Cinema Writing : ‘ಬೆಲ್​ ಬಾಟಮ್’ ಟ್ರಂಪ್​ಕಾರ್ಡಿನೊಂದಿಗೆ ಕನ್ನಡದ ನಿರ್ದೇಶಕ ಟಿ.ಕೆ. ದಯಾನಂದ ತೆಲುಗಿಗೆ

|

Updated on: Jul 13, 2021 | 1:18 PM

Cinema : ತೆಲುಗಿನ ಸಿನೆಮಾ ಒಂದಕ್ಕೆ ಸಿನೆಮಾ ಬರಹಗಾರರಾಗಿ ಕೆಲಸ ಮಾಡುವ ಅವಕಾಶ ಕನ್ನಡದ ಕಥೆಗಾರ, ಸಿನೆಮಾ ನಿರ್ದೇಶಕ ಟಿ. ಕೆ. ದಯಾನಂದ ಅವರನ್ನು ಹುಡುಕಿಕೊಂಡು ಬಂದಿದೆ. ಈ ಸಂದರ್ಭದಲ್ಲಿ ಇನ್ನಾದರೂ ಕನ್ನಡದಲ್ಲಿ ‘ವೃತ್ತಿಪರ ಸಿನೆಮಾ ಬರೆವಣಿಗೆ’ ಪ್ರತ್ಯೇಕ ವಿಭಾಗ ಕಣ್ತೆರೆಯಲಿ. ಸಿನೆಮಾ ಮತ್ತು ಸಾಹಿತ್ಯ ಕ್ಷೇತ್ರಗಳು ಈ ಪ್ರಕ್ರಿಯೆಯಲ್ಲಿ ಒಟ್ಟಾಗಿ ಒಳಗೊಳ್ಳಲಿ. ಹೊಸ ಕೋರ್ಸ್​ಗಳು ಆಸಕ್ತರಿಗೆ ಲಭ್ಯವಾಗಿ, ಬರೆವಣಿಗೆಯ ಮೂಲಕವೂ ಕಥೆಗಾರರು ಬದುಕು ಕಟ್ಟಿಕೊಳ್ಳುವಂತಾಗಲಿ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

Cinema Writing : ‘ಬೆಲ್​ ಬಾಟಮ್’ ಟ್ರಂಪ್​ಕಾರ್ಡಿನೊಂದಿಗೆ ಕನ್ನಡದ ನಿರ್ದೇಶಕ ಟಿ.ಕೆ. ದಯಾನಂದ ತೆಲುಗಿಗೆ
ಕಥೆಗಾರ, ನಿರ್ದೇಶಕ ಟಿ. ಕೆ. ದಯಾನಂದ
Follow us on

ಕನ್ನಡ ಸಾಹಿತ್ಯ ಮತ್ತು ಕನ್ನಡ ಸಿನೆಮಾ ಕ್ಷೇತ್ರಗಳು ಪರಸ್ಪರ ಒಟ್ಟಾಗಿ ಕೆಲಸ ಮಾಡುವ ತುರ್ತು ಪ್ರಕ್ರಿಯೆ  ಶುರುವಾಗಬೇಕಿದೆ. ಸಿನೆಮಾ ಕಥಾ ಬರಹಗಾರರ ಹೊಸ ಪೀಳಿಗೆಯನ್ನು ಹುಟ್ಟುಹಾಕುವ ಜವಾಬ್ದಾರಿ ಈ ಎರಡೂ ಕ್ಷೇತ್ರದ ಜವಾಬ್ದಾರಿ. ಸರ್ಕಾರ ಮತ್ತು ಸರ್ಕಾರೇತರ  ಸಿನೆಮಾ ಶಾಲೆಗಳಲ್ಲಿ ಸಿನೆಮಾ ಬರೆವಣಿಗೆಗೆಂದೇ ಪ್ರತ್ಯೇಕ ವಿಭಾಗ ಪ್ರಾರಂಭವಾಗಬೇಕು. ಆಗ ಬರಹಗಾರರಿಗೂ ಈ ವಿಷಯವನ್ನು ವೃತ್ತಿಪರವಾಗಿ ಸ್ವೀಕರಿಸಲು ಧೈರ್ಯ ಒದಗುತ್ತದೆ. ಹಾಲಿವುಡ್, ಬಾಲಿವುಡ್​ನಲ್ಲಿ ಈ ಕ್ರಮವಿದೆ.  ದಕ್ಷಿಣದಲ್ಲಿ ಕೇರಳ, ಆಂಧ್ರದಲ್ಲಿಯೂ ಈ ಪರಿಸರವಿದೆ. ಇದು ಇನ್ನಾದರೂ ನಮ್ಮ ರಾಜ್ಯದಲ್ಲಿ  ಸಾಧ್ಯವಾಗಬೇಕು. ಒಳ್ಳೆಯ ಸಿನೆಮಾ ಹುಟ್ಟುವುದು ಒಳ್ಳೆಯ ಕಥೆಯ ಮೂಲಕ. ಸಾಕಷ್ಟು ಕಥೆಗಾರರು ನಮ್ಮಲ್ಲಿದ್ಧಾರೆ. ಆದರೆ ಹೊಸ ಪೀಳಿಗೆಯ ವೃತ್ತಿಪರ ಸಿನೆಮಾ ಬರಹಗಾರರನ್ನು, ಕಥೆಗಾರರನ್ನು ಹುಟ್ಟುಹಾಕುವ ಜವಾಬ್ದಾರಿಯೂ ನಮ್ಮದೇ.
ಟಿ.ಕೆ. ದಯಾನಂದ, ಕನ್ನಡ ಸಿನೆಮಾ ನಿರ್ದೇಶಕ

