Woman Director; ನಾನೆಂಬ ಪರಿಮಳದ ಹಾದಿಯಲಿ: ಸ್ಕ್ರಿಪ್ಟ್​ ರೆಡಿಯಾಗ್ತಿದೆ ‘ಕಾವೇರಿ 24/7‘

|

Updated on: Mar 08, 2021 | 6:39 PM

'ಸ್ವಲ್ಪ ಯೋಚಿಸಿ, ಶೂಟಿಂಗ್ ಸೆಟ್​ನಲ್ಲಿ ಕ್ಯಾಮೆರಾ ಎದುರು ಕುಳಿತಾಗ, ಅದು ಗಂಡೋ ಹೆಣ್ಣೋ ಎಂದು ಕೇಳುವುದಿಲ್ಲ. ಯಾರು ಶೂಟ್ ಮಾಡಿದರೂ ಅದದೇ ಫಲ ಕೊಡುತ್ತದೆ. ಯಾವುದೋ ಮೂಲೆಯಲ್ಲಿ ಕೂತು ನೋಡುವ ವ್ಯಕ್ತಿ ಕೂಡ ನಿರ್ಮಿಸಿದ್ದು, ನಿರ್ದೇಶನ ಮಾಡಿದ್ದು ಹೆಣ್ಣೋ ಗಂಡೋ ಅಂತ ಕೂಡ ಕೇಳುವುದಿಲ್ಲ. ನೋಡುಗರಿಗೆ ಮನರಂಜನೆ ಬೇಕು ಅಷ್ಟೇ.‘ ಸುಮನ್​ ಕಿತ್ತೂರು

Woman Director; ನಾನೆಂಬ ಪರಿಮಳದ ಹಾದಿಯಲಿ: ಸ್ಕ್ರಿಪ್ಟ್​ ರೆಡಿಯಾಗ್ತಿದೆ ‘ಕಾವೇರಿ 24/7‘
ಸುಮನ್ ಕಿತ್ತೂರು
Follow us on

ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಕಾವೇರಿ! ಒಮ್ಮೆ ಗೊತ್ತಿಲ್ಲ ಅಂತ ಹೇಳಿಬಿಡಿ ನೋಡೋಣ. ಕಿರಿಗೂರಿನ ಗಯ್ಯಾಳಿಗಳು ಬೆನ್​ ಹತ್ಕೊಂಡು ಆ ದಿನಗಳಿಗೆ ದರದರ ಎಳಕೊಂಡು ಹಾರೆ ಒನಕೆ ಹಿಡಕೊಂಡು ಬಂದುಬಿಡ್ತಾರೆ. ಎದೆಗಾರಿಕೆ ಬೇಕು ಗೊತ್ತಿಲ್ಲ ಅಂತ ಹೇಳೋದಕ್ಕೂ. ಸ್ಲಮ್​ ಬಾಲನಿಂದ ಹಿಡಿದು ಸಂತೆಯಲ್ಲಿರೋ ಕಳ್ಳರ ತನಕಾನೂ ಕಾವೇರಿ ಅಂದ್ರೆ ಕಣ್​ಕಣ್​ ಬಿಡ್ತಾರೆ. ಅಂಥದ್ರಲ್ಲಿ ನೀವೂ… ಹೋಗಲಿ, ನಮ್ಮ ಸಿನೆಮಾ ಡೈರೆಕ್ಟರ್ ಸುಮನ್ ಕಿತ್ತೂರ್ ಗೊತ್ತಲ್ವಾ? ಕಿರುಗೂರಿನ ಗಯ್ಯಾಳಿಗಳು ಮುಗಿಸಿದ ಮೇಲೆ ಪಾಂಡಿಚೇರಿಗೆ ಪ್ರಾಜೆಕ್ಟಿಗೆ ಅಂತ ಹೋದ್ರಲ್ವಾ ಅವ್ರು… ಆಮೇಲೇನಾಯ್ತು ಅಂತ ಗೊತ್ತಾ ನಿಮಗೆ? ಕಣ್ಣಾಡಿಸ್ತಾ ಹೋಗಿ. ಕಾವೇರಿನೂ ನಿಮಗಲ್ಲೇ ಸಿಗ್ತಾರೆ. 

