ಮಹಿಳಾ ದಿನಾಚರಣೆ 2021: ನಿನಗೆ ಬೇರೆ ಹೆಸರು ಬೇಕೆ?… ಸ್ತ್ರೀ ಎಂದರೆ ಅಷ್ಟೇ ಸಾಕೇ?

| Updated By: Lakshmi Hegde

Updated on: Mar 08, 2021 | 4:06 PM

ಸ್ತ್ರೀ ಎಂದರೆ ಅಷ್ಟೇ ಸಾಕೆ? ನಿನಗೆ ಬೇರೆ ಹೆಸರು ಬೇಕೇ? ಅನ್ನುತ್ತಾ ಸ್ತ್ರೀಯ ಮಹತ್ವವನ್ನು, ಅವಳ ಗೌರವವನ್ನು ಜೊತೆಗೆ ಅವಳ ಸಾಧನೆಯನ್ನು ಲಕ್ಷ್ಮೀಶ. ಜೆ.ಹೆಗಡೆ ಬರಹದ ರೂಪದಲ್ಲಿ ಇಳಿಬಿಟ್ಟಿದ್ದಾರೆ.

ಮಹಿಳಾ ದಿನಾಚರಣೆ 2021:  ನಿನಗೆ ಬೇರೆ ಹೆಸರು ಬೇಕೆ?... ಸ್ತ್ರೀ ಎಂದರೆ ಅಷ್ಟೇ ಸಾಕೇ?
ಪ್ರಾತಿನಿಧಿಕ ಚಿತ್ರ
Follow us on

ಮೊನ್ನೆ ಒಬ್ಬರು ಟ್ವಿಟರ್​​ನಲ್ಲಿ ಬರೆದಿದ್ದರು. ಹೆಣ್ಣು ಮಕ್ಕಳು ನೋವನ್ನು, ಆಘಾತವನ್ನು ತುಂಬಾ ಸಹಿಸುತ್ತಾರೆ. ಹೆಚ್ಚು ಭಾವ ಜೀವಿಗಳಾದರೂ ಸಹನೆಯ ವಿಚಾರ ಬಂದಾಗ ಹೆಣ್ಣು ಗೆಲ್ಲುತ್ತಾಳೆ. ಅದೇ ಬಹುತೇಕ ಗಂಡಸರಿಗಾದರೆ ಸಣ್ಣ ಜ್ವರ ಬಂದರೂ, ಚಿಕ್ಕದಾದ ಪೆಟ್ಟು ಬಿದ್ದರೂ ಪ್ರಾಣವೇ ಹೋದಂತೆ ವರ್ತಿಸಿ ಗದ್ದಲ, ರಂಪಾಟ ಮಾಡುತ್ತಾರೆ. ಮೇಲ್ನೋಟಕ್ಕೆ ಗಂಡನ್ನು ವ್ಯಂಗ್ಯ ಮಾಡುವ ವಾಕ್ಯಗಳಂತೆ ಕಂಡರೂ ಅದರ ಹಿಂದಿನ ಅರ್ಥವನ್ನು ತಿಳಿಯುತ್ತ ಹೊರಟರೆ ಅಲ್ಲಿ ಹೆಣ್ಣಿನ ಧಾರಣಾ ಶಕ್ತಿಯ ಬಗ್ಗೆ ಹೇಳಿದ್ದಾರೆ ಎಂಬುದು ಅರ್ಥವಾಗುತ್ತದೆ.

