲ್ಲವಾ?’ ಎಂದು ಒಬ್ಬರು ಕೇಳಿದರು. ‘ಮನೆಯಲ್ಲಿ ಕುಳಿತು ಬೈಬಲ್ ಓದಿ’ ಎಂದು ಒಬ್ಬರು ಸಲಹೆ ನೀಡಿದರು. ‘ಇದು ಪ್ರಾರ್ಥನೆ ಮಾಡುವ ವಯಸ್ಸು, ದೇಹವನ್ನು ತೋರಿಸುವ ವಯಸ್ಸಲ್ಲ’ ಎಂದು ಒಬ್ಬರು ಹೇಳಿದರೆ, ‘ನೀವು ಹಳೇ ಆಟೊಗೆ ಪೇಂಟ್ ಬಳಿದಂತೆ. ಏನೇ ಪೇಂಟ್ ಬಳಿದರೂ ಆಟೋ ಹಳೆಯದ್ದೇ’ ಎಂದು ಲೇವಡಿ ಮಾಡಿದರು.

ನಾನು ಜೀನ್ಸ್ ಧರಿಸಿ ಕಾಲಗಲಿಸಿ ಕುಳಿತುಕೊಂಡ ಫೋಟೊ ಮತ್ತು ಚಿಕ್ಕ ಡೆನಿಮ್ ಧರಿಸಿರುವ ಫೋಟೊಗಳಿಗೆ ಹೆಚ್ಚಿನವರು ಆಕ್ಷೇಪ ವ್ಯಕ್ತಪಡಿಸಿದ್ದರು. ನನ್ನ ಕಾಲು ಕಾಣುತ್ತದೆ ಎಂಬುದು ಅವರಿಗೆ ಆಕ್ಷೇಪ. ಆದರೆ ನನ್ನ ಕಾಲು ಚೆನ್ನಾಗಿದೆ, ನನಗೇನೂ ಅನಿಸುತ್ತಿಲ್ಲ ಎಂದು ರಾಜಿನಿ ನಗುತ್ತಾರೆ.

ನನ್ನ ಫೋಟೊ ಬಗ್ಗೆ ಟೀಕೆ, ನೆಗೆಟಿವ್ ಕಾಮೆಂಟ್, ಟ್ರೋಲ್ ಮುಂದುವರಿದಿದೆ. ಇದರಲ್ಲಿ ಹೆಚ್ಚಿನ ಟೀಕೆ ಮಾಡಿದ್ದು ಹೆಂಗಸರೇ. ಹಲವಾರು ಯುವಕರಿಗೆ ಹಿರಿಯ ಮಹಿಳೆಯೊಬ್ಬರು ಸೆಕ್ಸಿಯಾಗಿ ಕಾಣಿಸುವುದು ಇಷ್ಟವಾಗುವುದಿಲ್ಲ. ಆಕೆಯನ್ನು ಒಂದು ಭೋಗದ ವಸ್ತುವಾಗಿ ತೋರಿಸುವುದು ಒಪ್ಪುವುದಿಲ್ಲ. ಅಚ್ಚರಿಯಾಗಿದ್ದು ಮಹಿಳೆಯರು ನನ್ನ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡಿದಾಗ. ಇದೆಲ್ಲ ಅಸೂಯೆಯಿಂದ ಬಂದವುಗಳು. 40-50ರ ಹರೆಯದ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಅವರಿಗಿಂತ ಹೆಚ್ಚು ವಯಸ್ಸಿನ ಮಹಿಳೆ ಸುಂದರವಾಗಿ ಕಾಣಿಸಿದರೆ ಅಸೂಯೆ ಹುಟ್ಟಿಕೊಳ್ಳುತ್ತದೆ ಎಂಬುದು ರಾಜಿನಿ ಮಾತು.