Project: ಫ್ರೆಂಚ್​ ಕಂಪೆನಿಯೊಂದಕ್ಕಾಗಿ ಮಹಿಳಾ ಸಬಲೀಕರಣದ ಕುರಿತು ಕಿರುಚಿತ್ರ ತಯಾರಿಕೆ
Director: ಸುಮನ್​ ಕಿತ್ತೂರ್
Location: ಪಾಂಡಿಚೇರಿ
Still Photographer : ಶ್ರೀನಿವಾಸ್

(ಮುರುಕಲುಗನ್ನಡದಲ್ಲಿ ಯಾರೋ ಫೋನಿನಲ್ಲಿ ಸಂಭಾಷಿಸುತ್ತಿರುವ ಹಿನ್ನೆಲೆ)

ಸುಮನ್ : ಅರೆ ಶ್ರೀನಿವಾಸ್! ನಿಮಗೆ ಕನ್ನಡ ಬರುತ್ತಾ? ಪ್ಲೀಸ್ ನನಗೆ ತಮಿಳು ಕಲಿಸಿಕೊಡಿ. ಇಲ್ಲಿ ಹಳ್ಳಿಗಳಿಗೆ ಹೋಗಿ ಕೆಲಸ ಮಾಡೋವಾಗ ನನಗೆ ಬಹಳಾನೇ ತೊಂದರೆಯಾಗ್ತಿದೆ.
ಶ್ರೀನಿವಾಸ್ : ಸ್ವಲ್ಪ ಸ್ವಲ್ಪ ಬರುತ್ತೆ, ನನ್ನ ತಾಯಿ ಶಿವಮೊಗ್ಗದವರು.

Location : ಪಾಂಡಿಚೇರಿಯೆಂಬ ಮೋಹಕ ಊರು, ಹಾಸಿಕೊಂಡ ರಸ್ತೆಗಳು, ಕಡಲಿಗಂಟಿದ ಹಳ್ಳಿಗಳು, ಮೀನಬಿಡಿಸುವ ಹೆಣ್ಣುಗಳು, ಗಾಳಬೀಸುವ ಗಂಡುಗಳು, ಲೋಕಮರೆತು ಆಡುವ ಮಕ್ಕಳು, ಹುಲ್ಲುಹೊದ್ದ ಗುಡಿಸಲುಗಳು, ಹೆಂಚು ಹೊದ್ದ ಮನೆಗಳು, ದಟ್ಟಬಣ್ಣದ ಗೋಡೆಗಳು, ಬಳ್ಳಿಹಬ್ಬಿದ ಕಿಟಕಿಗಳು, ಅರವಿಂದ ಆಶ್ರಮದ ಧ್ಯಾನಕೋಣೆಗಳು, ಉಕ್ಕುವ ಸಮುದ್ರದಲೆಗಳು, ನಕ್ಕಂತೆ ಮಾಡುವ ಸಣ್ಣಸಣ್ಣ ತೆರೆಗಳು, ಆರ್ಭಟಿಸುವ ಹೆದ್ದೆರೆಗಳು, ನಿಂತನಿಂತಲ್ಲೇ ಒಳಗೆಳೆದುಕೊಳ್ಳುವ ಮರಳ ಕಣಗಳು, ಹಚ್ಚ ಹಗಲುಗಳು, ದಟ್ಟ ರಾತ್ರಿಗಳು, ರಣ ಮಧ್ಯಾಹ್ನಗಳು, ತೆಳು ಸಂಜೆಗಳು, ಚಡಪಡಿಕೆಯ ಮಧ್ಯರಾತ್ರಿಗಳು, ತೇಲುವ ಎಳೆಮುಂಜಾವುಗಳು…

ವರ್ಷದ ನಂತರ

ಶ್ರೀನಿವಾಸ್: ಮದುವೆಯಾಗೋಣವಾ?
ಸುಮನ್: ಗೊತ್ತಲ್ಲ ನನ್ನ ಕೆಲಸ 24/7
ಶ್ರೀನಿವಾಸ್: ಆಗಲಿ ಅದಕ್ಕೇನಂತೆ?
ಸುಮನ್: ಅಲ್ರಿ ನಿಮಗೆ ಗೊತ್ತಾ ನಾನೊಬ್ಬ ಸಿನೆಮಾ ಡೈರೆಕ್ಟರ್ ಅಂತ?

ಸುಮನ್ (ಸ್ವಗತ): ಡಾಕ್ಯುಮೆಂಟರಿ ಮಾಡಿಕೊಂಡು ಓಡಾಡಿಕೊಂಡಿದ್ದ ಹುಡುಗಿ ಎಂದುಕೊಂಡಿದ್ದ ಅನ್ಸತ್ತೆ. ಒಮ್ಮೆಲೆ ಮೀಟರ್ ಆಫ್​!

ಶ್ರೀನಿವಾಸ್: ಈ ತನಕ ನಾನು ಕನ್ನಡ ಸಿನೆಮಾಗಳನ್ನೇ ನೋಡಿಯೇ ಇಲ್ಲ. ನಿಮ್ಮದೊಂದು ಸಿನೆಮಾ ನೋಡಬಹುದಾ?

ಸುಮನ್ (ಸ್ವಗತ): ಪರವಾಗಿಲ್ಲ ಸಿನೆಮಾ ನೋಡಲು ಆಸಕ್ತಿ ತೋರಿಸುತ್ತಿದ್ದಾನೆ ಹುಡುಗ. ನೋಡಲಿ ನೋಡಲಿ ನೋಡಿದಮೇಲೆ ಹೆದರಿಕೊಂಡು ಓಡೋದ್ ಗ್ಯಾರಂಟಿ!