ಧರಿಸುವ ಶಕ್ತಿ, ತಾಳಿಕೊಳ್ಳುವ ಸಾಮರ್ಥ್ಯ ಹೆಣ್ಣಿನಷ್ಟು ಗಂಡಿಗಿಲ್ಲ. ಆ ಕಾರಣಕ್ಕೇ ಭೂಮಿಯನ್ನು ವಸುಂಧರೆ ಎಂಬ ಸ್ತ್ರೀರೂಪದಿಂದ ಕಂಡಿದ್ದೇವೆ. ಜನ್ಮ ನೀಡಿ, ಸಾಕಿ ಸಲಹಿ, ಬೆಳೆದು ದೊಡ್ಡವರನ್ನಾಗಿ ಮಾಡುವ ಸಾಮರ್ಥ್ಯ, ಮುಂದೆ ಆ ಹೊಸ ತಲೆಮಾರಿಗೆ ದುರ್ಬುದ್ಧಿ ಬಂದ ಕಾಲಕ್ಕೆ ಬದುಕಿಗೆ ಆಧಾರವಾಗಿರುವ ಭೂಮಿಯನ್ನೇ ದಮನಿಸಲು ಹೊರಟರೂ ವಸುಂಧರೆ ಸುಮ್ಮನೆ ತಾಳಿಕೊಳ್ಳುತ್ತಾಳೆ. ಬರಡು ಮಣ್ಣಿನಲ್ಲಿ ಬಿದ್ದ ಬೀಜವೂ ಮೊಳಕೆಯೊಡೆದು ಫಲ ನೀಡುವ ಬೃಹತ್ ವೃಕ್ಷವಾಗಿ ಬೆಳೆಯುವಂತೆ ಮಾಡುವ ಸಾಮರ್ಥ್ಯವಿರುವುದು ಸ್ತ್ರೀರೂಪಿಯಾದ ಇಳೆಗೆ ಮಾತ್ರ. ಮುಂದೆ ಆ ವೃಕ್ಷದ ಬೇರುಗಳು ಎಲ್ಲೆಲ್ಲೋ ಹಬ್ಬಿ ಬೇರೆ ಮರಗಿಡಗಳ ಬೆಳವಣಿಗೆಗೆ ತೊಂದರೆಯೊಡ್ಡಿದರೂ ಸಹಿಸಿಕೊಂಡು ನಗುತ್ತಲೇ ಇರುತ್ತಾಳೆ ಪೃಥ್ವಿ.

ಮನೆಮಂದಿ ಅಥವಾ ಮಕ್ಕಳು ಕಾಯಿಲೆ ಬಿದ್ದಾಗ ಉಪಚರಿಸಲಿಕ್ಕೆ ಅಮ್ಮನೇ ಆಗಬೇಕು. ಇಲ್ಲದಿದ್ದರೆ ಅಕ್ಕ-ತಂಗಿಯರಾದರೂ ಆದೀತು. ಒಟ್ಟಿನಲ್ಲಿ ವ್ಯಾಧಿಯುಂಟಾದಾಗ ಆರೈಕೆಗೆ ಒಂದು ಸ್ತ್ರೀ ಜೀವವೇ ಬೇಕು ಅನೇಕರಿಗೆ. ಅಪ್ಪನೋ, ಅಣ್ಣ-ತಮ್ಮಂದಿರೋ ನೋಡಿಕೊಳ್ಳಲಿಕ್ಕೆ ಬಂದರೆ ಏನೋ ಒಂದು ಕೊರತೆಯಾದಂತೆ ಅನ್ನಿಸುತ್ತದೆ. ಆ ಸಂದರ್ಭದಲ್ಲಿ ಮನೆಯವಳು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಗಂಡನೂ, ಅಮ್ಮ ಇದ್ದಿದ್ರೆ ನನ್ನ ಪಕ್ಕದಲ್ಲೇ ಇರ್ತಿದ್ಲು ಅಂತ ಮಕ್ಕಳೂ ಹೇಳುತ್ತಾರೆ. ತನ್ನ ಮನೆಯಲ್ಲಿರುವವರು ಖಾಯಿಲೆ ಬಿದ್ದರೂ ತಾನೇ ಉಪಚರಿಸಬೇಕು. ತಾನು ರೋಗಿಯಾಗಿದ್ದರೂ ತನ್ನ ಆರೈಕೆಯನ್ನು ತಾನೇ ಮಾಡಿಕೊಳ್ಳಬೇಕಾದದ್ದು ಬಹುತೇಕ ಭಾರತೀಯ ಹೆಣ್ಣು ಮಕ್ಕಳ ಸ್ಥಿತಿ. ಮನೆಯ ಎಲ್ಲ ಸದಸ್ಯರೂ ಜ್ವರ ಬಂದು ಮಲಗಿರುವಾಗ ತನ್ನ ಮೈ ಸುಡುತ್ತಿದ್ದರೂ ನೆಲಕಚ್ಚಿ ಕಂಬಳಿ ಹೊದ್ದು ಮಲಗದೆ ಗೃಹ ಕೃತ್ಯಗಳನ್ನು ನಡೆಸಿ ಮನೆಯವರ ಆರೈಕೆ ಮಾಡುವ ಸಾಮರ್ಥ್ಯವಿರುವುದು ಹೆಣ್ಣಿಗೆ ಮಾತ್ರ.