*

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲ ಕಾಲ ಪತ್ರಕರ್ತರಾಗಿ ಕೆಲಸ ಮಾಡಿ, ಕರ್ನಾಟಕದ ತಳಸಮುದಾಯದ ಬಗ್ಗೆ ಸಂಶೋಧನೆ ನಡೆಸಿ, ಆ ಸಮಯದಾಯದವರ ಏಳ್ಗೆಗೆ ಶ್ರಮಿಸಿದವರಲ್ಲಿ ಕನ್ನಡದ ಕಥೆಗಾರ, ನಿರ್ದೇಶಕ ಟಿ. ಕೆ. ದಯಾನಂದ ವಿಶೇಷವಾಗಿ ಗಮನ ಸೆಳೆಯುತ್ತಾರೆ. ‘ಬೆಂಕಿಪಟ್ಣ’ ನಿರ್ದೇಶನದ ನಂತರ ‘ಬೆಲ್​ ಬಾಟಮ್’ ಕಥೆಯ ಮೂಲಕ ಸಿನಿಪ್ರಿಯರೆಲ್ಲರನ್ನೂ ತಲುಪಿದ ಕಥಾ ವೈಶಿಷ್ಟ್ಯ ಇವರದು. ಇದೀಗ ಇವರಿಗೆ ತೆಲುಗಿನ ಸಿನೆಮಾ ಒಂದರ ಕಥಾವಿಸ್ತರಣೆ, ಚಿತ್ರಕಥೆ, ಸಂಭಾಷಣೆ ಬರೆಯುವ ಅವಕಾಶ ಹುಡುಕಿಕೊಂಡು ಬಂದಿದೆ.

