My Covid Experience : ಇದು ಪುನರ್ಜನ್ಮವೇ, ಎಷ್ಟೆಲ್ಲ ಜನರ ಋಣ ತೀರಿಸುವುದು ಬಾಕಿ ಇದೆ…

|

Updated on: Jun 12, 2021 | 7:28 PM

Covid19 : ‘ಕ್ಲಾರಿಥ್ರೋಮೈಸಿನ್ ಎಂಬ ಆ್ಯಂಟಿಬಯಾಟಿಕ್ ಅನ್ನು ಇಂಟ್ರಾವೀನಸ್ ಮುಖಾಂತರ ದೇಹಕ್ಕೆ ಕೊಡಲು ಶುರು ಮಾಡಿಬಿಟ್ಟಿದ್ದರು. ಅದನ್ನು ಕೊಟ್ಟ ಸ್ವಲ್ಪ ಹೊತ್ತಲ್ಲೇ ನನ್ನ ಬಲ ಭಾಗ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿತು. ನನ್ನ ಹಿಂದಿದ್ದ ಮಾನಿಟರ್ ಕೂಗಿಕೊಳ್ಳಲು ಆರಂಭಿಸಿತು. ನನಗೆ ಪ್ರಜ್ಞೆ ತಪ್ಪುತ್ತಿದೆ. ಬಲಗಡೆಯ ಕೈ ಕಾಲುಗಳನ್ನು ಆಡಿಸಲು ಆಗುತ್ತಿಲ್ಲ ಎಂದು ಕೂಗಲು ಪ್ರಯತ್ನಿಸಿದೆ.’ ಪಚ್ಚೆ ನಂಜುಂಡಸ್ವಾಮಿ

My Covid Experience : ಇದು ಪುನರ್ಜನ್ಮವೇ, ಎಷ್ಟೆಲ್ಲ ಜನರ ಋಣ ತೀರಿಸುವುದು ಬಾಕಿ ಇದೆ...
ಪಚ್ಚೆ ನಂಜುಂಡಸ್ವಾಮಿ
Follow us on

ಕೋವಿಡ್; ಯಾರಿಗೆ ಯಾರೂ ಇಲ್ಲ ಎಂಬ ಮುಖವೂ ಇದಕ್ಕಿದೆ. ಯಾರಿಗೋ ಯಾರೋ ಇದ್ದಾರೆ ಎಂಬ ಬೆನ್ನೂ ಇದಕ್ಕಿದೆ. ಇದರ ಅದೃಶ್ಯನಾಲಗೆಯಿಂದ ತಪ್ಪಿಸಿಕೊಳ್ಳುವುದೇ ಕ್ಷಣಕ್ಷಣದ ತಪನೆ. ಆದರೂ ಬಿಟ್ಟೀತೇ ತಟ್ಟದೆ? ‘ನನಗೆ ಹೀಗಾಯ್ತು, ಹೀಗಾಗಿದೆ, ಹೀಗಾಗಿತ್ತು, ಹೀಗೆ ಮಾಡಿದೆ’ ಸ್ವತಃ ಅನುಭವಿಸಿದ್ದನ್ನು ಹೇಳಿಕೊಳ್ಳಲು ಸ್ವಲ್ಪ ಧೈರ್ಯ, ಬಿಚ್ಚುಮನಸ್ಸು ಬೇಕು ಮತ್ತು ಹೆಚ್ಚು ಸರಳತೆ ಬೇಕು. ‘ನಿಮಗೂ ಬಂದಿದೆಯಾ’ ಪ್ರಶ್ನಾರ್ಥಕಕ್ಕೋ, ಉದ್ಘಾರವಾಚಕಕ್ಕೋ ಇದು ವಾಲದೆ ‘ನನ್ನಿಂದೇನಾದರೂ ಸಹಾಯ’ ಎಂಬಲ್ಲಿಗೆ ಮುಂದುವರಿಸಲು ತುಸುವಾದರೂ ಅಂತಃಕರಣ ಬೇಕು. ಇದೆಲ್ಲದರ ತೇಲುಮುಳುಗುವಿನೊಂದಿಗೆ ನಾವೆಲ್ಲ ಧೇನಿಸುತ್ತಿರುವುದು ನಿರಾಯಾಸ ಬದುಕಿಗೆ ಮರಳುವುದನ್ನು. ಇನ್ನೇನು ಕೆಲ ತಿಂಗಳುಗಳಲ್ಲಿ ಅದೂ ಸಾಧ್ಯವಾಗುತ್ತದೆ. ಅದಕ್ಕಿಂತ ಮೊದಲು ಕೋವಿಡ್​ನಿಂದಾಗಿ ಐಸೋಲೇಶನ್​ಗೆ ಒಳಗಾಗಿ ನಡುಗಡ್ಡೆಯಂತಾಗಿದ್ದ ಬದುಕಿನ ಅನುಭವದೆಳೆಗಳನ್ನು ಇಲ್ಲಿ ಬಿಚ್ಚಿಕೊಂಡು ಹಗುರಾಗಬಹುದಲ್ಲ? ಇಂದಿನಿಂದ ಶುರುವಾಗುವ ಹೊಸ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನನ್ನ ಕೋವಿಡ್ ಅನುಭವ’.

