ಖ್ಯಾತನಾಮರು ತಮ್ಮ ತಲೆಗೂದಲನ್ನು ತೆಗೆಸಿಕೊಳ್ಳುವುದರ ಹಿಂದಿದೆ ಉದಾತ್ತ ಉದ್ದೇಶ, ಏನದು?
ಸಾಮಾನ್ಯವಾಗಿ ಕೆಲ ಖ್ಯಾತನಾಮರು ಅದರಲ್ಲೂ ಮಹಿಳೆಯರು ತಮ್ಮ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ಅರೆ ಅಷ್ಟು ಮುದ್ದಾಗಿದ್ದ ಆ ನಟಿ ಯಾಕೆ ಹೀಗೆ ತಲೆ ಬೋಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಶ್ಯಾನೆ ಪರೆಶಾನ್ ಮಾಡಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಅವರು ಹಾಗೆ ತಲೆ ಬೋಳಿಸಿಕೊಳ್ಳುವುದು ಸಾಮಾಜಿಕ ಮಹತ್ಕಾರ್ಯಕ್ಕಾಗಿ. ಅದರಿಂದ ಅವರು ಸಮಾಜಕ್ಕೆ ಒಂದು ಉದಾತ್ತ ಸಂದೇಶ ಕಳಿಸಿರುತ್ತಾರೆ. ಅದು ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬಲು ತಮ್ಮ ತಲೆಗೂದಲು ತೆಗೆಸಿಕೊಂಡಿರುತ್ತಾರೆ. ಅಂದ್ರೆ ಕ್ಯಾನ್ಸರ್ ಪೀಡಿತರಿಗೆ ಅತ್ಯಂತ […]
ಸಾಮಾನ್ಯವಾಗಿ ಕೆಲ ಖ್ಯಾತನಾಮರು ಅದರಲ್ಲೂ ಮಹಿಳೆಯರು ತಮ್ಮ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ಅರೆ ಅಷ್ಟು ಮುದ್ದಾಗಿದ್ದ ಆ ನಟಿ ಯಾಕೆ ಹೀಗೆ ತಲೆ ಬೋಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಶ್ಯಾನೆ ಪರೆಶಾನ್ ಮಾಡಿಕೊಳ್ಳುತ್ತಾರೆ.
ಆದರೆ ವಾಸ್ತವವಾಗಿ ಅವರು ಹಾಗೆ ತಲೆ ಬೋಳಿಸಿಕೊಳ್ಳುವುದು ಸಾಮಾಜಿಕ ಮಹತ್ಕಾರ್ಯಕ್ಕಾಗಿ. ಅದರಿಂದ ಅವರು ಸಮಾಜಕ್ಕೆ ಒಂದು ಉದಾತ್ತ ಸಂದೇಶ ಕಳಿಸಿರುತ್ತಾರೆ. ಅದು ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬಲು ತಮ್ಮ ತಲೆಗೂದಲು ತೆಗೆಸಿಕೊಂಡಿರುತ್ತಾರೆ. ಅಂದ್ರೆ ಕ್ಯಾನ್ಸರ್ ಪೀಡಿತರಿಗೆ ಅತ್ಯಂತ ಕಠಿಣ, ಯಾತನಾಮಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕೆಮೋಥೆರಪಿ ಎಂಬುದು. ಆ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ಪೀಡಿತರಿಗೆ ಕೂದಲು ತನ್ನಿಂತಾನೇ ಉದರುತ್ತದೆ. ಅದರಿಂದ ಅವರು ಮಾನಸಿಕವಾಗಿಯೂ ಮತ್ತಷ್ಟು ಕುಗ್ಗುವ ಸಾಧ್ಯತೆಯಿರುತ್ತದೆ.
ಇದರಿಂದ ಹೊರಬರಲು ಖ್ಯಾತನಾಮರು ತಾವು ಹೆಚ್ಚು ಪ್ರೀತಿಸುವ, ಪೋಷಿಸುವ ತಮ್ಮ ಕೂದಲನ್ನು ತೆಗೆಸಿಕೊಂಡು.. ನೋಡು ನನಗೇನೂ ಆಗಿಲ್ಲ. ಆದ್ರೆ ನಾನೂ ಸಹ ನಿನ್ನಂತೆಯೇ ಕೂದಲುರಹಿತನಾಗಿಯೇ ಇದ್ದೇನೆ. ಇದರಿಂದ ನೀನೇನೂ ಬೇಜಾರು ಮಾಡಿಕೊಳ್ಳಬೇಡ. ಎದೆಗುಂದಬೇಡ. ಧೈರ್ಯವಾಗಿರು ಎಂಬ ಸ್ಪಷ್ಟ ಸಂದೇಶವನ್ನು ಕ್ಯಾನ್ಸರ್ ಪೀಡಿತರಿಗೆ ರವಾನಿಸುತ್ತಾರೆ.