‘ಇದ್ದಕ್ಕಿದ್ದ ಹಾಗೆ ಬಂದ ಅವಕಾಶ ಇದು. ಸರ್ವೈವಲ್ ಥ್ರಿಲ್ಲರ್ ಸಿನೆಮಾ ಕಥೆ ಇದು. ಇನ್ನೂ ಹೆಸರು ಅಂತಿಮಗೊಂಡಿಲ್ಲ. ರಾಜಮೌಳಿಯವರ RRR ಸಿನೆಮಾದ ಕ್ಯಾಮೆರಾಮೆನ್ ಸೆಂಥಿಲ್ ಜೊತೆಗೆ ಆಪರೇಟಿಂಗ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿರುವ ಕ್ಯಾಮೆರಾಮನ್​ಗಳ ತಂಡ ಈ ಸಿನೆಮಾ ಮಾಡುತ್ತಿದೆ. ತೆಲುಗಿನ ಹಿರಿಯ ನಿರ್ಮಾಪಕ ಅಪ್ಪಾರಾವ್ ವಾಕಡ್ ಇದನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಸರ್ವೈವಲ್ ಥ್ರಿಲ್ಲರ್ ಸಿನೆಮಾ (ಕಾಸ್ಟ್ ಅವೇ, ಕ್ಯಾಪ್ಟನ್ ಫಿಲಿಪ್ಸ್, ಇಂಟೂ ದಿ ವೈಲ್ಡ್ ನೆನಪಿಸಿಕೊಳ್ಳಬಹುದು). ಮಹಿಳಾಕೇಂದ್ರಿತ ಕಥಾವಸ್ತು. ಕಥಾಬರೆವಣಿಗೆ ಗೊತ್ತಿರುವ ಸ್ಕ್ರೀನ್​ ರೈಟರ್ ಹುಡುಕಾಟದಲ್ಲಿ ಈ ತಂಡವಿತ್ತು. ಆಗ ಹುಡುಕಾಟದ ಹಾದಿಯಲ್ಲಿ ‘ಬೆಲ್​ಬಾಟಮ್’ನ ಕಥೆ ಅವರ ಗಮನ ಸೆಳೆದು, ಈ ಕಥೆಗಾರರೇ ನಮ್ಮ ಸಿನೆಮಾಕ್ಕೆ ಬೇಕು ಎಂದು ಒಟ್ಟಾಗಿ ನಿರ್ಧರಿಸಿ ನನ್ನನ್ನು ಹುಡುಕಾಡಿ ಸಂಪರ್ಕಿಸಿ, ಬರೆವಣಿಗೆಯ ಸಹಾಯ ಬೇಕೆಂದು ಕೇಳಿದರು. ಈಗಾಗಲೇ ಕಥೆಯ ಮೂಲ ಎಳೆಯನ್ನು ಅವರು ತಯಾರು ಮಾಡಿಕೊಂಡಿದ್ದಾರೆ. ಕಥಾವಿಸ್ತರಣೆಗೆ, ಚಿತ್ರಕಥೆಗೆ ಮತ್ತು ಸಂಭಾಷಣೆಗೆ ಬೇಕಾದ ಸ್ವಾತಂತ್ರ್ಯ ಮತ್ತು ಸಮಯಾವಕಾಶ ಕೊಟ್ಟಲ್ಲಿ ಖಂಡಿತ ಪಾಲ್ಗೊಳ್ಳುತ್ತೇನೆ ಎಂದು ಹೇಳಿದೆ. ಒಪ್ಪಿಕೊಂಡರು. ನನಗೆ ತೆಲುಗು ಬರುತ್ತದೆಯಾದರೂ ಇಂಗ್ಲಿಷ್​ನಲ್ಲಿ ನಾನು ಬರೆಯುತ್ತೇನೆ. ಅವರು ಅದನ್ನು ಅನುವಾದಿಸಿ ಅಳವಡಿಸಿಕೊಳ್ಳುತ್ತಾರೆ.’ ದಯಾನಂದ ಈ ವಿಷಯವನ್ನು ‘ಟಿವಿ9 ಕನ್ನಡ ಡಿಜಿಟಲ್​ನೊಂದಿಗೆ ಹಂಚಿಕೊಳ್ಳುತ್ತ ಕನ್ನಡ ಸಿನೆಮಾ ಕ್ಷೇತ್ರವೂ ಕಥೆಗಾರರನ್ನು ಮತ್ತು ಬರಹಗಾರರನ್ನು ನಿರೀಕ್ಷಿಸುತ್ತಿದೆ. ಈ ವಿಷಯವಾಗಿ ಸಾಹಿತ್ಯ ಮತ್ತು ಸಿನೆಮಾ ಕ್ಷೇತ್ರಗಳು ಪರಸ್ಪರ ಒಟ್ಟಾಗಿ ‘ವೃತ್ತಿಪರ ಸಿನೆಮಾ ಬರೆವಣಿಗೆ’ಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳುತ್ತಾ ತಮ್ಮ ವಿಚಾರಗಳನ್ನು ಕೂಡ ಈ ಸಂದರ್ಭದಲ್ಲಿ ಹಂಚಿಕೊಂಡರು.