ಕೋವಿಡ್​ನಿಂದ ಸುಧಾರಿಸಿಕೊಂಡವರು ತಮ್ಮ ಅನುಭವಗಳನ್ನು ಇಲ್ಲಿ ಮೆಲುಕು ಹಾಕಲಿದ್ದಾರೆ. ನೀವೂ ಕೂಡ ಬರೆಯುವ ಮೂಲಕ ಈ ಸರಣಿಯಲ್ಲಿ ಭಾಗಿಯಾಗಬಹುದು. tv9kannadadigital@gmail.com

*
ಯುವ ರೈತ ನಾಯಕ ಪಚ್ಚೆ ನಂಜುಂಡಸ್ವಾಮಿ ಅವರು ಸದ್ಯ ಫೇಸ್​ಬುಕ್​ನ ‘ರೈತರಿಂದ ನೇರ ಗ್ರಾಹಕರಿಗೆ’ ಗುಂಪನ್ನು ನಿರ್ವಹಿಸುತ್ತ, ಸಾವಿರಾರು ರೈತರು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರ ಮಾರಾಟ ಲಾಭ ಪಡೆಯಲು ಕಾರಣೀಕರ್ತರಾಗಿದ್ದಾರೆ. ಕೊರೊನಾಕ್ಕೆ ಒಳಗಾದ ಅವರು ಸಾವಿನ ದವಡೆಯಿಂದ ಪಾರಾಗಿ ಬಂದ ಅನುಭವ ಹಂಚಿಕೊಂಡಿದ್ದಾರೆ.
*
ಪರಿಚಯಸ್ಥರೊಬ್ಬರ ಅಪಘಾತಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಹೋಗಿದ್ದೆ. ಏನೋ ಸಮಸ್ಯೆಯಾಗಿದ್ದರಿಂದ ಅದನ್ನು ಪರಿಹರಿಸಬೇಕಾಗಿ ಬಂದಿತು. ಸಾಕಷ್ಟು ಜನರೂ ನೆರೆದಿದ್ದರು. ಮಾರನೆಯ ದಿನ ಮತ್ತೊಂದು ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವಂತಹ ಸಂದರ್ಭದಲ್ಲಿ ನನಗ್ಯಾಕೋ ಚಳಿ ಅನ್ನಿಸಲು ಶುರುವಾಯಿತು. ಅದರ ಮರುದಿನ ದಿನ ಚಳಿ ಜೊತೆ ಜ್ವರ ನೆಗಡಿ ಕೆಮ್ಮು ಬಂದೇಬಿಟ್ಟಿತು. ಸಹಜವಾದ ಜ್ವರ, ನೆಗಡಿ ಕೆಮ್ಮು ಇರಬಹುದು ಎಂದು ನಾಲ್ಕು ದಿನ ಮಾತ್ರೆ ನುಂಗಿದೆ. ಆದರೆ ಆ ಎರಡು ಮೂರು ದಿನಗಳಲ್ಲಿ ಗಂಟಲಿನಲ್ಲಿದ್ದ ಕಫ ಶ್ವಾಸಕೋಶಕ್ಕೆ ಹೋಗಿ ಉಸಿರಾಟದ ತೊಂದರೆ ಶುರುವಾಗಿಯೇ ಬಿಟ್ಟಿತು. ಮತ್ತೂ ನಾಲ್ಕು ದಿನ ಅದೇ ಮಾತ್ರೆಗಳನ್ನು ಸೇವಿಸಿದೆ. ಆದರೆ ಜ್ವರ ಕಡಿಮೆ ಆಗಲೇ ಇಲ್ಲ. 102 ಡಿಗ್ರಿ ತೋರಿಸುತ್ತಿತ್ತು. ತಲೆ ಸುತ್ತಲು ಶುರುವಾಯಿತು. ಹೆಜ್ಜೆ ಹಾಕುವುದಕ್ಕೂ ಕಷ್ಟವಾಯಿತು. ಅದೃಷ್ಟವಶಾತ್ ನನ್ನನ್ನು ಭೇಟಿ ಮಾಡಲು ಬೆಂಗಳೂರಿನಿಂದ ಗೆಳೆಯ ಕುಲದೀಪ್ ಬಂದಿದ್ದ. ನನ್ನ ಪರಿಸ್ಥಿತಿಯ ಬಗ್ಗೆ ಅವನಿಗೆ ಮನವರಿಕೆ ಮಾಡಿ, ಆಸ್ಪತ್ರೆಗೆ ಸೇರಿಸು ಎಂದು ಕೇಳಿಕೊಂಡೆ. ಅವನು ಹತ್ತಿರದಲ್ಲೇ ಇದ್ದ ಹೋಟೆಲ್​ನಲ್ಲಿ ಕಿತ್ತಳೆ ಹಣ್ಣಿನರಸ ಮತ್ತು ರವೆ ಇಡ್ಲಿ ತಂದುಕೊಟ್ಟ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದ.

ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇರಲಿಲ್ಲ. ಚಿಕ್ಕಮಗಳೂರಿನ ಗೆಳೆಯರಾದ ಮಹೇಶ್ ರವರು ಆ ಆಸ್ಪತ್ರೆಯ ಜೊತೆ ಉದ್ಯಮದ ವ್ಯವಹಾರ ಇಟ್ಟುಕೊಂಡಿದ್ದರಿಂದ ಅವರಿಂದ ಸಹಾಯವಾಗಬಹುದು ಎಂದು ಕೇಳಿಕೊಂಡೆ. ರಾತ್ರಿ ಒಂಬತ್ತು ಗಂಟೆ. ಹಿಂದೇಟು ಹಾಕುತ್ತಲೇ ಹಿತೈಷಿಗಳಾದ ಮಾಜಿ ಸಚಿವೆ ಗೀತಾ ಮಹದೇವ್ ಪ್ರಸಾದ್ ಅವರಿಗೆ ಕರೆ ಮಾಡಿದೆ. ತಕ್ಷಣ ಅತೀವ ಕಾಳಜಿಯಿಂದ ತಮ್ಮ ಪರಿಚಯಸ್ಥರಿಗೆ ಹೇಳಿ ಬೆಡ್ ಕೊಡಿಸಿದರು. ಎಮರ್ಜೆನ್ಸಿ ವಾರ್ಡಿನಲ್ಲಿ ಶುಶ್ರೂಷೆ ಮಾಡಿ, ನಂತರ ಐ.ಸಿ.ಯುಗಿಂತ ಮೇಲ್ಪಂಕ್ತಿಯ ವಾರ್ಡ್ ಆದ ಹೆಚ್.ಡಿ.ಯುಗೆ ಸ್ಥಳಾಂತರಿಸಿದರು. ಅಲ್ಲಿ ಕೋವಿಡ್ ಟೆಸ್ಟ್ ಮಾಡಲಾಯಿತು. ರ್ಯಾಪಿಡ್ ಟೆಸ್ಟ್ ನೆಗೆಟಿವ್ ಬಂದಿತು. ಒಂದು ದಿನದ ನಂತರ ಕಫದ ಟೆಸ್ಟ್ (RT PCR) ಪಾಸಿಟಿವ್ ಬಂದಿತು. ನನಗೆ ಉಸಿರಾಟದ ತೊಂದರೆ ದೊಡ್ಡ ಮಟ್ಟದಲ್ಲೇ ಇತ್ತು. ಅಲ್ಲೊಬ್ಬ ಡಾಕ್ಟರ್, ಅಲ್ಲಿದ್ದ ನರ್ಸ್​ಗೆ ಆಕ್ಸಿಜನ್ ಕೊಡಲು ಹೇಳಿದರೂ, ಆಕೆ ಕೊಡದೆ ಹೋದರು. ನಾನು ವಾರ್ಡಿನಲ್ಲಿ ಎರಡು ದಿನ ಕುಳಿತೇ ಇದ್ದೆ. ಕಾರಣ ಕುಳಿತಾಗ ಉಸಿರಾಟ ಸರಾಗ ಅನ್ನಿಸುತ್ತಿತ್ತು.

