Poetry: ಅವಿತಕವಿತೆ; ಕಿತ್ತಳೆ ಇಂದಿನ ಕಿತ್ತಳೆಯಾಗಿರುವುದಿಲ್ಲ, ಮಾರುವವರೂ ಬೇರೆ ಅವರ ಕೂಗೂ ಮೊದಲಿನವರ ಕೂಗಲ್ಲ
Poem : ‘ಬೀದಿಬದಿಯ ಒಂದು ವರ್ಣಚಿತ್ರ, ಕೇಸರಿಮಯ ಕಿತ್ತಳೆ, ಹಸಿರು ಬ್ಯಾನರ್; ಪದ್ಯದ ಮೂದಲ ಭಾಗದಲ್ಲಿ ಒಂದು ಚಿತ್ರವಿದೆ. ಇದು ಇಂದಿನದು. ಈಗಿನದು. ಆದರೆ ಕಾಲಬದ್ಧವಾದ ಈ ಚಿತ್ರ ಮುಂದೆ ಹೀಗೇ ಇರುತ್ತದೆ ಅಥವಾ ಚಿತ್ರ ಅದೇ, ಬಣ್ಣ ಬೇರೆ, ಪಾತ್ರಧಾರಿಗಳು ಬೇರೆ.’ ಡಾ. ರಾಜೇಂದ್ರ ಚೆನ್ನಿ
ಅವಿತಕವಿತೆ | AvithaKavithe : ಎಸ್. ದಿವಾಕರ್ (S. Diwakar) ಅವರು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯವರು. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆಯಲ್ಲಿ ತೊಡಗಿಕೊಂಡಿರುವ ಇವರು, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಆತ್ಮಚರಿತ್ರೆಯ ಕೊನೆಯ ಪುಟ, ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ, ಪ್ರಪಂಚ ಪುಸ್ತಕ, ಪಂಡಿತ ಭೀಮಸೇನ ಜೋಶಿ, ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು, ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ಮ್ಯಾನ್, ಮಾಸ್ಟರ್ ಬಿಲ್ಡರ್, ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ, ರೂಪರೂಪಗಳನು ದಾಟಿ, ನಿರ್ಭಯ, ವಿಧಾನಸಭೆಯಲ್ಲೊಂದು ಹಕ್ಕಿ, ವೆನ್ನಿಸ್ಸಿನಲ್ಲಿ ಸಾವು ಮುಂತಾದ ಕೃತಿಗಳು ಪ್ರಕಟಗೊಂಡಿವೆ. ದಿವಾಕರ್ ಅವರ ಈ ಕವಿತೆಯಲ್ಲಿ ಡಾ. ರಾಜೇಂದ್ರ ಚೆನ್ನಿ ಅವರಿಗೆ ಕಂಡ ಒಳನೋಟವೂ ಇಲ್ಲಿದೆ.