ನಟನೆ, ಸಂಕಲನ, ಪ್ರಸಾಧನ, ಸಂಗೀತ, ವಿನ್ಯಾಸ ಹೀಗೆ ಸಿನೆಮಾದ ಎಲ್ಲಾ ವಿಭಾಗಗಳೂ ಇಂದು ವೃತ್ತಿಪರತೆ ಹೊಂದಿವೆ. ಆದರೆ ಕನ್ನಡದಲ್ಲಿ ಸಿನೆಮಾ ಬರೆವಣಿಗೆ ಮಾತ್ರ ಪ್ರತ್ಯೇಕ ವಿಭಾಗವೆಂದು ಪರಿಗಣಿಸಲ್ಪಡದೆ ಇದ್ದುದರಿಂದ ಅದು ವೃತ್ತಿಪರತೆಯನ್ನು ಹೊಂದಲು ಸಾಧ್ಯವಾಗಿಲ್ಲ. ಈ ಪರಿಣಾಮ ನಮ್ಮ ಕನ್ನಡದ ಸಿನೆಮಾಗಳ ಗುಣಮಟ್ಟದ ಮೇಲೆ ಆಗುತ್ತ ಬಂದಿದೆ. ನಿರ್ದೇಶಕರಾದವರೇ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ನಿರ್ವಹಿಸಬೇಕು ಎಂಬ ಪರಂಪರಾಗತ ನಿರೀಕ್ಷೆಯಲ್ಲೇ ನಮ್ಮ ನಿರ್ಮಾಪಕ ಬಳಗ ಈಗಲೂ ಇದೆ. ನಿರ್ದೇಶಕರ ಬಳಿ ಬೌಂಡೆಡ್ ಸ್ಕ್ರಿಪ್ಟ್ ತಯಾರಿದ್ದಲ್ಲಿ ಮಾತ್ರ ನಿರ್ಮಾಪಕರು ಮುಂದೆ ಬರುವುದು. ಇದರಿಂದ ಶೇ. 90 ರಷ್ಟು ಖರ್ಚು ಉಳಿಯುತ್ತದೆ ಎಂಬ ಲೆಕ್ಕಾಚಾರ ಅವರದು. ಆದರೆ ಸಿನೆಮಾಗಳ ಗುಣಮಟ್ಟ?

ಈಗಾಗಲೇ ಹಾಲಿವುಡ್, ಬಾಲಿವುಡ್​ನಲ್ಲಿ ಮತ್ತು ಇತರೇ ದೇಶಗಳು ಹಾಗೂ ಕೆಲ ಭಾರತೀಯ ಭಾಷೆಗಳಲ್ಲಿ ಸಿನೆಮಾ ಬರೆವಣಿಗೆ ವಿಭಾಗ ಪ್ರತ್ಯೇಕವಾಗಿ ಪರಿಗಣಿಸಲ್ಪಟ್ಟಿದೆ. ಕನ್ನಡದಲ್ಲಿ ಸಿನೆಮಾಗಳಿಗಾಗಿಯೇ ಕಥೆ ಬರೆಯುವವರಿದ್ದರೂ ಸಂಭಾವನೆಯ ಬಗ್ಗೆ ಖಚಿತತೆ ಇಲ್ಲದ ಕಾರಣ ಪೂರ್ಣಪ್ರಮಾಣದಲ್ಲಿ ವೃತ್ತಿಯನ್ನಾಗಿ ಸ್ವೀಕರಿಸಲು ಅವರಿಗೆ ಧೈರ್ಯ ಸಾಲುತ್ತಿಲ್ಲ. ಉಳಿದಂತೆ ನಮ್ಮಲ್ಲಿ ಕಥೆಗಳನ್ನು ಬರೆಯುವವರ ಸಂಖ್ಯೆ ಸಾಕಷ್ಟಿದ್ದರೂ ಸಿನೆಮಾದ ತಂತ್ರಗಳಿಗೆ ಅನುಗುಣವಾಗಿ ಬರೆಯುವ ತಾಂತ್ರಿಕ ಜ್ಞಾನದ ಕೊರತೆ ಇದೆ. ಇದಕ್ಕಾಗಿ ಸಾಹಿತ್ಯ ಮತ್ತು ಸಿನೆಮಾ ಬರೆವಣಿಗೆ ಮಧ್ಯೆ ಈಗಾಗಲೇ ಉಂಟಾಗಿರುವ ಅಂತರ ಅಳಿಯಬೇಕು. ಸಿನೆಮಾ ಬರೆವಣಿಗೆ ತರಬೇತಿ, ಕೋರ್ಸ್​ಗೆ ಈಗ ಪ್ರಾಧಾನ್ಯ ಕೊಡಲೇಬೇಕು. ಇದ್ಯಾವುದರ ಬಗ್ಗೆಯೂ ಆಲೋಚಿಸದೆ, ತೊಡಗಿಕೊಳ್ಳದೆ ಕನ್ನಡ ಸಿನೆಮಾಗಳಿಗಾಗಿ ಕಥೆ ಬರೆಯುವವರೇ ಇಲ್ಲ ಎಂದು ಹೇಳುತ್ತಲೇ ಇರುವುದು ಸೂಕ್ತವಲ್ಲ.