ಪಕ್ಕದಲ್ಲಿ ಸುಮಾರು ಅರುವತ್ತು ದಾಟಿದ ಇಬ್ಬರು ರೋಗಿಗಳ ಸಾವನ್ನು ಕಣ್ಣಾರೆ ಕಂಡು ಹೆದರಿ ಹೋಗಿದ್ದೆ. ಬದುಕು ನೀರಿನ ಮೇಲಿನ ಗುಳ್ಳೆ ಎಂದು ಅರಿವಾದದ್ದು ಆಗಲೇ. ಉಸಿರಾಟದ ತೊಂದರೆ ಇರುವ ಯಾವುದೇ ರೋಗಿಯನ್ನೂ ಮಲಗಿಸಬಾರದು. ಅವರಿಬ್ಬರ ಸಾವಾಗಿದ್ದು ಅವರು ಮಲಗಿದ ನಂತರವೇ. ನಿದ್ರೆ ಬಂದರೆ ಕುಳಿತುಕೊಂಡೆ ನಿದ್ರೆ ಮಾಡುವುದು ಅಥವಾ ಬೋರಲಾಗಿ ಮಲಗುವುದು ಶ್ವಾಸಕೋಶದ ಸಮಸ್ಯೆ ಇದ್ದಾಗ ಅತೀ ಮುಖ್ಯ. ಒಟ್ಟಿನಲ್ಲಿ ಶ್ವಾಸಕೋಶದ ಮೇಲೆ ಒತ್ತಡ ಬೀಳಬಾರದು. ಅಕಸ್ಮಾತ್ ಬಿದ್ದರೆ, ಹೃದಯ ತನ್ನ ಕೆಲಸವನ್ನು ನಿಲ್ಲಿಸುತ್ತಾ ಬರುತ್ತದೆ. ನಾನು ದಾಖಲಾಗಿದ್ದ ಮೈಸೂರಿನ ಖಾಸಗಿ ಆಸ್ಪತ್ರೆಯು ಕೊವಿಡ್ ಕೇರ್ ಸೆಂಟರ್ ಆಗಿರಲೇ ಇಲ್ಲ. ಆದಾಗ್ಯೂ ನನಗೆ ಅಲ್ಲಿ ಟ್ರೀಟ್ಮೆಂಟ್ ಶುರು ಮಾಡಿಯೇಬಿಟ್ಟರು. ಕ್ಲಾರಿಥ್ರೋಮೈಸಿನ್ ಎಂಬ ಆ್ಯಂಟಿಬಯಾಟಿಕ್ ಅನ್ನು ಇಂಟ್ರಾವೀನಸ್ ಮುಖಾಂತರ ದೇಹಕ್ಕೆ ಕೊಡಲು ಶುರು ಮಾಡಿಬಿಟ್ಟಿದ್ದರು. ಅದನ್ನು ಕೊಟ್ಟ ಸ್ವಲ್ಪ ಹೊತ್ತಲ್ಲೇ ನನ್ನ ಬಲ ಭಾಗ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿತು. ನನ್ನ ಹಿಂದಿದ್ದ ಮಾನಿಟರ್ ಕೂಗಿಕೊಳ್ಳಲು ಆರಂಭಿಸಿತು. ನನಗೆ ಪ್ರಜ್ಞೆ ತಪ್ಪುತ್ತಿದೆ. ಬಲಗಡೆಯ ಕೈ ಕಾಲುಗಳನ್ನು ಆಡಿಸಲು ಆಗುತ್ತಿಲ್ಲ ಎಂದು ಕೂಗಲು ಪ್ರಯತ್ನಿಸಿದೆ. ಅಲ್ಲೊಬ್ಬ ಬ್ರದರ್ ತಕ್ಷಣ ಆ ಔಷಧ ಹರಿಯುತ್ತಿದ್ದ ಪೈಪನ್ನು ಕಿತ್ತುಕೊಂಡು, ದೊಡ್ಡ ಪ್ರಮಾಣದಲ್ಲಿ ಹೈಡ್ರೊಕಾರ್ಟಿಸಾನ್ ಔಷಧವನ್ನು ಚುಚ್ಚಿದ. ಒಂದೈದು ನಿಮಿಷದಲ್ಲಿ ನಾನು ಸಹಜ ಸ್ಥಿತಿಗೆ ಮರಳಿದೆ. ಅದೃಷ್ಟವಶಾತ್ ಗೀತಾ ಮಹದೇವ್ ಪ್ರಸಾದ್ ಅವರು ಆ ಕ್ಷಣಕ್ಕೆ ಫೋನ್ ಮಾಡಿದರು. ಹೀಗೆಲ್ಲಾ ಆಯಿತು ಮೇಡಂ ಎಂದು ನೋವನ್ನು ತೋಡಿಕೊಂಡೆ.