ಒಬ್ಬನೇ ಕುಳಿತು ಸಿನೆಮಾ ನೋಡಿ ಮುಗಿಸಿದ ಶ್ರೀನಿವಾಸ್: ಸುಮನ್, ಮದುವೆಯಾಗೋಣ್ವಾ?

ಸುಮನ್ (ಸ್ವಗತ): ಪರ್ವಾಗಿಲ್ವೇ ಹುಡುಗ ‘ಎದೆಗಾರಿಕೆ’ ನೋಡಿದ ಮೇಲೂ ವಾಪಸ್​ ಬಂದಿದಾನೆ, ಮತ್ತದೇ ನಿರ್ಧಾರದ ಮೇಲೆ. ಶಭಾಷ್! ಎದೆಗಾರಿಕೆಯೊಳಗಿನ ಹುಡುಗನಷ್ಟೇ ಗಟ್ಟಿ ಎದೆ ಇದ್ದಂಗಿದೆ. ಭಲಾ!

ಸುಮನ್: ಒಳ್ಳೆಯದು. ಆದರೆ, ನನ್ನದು  24/7 ಕೆಲಸ.

(ವರ್ಷದ ಗೆಳೆತನ ಒಡನಾಟ ಈಗ ಬಂಧಕ್ಕೊಳಗಾಗುವ ಹಂತಕ್ಕೆ ಬಂದಿದೆ. ಶ್ರೀನಿವಾಸರ ಗುಣಗಳೆಲ್ಲ ಸುಮನ್​ರನ್ನು ಪೂರ್ತಿಯಾಗಿ ಸೆಳೆದುಕೊಂಡುಬಿಟ್ಟಿವೆ. ಮತ್ತೀಗ ಮದುವೆ ಎನ್ನುವ ಪೆಂಡೂಲಮ್​ ಮೊದಲ ಸಲ ಸುಮನ್​ ಮನಸಿನಲ್ಲಿ ಜೀಕು ಹೊಡೆಯಲು ಶುರುಮಾಡಿದೆ. ಇಬ್ಬರೂ ಸೇರಿ ಮತ್ತೊಮ್ಮೆ ಎದೆಗಾರಿಕೆ ಸಿನೆಮಾ ನೋಡುತ್ತಾರೆ.)

ಶ್ರೀನಿವಾಸ್: ಸುಮನ್, ಈಗಲಾದರೂ ಮದುವೆ…

ಸುಮನ್​-ಶ್ರೀನಿವಾಸ್

(ಸುಮನ್​ ತಾಯಿ, ತಮ್ಮ ಮತ್ತು ಶ್ರೀನಿವಾಸ್​ ತಂದೆ-ತಾಯಿಯೂ ಇದಕ್ಕೆ ಸಮ್ಮತಿ ಸೂಚಿಸುತ್ತಾರೆ. ಮಂತ್ರಮಾಂಗಲ್ಯವೇ ಆಗಬೇಕೆಂದು ಸುಮನ್ ನಿರ್ಧರಿಸುತ್ತಾರಾದರೂ ಅಷ್ಟೊತ್ತಿಗೆ ದೇಶಕ್ಕೆ ದೇಶವೇ ಗೃಹದಿಗ್ಭಂಧನಕ್ಕೆ ಒಳಗಾಗಿಬಿಡುತ್ತದೆ. ಆದರೆ ಈ ಕೊರೋನಾದಿಂದಾಗಿ ಮಂತ್ರಮಾಂಗಲ್ಯಕ್ಕಿಂತಲೂ ಸರಳವಾಗಿ ಕನ್ನಡದ ನಿರ್ದೇಶಕಿ ಸುಮನ್​, ಸಾಫ್ಟ್​ವೇರ್ ಎಂಜಿನಿಯರ್, ಫೋಟೋಗ್ರಾಫರ್ ಶ್ರೀನಿವಾಸ್ ಅವರ ಮದುವೆ ಪಾಂಡಿಚೇರಿಯಲ್ಲಿ ನೆರವೇರುತ್ತದೆ. ನಂತರ ಇಬ್ಬರೂ ಕರ್ನಾಟಕದಲ್ಲಿಯೇ ನೆಲೆನಿಲ್ಲಲು ತೀರ್ಮಾನಿಸುತ್ತಾರೆ.)

Location : ಮೈಸೂರಿನಿಂದ ಹನ್ನೆರಡು ಕಿ.ಮೀ ದೂರದಲ್ಲಿರುವ ಬಸವನಪುರ ಎಂಬ ಹಳ್ಳಿ.