ಹೆಣ್ಣಿನ ಧಾರಣಾಶಕ್ತಿ ಗಂಡಿಗಿಂತ ಹೆಚ್ಚು
ಪಿಯುಸಿಯಲ್ಲಿ ಕಿಡ್ನಿಯ ಬಗ್ಗೆ ಪಾಠ ಮಾಡುತ್ತ ಅಧ್ಯಾಪಕರು ಹೇಳಿದ್ದರು ‘Pain caused by renal stone is MOTHER OF ALL PAIN’ ಅಂತ. ಮುಂದೆ ನಾನು ಎಂಬಿಬಿಎಸ್ ಓದುವ ಕಾಲಕ್ಕೆ ಇದು ಶುದ್ಧ ಸುಳ್ಳು ಅನ್ನಿಸಿಬಿಟ್ಟಿತು. ಹೆರಿಗೆ ರೂಮಿನಲ್ಲಿ ಸ್ತ್ರೀಯರು ನೋವಿನಿಂದ ಜೋರು ಕಿರುಚಾಡುತ್ತ ಒದ್ದಾಡುವುದನ್ನು ನೋಡಿದಾಗ ಇದರ ಮುಂದೆ ಮೂತ್ರಪಿಂಡದ ನೋವು ಯಾವ ಮಹಾ ಅಂದುಕೊಂಡೆ. ಹೆರಿಗೆ ಸಮಯದಲ್ಲಿ ಹೆಂಗಸರ ಮುಖದ ಭಾವನೆಗಳೇ ಹೇಳುತ್ತವೆ. ಆ ನೋವು ಎಷ್ಟು ಯಾತನಾಮಯವಾದದ್ದು ಎಂದು. ಇಂಥ ನೋವನ್ನು ಕಡಿಮೆ ಮಾಡುವ Labor Analgesiaದಂಥ ಹೆರಿಗೆ ನೋವು ನಿವಾರಕ ಚಿಕಿತ್ಸೆಗಳು ಲಭ್ಯವಿದ್ದರೂ ಕೆಲವು ಸ್ತ್ರೀಯರು ಯಾವ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳಲೂ ಒಪ್ಪುವುದಿಲ್ಲ. ಇಂಥಹ ಅಸಾಧ್ಯವಾದ ನೋವನ್ನು ಸಹಿಸಿ ಮಗುವಿಗೆ ಜನ್ಮ ನೀಡಿದಾಗಲೇ ತಮ್ಮ ತಾಯ್ತನ ಸಾರ್ಥಕವಾಗುತ್ತದೆ ಎಂದು ಭಾವಿಸುವ ಸ್ತ್ರೀಯರಿದ್ದಾರೆ. ಇಂಥ ನೋವನ್ನು ತಡೆದುಕೊಳ್ಳುವುದು ಬಹುಷಃ ಪುರುಷನಿಗೆ ಸಾಧ್ಯವಿಲ್ಲ. ಅದಕ್ಕೇ ಹೇಳಿದ್ದು ಹೆಣ್ಣಿನ ಧಾರಣಾಶಕ್ತಿ ಗಂಡಿಗಿಂತ ಹೆಚ್ಚು.