ಸಾಂದರ್ಭಿಕ ಚಿತ್ರ

ತಕ್ಷಣವೇ ಅವರು ಸುತ್ತೂರು ಜೆ.ಎಸ್​.ಎಸ್​ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಡ್​ ಬಗ್ಗೆ ವಿಚಾರಿಸಿದರು. ಅಲ್ಲಿ ಒಂದೇ ಒಂದು ಬೆಡ್ ಖಾಲಿ ಇತ್ತು. ಆ್ಯಂಬುಲೆನ್ಸ್​ನಲ್ಲಿ ನನ್ನ ಪ್ರಯಾಣ ಮಾತ್ರ ನರಕಯಾತನೆಯಿಂದ ಕೂಡಿತ್ತು. ವಾಂತಿ ಶುರುವಾಯಿತು. ನನ್ನ ಭಾವ ಲೂಕಾ ಮತ್ತು ಗೆಳೆಯ ಪುಟ್ಟಮಹೇಶ ಇಬ್ಬರೂ ಕೋವಿಡ್ ಎಂಬ ಅಪಾಯಕಾರಿ ಕಾಯಿಲೆ ಲೆಕ್ಕಿಸದೆ ಆ ಮಧ್ಯರಾತ್ರಿ ನನಗೆ ಸಹಾಯ ಮಾಡಿದರು. ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅನೇಕ ಚುಚ್ಚುಮದ್ದುಗಳನ್ನು ಕೊಟ್ಟರು. ಅದರಲ್ಲಿ ರೆಮ್ಡಿಸಿವರ್ ಚುಚ್ಚುಮದ್ದು ಪ್ರಮುಖವಾಗಿತ್ತು. ಮುಂಜಾನೆ ಎದ್ದೇಳುತ್ತಿದ್ದಂತೆಯೇ ನನ್ನ ನರಳಾಟ ಬಹುತೇಕ ಕಡಿಮೆಯಾಗಿತ್ತು. ಆಕ್ಸಿಜನ್ ಸಹಾಯದಿಂದ ಇಡೀ ರಾತ್ರಿ ಕಳೆದಿದ್ದೆ. ಹೆದರಿದ್ದೆ, ಆದರೆ ಎದೆಗುಂದಿರಲಿಲ್ಲ.ಕಣ್ತೆರೆದು ನೋಡಿದರೆ ಯಾವುದೋ ಒಂದು ಉಪಗ್ರಹದಲ್ಲಿ ಇದ್ದೇನೇನೋ ಎಂದೆನಿಸುತ್ತಿತ್ತು. ಅಲ್ಲಿದ್ದ ನರ್ಸ್​ಗಳು ಮತ್ತು ಡಾಕ್ಟರ್​ಗಳು ಪಿಪಿಇ ಕಿಟ್​ ಧರಿಸಿ ಓಡಾಡುತ್ತಿದ್ದುದನ್ನು ನೋಡಿದಾಗ ಅನ್ಯಗ್ರಹದಲ್ಲಿದ್ದೇನೆ ಎನ್ನಿಸುತ್ತಿತ್ತು. ನನ್ನ ಭಾವ ಲೂಕಾ ಸತ್ವಯುತ ಊಟ ತಿಂಡಿ ತಂದುಕೊಡುತ್ತಿದ್ದರು ಮತ್ತು ವೈದ್ಯರುಗಳನ್ನು ಭೇಟಿ ಮಾಡಿ ನನ್ನ ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ವಿಚಾರಿಸುತ್ತಿದ್ದರು.