ತಿಂಗಳುಗಳ ನಂತರ
ಶ್ರೀನಿವಾಸ್: ವರ್ಕ್ ಫ್ರಮ್ ಹೋಮ್ ಮಾಡಿ ಮಾಡಿ ಮೈಯೆಲ್ಲ ಜಿಡ್ಡುಗಟ್ಟಿದೆ. ಈ ವೀಕೆಂಡ್ ಕ್ಯಾಮೆರಾ ಹಿಡಕೊಂಡು ಕಾಡಿಗೆ ಹೋಗೋಣ ಅಂದುಕೊಳ್ತಿದೀನಿ. ಬರಬಹುದಾ ಜೊತೆಗೆ?

ಸುಮನ್: ಒಂದು ಸ್ಕ್ರಿಪ್ಟ್ ಓದಿ ಮುಗೀತು. ಇನ್ನೊಂದು ಸಿನೆಮಾದ ಬಾಕಿ ಇದೆ. ಅಮೇಝಾನ್ ವೆಬ್​ ಸೀರೀಸ್ ಶೂಟ್ ಮಾಡೋದಕ್ಕೆ ತಯಾರಿ ಮಾಡ್ಕೊಬೇಕಿದೆ. ಗೊತ್ತಲ್ಲ? ನಾನು 24/7!

ಅಂದಿನ ಕಾವೇರಿ ಇಂದಿನ ಸುಮನ್

ಫ್ಲ್ಯಾಷ್​ಬ್ಯಾಕ್​ನಲ್ಲಿ ಸುಮನ್
ನಮ್ಮದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು. ಬಡತನವನ್ನೇ ಧಾರಾಳವಾಗಿ ಉಸಿರಾಡುವಂಥ ಪರಿಸರ. ಕೃಷಿಪ್ರಧಾನ ಒಟ್ಟುಕುಟುಂಬ. ಮಳೆ ಬಿದ್ದರೆ ಬೆಳೆ. ಬೆಳೆ ಬಂದರೆ ಹೊಟ್ಟೆ ತುಂಬಾ ಊಟ. ಈವತ್ತು ನಮ್ಮ ಕೃಷಿಕರ ಪರಿಸ್ಥಿತಿ ಏನಿದೆಯೋ ನಮ್ಮದೂ ಆಗ ಅದೇ ಪರಿಸ್ಥಿತಿ. ನನ್ನ ತಂದೆಗೆ ಸಿನೆಮಾದಲ್ಲಿ ಹೇಗೆ ಆಸಕ್ತಿ ಹುಟ್ಟಿತೋ ಗೊತ್ತಿಲ್ಲ. ಟೂರಿಂಗ್ ಟಾಕೀಸಿನಿಂದ ಸಿನೆಮಾ ಟಾಕೀಸಿನೊಳಗೆ ಟಿಕೆಟ್ ಹರಿಯುವುದರಿಂದ ಹಿಡಿದು, ಪ್ರೊಜೆಕ್ಟರ್ ನಡೆಸುವವರೆಗೂ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು. ಒಂದು ಥಿಯೇಟರ್ ಕಟ್ಟಬೇಕು ಎನ್ನುವ ಅವರ ಆಸೆ ಒದ್ದಾಟದಲ್ಲೇ ಕಳೆದು ಸಾಕಷ್ಟು ಹಣ ಕಳೆದುಕೊಂಡರು.