ಜನ್ಮ ನೀಡುವುದು ಅಂದರೆ ಹೊಸತನ್ನು ಸೃಷ್ಟಿಸುವುದು ಜಗತ್ತಿನ ಅತ್ಯಂತ ಪ್ರಬಲ ಶಕ್ತಿಗಳಲ್ಲಿ ಒಂದು. ಅದರ ಮುಂದೆ ಬೇರೆ ಯಾವ ಶಕ್ತಿಯೂ ನಿಲ್ಲದು. ಜಗತ್ತನ್ನು ರಕ್ಷಿಸುವ ಸಾಮರ್ಥ್ಯವಿದೆ ಆ ಶಕ್ತಿಗೆ. ರಕ್ಕಸರ ಊರಾದ ಶೋಣಿತಾಪುರವನ್ನು ಆಳಿದ ದಾನವ ಶ್ರೇಷ್ಠರಲ್ಲಿ ಮಹಿಷಾಸುರ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾನೆ. ಜನನ ಮಾರ್ಗದಿಂದ ಹೊರಬಂದ ಯಾವ ಜೀವಿಯಿಂದಲೂ ತನಗೆ ಮರಣ ಬರಬಾರದು ಎಂದು ಬ್ರಹ್ಮನಿಂದ ವರ ಪಡೆದು ಧಾರ್ಮಿಕರನ್ನು, ಸುರಪಕ್ಷಪಾತಿಗಳನ್ನೆಲ್ಲ ಕೊಲ್ಲುತ್ತ ಜಗತ್ತನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ಮೆರೆಯುತ್ತಾನೆ. ತ್ರಿಮೂರ್ತಿಗಳಿಂದಲೂ ಮಹಿಷನ ಹನನ ಅಸಾಧ್ಯವಾದಾಗ ದೇವತೆಗಳ, ತ್ರಿಮೂರ್ತಿಗಳ ಅಂತಃಸತ್ವದಿಂದ ಸ್ತ್ರೀರೂಪವೊಂದು ಆವಿರ್ಭವಿಸುತ್ತದೆ. ತಂದೆ ತಾಯಿಗಳಿಲ್ಲದೆ ಅಯೋನಿಜೆಯಾಗಿ ಬಂದ ದೇವಿ ಒಂಬತ್ತು ದಿನ ಮಹಿಷನೊಂದಿಗೆ ಹೋರಾಡಿ ಅವನನ್ನು ಕೊಲ್ಲುತ್ತಾಳೆ. ಅವತ್ತು ಆ ದಾನವನ ಸದೆಬಡಿಯಲು ದೇವತಾಶಕ್ತಿ ಸ್ತ್ರೀರೂಪದಲ್ಲಿಯೇ ಬಂದದ್ದೇಕೆ? ಅಯೋನಿಜನಾಗಿ ಪುರುಷನೊಬ್ಬ ಬಂದು ಮಹಿಷನನ್ನು ಕೊಲ್ಲಬಹುದಿತ್ತು. ಆದರೆ ಜನ್ಮ ನೀಡುವ ಸಾಮರ್ಥ್ಯವಿರುವ ಜೀವಕ್ಕೆ ತನ್ನ ಮಕ್ಕಳನ್ನು ಹಿಂಸಿಸುತ್ತಿರುವ ಪ್ರಬಲವಾದ ದುಷ್ಟ ಶಕ್ತಿಯನ್ನು ವಿರೋಧಿಸಿ ದಮನ ಮಾಡುವ ಶಕ್ತಿಯೂ ಇದೆ. ಈ ಕಾರಣಕ್ಕೆ ಸ್ತ್ರೀಶಕ್ತಿ ಅತ್ಯಂತ ಶಕ್ತಿ ಶಾಲಿಯಾದದ್ದು.

ಮಹಿಳೆ ಎಲ್ಲ ದಿನವೂ ವಿಶೇಷಳೇ
ಇವತ್ತು ಅಂತಾರಾಷ್ಟ್ರೀಯ ಮಹಿಳಾದಿನ. ಮೂಲ ಪರಿಕಲ್ಪನೆ ಭಾರತದ್ದಲ್ಲವಾದರೂ ನಾವೂ ಕೂಡ ಸ್ತ್ರೀಯರ ದಿನಕ್ಕೆ ವಿಶೇಷ ಪ್ರಾಮುಖ್ಯತೆ ಕೊಡುತ್ತೇವೆ. ಮಹಿಳೆ ಎಲ್ಲ ದಿನವೂ ವಿಶೇಷಳೇ ತಾನೆ. ಅದಕ್ಕಾಗಿ ಪ್ರತ್ಯೇಕ ದಿನವೊಂದು ಬೇಕೆ? ಕೇವಲ ಒಂದು ದಿನ ಮಾತ್ರ ಸ್ತ್ರೀಯರ ದಿನವನ್ನು ಆಚರಿಸಿ ಉಳಿದಂತೆ ಅವರನ್ನು ಮರೆಯುವುದು ಯಾವ ರೀತಿಯಲ್ಲಿ ಸರಿ ಎಂಬೆಲ್ಲ ವಾದಗಳು ಪ್ರತಿಬಾರಿಯೂ ಕೇಳಿ ಬರುತ್ತವೆ. ಅದೇನೇ ಇರಲಿ, ಅಮ್ಮನಾಗಿ ಅಮೃತಮಯವಾದ ಸ್ತನ್ಯವನ್ನುಣ್ಣಿಸುವವಳಿಗೆ, ಅಕ್ಕ- ತಂಗಿಯಾಗಿ ವಾತ್ಸಲ್ಯ ತೋರುವವಳಿಗೆ, ಅರ್ಧಾಂಗಿನಿಯಾಗಿ ಬದುಕಿನ ಎಲ್ಲ ಕಷ್ಟ-ಸುಖಗಳಲ್ಲಿ ಜೊತೆಯಾಗುವ ಹೆಂಡತಿಗೆ, ಬದುಕಿನ ಆನಂದವನ್ನು ಹೆಚ್ಚಿಸುವ ಗೆಳತಿಯಾಗುವವಳಿಗೆ, ವಿದ್ಯೆ ನೀಡುವ ಶಿಕ್ಷಕಿಯಾಗುವವಳಿಗೆ, ಬೇರೆ ಬೇರೆ ರಂಗದಲ್ಲಿ ಮನುಕುಲದ ಒಳಿತಿಗಾಗಿ ಶಕ್ತಿ ಸ್ವರೂಪಿಣಿಯ ರೂಪದಲ್ಲಿರುವ ಎಲ್ಲ ಸ್ತ್ರೀಯರಿಗೂ ಒಂದು ವಿಶೇಷ ದಿನವನ್ನು ಮೀಸಲಿಟ್ಟು ಪ್ರೀತಿಯಿಂದ ಗೌರವಿಸಬೇಕಾದದ್ದು ಜಗತ್ತಿನ ಕರ್ತವ್ಯ. 365 ದಿನವೂ ಸ್ತ್ರೀಶಕ್ತಿಯನ್ನು ಗೌರವಿಸುತ್ತ ವರ್ಷದ ಒಂದು ದಿನವನ್ನು ಅವರಿಗಾಗಿ ವಿಶೇಷವಾಗಿಸಿದರೆ ತಪ್ಪೇನಿಲ್ಲವಲ್ಲ.