ಆರ್ಟಿಕಲ್ 14 ಎಂಬ ನ್ಯೂಸ್​ ವೆಬ್​ಸೈಟ್​ನ ಜೆಂಡರ್ ಎಡಿಟರ್ ನಮಿತಾ ಭಂಡಾರೆ ಅವರ ಪ್ರಕಾರ, ಅಸೂಯೆ ಇದಕ್ಕೆಲ್ಲ ಕಾರಣ ಆಗಿರಬಹುದು. ಆದರೆ ಎಲ್ಲ ಮಹಿಳೆಯರು ಸ್ತ್ರೀವಾದಿಗಳು ಅಲ್ಲ ಎಂಬುದನ್ನು ಮರೆಯಬಾರದು. ನಮ್ಮ ಅಮ್ಮ, ನಮ್ಮ ಅಜ್ಜಿ ಎಲ್ಲರೂ ಪಿತೃಪ್ರಭುತ್ವವನ್ನು ಒಪ್ಪಿಕೊಂಡೇ ಬಂದವರು. ಇತರ ದೇಶಗಳಲ್ಲಿ ಮಹಿಳೆಯರಿಗೆ ವಯಸ್ಸಾದ ನಂತರ ಅವರನ್ನು ಸಮಾಜ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವರು ಮಹಿಳಾ ವಿರೋಧಿ ಮತ್ತು ವಯಸ್ಸಿನ ಬಗೆಗಿನ ಟೀಕೆಗಳಿಗೆ ಗುರಿಯಾಗುತ್ತಾರೆ. ಭಾರತದಲ್ಲಿ ಇಂಥ ಪ್ರಸಂಗಗಳು ಕಡಿಮೆ.

ಭಾರತದಲ್ಲಿ ಹಿರಿಯ ಮಹಿಳೆಯರು ಈ ರೀತಿ ಟೀಕೆಗಳನ್ನು ಪಾಸಿಟಿವ್ ರೀತಿಯಲ್ಲಿ ಸ್ವೀಕರಿಸಿ ಹಲವರ ಬಾಯ್ಮುಚಿಸಿದ್ದಾರೆ. ಇಲ್ಲಿ ತಾರತಮ್ಯಗಳು ಇಲ್ಲವೆಂದಲ್ಲ. ವಿಧವೆಯಾದರೆ ಬಿಳಿ ಬಟ್ಟೆ ತೊಡಬೇಕು ಎಂಬುದು ಇಂಥದ್ದೊಂದು ವಿಚಾರ. ಈ ಮೂಲಕ ಅವರನ್ನು ಭೋಗದ ವಸ್ತುವನ್ನಾಗಿ ನೋಡದಂತೆ ಮಾಡುತ್ತಾರೆ. ಈಗ ಒಬ್ಬ ಅಜ್ಜಿ ಆಕೆಯ ಕಾಲು ಅಥವಾ ಎದೆಭಾಗ ತೋರಿಸಿ ಬೋಲ್ಡ್ ಆಗಿ ನಿಂತಿದ್ದಾರೆ ಎಂದರೆ ಅವರು ಈ ಕಟ್ಟುಪಾಡುಗಳನ್ನು ಮೀರಿ ನಿಂತಿದ್ದಾರೆ ಎಂದರ್ಥ. ಸಮಾಜ ಹಾಕಿರುವ ಕಟ್ಟುಪಾಡುಗಳಿಗೆ ಮಹಿಳೆಯೊಬ್ಬರು ಪ್ರತಿರೋಧ ತೋರಿರುವ ಪ್ರಯತ್ನವೂ ಹೌದು.

ಈ ಫೋಟೊಗಳು ವೈರಲ್ ಆಗಬಹುದು ಅಥವಾ ಟ್ರೋಲ್ ಆಗಬಹುದು ಎಂದು ನಾನು ಊಹಿಸಿರಲಿಲ್ಲ. ನಾನು ನೇರಾನೇರ ಮಾತನಾಡುತ್ತೇನೆ ಹಾಗಾಗಿ ತುಂಬಾ ಜನರಿಗೆ ಅದು ಇಷ್ಟವಾಗುವುದಿಲ್ಲ. ನೀವು ನನ್ನ ಬಗ್ಗೆ ತಲೆಕೆಡಿಸಿಕೊಂಡು ಯಾಕೆ ನಿಮ್ಮ ಶಕ್ತಿಯನ್ನು ವ್ಯಯಿಸುತ್ತಿದ್ದೀರೀ? ನಿಮ್ಮ ಶಕ್ತಿಯನ್ನು ದೇಶಕ್ಕಾಗಿ, ಜಗತ್ತಿಗಾಗಿ ಅಥವಾ ಭೂಮಿತಾಯಿಗಾಗಿ ಯಾಕೆ ಬಳಸಬಾರದು? ಎಂದು ರಾಜಿನಿ ಪ್ರಶ್ನಿಸುತ್ತಾರೆ.

ಒಳ್ಳೇ ಸುದ್ದಿ | ಕಣ್ಣಿಲ್ಲದವರಿಗೂ ಸುಲಭವಾಗಿ ಮೊಬೈಲ್​ ಬಳಕೆ ಸಾಧ್ಯವಾಗಿಸಿದ ಸಾಧಕ ಈ ಎಂಜಿನಿಯರ್