Explainer: ಸಿಡಿಲು, ಮಿಂಚು ಎಂದರೇನು? ಸಿಡಿಲು ಬಡಿದು ಸಾವು ಸಂಭವಿಸುವ ಸಾಧ್ಯತೆ ಎಷ್ಟಿರುತ್ತದೆ? ಇಲ್ಲಿದೆ ವಿವರ
ಸಿಡಿಲು ಅಥವಾ ಮಿಂಚು ಎಂಬುದು ಅತ್ಯಂತ ಕಡಿಮೆ ಅಧ್ಯಯನಕ್ಕೆ ಒಳಪಟ್ಟ ಪ್ರಾಕೃತಿಕ ಕ್ರಿಯೆ ಎಂದೇ ಹೇಳಲಾಗುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮ್ಯಾನೇಜ್ಮೆಂಟ್ನ ವಿಜ್ಞಾನಿಗಳ ಗುಂಪೊಂದು ಮಾತ್ರ ಪೂರ್ಣ ಪ್ರಮಾಣದಲ್ಲಿ ಸಿಡಿಲು ಹಾಗೂ ಮಿಂಚಿನ ಬಗ್ಗೆ ಅಧ್ಯಯನ ನಡೆಸುತ್ತಾರೆ.
ರಾಜಸ್ಥಾನದಲ್ಲಿ ಜುಲೈ 11, ಭಾನುವಾರದಂದು ಸಿಡಿಲು ಬಡಿದು (Thunderstorm) ಸುಮಾರು 20 ಜನ ಸಾವಿಗೀಡಾದ ದುರ್ಘಟನೆ ಸಂಭವಿಸಿತ್ತು. ಜೈಪುರ, ಝಲವಾರ್, ಧೋಲ್‌ಪುರ ಜಿಲ್ಲೆಗಳಲ್ಲಿ ದುರ್ಘಟನೆ ಸಂಭವಿಸಿದ್ದು, ಸಿಡಿಲಿಗೆ ಮೂವರು ಮಕ್ಕಳು ಸೇರಿದಂತೆ ಸುಮಾರು 20 ಜನ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿತ್ತು. ಸುಮಾರು 20 ಸಾವಿನ ಪೈಕಿ ಹೆಚ್ಚಿನವು ಜೈಪುರದ ಹೊರವಲಯದಲ್ಲಿರುವ ಅಮೆರ್ ಕೋಟೆ (Amer Fort) ವೀಕ್ಷಣೆಗಾಗಿ ಸಂಜೆ ವೇಳೆ ಪ್ರವಾಸಿಗರು ಬಂದಿದ್ದಾಗ ವೇಳೆ ಸಂಭವಿಸಿದೆ ಎನ್ನಲಾಗಿತ್ತು. ಅಮೆರ್ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರಿಗೆ ಏಕಾಏಕಿ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಅನೇಕರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿತ್ತು.
ಭಾನುವಾರ ಭಾರೀ ಮಳೆಯಿಂದಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಸಿಡು ಬಡಿದು ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಧನ ಘೋಷಿಸಿದ್ದರು. ಸಾವನ್ನಪ್ಪಿದವರ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರ ಕುಟುಂಬಗಳಿಗೆ ₹ 50,000 ನೀಡಲಾಗುವುದು ಎಂದು ಸರಣಿ ಟ್ವೀಟ್‌ಗಳಲ್ಲಿ ಪ್ರಧಾನಿ ಕಚೇರಿ (PMO) ತಿಳಿಸಿತ್ತು. ಹೀಗೆ ಸಿಡಿಲು, ಮಿಂಚಿನಿಂದ ಉಂಟಾಗುತ್ತಿರುವ ಅನಾಹುತ ಪ್ರಕರಣ ವರದಿ ಆಗುತ್ತಿದೆ. ಈ ಮಧ್ಯೆ, ಸಿಡಿಲು ಎಂದರೇನು? ಸಿಡಿಲು ಬಡಿದು ಸಾವು ಸಂಭವಿಸುವ ಸಾಧ್ಯತೆ ಎಷ್ಟಿರುತ್ತದೆ? ಎಂಬ ವಿಚಾರದ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿ ನೀಡಲಾಗಿದೆ.