ಇದರ ಮುಂದುವರಿದ ಭಾಗವಾಗಿ ಹೇಳುವುದಾದರೆ ಈ ವಿದ್ಯಮಾನ ವಿದೇಶಗಳಲ್ಲೂ ಮಾನ್ಯತೆ ಪಡೆದಿದೆ. ಅದಕ್ಕಾಗಿ ಸಂಘಗಳನ್ನೂ ಕಟ್ಟಿಕೊಂಡಿದ್ದಾರೆ. ವಾರ್ಷಿಕ ಮೇಳಗಳನ್ನೂ ನಡೆಸುತ್ತಾರೆ. ಅದರ ಹಿಂದಿನ ಉದಾತ್ತ ಉದ್ದೇಶ ಇಷ್ಟೇ.. ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದು ಮತ್ತು ಅದಾಗಲೇ ಅನಾರೋಗ್ಯಪೀಡಿತರಾದವರಿಗೆ ಒಂದು ಭರವಸೆಯ ಬೆಳಕಾಗುವುದು. ಆದ್ರೆ ಇಲ್ಲಿ ಚೂರು ವ್ಯತ್ಯಾಸವಿದೆ. ಆಸ್ಟ್ರೇಲಿಯಾದ ಆ ಎರಡು ಸಂಸ್ಥೆಗಳ ಸದಸ್ಯರು ಕೂದಲನ್ನು ತೆಗೆಸಿಕೊಳ್ಳದೆಯೇ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಾರೆ.
ಉದಾಹರಣೆಗೆ ಹೇಳಬೇಕೆಂದ್ರೆ ಆಸ್ಟ್ರೇಲಿಯಾದಲ್ಲಿ Movember Foundation ಎಂಬ ಸಂಸ್ಥೆಯಿದೆ. ಅದು ಪುರುಷರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇನ್ನು NoShavember ಎಂಬುದೂ ಇದೆ. ಅದು ಪುರುಷರು/ಮಹಿಳೆಯರು ಅಂತಲ್ಲ; ಯಾರೇ ಆಗಿರಲಿ ಕ್ಯಾನ್ಸರ್ ಬಾಧಿತರಾಗಿದ್ದರೆ ಅಂತಹವರಲ್ಲಿ ಆತ್ಮಸ್ಥೈರ್ಯ ತುಂಬಿ, ಸಶಕ್ತರನ್ನಾಗಿಸುವ ಉದ್ದೇಶ ಇರುತ್ತದೆ. ಇದೇನು ಹೆಸರು ವಿಚಿತ್ರವಾಗಿದೆಯಲ್ಲ; ಅರ್ಧಂಬರ್ಧ ತಿಂಗಳ ಹೆಸರಿನಂತೆ ಗೋಚರಿಸುತ್ತಿದೆಯಲ್ಲಾ? ಎಂದು ನೀವು ಹುಬ್ಬೇರಿಸಬಹುದು. ಅದು ನಿಜ ಕೂಡ. ಏಕೆಂದ್ರೆ ಕೊನೆಯಲ್ಲಿರುವ vember ಎಂಬುದು November ತಿಂಗಳ ಸೂಚಕವಾಗಿದೆ. ಅಂದ್ರೆ ನವೆಂಬರ್ ತಿಂಗಳಲ್ಲಿ No Shave ಪಾಲಿಸುವುದು. ಅಂದ್ರೆ ಆ ತಿಂಗಳುದ್ದಕ್ಕೂ ಪುರುಷರು ಷೇವಿಂಗ್ ಮಾಡಿಕೊಳ್ಳದಿರುವುದು!