ಅಪ್ಪ ನನಗೆ ಯಾವಾಗಲೂ ಅಪ್ಯಾಯಮಾನವಾದ ವ್ಯಕ್ತಿ. ಎಲ್ಲೇ ಹೋದರೂ ಅವರ ಬೆರಳು ಹಿಡಿದುಕೊಂಡು ಹೊರಟುಬಿಡುತ್ತಿದ್ದೆನಲ್ಲ ಹಾಗಾಗಿ ಮೊದಲಿನಿಂದಲೂ ತಾಯಿಯ ಒಡನಾಟ ಕಡಿಮೆಯೇ. ಅಪ್ಪನ ಎಲ್ಲಾ ಕೆಲಸಗಳನ್ನು ಗಮನಿಸುತ್ತಿದ್ದೆ. ಆದರೆ ಈವತ್ತು ನಾನು ಇಂಡಸ್ಟ್ರಿಯಲ್ಲಿ ಇರುತ್ತೇನೆ ಎಂದು ಕನಸು ಕಂಡವಳೇ ಅಲ್ಲ. ಆದರೆ ಹದಿಹರೆಯಕ್ಕೆ ಬರುತ್ತಿದ್ದಂತೆ ನನ್ನದು ಒಂದೇ ಪ್ರಾರ್ಥನೆ; ಚಿಕ್ಕವಯಸ್ಸಿಗೆ ಮದುವೆ ಮಾಡದೇ ಇದ್ದರೆ ಸಾಕು. ಇದರಾಚೆಗೆ ನನ್ನ ಆಸೆಗಳಿದ್ದದ್ದು; ಯಾವಾಗ ಕಾಲಿಗೆ ಚಪ್ಪಲಿ ಕೊಡಿಸುತ್ತಾರೆ, ಹೊಸ ಬಟ್ಟೆ ತಂದುಕೊಡುತ್ತಾರೆ, ಹೊಟ್ಟೆತುಂಬ ಊಟ ಹಾಕುತ್ತಾರೆ… ಹೀಗಾಗಿ ಎಲ್ಲರಂತೆ ನನಗೆ ನನ್ನದೇ ಆದ ಆಯ್ಕೆಗಳಿಗೆ ಅವಕಾಶವೇ ಇರಲಿಲ್ಲ. ಇದ್ದಿದ್ದನ್ನೇ ಆಯ್ಕೆಯಾಗಿ ಪರಿವರ್ತಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಶಾಲೆಗೆ ಹೋಗುವುದರೊಂದಿಗೆ ಆಗಿನ ಕಾಲಕ್ಕೆ ನನ್ನ ಓದು ಎನ್ನುವುದು ಪತ್ರಗಳ ಓದಿಗೆ ಸೀಮಿತ. ನಮ್ಮ ಅಕ್ಕಪಕ್ಕದವರು ಪತ್ರಗಳನ್ನು ತೆಗೆದುಕೊಂಡು ಮನೆಗೆ ಬರುತ್ತಿದ್ದರು. ನನ್ನ ಸ್ಪಷ್ಟವಾದ ಭಾಷೆ, ಮಾತು ಅವರನ್ನು ಹಿಡಿದಿಡುತ್ತಿತ್ತು. ಹೀಗೆ ಓದಿನ ಹಂಬಲ ಶುರುವಾಯಿತು. ಆದರೆ ಮುಂದೆ ಏನು ಓದುವುದು, ಎಲ್ಲಿ ಹೋಗಿ ಓದುವುದು ಎಂಬುದೇ ದೊಡ್ಡ ಪ್ರಶ್ನೆಯಾಗಿ ಒದ್ಧಾಡತೊಡಗಿದೆ. ಆಗ ಎಳೆದುಕೊಂಡಿದ್ದು ನಮ್ಮೂರಿನ ಸಂತೆ. ಸಂತೆ ಮುಗಿಸಿ ಮನೆಗೆ ವಾಪಾಸಾಗುವವರನ್ನೇ ನಾನು ಕಾಯ್ದುಕೂರುತ್ತಿದ್ದೆ. ಉಪ್ಪು, ಮೆಣಸಿನಕಾಯಿ, ಬೆಲ್ಲ, ಕಾಳುಕಡಿ ಹೀಗೆ ಎಲ್ಲವನ್ನೂ ಪೊಟ್ಟಣಗಳಲ್ಲಿ ಕಟ್ಟಿಕೊಂಡು ಬರುವ ಚಿಕ್ಕಪ್ಪ, ದೊಡ್ಡಪ್ಪರನ್ನೇ ಗಮನಿಸುತ್ತಿದ್ದೆ. ಅವರು ಪೊಟ್ಟಣಗಳನ್ನು ಬಿಚ್ಚುವ ಹೊತ್ತಿಗೆ ಅವರ ಮನೆಗಳಿಗೂ ಹೋಗಿ ಕೂರುತ್ತಿದ್ದೆ. ಯಾವ ಕಾಲದ ಪೇಪರ್ ಏನು ಎತ್ತ ಎಂದು ಯೋಚಿಸದೆ ಪೊಟ್ಟಣದ ಹಾಳೆಗಳನ್ನು ನೀಟಾಗಿ ಜೋಡಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದೆ. ಎಲ್ಲವನ್ನೂ ಒಮ್ಮೆಲೆ ಓದದೆ, ಇಷ್ಟವಾದ ತಿಂಡಿತಿನಿಸನ್ನು ನಿಧಾನಕ್ಕೆ ಸ್ವಲ್ಪಸ್ವಲ್ಪವೇ ತಿನ್ನುವಂತೆ ಪೇಪರಿನ ತುಂಡಿನೊಳಗಿನದನ್ನು ಮತ್ತೊಂದು ಸೋಮವಾರದ ಸಂತೆ ಬರುವ ತನಕ ಓದುತ್ತಲಿರುತ್ತಿದ್ದೆ. ನಿಜಕ್ಕೂ ಸಂತೆ ಎಂಬ ದಿವ್ಯ ವಿಶ್ವವಿದ್ಯಾಲಯದ ಒಡನಾಟವಿಲ್ಲದಿದ್ದರೆ ನಾನೀವತ್ತು ಏನಾಗಿರುತ್ತಿದ್ದೆ? ಗೊತ್ತಿಲ್ಲ. ಬಹುಶಃ ಚಿತ್ರಕಲಾವಿದೆಯಾಗಿದ್ದರೆ ಒಂದೊಂದು ತುಣುಕನ್ನೂ ಬಿಡಿಸಿಟ್ಟುಬಿಡುತ್ತಿದ್ದೆ. ಎಲ್ಲಾ ವರ್ಗದವರೂ ಬರುತ್ತಿದ್ದ ಆ ಸಂತೆ. ಅವರವರ ತಾಕಲಾಟಗಳು, ತರ್ಕಗಳು, ವಿಚಾರಗಳು, ಬಲಶಾಲಿತನಗಳು, ಚಾಲಾಕಿತನಗಳು ಒಂದೇ ಎರಡೇ ಆ ಭಾವಗಳು. ಇನ್ನು ಆ ಬಣ್ಣಗಳು?; ಹಸಿರುಮೆಣಸಿನಕಾಯಿ, ಕೆಂಪುಮೆಣಸಿನಕಾಯಿ, ರಾಗಿಯರಾಶಿ, ಕಾಳಿನರಾಶಿ, ಉಪ್ಪಿನರಾಶಿ, ಹಣ್ಣಿನರಾಶಿ, ಸೊಪ್ಪುಗಳ ಹಸಿರು, ಗಡಿಗೆಯೊಳಗಿನ ಬೆಣ್ಣೆಮೊಸರು… ಅಲ್ಲಿ ನಮಗೆ ದಕ್ಕದಂಥ ಸಾಮಾನುಗಳೇ ಹೆಚ್ಚು, ನೋಡಿಯೇ ತೃಪ್ತಿ ಪಡೆದುಕೊಳ್ಳಬೇಕಷ್ಟೆ.

