ಕವಿತೆ ಅವಿತಿಲ್ಲ : ನಬೀಸಾಬ್, ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ನಿನ್ನೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ; ಮನಸ್ಸು ವಿಷಣ್ಣವಾಗಿದೆ. ಆಕ್ರೋಶ ಅವಡುಗಚ್ಚಿ ಕುಳಿತಿದೆ. ಮಾತು ಸೋಲುತ್ತಿವೆ. ಅದೆಷ್ಟು ಅಗೆಯುತ್ತೀರೋ ಅಗೆಯಿರಿ. ನೀವು ಅಗೆದಷ್ಟೂ ನನ್ನನ್ನೇ ನಾ ಬಗೆದುಕೊಳ್ಳುತ್ತೇನೆ ಎನ್ನುತ್ತಿದೆ ಈ ಹೊತ್ತಿನಲ್ಲಿ ಕವಿತೆ.
ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕಿ, ಹೋರಾಟಗಾರ್ತಿ, ಚಿತ್ರಕಲಾವಿದೆ ಚೇತನಾ ತೀರ್ಥಹಳ್ಳಿ ಬರೆದ ಕವಿತೆ ಇಲ್ಲಿದೆ.
ತಂಪೂಡಬೇಕಿದ್ದ ಕಲ್ಲಂಗಡಿ
ಲಾವಾ ಹರಿಸುತ್ತಿದೆ
ಕೆಂಪನೆ ತಿರುಳು ರಕ್ತಸಿಕ್ತ ಮಾಂಸದ ಮುದ್ದೆ
ಯಂತೆ ರಸ್ತೆ ತುಂಬಾ ಚೆಲ್ಲಾಪಿಲ್ಲಿ.
ಗಂಟಲಲ್ಲೇ ಉಳಿದ ಕೂಗಿನಲ್ಲಿ
ರಾಮನ ಹೆಸರಿತ್ತೋ ಅಲ್ಲಾಹ್ನದೋ!
ಕಣ್ಣೆದುರು ತೋರಿದ್ದು ಮಾತ್ರ
ಹಸಿದ ಒಡಲು
ಖಾಲಿ ಬಟ್ಟಲು.
ಕೇಸರಿ ಶಾಲಿನ ತುದಿಯಲ್ಲಿ ಕುತ್ತಿಗೆಯ
ಬೆವರುಜ್ಜಿಕೊಳ್ಳುತ್ತ ನಿಂತವರು ನಾಲ್ಕು ಜನ
ಮಣ್ಣಲ್ಲಿ ಬೆಳೆದ ಹಣ್ಣು ಒಡೆದೊಡೆದು ದಣಿದಿದ್ದರು
ಪಾಪ!
ಸುತ್ತ ನಿಂತು ಕಂಡವರು ಹತ್ತಾರು,
ಸಂದಿಯಲೇ ತೂರಿ ಹೊತ್ತೊಯ್ದವರು ಮತ್ತಷ್ಟು
ಆ ಹೊತ್ತು ಮಂದಿರದ ರಸ್ತೆಯಲಿ ಮನುಷ್ಯತ್ವ ರಜೆ ಹಾಕಿತ್ತೆ?
ಇದು ಇನ್ನೂ ಶುರುವಾತು,
ದೇವರಿರುವ ಬೀದಿಗಳೆಲ್ಲ ಇನ್ನು
ವಿಕೃತಿಯ ಕಪ್ಪೆಬಾವಿ!
ಗೂಡು ಕೆಡವಲು ಕೆಲಸವಿಲ್ಲದ
ಪುಂಡ ಗಂಡಸರ ಸಾಲು,
ಮರೆಯಬೇಕಲ್ಲ
ಖಾಲಿ ಜೇಬು
ಅಮ್ಮಂದಿರ ನೀರುಗಣ್ಣು
ಅಪ್ಪಂದಿರ ನಿಡುಸುಯ್ತ;
ಕಳೆಯಬೇಕಲ್ಲ ದಿನದಿನದ ಮೂರು ಹೊತ್ತೂ?
ಗೂಂಡಾ ಕಟ್ಟೆಯ ಮೇಲೊರಗಿದ ಮಂದಿ,
ಪಕ್ಕದಲ್ಲಿ ‘ದಂಡ’
ಹಿನ್ನೆಲೆಯಲ್ಲಿ ಯಾರ ಮನೆಯದೋ ಕಾರವಾನು ಹಾಡುತ್ತಿದೆ;
“ಮನ್ ತಡಪತ್ ಹರಿ ದರುಶನ್ ಕೋ…”
ಸಾಹಿತ್ಯ ಶಕೀಲ್, ಸಂಗೀತ ನೌಶದ್, ಹಾಡಿದ್ದು ರಫಿ.
“ಜೈ ಶ್ರೀ ರಾಮ್!”
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. : tv9kannadadigital@gmail.com
ಇದನ್ನೂ ಓದಿ : Poetry: ಅವಿತಕವಿತೆ; ಕಿತ್ತಳೆ ಇಂದಿನ ಕಿತ್ತಳೆಯಾಗಿರುವುದಿಲ್ಲ, ಮಾರುವವರೂ ಬೇರೆ ಅವರ ಕೂಗೂ ಮೊದಲಿನವರ ಕೂಗಲ್ಲ
Published On - 2:23 pm, Sun, 10 April 22