ಮಿಂಚು ಎಂದರೇನು? ಅದು ಹೇಗೆ ಬಡಿಯುತ್ತದೆ? ಮಿಂಚುವುದು ಎಂದರೆ ವೇಗವಾಗಿ ಮತ್ತು ಅಷ್ಟೇ ಬಲವಾಗಿ ವಿದ್ಯುತ್ ಶಕ್ತಿಯು ಪರಿಸರದಲ್ಲಿ ಕಾಣಿಸಿಕೊಳ್ಳುವುದು. ಅದರಲ್ಲಿ ಕೆಲವು ನೇರವಾಗಿ ಭೂಮಿಯ ಮೇಲೆ ಬಂದು ಬಡಿಯುತ್ತದೆ. ಈ ಮಿಂಚು ಅಥವಾ ಸಿಡಿಲು ಎಂಬುದು ಬೃಹತ್ ಆಕಾರದ (ಸುಮಾರು 10-12 ಕಿ.ಮೀ ಉದ್ದವಿರುವ) ಮೋಡದಿಂದ ಉಂಟಾಗಿರುತ್ತದೆ. ವಿಶೇಷ ಎಂದರೆ, ಈ ಮೋಡದ ಮೂಲ ಅಥವಾ ಬುಡ ಭೂಮಿಯ ಮಟ್ಟದಿಂದ ಕೇವಲ 1-2 ಕಿ.ಮೀ. ಅಳತೆಯಲ್ಲಿ ಇರುತ್ತದೆ. ಆದರೆ, ಅದರ ಮೇಲ್ಮೈ ಸುಮಾರು 12 ಕಿ.ಮೀ.ಯಷ್ಟು ಮೇಲಿರುತ್ತದೆ. ಮೋಡದ ತುದಿಯ ಉಷ್ಣಾಂಶ ಮೈನಸ್ 35 ರಿಂದ ಮೈನಸ್ 45 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ.
ಮೋಡದಲ್ಲಿ ನೀರಿನ ಅಂಶ ಮೇಲೆ ಮೇಲೆ ಸಾಗಿದಂತೆ ಮೋಡದ ತುದಿಯಲ್ಲಿ ತಾಪಮಾನ ಕಡಿಮೆ ಆಗುತ್ತದೆ. ಈ ಪ್ರಕ್ರಿಯೆಯಲ್ಲಿ ಉಷ್ಣಾಂಶ ಉತ್ಪಾದನೆ ಆಗಿ ನೀರಿನ ಕಣಗಳನ್ನು ಮತ್ತೆ ಮೇಲಕ್ಕೆ ಸಾಗಿಸುತ್ತದೆ. ಹೀಗೆ ಉಷ್ಣಾಂಶ ಸೊನ್ನೆ ಡಿಗ್ರಿಗಿಂತಲೂ ಕಡಿಮೆ ಆಗಿ ಮೈನಸ್ನತ್ತ ಹೋಗುತ್ತಿದ್ದಂತೆ ನೀರಿನ ಕಣಗಳು ಸಣ್ಣ ಮಂಜುಗಡ್ಡೆಯಾಗಿ ಮಾರ್ಪಾಟು ಹೊಂದುತ್ತದೆ. ಹೀಗೆ ತಮ್ಮ ಗಾತ್ರ ಬಲಿಷ್ಠವಾಗುತ್ತಿರುವಂತೆ ಮೇಲಕ್ಕೆ ಸಾಗುತ್ತಾ ಬಳಿಕ ಕೆಳಗೆ ಭೂಮಿಗೆ ಬೀಳಲು ತೊಡಗುತ್ತದೆ.
ಈ ಪ್ರಕ್ರಿಯೆಯ ಪ್ರಕಾರ ಸಣ್ಣ ಮಂಜುಗಡ್ಡೆ ಕಣಗಳು ಮೇಲಕ್ಕೆ ಹೋಗುತ್ತಾ ದೊಡ್ಡ ಮಂಜುಗಡ್ಡೆ ಕಣಗಳು ಕೆಳಗೆ ಬೀಳಲು ಆರಂಭ ಆಗುತ್ತದೆ. ಇದರಿಂದಾಗಿ ಒಂದಕ್ಕೊಂದು ಸಂಘರ್ಷ ಏರ್ಪಡುತ್ತದೆ. ಆ ಮೂಲಕ ಎಲೆಕ್ಟ್ರಾನ್ಗಳ ಬಿಡುಗಡೆ ಆಗುತ್ತದೆ. ಹೀಗೆ ವಿದ್ಯುತ್ ಶಕ್ತಿಯ ಸ್ಪಾರ್ಕ್ ಕಾಣಿಸಿಕೊಳ್ಳುತ್ತದೆ. ಹೀಗೆ ಸಂಚಾರ ಮಾಡುವ ಎಲೆಕ್ಟ್ರಾನ್ಗಳ ಕಾರಣದಿಂದ ಹೆಚ್ಚು ಘರ್ಷಣೆ ಉಂಟಾಗಿ ಚೈನ್ ರಿಯಾಕ್ಷನ್ ಸಂಭವಿಸುತ್ತದೆ.
ಈ ಕಾರಣದಿಂದ ಮೋಡದ ಮೇಲಿನ ಪದರ ಪಾಸಿಟಿವ್ ಚಾರ್ಜ್ ಹೊಂದುತ್ತದೆ. ಮಧ್ಯ ಪದರ ನೆಗೆಟಿವ್ ಚಾರ್ಜ್ ಹೊಂದುತ್ತದೆ. ಈ ಎರಡು ಪದರಗಳ ವಿದ್ಯುತ್ ಶಕ್ತಿಯ ವ್ಯತ್ಯಾಸ ದೊಡ್ಡದಾಗಿರುತ್ತದೆ. ಅಂದರೆ, ಸುಮಾರು ಒಂದು ಬಿಲಿಯನ್ನಿಂದ 10 ಬಿಲಿಯನ್ ತನಕವೂ ಆಗಿರಬಹುದು. ಸಣ್ಣ ಅವಧಿಯಲ್ಲಿ ಬಹಳ ದೊಡ್ಡ ಪ್ರಮಾಣದ ಅಂದರೆ ಸುಮಾರು 100,000 ದಿಂದ ಮಿಲಿಯನ್ನಷ್ಟು ಆಂಪಿರ್ಸ್ ಕರೆಂಟ್ ಈ ಪದರಗಳ ಮಧ್ಯೆ ಸಂಚರಿಸುತ್ತವೆ.
ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ತಾಪಮಾನ ಉತ್ಪಾದನೆ ಆಗುತ್ತದೆ. ಹಾಗೂ ಮೋಡದ ಎರಡೂ ಪದರಗಳ ನಡುವಿನ ಗಾಳಿಯನ್ನೂ ಬಿಸಿ ಮಾಡುತ್ತದೆ. ಇದರಿಂದಾಗಿ ಮಿಂಚು ಬರುವ ಸಂದರ್ಭ ಆ ಪದರದಲ್ಲಿ ಕೆಂಪು ಬಣ್ಣ ಉಂಟಾಗುತ್ತದೆ. ಹೀಗೆ ಅತಿ ಬಿಸಿ ಹೊಂದಿರುವ ಗಾಳಿಯ ಪದರವು ವಿಶಾಲವಾಗುತ್ತಾ ಶಾಕ್ ತರಂಗಗಳನ್ನು ಕೊಡುತ್ತದೆ. ಅದರಿಂದ ಗುಡುಗು ಕೇಳಿಸುತ್ತದೆ.
ಸಿಡಿಲು ಬಡಿದು ಸಾವು ಸಂಭವಿಸುವ ಸಾಧ್ಯತೆ ಎಷ್ಟಿರುತ್ತದೆ? ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಸಾವುಗಳ ಪೈಕಿ ಸಿಡಿಲು ಬಡಿದು ಉಂಟಾಗುವ ಮರಣಗಳೇ ಹೆಚ್ಚಾಗಿರುತ್ತದೆ. ಅಂದರೆ, ಭಾರತದಲ್ಲಿ ಸರಾಸರಿ 2,000 ದಿಂದ 2,500 ರಷ್ಟು ಸಾವುಗಳು ಸಿಡಿಲು ಬಡಿದು ಸಂಭವಿಸುತ್ತದೆ. ಅದರಲ್ಲೂ ನಗರ ಪ್ರದೇಶದಲ್ಲೇ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ವರ್ಷಗಳ ಹಿಂದೆ ಮೂರು ದಿನದ ಅವಧಿಯಲ್ಲೇ ಸುಮಾರು 300 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದರು. ಈ ಲೆಕ್ಕಾಚಾರ ಅಧಿಕಾರಿಗಳಿಗೆ ಹಾಗೂ ವಿಜ್ಞಾನಿಗಳಿಗೆ ಆಶ್ಚರ್ಯ ಉಂಟುಮಾಡಿತ್ತು.
ಆದರೂ ಸಿಡಿಲು ಅಥವಾ ಮಿಂಚು ಎಂಬುದು ಅತ್ಯಂತ ಕಡಿಮೆ ಅಧ್ಯಯನಕ್ಕೆ ಒಳಪಟ್ಟ ಪ್ರಾಕೃತಿಕ ಕ್ರಿಯೆ ಎಂದೇ ಹೇಳಲಾಗುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮ್ಯಾನೇಜ್ಮೆಂಟ್ನ ವಿಜ್ಞಾನಿಗಳ ಗುಂಪೊಂದು ಮಾತ್ರ ಪೂರ್ಣ ಪ್ರಮಾಣದಲ್ಲಿ ಸಿಡಿಲು ಹಾಗೂ ಮಿಂಚಿನ ಬಗ್ಗೆ ಅಧ್ಯಯನ ನಡೆಸುತ್ತಾರೆ.
ಕೆಲವು ಸಾವಿರದಷ್ಟು ಗುಡುಗು ಸಹಿತ ಮಳೆಗಳು ಭಾರತದಲ್ಲಿ ಪ್ರತೀವರ್ಷ ಕಾಣಿಸಿಕೊಳ್ಳುತ್ತದೆ. ಇವು ಪ್ರತಿಯೊಂದರಲ್ಲೂ ನೂರಕ್ಕೂ ಅಧಿಕ ಮಿಂಚು ಕಾಣಿಸಿಕೊಳ್ಳಬಹುದು. ಐಐಟಿಎಮ್ನ ಡಾ. ಸುನಿಲ್ ಪವಾರ್ ಎಂಬವರು ಹೇಳುವ ಪ್ರಕಾರ ಕಳೆದ 20 ವರ್ಷಗಳಿಂದ ಈಚೆಗೆ ಮಿಂಚಿನ ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಹಿಮಾಲಯದ ತಪ್ಪಲಿನ ಭಾಗದಲ್ಲಿ ಮಿಂಚು ಹೆಚ್ಚಾಗಿದೆ.
ಇದನ್ನೂ ಓದಿ: Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