ಹೆಣ್ಣು ಸಕಲಕಲಾ ವಲ್ಲಭೆ
ಈ ಯುಗದಲ್ಲಿ ಹೆಣ್ಣು ಎಲ್ಲ ವಿಭಾಗಗಳಲ್ಲಿಯೂ ಗಂಡಿಗೆ ಸಮನಾಗಿ ನಿಂತಿದ್ದಾಳೆ. ವಿಜ್ಞಾನಿಯಾಗಿ ಅಂತರಿಕ್ಷಕ್ಕೆ ಹಾರುತ್ತಾಳೆ. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಇರುವ ವಿಮಾನವನ್ನು ಸಾವಿರಾರು ಕಿಲೋಮೀಟರ್ ದೂರದ ದೇಶಗಳಿಗೆ ಆಗಸದೆತ್ತರದಲ್ಲಿ ಹಾರಿಸುತ್ತಾಳೆ. ಸಬ್ ಮರೀನ್ನಲ್ಲಿ ಕುಳಿತು ಸಮುದ್ರದಾಳದಲ್ಲಿ ದೇಶ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುತ್ತಾಳೆ. ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿಯೂ ಆಗುತ್ತಾಳೆ. ಒಂದು ಕಾಲದಲ್ಲಿ ಪುರುಷ ವೈದ್ಯರಿಗಷ್ಟೇ ಮೀಸಲಾಗಿದ್ದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆಯಾಗುವಷ್ಟು ಜ್ಞಾನ ಮತ್ತು ಕೌಶಲವನ್ನು ಬೆಳೆಸಿಕೊಂಡಿದ್ದಾಳೆ. ಗಂಡು ಕಲೆಯಾದ ಯಕ್ಷಗಾನದಲ್ಲಿ ಭಾಗವತಿಕೆ ಮಾಡುತ್ತಾಳೆ. ಪುಂಡುವೇಷಧಾರಿಯಾಗಿ ಪುರುಷ ಕಲಾವಿದನಿಗೂ ಕಮ್ಮಿಯಿಲ್ಲದಂತೆ ಧಿಗಿಣ ಹಾಕುತ್ತಾಳೆ. ಜೀವದ ಹಂಗು ತೊರೆದು RAW ಸೇರಿಕೊಂಡು ದೇಶರಕ್ಷಣೆಗಾಗಿ ಬೇಹುಗಾರಿಕೆ ಮಾಡುತ್ತಾಳೆ. ಈ ಎಲ್ಲದರ ನಡುವೆ ಮನೆಯ ಕೆಲಸಗಳನ್ನೂ ನಿರ್ವಹಿಸುತ್ತ ಅಮ್ಮನಾಗುತ್ತಾಳೆ. ಹೆಂಡತಿಯಾಗುತ್ತಾಳೆ. ಅಕ್ಕ ತಂಗಿಯಾಗುತ್ತಾಳೆ. ಮಗಳಾಗುತ್ತಾಳೆ.