ಕಲಾವಿದ ಚಂದ್ರನಾಥ
ಪರಿಚಿತವಾಗಿದ್ದೂ ಪರಿಚಿತವಲ್ಲದ ಈ ವಿಶ್ವದ ಮೂಲೆಯಲ್ಲಿ ಸಂತೋಷ ಸಂಭ್ರಮಗಳಿಗೆ ಬೇಕಾದ್ದು ಅತ್ಯಲ್ಪ
ದಾರಿಯುದ್ದಕ್ಕೆ ಫುಟ್‌ಪಾತಿನ ಮೇಲೆ ಬುಟ್ಟಿಗಳಲ್ಲಿ ರಾಶಿ ರಾಶಿ ಹೊಳೆಯುವ ಕೇಸರೀಮಯ ಕಿತ್ತಳೆ ಮಾರುವವರ ಕೂಗಿನ ಮೇಲೆ ತೂಗುತ್ತಿರುವ ಹಸಿರು ಬ್ಯಾನರ್ ಬೂದುಬಣ್ಣಕ್ಕೆ ತಿರುಗುತ್ತಿರುವ ಮನೆಮಾರು ಮಾರು ದೂರದಲ್ಲಿ ನೆಲದ ಮೇಲೆ ಪತ್ರಿಕೆಗಳ ಹಿಡಿದುಕೊಂಡು ಕೂತಿರುವ ಕಪ್ಪು ಹುಡುಗ ಕಿಟಕಿಗಳಲ್ಲಿ ಮೋಡಗಳಂತೆ ಮೆಲ್ಲಗೆ ಧಾವಿಸುತ್ತಿರುವ ಆಕಾಶ
ಮುಂದೆಂದೋ ಇದೇ ರೀತಿ ಬಣ್ಣಗಳು ಕಲಸಿಕೊಂಡು ಮೂಡಿರುವುದೊಂದು ವರ್ಣಚಿತ್ರ; ಇರುತ್ತವೆ ಕಿತ್ತಳೆ ಇದೇ ಬೀದಿಯಲ್ಲಿ ಹೀಗೆಯೇ ಬುಟ್ಟಿಗಳಲ್ಲಿ ಮಾರುವವರ ಕೂಗೂ ಇರುತ್ತದೆ ಹೀಗೇ. ಆದರೆ ಕಿತ್ತಳೆ ಇಂದಿನ ಕಿತ್ತಳೆಯಾಗಿರುವುದಿಲ್ಲ, ಮಾರುವವರೂ ಬೇರೆ ಅವರ ಕೂಗೂ ಮೊದಲಿನವರ ಕೂಗಲ್ಲ; ಕಪ್ಪು ಹುಡುಗನ ಜಾಗದಲ್ಲಿ ಇನ್ನೊಬ್ಬ ಬಗ್ಗಿ ನೋಡಿದರೆ ಬದಲಾಗಿರುತ್ತೆ ಪತ್ರಿಕೆಗಳ ದಿನಾಂಕ
ಎಷ್ಟೋ ಹೊತ್ತು ಈ ದೃಶ್ಯವನ್ನೇ ಕಣ್ಣುತುಂಬಿಕೊಂಡ ಕಲಾವಿದ ಚಂದ್ರನಾಥ ತಾನು ಕೊಳ್ಳುವ ಒಂದೋ ಎರಡೋ ಕೆಜಿಯಿಂದ ಜಖಂ ಆದೀತೆಂದು ಕೊಳ್ಳಲಿಲ್ಲ ಕಿತ್ತಳೆ
ಇದನ್ನೂ ಓದಿ: Poetry: ಅವಿತಕವಿತೆ; ಸುದೀರ್ಘ ಹಗಲಿನಲ್ಲಿ ಕಡುಕಿರಾತಕಿಯಾಗಿ ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ ಒಬ್ಬಳೇ
ದಿವಾಕರ ಅವರ ಈ ಪದ್ಯಕ್ಕೆ ಒಂದು ಸುಂದರವಾದ ಚೌಕಟ್ಟು ಮೊದಲ ಎರಡು ಸಾಲುಗಳಲ್ಲಿದೆ. ‘ಪರಿಚಿತವಾಗಿದ್ದು ಪರಿಚಿತವಲ್ಲದ’ ವಿಶ್ವದ ಸಣ್ಣ ಸಂಭ್ರಮಗಳ ಬಗ್ಗೆ ಈ ಪದ್ಯವಿದೆ. ಸಾಮಾನ್ಯತೆಯಲ್ಲಿಯೂ ಇರುವ ಅಸಾಮಾನ್ಯ ಚೆಂದವಿದೆ. ಈ ಪದ್ಯವೇ ಸಾಮಾನ್ಯತೆಯ ದೈನಿಕತೆಯ ಶಾಶ್ವತತೆಯ ಬಗ್ಗೆ ಇದೆ. ಮೊದಲು ಬೀದಿಯ ಬದಿಯ ಒಂದು ವರ್ಣಚಿತ್ರ, ಕೇಸರಿಮಯ ಕಿತ್ತಳೆ, ಹಸಿರು ಬ್ಯಾನರ್ ಇವೆಲ್ಲ ಬಣ್ಣಗಳಿವೆ. ಪದ್ಯದ ಮೂದಲ ಭಾಗದಲ್ಲಿ ಒಂದು ಚಿತ್ರವಿದೆ. ಇದು ಇಂದಿನದು. ಈಗಿನದು. ಆದರೆ ಕಾಲಬದ್ಧವಾದ ಈ ಚಿತ್ರ ಮುಂದೆ ಹೀಗೇ ಇರುತ್ತದೆ ಅಥವಾ ಚಿತ್ರ ಅದೇ, ಬಣ್ಣ ಬೇರೆ, ಪಾತ್ರಧಾರಿಗಳು ಬೇರೆ. ಪತ್ರಿಕೆಗಳು ಹೀಗೆ ಇರುತ್ತವೆ ಮನುಷ್ಯ ಬದುಕು ಸುದ್ದಿಯಾದಾಗ ದಿನಾಂಕ ಬದಲಾಗುತ್ತವೆ. ಸುದ್ದಿ ಅದೇ ಇರುತ್ತದೆ.