ಇದೆಲ್ಲ ಆರಂಭವಾಗಿದ್ದು 2003ರಲ್ಲಿ ಮೆಲ್ಬೋರ್ನ್ನಲ್ಲಿ. Travis Garone ಮತ್ತು Luke Slattery ಎಂಬುವವರು Movember Foundation ಅನ್ನು ಹುಟ್ಟುಹಾಕುತ್ತಾರೆ. ಈ ಆರೋಗ್ಯಕಾಳಜೀ ಆಂದೋಲನ ಈಗ ವಿಶ್ವದಾದ್ಯಂತ ಪಸರಿಸಿದೆ. ಪ್ರತಿ Movemberನಲ್ಲಿ ಸುಮಾರು 20 ರಾಷ್ಟ್ರಗಳ ಜನ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ಸುಮಾರು 500 ಕೋಟಿ ರೂಪಾಯಿ ದೇಣಿಗೆ ಸಹ ಬಂದಿದೆ.
ಇನ್ನು NoShavember ಎಂಬುದು ಸಹ ಸರ್ಕಾರೇತರ ಸ್ವಯಂ ಸೇವಾ ಸಂಘಟನೆಯಾಗಿದ್ದು ಕ್ಯಾನ್ಸರ್ ವಿರುದ್ಧ ಜಾಗ್ರತೆ ಮೂಡಿಸುತ್ತದೆ. ಮ್ಯಾಥ್ಯೂ ಹಿಲ್ ಎಂಬುವವರು 2007ರಲ್ಲಿ ಕೊಲಾನ್ ಕ್ಯಾನ್ಸರಿನಿಂದ ಮೃತಪಟ್ಟರು. ಆ ದುಃಖದ ಕರಾಳ ಛಾಯೆಯಲ್ಲಿ ಅವರ ಮಕ್ಕಳು NoShavember ಎಂಬ ಸಂಸ್ಥೆಯನ್ನು 2009ರಲ್ಲಿ ಹುಟ್ಟುಹಾಕಿದರು.
ಕಾಲಾಂತರದಲ್ಲಿ ಇವೆರಡೂ ಸಂಸ್ಥೆಗಳೂ ಕ್ಯಾನ್ಸರ್ಪೀಡಿತರಿಗೆ ನಿಜಕ್ಕೂ ಆಶಾದಾಯಕವಾಗಿವೆ. ಈ ಸಂಸ್ಥೆಗಳ ಸದಸ್ಯರು ಈ ತಿಂಗಳಲ್ಲಿ ತಮ್ಮ ಗಡ್ಡ/ ತಲೆಗೂದಲನ್ನು ತೆಗೆಸಿಕೊಳ್ಳದೆ ಅದಕ್ಕಾಗಿ ತಾವು ವೆಚ್ಚ ಮಾಡಬಹುದಾಗಿದ್ದ ಹಣವನ್ನು ಉಳಿಸುತ್ತಾರೆ. ಜೊತೆಗೆ ಅದರ ಆರೈಕೆಗಾಗಿ ಮಾಡಬಹುದಾಗಿದ್ದ ಖರ್ಚನ್ನೂ ಉಳಿಸಿರುತ್ತಾರೆ. ಕೊನೆಗೆ ಆ ಹಣವನ್ನೆಲ್ಲ ದೇಣಿಗೆಯ ರೂಪದಲ್ಲಿ ಸಂಸ್ಥೆಗೆ ನೀಡುತ್ತಾರೆ. ಸಂಸ್ಥೆ ಅದನ್ನು ಕ್ಯಾನ್ಸರ್ಪೀಡಿತರಿಗೆ, ಕ್ಯಾನ್ಸರ್ ಕುರಿತಾದ ಸಂಶೋಧನೆ, ಶಿಕ್ಷಣಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳುತ್ತದೆ.
So, ಇದು ಹೇಗೂ ನಮಗೆ ನವೆಂಬರ್ ಆರಂಭದ ದಿನಗಳು. ಈ ಪುಟ್ಟ ಬರಹ ಓದಿದ ಮೇಲೆ ನೀವೂ ಕ್ಯಾನ್ಸರ್ಪೀಡಿತರ ಬಗ್ಗೆ ಕಾಳಜಿ ವಹಿಸುತ್ತಾ.. ನಿಮಗೆ ತೋಚಿದಂತೆ ನಿಮ್ಮ ಕೂದಲಿನ ಮಹಿಮೆಯನ್ನು ಅರ್ಥೈಸಿಕೊಳ್ಳಬಹುದು..
Published On - 12:53 pm, Tue, 3 November 20