ಮಹಿಳಾ ದಿನದ ಸಂದರ್ಭದಲ್ಲಿ ಸ್ತ್ರೀಚಿಂತನೆಗಳು, ಫೆಮಿನಿಸಮ್ ಮಾತುಗಳು ತುಸು ಹೆಚ್ಚಾಗಿಯೇ ಕೇಳಿ ಬರುತ್ತವೆ. ಲಾಗಾಯ್ತಿನಿಂದಲೂ ಪುರುಷ ಪ್ರಧಾನ ಸಮಾಜ ಸ್ತ್ರೀಯನ್ನು ಶೋಷಿಸುತ್ತಾ ಬಂದಿದೆ. ಇದರ ವಿರುದ್ಧ ನಾವು ಸಿಡಿದೇಳಬೇಕು. ಪುರುಷರನ್ನೂ ಮೀರಿ ಬೆಳೆಯಬೇಕು ಎಂದೆಲ್ಲ ಸ್ತ್ರೀಪರ ಮನಸ್ಸುಗಳು ಘರ್ಜಿಸುತ್ತವೆ. ಅವರ ಎಲ್ಲ ಮಾತುಗಳಿಗೂ ಕಿವಿಯಾಗುತ್ತ. ಅವರ ಬೌದ್ಧಿಕ ಸ್ವಾತಂತ್ರ್ಯಯನ್ನು ಗೌರವಿಸುತ್ತ ಒಂದು ಸೂಕ್ಷ್ಮ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸ್ತ್ರೀಸಂವೇದನೆ, ಫೆಮಿನಿಸಮ್ ಎನ್ನುವುದು ಆಧುನಿಕ ಸುಶಿಕ್ಷಿತ ವರ್ಗಕ್ಕಷ್ಟೇ ಸೀಮಿತವಾಗಿಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಉಳ್ಳಾಲದ ರಾಣಿ ಅಬ್ಬಕ್ಕ, ವಚನ ಚಳುವಳಿಯ ಮೂಲಕ ಅಂದಿನ ಕಾಲದಲ್ಲಿ ಸ್ತ್ರೀಯರ ಧ್ವನಿಯಾಗಿದ್ದ ಅಕ್ಕಮಹಾದೇವಿ, ಮರಗಳನ್ನು ಮಕ್ಕಳಂತೆ ಬೆಳಿಸಿದ ಸಾಲು ಮರದ ತಿಮ್ಮಕ್ಕ, ಮಕ್ಕಳಾಗುವುದಕ್ಕೂ ಮೊದಲು ಎಳೆಯ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡು ತಲೆ ಬೋಳಿಸಿಕೊಂಡು ಮಡಿಯಾಗಿದ್ದರೂ ಯಾರ ಹಂಗಿಗೂ ಒಳಗಾಗದೆ ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುತ್ತಿರುವ ನಮ್ಮ ಅಜ್ಜಿ, ಅಮ್ಮಮ್ಮಂದಿರು, ಕೃಷಿ ಕೆಲಸಕ್ಕೆ ಆಳು ಸಿಗುವುದಿಲ್ಲವೆಂದು ಸುಮ್ಮನೆ ಕೂರದೇ ಮನೆಗೆ ಆಧಾರವಾಗಿರುವ ಸಣ್ಣ ಗದ್ದೆಯಲ್ಲಿ ನೇಗಿಲು ಹಿಡಿದು ಉಳುಮೆ ಮಾಡುವ ರೈತ ಮಹಿಳೆ, ಆಧುನಿಕ ವೈದ್ಯಪದ್ಧತಿಯನ್ನು ಒಪ್ಪಿಕೊಂಡರೂ ಗರ್ಭಿಣಿ, ಬಾಣಂತಿಯರು ಇರುವ ಮನೆಗಳಿಗೆ ಮಧ್ಯರಾತ್ರಿಯಲ್ಲಿ ಕರೆದರೂ ಸಹಾಯಕ್ಕೆ ಹೋಗುವ ಸೂಲಗಿತ್ತಿಯರು, ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕಿನಲ್ಲಿ ರಾತ್ರಿಪಾಳಿಯಲ್ಲೂ ನಿರ್ಭಿಡೆಯಿಂದ ಕೆಲಸ ಮಾಡುವ ಹೆಣ್ಣು ಮಕ್ಕಳೆಲ್ಲ ಯಾವ ಆಧುನಿಕತೆಗೂ ಕಡಿಮೆಯಿಲ್ಲ. ಇಂಥ ಎಲ್ಲ ಸ್ತ್ರೀಸಂಕುಲವನ್ನು ಗೌರವಿಸುವ ಸಲುವಾಗಿ ಅವರಿಗಾಗಿ ಒಂದು ದಿನವನ್ನು ವಿಶೇಷವಾಗಿ ಮೀಸಲಿಡಬಾರದೇಕೆ?