ಮನೆಯಿಂದ ಶಾಲೆಗೆ ಬರುವಾಗ ನೆಗ್ಗಲ್ಮುಳ್ಳು, ಕಾರೆಮುಳ್ಳುಗಳನ್ನು ಕಾಲಿಗೆ ನೆಟ್ಟರೂ ಅವುಗಳನ್ನೆಲ್ಲ ಹೆಕ್ಕಿತೆಗೆಯಲೆಂದೇ ಒಂದಿಡೀ ದಿನ ನಿಗದಿ ಮಾಡಿಕೊಳ್ಳಬೇಕಾಗುತ್ತಿತ್ತು. ನನ್ನ ಮುಳ್ಳು ನೀನು ತೆಗೆ, ನಿನ್ನ ಮುಳ್ಳು ನಾನು ತೆಗೆಯುತ್ತೇನೆ ಎಂದು ತೊಡೆಯ ಮೇಲೆ ಕಾಲಿಟ್ಟುಕೊಂಡು ಮರುದಿನದ ಬರಿಗಾಲಿನ ನಡಿಗೆಗೆ ಸಿದ್ಧರಾಗುತ್ತಿದ್ದೆವು. ಶಾಲೆಗೆ ಕಳಿಸುವುದಲ್ಲದೆ ಚಪ್ಪಲಿ ಬೇರೆ ಕೊಡಿಸಬೇಕಾ? ಮನೆಯಲ್ಲಿ ಮಾಡುತ್ತಿದ್ದ ಜೋರು ತೀರಾ ಸಾಮಾನ್ಯ. ಸಂತೆಯ ದಿನ ನಮಗೆ ಎಂಟಾಣೆ ಮಾತ್ರ ಸಿಗುತ್ತಿತ್ತು. ಅದರಲ್ಲಿ ಉಪ್ಪು ಖಾರ ಸವರಿದ ಕಿತ್ತಲೆ ತಿಂದು ಕಣವೂ ಉಳಿಯದಂತೆ ಬೆರಳುಗಳನ್ನು ನೆಕ್ಕಿ ಮುಗಿದಾದ ಮೇಲೆ ಮತ್ತದೇ ಚಪ್ಪಲಿಯ ಆಸೆ. ಆದರೆ ಕೊಡಿಸುವವರ್ಯಾರು? ಈಗ ಇದೆಲ್ಲವನ್ನೂ ನೆನಪಿಸಿಕೊಳ್ಳುತ್ತಿರುವಾಗ ಸಂತೆ ಎನ್ನುವುದು ನನ್ನೊಳಗಿನ ಪ್ರಶ್ನೆಗಳಿಗೆ, ಆಸೆಗಳಿಗೆ ನಾನಾಗಿಯೇ ಉತ್ತರವನ್ನು ಕಂಡುಕೊಳ್ಳಲು ದಿಕ್ಕು ತೋರಿದ ಹೆದ್ದಾರಿಯೇ ಎನ್ನುಬಹುದು.