ನಿರ್ದೇಶಕರೇ ಬರೆವಣಿಗೆಗೆ ಸಂಬಂಧಿಸಿದ ಎಲ್ಲವನ್ನೂ ನಿರ್ವಹಿಸಬೇಕೆಂಬ ನಿರೀಕ್ಷೆಯನ್ನು ಪ್ರೊಡಕ್ಷನ್ ಹೌಸ್​ಗಳು ನಿರ್ದೇಶಕನ ಮೇಲೆ ಹೇರುವುದರಿಂದ ಒತ್ತಡ ಬೀಳುತ್ತದೆ. ಅದು ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಇತರೇ ತಂತ್ರಜ್ಞರು ನಿರ್ದೇಶಕರ ಒಡನಾಟದಲ್ಲಿದ್ದು ಪರಸ್ಪರ ಚರ್ಚಿಸಿ ಹೇಗೆ ಕಾರ್ಯಪ್ರವೃತ್ತರಾಗುತ್ತಾರೋ ಹಾಗೆ ಕಥೆಗಾರರೂ ನಿರ್ದೇಶಕರೊಂದಿಗೆ ಬೆರೆಯುತ್ತ ಹೋಗುವಂಥ ಅವಕಾಶಗಳು ಸೃಷ್ಟಿಯಾಗಬೇಕು. ಆಗ ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಸೂಕ್ತ ಆಕಾರವನ್ನು ಹೊಮ್ಮಿಸಲು ಸಾಧ್ಯವಾಗುತ್ತದೆ. ಇಂಥ ವೇದಿಕೆಗಳು ಕನ್ನಡದ ಸಿನೆಮಾ ಕಥೆಗಾರರಿಗೆ ಈಗಲಾದರೂ ಲಭ್ಯವಾಗಬೇಕು.

ಸಿನೆಮಾ ಮಾಡುವಂಥ ಸಾಕಷ್ಟು ಕಥೆಗಳು ಕನ್ನಡದಲ್ಲಿ ಬರುತ್ತಿವೆ ನಿಜ. ಆದರೆ ಸಾಹಿತ್ಯಿಕ ಭಾಷೆಯಂತೆ ಸಿನೆಮಾಗೂ ಕೂಡ ದೃಶ್ಯಭಾಷೆ ಇದೆ. ಆ ದೃಶ್ಯಭಾಷೆಗೆ ಅಳವಡಿಸುವ ಕಥೆಗಳೂ ನಮ್ಮಲ್ಲಿ ಹೇರಳವಾಗಿವೆ. ಕಥೆ ಬರೆಯುವವರಿಗೂ ಇದರಲ್ಲಿ ತೊಡಗಿಕೊಳ್ಳುವ ಆಸೆ ಇದೆ. ಆದರೆ ಪೂರ್ಣಪ್ರಮಾಣದ ವೃತ್ತಿಯಾಗಿ ಸ್ವೀಕರಿಸೋಕೆ ಏನು ಭರವಸೆ?

ಅಡೂರು ಗೋಪಾಲಕೃಷ್ಣನ್ ಕಾಲದಿಂದ ಹಿಡಿದು ತಮಿಳಿನ ವೆಟ್ರಿಮಾನನ್​ವರೆಗೂ ಸಾಕಷ್ಟು ನಿರ್ದೇಶಕರುಗಳು ಕಥೆ, ಕಾದಂಬರಿಗಳಾಧಾರಿತ ಸಿನೆಮಾ ಮಾಡಿದ್ದಾರೆ. ಸಾಹಿತ್ಯಿಕ ಭಾಷೆಯನ್ನು ದೃಶ್ಯಭಾಷೆಯಾಗಿ ಬದಲಾಯಿಸಿಕೊಳ್ಳುವ ಸಮರ್ಪಕ ಕೌಶಲ, ತಂತ್ರಜ್ಞಾನದ ಅರಿವು ಅವರಿಗೆ ಲಭಿಸಿದೆ. ಇದಕ್ಕೆ ಕಾರಣ, ನಿರ್ದೇಶಕರಾಗಿರುವ ಹಲವರು ಸಾಹಿತ್ಯಿಕ ಹಿನ್ನೆಲೆಯಿಂದ ಬಂದವರು. ಕೇರಳದಲ್ಲಿಯೂ ಹೊಸ ಅಲೆಯ ನಿರ್ದೇಶಕರು ಮೂಲತಃ ಕಥೆಗಾರರೇ. ಅಲ್ಲಿ ಸಾಹಿತ್ಯ ಮತ್ತು ಸಿನೆಮಾ ಎರಡೂ ಕ್ಷೇತ್ರಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಪರಿಪಾಠವಿದೆ. ಇಂಥದ್ದು ಕನ್ನಡದಲ್ಲಿಯೂ ಆಗಬೇಕಿದೆ.