ಎರಡನೆಯ ದಿನ ಆಸ್ಪತ್ರೆಯಲ್ಲಿ ಇದ್ದ ಹೊದಿಕೆಯ ಕಾರಣದಿಂದ ನನಗೆ ಶ್ವಾಸಕೋಶದಲ್ಲಿ ಕಿರಿಕಿರಿ ಉಲ್ಬಣಿಸಿತ್ತು. ಕಾರಣ ಹೊದಿಕೆಯ ಸಿಂಥೆಟಿಕ್ ಕಣಗಳು ಶ್ವಾಸಕೋಶ ಸೇರಿ ಕಿರಿಕಿರಿ ಉಂಟುಮಾಡುತ್ತಿದ್ದವು. ಎದೆ ಉರಿಯುತ್ತಿದೆ ಎಂದು ಅಲ್ಲಿದ್ದ ನರ್ಸ್​ಗಳಿಗೆ ಕೇಳಿದರೂ, ಅವರು ಸರಿಯಾಗಿ ಸ್ಪಂದಿಸಲಿಲ್ಲ. ಭಾವನ ಸಹಾಯದಿಂದ ಬೇರೆ ಹೊದಿಕೆ ತರಿಸಿಕೊಂಡೆ. ಸುಮಾರು ಎಂಟು ದಿನಗಳ ಕಾಲ ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತ ಕುಳಿತೇ ಇದ್ದೆ. ಬೆನ್ನು ನೋವು, ಸೊಂಟದ ನೋವು ಬಂದಾಗ ಒಂದರ್ಧಗಂಟೆ ಬೋರಲಾಗಿ ಮಲಗುವ ಪ್ರಯತ್ನವಷ್ಟೇ ಮಾಡುತ್ತಿದ್ದೆ ಹೊರತು ನನಗೆ ಮಲಗಲು ಸಾಧ್ಯವೇ ಆಗುತ್ತಿರಲಿಲ್ಲ.

