International Red Panda Day 2022: ಅಳಿವಿನಂಚಿನಲ್ಲಿರುವ ಕೆಂಪು ಪಾಂಡಾ ಪ್ರಭೇದ ಬಗ್ಗೆ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು
ಇಡೀ ಪ್ರಪಂಚದಲ್ಲಿ 2,500 ಪಾಂಡಾಗಳು ಉಳಿದಿರಬಹುದು ಎಂದು ಹೇಳಲಾಗುತ್ತದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ನಿಜಕ್ಕೂ ಶಾಕ್ ಆಗುತ್ತದೆ.
ಕೆಂಪು ಪಾಂಡಾಗಳು (International Red Panda Day) ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದು. ಭಾರತ, ನೇಪಾಳ, ಭೂತಾನ್ ಮತ್ತು ಚೀನಾದಂತಹ ದೇಶಗಳಲ್ಲಿ ಕಾನೂನುಬದ್ಧವಾಗಿ ಇವುಗಳನ್ನು ರಕ್ಷಿಸಲಾಗುತ್ತಿದೆ. ಈ ಸುಂದರವಾದ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 18ರಂದು ಅಂತರರಾಷ್ಟ್ರೀಯ ಕೆಂಪು ಪಾಂಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸ್ತುತ ಕೆಂಪು ಪಾಂಡಾಗಳ ಲೆಕ್ಕಚಾರದಲ್ಲಿ ನಿಖರವಾದ ಸಂಖ್ಯೆ ಇಲ್ಲದಿದ್ದರೂ 10,000 ಕೆಂಪು ಪಾಂಡಾಗಳಿವೆ ಎಂದು ಅಂದಾಜಿಸಲಾಗಿದೆ. IUCN ಪ್ರಕಾರ ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದವಾಗಿದೆ.
ಅಂತರಾಷ್ಟ್ರೀಯ ರೆಡ್ ಪಾಂಡಾ ದಿನ: ಇತಿಹಾಸ
ಅಂತರಾಷ್ಟ್ರೀಯ ರೆಡ್ ಪಾಂಡಾ ದಿನವನ್ನು ಮೊದಲ ಬಾರಿಗೆ 2010ರಲ್ಲಿ ಆಚರಿಸಲಾಯಿತು. ಪ್ರಾಣಿ ಸಂರಕ್ಷಣಾ ಸಂಸ್ಥೆಯಾದ ರೆಡ್ ಪಾಂಡಾ ನೆಟ್‌ವರ್ಕ್‌ನಿಂದ ಅಂತರಾಷ್ಟ್ರೀಯ ರೆಡ್ ಪಾಂಡಾ ದಿನವನ್ನು ಪ್ರಾರಂಭಿಸಲಾಯಿತು. ಸ್ಥಳೀಯ ಸಮುದಾಯಗಳು, ಔಟ್‌ರೀಚ್ ಕಾರ್ಯಕ್ರಮಗಳು ಮತ್ತು ಸಂಶೋಧನೆಗಳ ಮೂಲಕ, ರೆಡ್ ಪಾಂಡಾ ನೆಟ್‌ವರ್ಕ್ ಸಾಧ್ಯವಾದಷ್ಟು ರೆಡ್ ಪಾಂಡಾ ಪ್ರಭೇದವನ್ನು ಸಂರಕ್ಷಿಸಲು ಕೆಲಸ ಮಾಡುತ್ತಿದೆ. ಸೆಪ್ಟೆಂಬರ್ 18, 2010 ಮೊದಲ ಬಾರಿಗೆ ಅಂತರಾಷ್ಟ್ರೀಯ ರೆಡ್ ಪಾಂಡಾ ದಿನವನ್ನು ಆಚರಿಸಲಾಯಿತು.
ಅಂತಾರಾಷ್ಟ್ರೀಯ ರೆಡ್ ಪಾಂಡಾ ದಿನ: ಮಹತ್ವ
ದೈತ್ಯ ಪಾಂಡಾಗಳಿಗಿಂತ ಸುಮಾರು 50 ವರ್ಷಗಳ ಹಿಂದೆ ಕೆಂಪು ಪಾಂಡಾಗಳು ಕಂಡುಬಂದವು. ಕಳೆದ 20 ವರ್ಷಗಳಲ್ಲಿ, ಕೆಂಪು ಪಾಂಡಾಗಳ ಜಾಗತಿಕ ಜನಸಂಖ್ಯೆಯು ಸರಿಸುಮಾರು 50 ಪ್ರತಿಶತದಷ್ಟು ಕಡಿಮೆಯಾಗಿದೆ. ಕೆಲವು ವರದಿಗಳ ಪ್ರಕಾರ, ಇಡೀ ಪ್ರಪಂಚದಲ್ಲಿ 2,500 ಪಾಂಡಾಗಳು ಉಳಿದಿರಬಹುದು ಎಂದು ಹೇಳಲಾಗುತ್ತದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ನಿಜಕ್ಕೂ ಶಾಕ್ ಆಗುತ್ತದೆ. ಮತ್ತು ಇವುಗಳ ಪ್ರಭೇದಗಳ ಸಂರಕ್ಷಣೆಯ ಅಗತ್ಯತೆಯನ್ನು ಎತ್ತಿ ಹೇಳುತ್ತಿದೆ. ಅಂತರಾಷ್ಟ್ರೀಯ ರೆಡ್ ಪಾಂಡಾ ದಿನವು ಈ ಪ್ರಾಣಿಗಳ ಕುಂಠಿತ ಜನಸಂಖ್ಯೆ ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಿಸುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಅರಣ್ಯನಾಶ, ವಿಘಟನೆ ಮತ್ತು ಅವನತಿ, ಅವುಗಳ ಜನಸಂಖ್ಯೆಯ ಇಳಿಮುಖಕ್ಕೆ ಕೆಲವು ಕೊಡುಗೆಗಳಾಗಿವೆ.