ಇಲ್ಲಿ ಕಲಾವಿದ ಚಂದ್ರನಾಥನ ಪ್ರವೇಶವಾಗುತ್ತದೆ ಪದ್ಯದಲ್ಲಿ. ಬದುಕಿನ ಈ ಕ್ಷಣದ ಮತ್ತು ಶಾಶ್ವತವೂ ಆದ ನಿಜ ಚಿತ್ರವನ್ನು ಚಂದ್ರನಾಥ ಕಣ್ಣಲ್ಲಿ ತುಂಬಿಕೊಂಡು ಮುಂದೆ ಅದು ಕಲೆಯಿಂದಾಗಿ ಇನ್ನೊಂದು ಬಗೆಯ ಶಾಶ್ವತತೆ ಅದಕ್ಕೆ ಅವನಿಂದ ಬರಬಹುದು. ಆದರೆ ಇದು ಗೊತ್ತಿರುವ ಕಲಾವಿದ ತನ್ನ ಎದುರಿಗಿರುವ ಈ ಚಿತ್ರ ಬದಲಾಗಬಾರದು ಎಂದು ಹಣ್ಣು ಕೊಳ್ಳುವುದಿಲ್ಲ. ಆದರೆ ಒಂದು ಕಡೆ ಈ ಬದುಕಿನ ಚಿತ್ರವನ್ನು ಬದಲಾಗದಂತೆ ಹಿಡಿದಿಡುವ ಕಲೆಗಾರಿಕೆಗೆ ಬದ್ಧವಾಗಿರುವ ಚಂದ್ರನಾಥನಿಗೆ ಈ ದೃಶ್ಯ ಇಂದು ಬದಲಾದರೂ, ಮತ್ತೆ ಭವಿಷ್ಯದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ ಎನ್ನುವುದು ಗೊತ್ತಿಲ್ಲವೆ?
ಹೀಗೆ ಈ ಸರಳವಾದ ಸ್ವಲ್ಪ ವಾಚ್ಯವಾದ ಪದ್ಯವು ಓದುತ್ತಾ ಹೋದಹಾಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತದೆ. ಇರಲಿ ಬಿಡಿ. ಈ ಜಿಜ್ಞಾಸೆ ಇಲ್ಲದೆಯೂ ಪದ್ಯದಲ್ಲಿ ಸಾಮಾನ್ಯ ಬದುಕಿನ ಚಂದವನ್ನು ನಂಬುವಂತೆ ಮಾಡುತ್ತದೆ.
ಪ್ರತಿಕ್ರಿಯೆಗಾಗಿ : tv9kannadadigitagl@tv9.com
ಇದನ್ನೂ ಓದಿ :Poetry: ಅವಿತಕವಿತೆ; ಆಗಿನ್ನೂ ಮಸೀದಿಗಳೇ ನನಗೆ ಎಟುಕಿರಲಿಲ್ಲ, ಇನ್ನು ಪಾಕಿಸ್ತಾನ ಗೊತ್ತಾಗುವುದು ಹೇಗೆ?
Published On - 8:44 am, Sun, 10 April 22