ಮಹಿಳಾದಿನ, ಫೆಮಿನಿಸಮ್ ಅಂತ ಇಷ್ಟೆಲ್ಲ ಮಾತಾಡುವ ನಮ್ಮ ದೇಶದಲ್ಲಿ ಸ್ತ್ರೀ ಯಾವ ತೊಂದರೆಯೂ ಇಲ್ಲದೆ ಸುಖವಾಗಿದ್ದಾಳಾ ಎಂದು ಕೇಳಿದರೆ ನಾಚಿಕೆಯಿಂದ ತಲೆ ತಗ್ಗಿಸಲೇ ಬೇಕು. ಕೌಟುಂಬಿಕ ದೌರ್ಜನ್ಯವನ್ನು ಎದುರಿಸಿ ಸೋತು ಸಾಬರ್ಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಹೆಣ್ಣು ಮಗಳೊಬ್ಬಳು ಮಾಡಿದ್ದ ವಿಡೀಯೋ ಮೊನ್ನೆಯಷ್ಟೇ ಎಲ್ಲ ಕಡೆ ವೈರಲ್ ಆಗಿತ್ತು. ಮನೆಯಲ್ಲಿ ಟಾಯ್ಲೆಟ್ ಇಲ್ಲದೆ ರಾತ್ರಿಯಾಗುವವರೆಗೂ ಕಾದು ಬಯಲು ಶೌಚಕ್ಕೆ ಹೋಗುವ ಪರಿಸ್ಥಿತಿ, ಆ ಸಮಯದಲ್ಲಿ ಪುರುಷರಿಂದ ದೌರ್ಜನ್ಯಕ್ಕೊಳಗಾಗುವ ಹೆಣ್ಣು ಮಕ್ಕಳಿಗೇನೂ ಕಡಿಮೆಯಿಲ್ಲ ನಮ್ಮಲ್ಲಿ. ದೌರ್ಜನ್ಯ ಮಾಡಿದ ಗಂಡು ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದು ಏನೂ ಮಾಡಿಯೇ ಇಲ್ಲವೇನೋ ಎಂಬ ರೀತಿ ಬದುಕುತ್ತಾನೆ. ಆದರೆ ಅತ್ಯಾಚಾರಕ್ಕೊಳಗಾದ ಹೆಣ್ಣು ಜೀವನಪೂರ್ತಿ ಅಪವಿತ್ರಳಾಗುತ್ತಾಳೆ ಎಂದು ಈ ಕಾಲದಲ್ಲೂ ನಂಬುವವರಿದ್ದಾರೆ. ಗರ್ಭಿಣಿ ಮಹಿಳೆಯರಿಗೆ USG ಸ್ಕ್ಯಾನಿಂಗ್ ಮಾಡುವ ಸಮಯದಲ್ಲಿ ‘ಡಾಕ್ಟ್ರೇ ಮಗು ಗಂಡಾ ಹೆಣ್ಣಾ ಅಂತ ಹೇಳಿ’ ಎಂದು ವೈದ್ಯರನ್ನು ಕೇಳುವ ಸುಶಿಕ್ಷಿತ ಗಂಡಸರೂ ಇದ್ದಾರೆ.