ಅಡಕೆ ಆರಿಸುವಾಗ

ಈ ಎಲ್ಲ ನಿರಾಸೆಗಳ ಮಧ್ಯೆ ಮತ್ತೆ ಮನಸ್ಸನ್ನು ಹಿಡಿದೆತ್ತಿ ನಿಲ್ಲಿಸುತ್ತಿದ್ದದ್ದು ಕನ್ನಡ ಮತ್ತು ಕನ್ನಡ ಪತ್ರಿಕೆಗಳು; ಪ್ರಜಾವಾಣಿ, ಆಂದೋಲನ, ಶಕ್ತಿ ಪತ್ರಿಕೆ. ಶಾಲೆಯಲ್ಲಿ ಶಂಕರಪ್ಪ ಮೇಷ್ಟ್ರು ಪ್ರಾರ್ಥನೆ ಮುಗಿದಮೇಲೆ ಈ ಪತ್ರಿಕೆಗಳಲ್ಲಿ ಬರುವ ಹೆಡ್​ಲೈನ್​, ಸುಭಾಷಿತಗಳನ್ನು ಓದಿಸುತ್ತಿದ್ದರು. ಹೀಗೆ ಒಂದು ದಿನ ನಿಂತನಿಂತಲ್ಲೇ ಕನಸು ಕಂಡೆ; ಅಕಸ್ಮಾತ್ ನಾನೇ ಈ ಸುದ್ದಿಗಳನ್ನೆಲ್ಲ ಬರೆದಿದ್ದರೆ… ಈ ಕನಸು ರಾತ್ರಿಹಗಲು ಬೆನ್ಹತ್ತಿತು; ಶಾಲೆಯಲ್ಲಿ, ಮನೆಯಲ್ಲಿ, ಬೀದಿಗಳಲ್ಲಿ, ಸಂತೆಯಲ್ಲಿ ಹೀಗೆ… ಬರೆಯೋದು ಸುಮ್ಮನೆ ಮುಚ್ಚಿಟ್ಟುಕೊಳ್ಳೋದು. ಒಂದು ದಿನ ನಮ್ಮ ಗುಂಪಿನ ಗೆಳತಿಯರಿಗೆ ತೋರಿಸಿದೆ, ವಾಹ್ ಎಂದರು. ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ಯಾಕೆ ಬರೆಯಬಾರದು ಎನ್ನಿಸಿತು. ಕವನಗಳೂ ಕಣ್ಬಿಡತೊಡಗಿದವು. ಆರನೇ ಕ್ಲಾಸಿಗೆ ಬರುವ ಹೊತ್ತಿಗೆ ಬರೆದಿದ್ದನ್ನೆಲ್ಲ ಏನು ಮಾಡುವುದು ಎಂಬ ಯೋಚನೆ. ಸ್ನೇಹಿತರು ಪತ್ರಿಕೆಗಳಿಗೆ ಕಳಿಸೋಣ ಎಂದರು. ಮೊದಮೊದಲು ಬರೆಯುತ್ತಿದ್ದದ್ದು ಪ್ರಕೃತಿಯ ಬಗ್ಗೆ ಇನ್​ಲ್ಯಾಂಡ್​ ಕವರುಗಳಲ್ಲಿ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದವು.

ಆ ಹೊತ್ತಿಗೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ನನ್ನ ತಂದೆ ನನ್ನನ್ನು ಮಡಿಕೇರಿಯ ಮೂರ್ನಾಡುವಿನ ಅತ್ತೆಯ ಊರಿಗೆ ಕಳುಹಿಸಿದರು. ಜಬರ್​ದಸ್ತ್ ಅತ್ತೆ! ಗಡಿನಾಡ ಸಂಚಾರಿ ಮತ್ತು ಶಕ್ತಿ ಪತ್ರಿಕೆಯಲ್ಲಿ ನನ್ನ ಹೆಸರು ನೋಡಿದ್ದೇ ತಡ, ನೀನಿಲ್ಲಿ ಬಂದಿದ್ದು ಓದಲು ಮಾತ್ರ, ನೆನಪಿಟ್ಟುಕೋ. ಇಲ್ಲವಾದರೆ ಊರಿನ ಹಾದಿ ಹಿಡಿ ಎಂದುಬಿಟ್ಟರು. ತಳಮಳಕ್ಕೆ ಬಿದ್ದೆ. ಆದರೆ ಅದರಿಂದ ಹೊರಬರುವಲ್ಲಿ ಸಹಾಯವಾಗಿದ್ದು ಆ ಊರಿನ ದೊಡ್ಡ ಹುಡುಗರು ಕಟ್ಟಿದ ಸಾಹಿತ್ಯ ವೇದಿಕೆ. ಪ್ರತೀವಾರ ಆ  ಸದಸ್ಯರು ಒಂದೆಡೆ ಸೇರಿ ಸಾಹಿತ್ಯದ ಓದಿನ ಬಗ್ಗೆ ಚರ್ಚಿಸುತ್ತಿದ್ದರು. ನಾವೆಲ್ಲಾ ಇದ್ದೀವಿ ನೀ ಬರೀ ಎಂದು ಹುರಿದುಂಬಿಸಿದರು. ಇಲ್ಲ ನಾ ಬರೆಯೋಲ್ಲ ಅಂದೆ. ನಿಮ್ಮತ್ತೆ ನಿನ್ನನ್ನು ಬಯ್ಯುತ್ತಿರುವುದು ನಿನ್ನ ಹೆಸರು ನೋಡಿ ತಾನೆ? ಅದೇ ಇಷ್ಟೆಲ್ಲ ಸಮಸ್ಯೆಗೆ ಮೂಲ. ನಿನ್ನ ಬರೆವಣಿಗೆಯನ್ನು ಅವರಿಗೆ ಗೊತ್ತಿಲ್ಲದೆಯೇ ಮುಂದುವರಿಸುವಂತೆ ಏನಾದರೂ ಮಾಡಲೇಬೇಕಲ್ಲ, ಆ ಹೆಸರೇ ಎಲ್ಲ ಸಮಸ್ಯೆಗೆ ಕಾರಣ, ಹಾಗಾಗಿ ಅದನ್ನೇ ಬದಲಾಯಿಸಿಬಿಡೋಣ ಎಂಬ ತೀರ್ಮಾನಕ್ಕೆ ಬಂದರು.