ಕೆಂಪು ಪಾಂಡಾಗಳು ಪೂರ್ವ ಹಿಮಾಲಯದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಈ ಸಸ್ತನಿಗಳು ಬಹುಕಾಲ ಮರದ ಮೇಲೇಯೇ ಜೀವಿಸುತ್ತವೆ. ರಾತ್ರಿಯಲ್ಲಿ ಆಹಾರ ಭಕ್ಷಿಸುವ ಕೆಂಪು ಪಾಂಡಾಗಳು ಮುಸ್ಸಂಜೆಯ ಹಾಗೂ ಬೆಳಗಿನ ಸಮಯದಲ್ಲಿ ಅಹಾರ ಸೇವಿಸುತ್ತವೆ. ಬೆಕ್ಕಿನ ಗಾತ್ರದಲ್ಲಿರುವ ಕೆಂಪು ಪಾಂಡಾಗಳು ನೋಡಲು ಬಲು ಸುಂದರವಾಗಿದ್ದು, ಉದ್ದವಾದ ಕುರುಚಲು ಬಾಲವನ್ನು ಹೊಂದಿದೆ. ಕೆಂಪು ಪಾಂಡಾಗಳು ಮನೆಯ ಬೆಕ್ಕಿನ ಗಾತ್ರದಲ್ಲಿ ಕಂಡುಬರುತ್ತವೆ.
ಕೆಂಪು ಪಾಂಡಾದ ಕೆಲ ಸಂಗತಿಗಳು:
- ಕೆಂಪು ಪಾಂಡಾಗಳು ಹೆಚ್ಚಾಗಿ ಸಸ್ಯಹಾರಿಗಳಾಗಿದ್ದು, ಅಪರೂಪಕ್ಕೊಮ್ಮೆ ಮಾಂಸವನ್ನು ತಿನ್ನುತ್ತವೆ.
- ಬಿದಿರು ಅದರ ನೆಚ್ಚಿನ ಆಹಾರವಾಗಿದೆ. 98 ಪ್ರತಿಶತದಷ್ಟು ಕೆಂಪು ಪಾಂಡಾಗಳು ಬಿದಿರಿನ ಮೇಲೆ ವಾಸಿಸುತ್ತವೆ.
- ಸಾಮಾನ್ಯವಾಗಿ ಇತರೆ ಪಾಂಡಾಗಳು ಸೋಮಾರಿಗಳಾಗಿದ್ದು, ಆದರೆ ಕೆಂಪು ಪಾಂಡಾಗಳು ಚುರುಕುತನವನ್ನು ಹೊಂದಿರುತ್ತವೆ. ಮರಗಳನ್ನು ಹತ್ತಲು ಬಹಳ ನುರಿತವಾಗಿವೆ.
- ಪಾಂಡಾಗಳು ಏಕಾಂಗಿ ಜೀವಿಗಳಾಗಿದ್ದು, ಏಕಾಂಗಿತನವನ್ನು ಹೆಚ್ಚು ಇಷ್ಟಪಡುತ್ತವೆ. ಸಾಮಾಜಿಕವಾಗಿ ಅವು ಬೆರೆಯುವುದು ಕಡಿಮೆ ಹಾಗೂ ಮಿಲನದ ಸಮಯದಲ್ಲಿ ಮಾತ್ರವೇ ಆಂಗಿಕ ಅಭಿನಯಗಳ ಮೂಲಕ ಸಂವಹನ ನಡೆಸುತ್ತವೆ.
- ಕೆಂಪು ಪಾಂಡಾಗಳಿಗೆ ಹಿಮ ಎಂದರೆ ಅಚ್ಚುಮೆಚ್ಚು.
- ಕೆಂಪು ಪಾಂಡಾಗಳ ಜೀವಿತಾವಧಿ 23 ವರ್ಷಗಳು. ಇನ್ನೊಂದು ಪ್ರಮುಖ ವಿಷಯವೆಂದರೆ 12 ವರ್ಷಗಳ ನಂತರ ಹೆಣ್ಣು ಕೆಂಪು ಪಾಂಡಾಗಳು ಸಂತಾನೋತ್ಪತ್ತಿಯನ್ನು ಮಾಡುವುದಿಲ್ಲ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.