ಎಷ್ಟೇ ಸಭ್ಯವಾದ ಉಡುಗೆ ತೊಟ್ಟಿದ್ದರೂ ಹೆಣ್ಣನ್ನು ಕಾಮದ ಕಣ್ಣಿಂದ ನೋಡುವ ಕೀಚಕ ಸಂತಾನ ಇರುವವರೆಗೆ, ಬಯಲು ಶೌಚಾಲಯಕ್ಕೆ ಅಂತ್ಯ ಹಾಡುವ ಕಾಲ ಬರದೆ ಇರುವವರೆಗೆ, ಮನೆಯ ಹೆಣ್ಣುಮಕ್ಕಳ ಮೇಲಿನ ಕೌಟುಂಬಿಕ ದೌರ್ಜನ್ಯ ನಿಲ್ಲದವರೆಗೆ, ಸ್ತ್ರೀಸ್ವಾತಂತ್ರ್ಯದ ಬಗ್ಗೆ ಕಾರ್ಯಕ್ರಮದಲ್ಲಿ ಭಾಷಣ ಬಿಗಿದು ಬಂದು ಮನೆಯಲ್ಲಿ ಹೆಂಡತಿ ಅಡುಗೆಗೆ ತರಕಾರಿ ಹೆಚ್ಚಿಕೊಡಿ ಎಂದಾಗ ನನ್ನ ಕೈಯಲ್ಲಿ ಆಗಲ್ಲ ಎಂದು ದರ್ಪ ತೋರುವ ಗಂಡಂದಿರ ನಡುವೆ, ಪರಸ್ಪರ ಒಪ್ಪಿಗೆಯಿಂದ ಪ್ರೇಯಸಿಯ ಜೊತೆ ನಡೆಸಿದ ಸುರತಕ್ರಿಯೆಯನ್ನು ಅವಳಿಗೆ ಗೊತ್ತಾಗದಂತೆ ಚಿತ್ರೀಕರಿಸಿ ದುಡ್ಡು ಮಾಡಲು ಅಶ್ಲೀಲ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ನಂತರ “Happy Women’s day” ಅಂತ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಯುವಕರು ಇರುವವರೆಗೆ ಯಾವ ಮಹಿಳಾ ದಿನಕ್ಕೂ ಯಾವ ಅರ್ಥವೂ ಇಲ್ಲ.

ಈ ಎಲ್ಲ ಅಪಸವ್ಯಗಳ ನಡುವೆಯೇ ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಎಂಬ ಮಾತನ್ನು ನಿಜವಾಗಿಸಿ ಸ್ತ್ರೀಸಂಕುಲವನ್ನು ಗೌರವಿಸುವ ಪುರುಷ ಸಮುದಾಯವಿದೆ. ಮಹಿಳಾಪರವಾದ ಹೋರಾಟಕ್ಕೆ ಬೆಂಬಲಿಸುವ, ಸ್ತ್ರೀಯರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕೋಟ್ಯಂತರ ಪ್ರಜ್ಞಾವಂತ ಮನಸ್ಸುಗಳಿವೆ. ಇಂಥವರಿಂದ ಮಹಿಳಾದಿನ ಸ್ವಲ್ಪವಾದರೂ ಅರ್ಥಪೂರ್ಣವಾಗುತ್ತದೆ. ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಇದ್ದು ನಮ್ಮ ಅಭ್ಯುದಯಕ್ಕೆ ಕಾರಣವಾಗಿರುವ ಸ್ತ್ರೀಸಂಕುಲಕ್ಕೆ ಬೊಗಸೆಯಷ್ಟು ಪ್ರೀತಿ, ಹಿಡಿಯಷ್ಟು ಗೌರವವನ್ನು ಕೊಡೋಣ, ಕೊಡುತ್ತಲೇ ಇರೋಣ. ಭಾವನೆಗಳಿಗೂ ಮೀರಿದ, ಅಕ್ಷರಗಳಿಗೂ ನಿಲುಕದ ಮಹಿಳಾ ಶಕ್ತಿಗೆ ಕೇಳೋಣ, ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?

ಲಕ್ಷ್ಮೀಶ್​ ಜೆ ಹೆಗಡೆ

ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ
ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: International Womens Day: ಕ್ರೀಡೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ನಾರಿಮಣಿಯರು ಇವರು

ಇದನ್ನೂ ಓದಿ: International Women’s Day 2021: ಅದೆಷ್ಟೋ ಕ್ಷೇತ್ರಗಳ ಬಾಗಿಲನ್ನು ತೆರೆದ ಪ್ರಥಮ ಸಾಧಕಿಯರಿಗೆ ಗೂಗಲ್​ ಡೂಡಲ್​ ವಿಶೇಷ ಗೌರವ