ಮಾರನೆಯ ದಿನ ನನ್ನ ಹುಟ್ಟಿದ ದಿನವಾಗಿತ್ತು. ನನ್ನ ಗೆಳೆಯರು ಹಿತೈಷಿಗಳು ಫೋನ್, ವಾಟ್ಸಾಪ್ ಹಾಗೂ ಫೇಸ್ ಬುಕ್ ಮುಖಾಂತರ ಶುಭಾಶಯಗಳನ್ನು ಹೇಳುತ್ತಿದ್ದರು. ಇಟಲಿ ದೇಶದ ಸ್ನೇಹಿತರು ವಿಡಿಯೋ ಸಂದೇಶಗಳ ಮುಖಾಂತರ ಶುಭಾಶಯಗಳನ್ನು ಹೇಳುತ್ತ ಧೈರ್ಯ ತುಂಬಿದರು. ಬಿಸಿನೀರನ್ನು ಜಾಸ್ತಿ ಸೇವಿಸಿದ್ದರಿಂದ ಒಂದು ಮಧ್ಯಾಹ್ನ ಎದೆಯ ಹಿಂದೆ ಅಂಟಿಕೊಂಡಿದ್ದ ಘನ ಪ್ರಮಾಣದ ಕಫವು ಕೆಳಗೆ ಬಿದ್ದಂತಾಯಿತು. ತಕ್ಷಣ ಶೌಚಾಲಯಕ್ಕೆ ದೌಡಾಯಿಸಿದೆ. ವಾಪಾಸು ಬಂದು ಬೆಡ್ ಮೇಲೆ ಮಲಗಿಕೊಂಡ ಮೇಲೆ ಶೇ. ಐವತ್ತರಷ್ಟು ನನಗೆ ಆರಾಮವೆನ್ನಿಸಿತು. ಮತ್ತಷ್ಟು ಮಾತ್ರೆಗಳನ್ನು ಸೇವಿಸಿದ ಮೇಲೆ ಹಂತಹಂತವಾಗಿ ಶ್ವಾಸಕೋಶದಲ್ಲಿ ಕಟ್ಟಿಕೊಂಡಿದ್ದ ಕಫ ಎಲ್ಲವೂ ಕರಗಿ ಹೋಯಿತು. ಕೋವಿಡ್ ನೆಗೆಟಿವ್ ಬಂದ ನಂತರ ಡಿಸ್ಚಾರ್ಜ್ ಮಾಡಿದರು. ನನ್ನ ಧ್ವನಿ ಪೂರ್ತಿ ಕ್ಷೀಣಿಸಿತ್ತು. ಶ್ವಾಸಕೋಶವನ್ನು ಹುಳುಗಳು ತಿನ್ನುತ್ತಿವೆ ಎಂದು ಭಾಸವಾಗುತ್ತಿತ್ತು. ನಾನು ಸಹಜ ಸ್ಥಿತಿಗೆ ಮರಳಿ ಸಂಪೂರ್ಣ ಫಿಟ್ ಆಗುವುದಕ್ಕೆ ಮೂರರಿಂದ ಆರು ತಿಂಗಳುಗಳೇ ಬೇಕಾದವು.

ಡಿಸ್ಚಾರ್ಜ್ ಆದ ಎರಡು ದಿನಗಳ ನಂತರ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸಾವಾಗಿತ್ತು. ನನ್ನ ಧ್ವನಿಯಲ್ಲಿ ಅಷ್ಟು ಶಕ್ತಿ ಇಲ್ಲದಿದ್ದರೂ ಎಸ್.ಪಿ.ಬಿ ಅವರ ಹಾಡುಗಳ ಮೆಡ್ಲಿ (ಹಾಡುಗಳ ಮಿಶ್ರಣ) ರೆಕಾರ್ಡ್ ಮಾಡಿ ನಮನ ಅರ್ಪಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಅದನ್ನು ಇಷ್ಟಪಟ್ಟರು, ಶೇರ್ ಮಾಡಿಕೊಂಡರು. ಇದರಿಂದ ನನ್ನ ಆತ್ಮಬಲ ಇಮ್ಮಡಿಗೊಂಡಿತು. ಒಟ್ಟಾರೆ ಕೊವಿಡ್​ನಿಂದ ಗುಣವಾಗಿದ್ದು ಪುನರ್ಜನ್ಮವೇ ಎನ್ನಿಸಿತು.

ಇದನ್ನೂ ಓದಿ : Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ; ‘ನಾನ್ರೀ ಮಾತಾಡ್ತಿರೋದು ಕೊಡ್ರಿ ಬೆಡ್ ಅವ್ರಿಗೆ

Published On - 5:30 pm, Sat, 12 June 21