ದುರುಗ ಮುರಿಗೆಯವರೊಂದಿಗೆ ಟಿ. ಕೆ. ದಯಾನಂದ

ಸಾಹಿತ್ಯ ಮತ್ತು ಸಿನೆಮಾ ಬರೆವಣಿಗೆಗೆ ಸಂಬಂಧಿಸಿದ ಒಂದು ಸಣ್ಣ ಉದಾಹರಣೆ; ನೀವು ಬರೆದ ಎರಡು ಮೂರು ಪುಟಗಳ ಬರೆವಣಿಗೆ ತೆರೆಯ ಮೇಲೆ ಸೆಕೆಂಡುಗಳ ಲೆಕ್ಕದಲ್ಲಿ ಅನಾವರಣಗೊಂಡುಬಿಡುತ್ತದೆ. ಅಂದರೆ ಸಿನೆಮಾ ಬರೆವಣಿಗೆಗೆ ಅದರದೇ ಆದ ತಾಂತ್ರಿಕ ಕೌಶಲವಿದೆ. ಒಂದೊಂದು ಸಿನೆಮಾ ಕೂಡ ಒಂದೊಂದು ಪಠ್ಯವಿದ್ದಂತೆ. ಒಂದು ಸಿನೆಮಾವನ್ನು ಪೂರ್ತಿ ಮ್ಯೂಟ್ ಮಾಡಿಕೊಂಡು ನೋಡಿ. ಆಗ ನಿಮಗೆ ಅದರ ಸ್ಕ್ರಿಪ್ಟ್ ಅನುಭವಕ್ಕೆ ಬರುತ್ತ ಹೋಗುತ್ತದೆ. ಅಂದರೆ ಮೊದಲು ಸಿನೆಮಾದ ದೃಶ್ಯಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ಸ್ಕ್ರೀನ್ ರೈಟಿಂಗ್ ಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ತೆರೆಯ ಮೇಲೆ ಪಾತ್ರಗಳ ನಿರ್ವಹಣೆ ಹೇಗೆ ಅನ್ನುವದರ ಬಗ್ಗೆ ಅಧ್ಯಯನ ಮಾಡಬೇಕು. ಅದಕ್ಕಾಗಿ ಈ ಎಲ್ಲ ಅಂಶಗಳನ್ನು ಒಳಗೊಂಡ ಪ್ರತ್ಯೇಕ ಪಠ್ಯ ರೂಪುಗೊಂಡು ಕೋರ್ಸ್​ಗಳು ಶುರುವಾಗಬೇಕು.

ಎಲ್ಲಾ ಊರುಗಳಲ್ಲಿಯೂ ಕಥೆ ಬರೆಯುವವರಿದ್ದು ಅವರನ್ನು ಬೆಸೆಯುವ ಕೆಲಸವನ್ನು ಈ ಕೋರ್ಸ್​​ಗಳು ಮಾಡುವಂತಾಗಬೇಕು. ಸರ್ಕಾರಿ ಸಿನೆಮಾ ತರಬೇತಿ ಶಾಲೆಗಳು, ಸರ್ಕಾರೇತರ ಸಿನೆಮಾ ಸಂಸ್ಥೆಗಳು ಈ ವಿಷಯವಾಗಿ ಗಂಭೀರವಾಗಿ ತೊಡಗಿಕೊಳ್ಳಬೇಕು. ಹೀಗಾದಾಗ ಮಾತ್ರ ವೃತ್ತಿಪರ ಒಳಹರಿವು ಕನ್ನಡದಲ್ಲಿಯೂ ಶುರುವಾಗುವ ಸಾಧ್ಯತೆ ಹೆಚ್ಚುತ್ತದೆ. ಪ್ರತೀ ಸಿನೆಮಾ ಕೂಡ ಒಳ್ಳೆಯ ಸಿನೆಮಾ ಆಗುವುದು ಒಳ್ಳೆಯ ಕಥೆ ಇದ್ದಾಗ ಮಾತ್ರ. ಅಂಥ ಕಥೆಗಾರರನ್ನು ಹುಟ್ಟುಹಾಕುವವರು ನಾವೇ. ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದವರೂ ನಾವೇ. ಈ ಪ್ರಕ್ರಿಯೆ ಶುರುವಾದಂತೆ ಸಿನೆಮಾ ಕಥೆಗಾರರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಸಿನೆಮಾಕ್ಷೇತ್ರವೂ ಉಜ್ವಲವಾಗುತ್ತದೆ.

ಸೆಟಲೈಟ್ಸ್ ರೈಟ್ಸ್  ಮತ್ತು ಒಟಿಟಿ ಪ್ಲ್ಯಾಟ್​ಫಾರ್ಮ್ ಹಿನ್ನೆಲೆಯಿಂದ ನೋಡಿದಾಗ ಕನ್ನಡದಲ್ಲಿಯೂ ಸಿನೆಮಾ ಕಥೆಗಾರರಿಗೆ ಒಳ್ಳೆಯ ದಿನಗಳು ಬರುವ ಸುಳಿವು ಈಗಾಗಲೇ ಸಿಕ್ಕಿದೆ. ಒಟಿಟಿ ಪ್ಲ್ಯಾಟ್​ಫಾರ್ಮ್ ಬರೆವಣಿಗೆ ಆಧಾರಿತ ಸಿನೆಮಾಗಳಿಗೇ ಆದ್ಯತೆ ಕೊಡುತ್ತಿರುವುದರಿಂದ ಇದೊಂದು ಆಶಾದಾಯಕ ಬೆಳವಣಿಗೆ. ಕಥೆ ಮತ್ತು ಬರೆವಣಿಗೆ ಚೆನ್ನಾಗಿದ್ದರೆ ನಮ್ಮ ಸಿನೆಮಾ ಲಾಭ ಗಳಿಸುತ್ತದೆ ಎನ್ನುವುದು ನಿರ್ಮಾಪಕರಿಗೂ ಮೆಲ್ಲಗೆ ಅರ್ಥವಾಗುತ್ತಿದೆ. ಆದರೆ ಇದು ನಿರ್ಮಾಣ ವಿಷಯದಲ್ಲಿಯೂ ಪ್ರತಿಫಲಿಸಲು ಶುರುವಾಗಬೇಕು. ಈ ವಿಷಯವಾಗಿ ಸದ್ಯಕ್ಕೆ ಕೇರಳದಲ್ಲಿ Nee stream, ತೆಲುಗಿನಲ್ಲಿ Aha OTT Platform ಗಮನ ಸೆಳೆದಿವೆ. ಕನ್ನಡದಲ್ಲಿಯೂ ಇದು ವಿಸ್ತರಿಸುವ ಸಾಧ್ಯತೆ ಇದ್ದು, ಈ ಸಂಬಂಧಿ ಮಾತುಕತೆ ನಡೆಯುತ್ತಿದೆ. ಹೀಗಿದ್ದಾಗ ತುರ್ತಾಗಿ ಕನ್ನಡ ಸಿನೆಮಾ ಬರಹಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ಸಿನೆಮಾ ಬರಹಗಾರರ ಹೊಸ ತಲೆಮಾರನ್ನು ಸೃಷ್ಟಿಸುವ ಕೆಲಸವನ್ನು ಸರ್ಕಾರ ಮತ್ತು ಸರ್ಕಾರೇತರ ಸಿನೆಮಾ ಸಂಸ್ಥೆಗಳು ವಹಿಸಿಕೊಳ್ಳುವ ಅವಶ್ಯಕತೆ ಇದೆ.

ಇದನ್ನೂ ಓದಿ :Woman Director; ನಾನೆಂಬ ಪರಿಮಳದ ಹಾದಿಯಲಿ: ಸ್ಕ್ರಿಪ್ಟ್​ ರೆಡಿಯಾಗ್ತಿದೆ ‘ಕಾವೇರಿ 24/7’ 

Published On - 1:02 pm, Tue, 13 July 21