ಆ ಊರಿನಲ್ಲಿ ಒಂದು ಟೈಪಿಂಗ್ ಇನ್​ಸ್ಟಿಟ್ಯೂಟ್ ಇತ್ತು. ಫಿಲೋಮಿನಾ ಅಕ್ಕ ಅದನ್ನು ನೋಡಿಕೊಳ್ಳುತ್ತಿದ್ದರು. ನಮ್ಮ ಗೆಳೆಯರ ಗುಂಪಿಗೆ ಅದೊಂದು ಗುಪ್ತತಾಣ. ನಮ್ಮ ಬರೆವಣಿಗೆಯನ್ನು ಟೈಪ್ ಮಾಡಿಕೊಡುತ್ತಿದ್ದಳು. ನಾವು ಪತ್ರಿಕೆಗಳಿಗೆ ಪೋಸ್ಟ್ ಮಾಡುತ್ತಿದ್ದೆವು. ಈ ನಡುವೆ ನಮ್ಮ ಅತ್ತೆ ಆ ಇನ್​ಸ್ಟಿಟ್ಯೂಟಿನ ಎದುರಿಗೇ ಟೇಲರಿಂಗ್​ ಕಲಿಯಲು ಸೇರಿಸಿದರು. ಆದರೆ ನನಗದೆಲ್ಲ ಖಂಡಿತ ಇಷ್ಟವಿರಲಿಲ್ಲ. ಆಗ ಫಿಲೋಮಿನಾ ಅಕ್ಕನ ಬಳಿ ಹೋಗಿ ನಿಂತೆ. ಸದ್ಯ, ಫಿಲೋಮಿನಾ ಮತ್ತು ಹೊಲಿಗೆ ಟೀಚರ್ ಗೆಳತಿಯರಾಗಿದ್ದರಿಂದ ಮತ್ತೊಂದು ಉಪಾಯ ಹೂಡಿದರು. ಹರಿದು ಹೋಗಿರೋದನ್ನು ಹೊಲಿಯೋವಷ್ಟಾದರೂ ಹೊಲಿಗೆ ಕಲಿ ಎಂದರು. ಹೂಂ ಅಂದೆ. ಕೊನೆಗೆ ಹೊಲಿಗೆ ಕ್ಲಾಸ್ ತಪ್ಪಿಸಿ ಗುಪ್ತತಾಣ ಟೈಪಿಂಗ್ ಕ್ಲಾಸಿನಲ್ಲೇ ಹೆಚ್ಚು ಹೊತ್ತು ಕಳೆಯತೊಡಗಿದೆ. ಒಂದು ದಿನ ನನಗೆ ಮೂರ್ನಾಲ್ಕು ಹೆಸರನ್ನು ಸೂಚಿಸಿದರು. ನಂತರ ಚೀಟಿ ಎತ್ತಿ ಇದೇ ಇರಲಿ ಎಂದು ಕೂಗಿ ವಿಜಯೋತ್ಸಾಹ ಆಚರಿಸಿದರು; ಕಾವೇರಿ ಹೋಗಿ ಸುಮನ್ ಆದೆ. ನಂತರ ಅದೇ ಹೆಸರಲ್ಲಿ ಲೇಖನ ಬರೆಯಲು ಶುರುಮಾಡಿದೆ. ಹೀಗೆ ಅತ್ತೆಯ ಹಿಡಿತದಿಂದ ವರ್ಷದ ತನಕ ತಪ್ಪಿಸಿಕೊಂಡೆನಾದೂ ಲೇಖನಕ್ಕೆ ಪ್ರಶಸ್ತಿ ಬಂದಾಗ ಮತ್ತೆ ಸಿಕ್ಕಿಹಾಕಿಕೊಂಡೆ.

ಸಿಕ್ಕಿಹಾಕಿಕೊಳ್ಳುವುದೆಂದರೆ ಮತ್ತೊಂದು ದಾರಿ ತೆರೆದುಕೊಂಡಂತೆ. ಬೆಂಗಳೂರಿಗೆ ಬಂದಾಗ ನನ್ನ ಬದುಕಿನ ಹಾದಿಯಲ್ಲಿ ಸಾಕಷ್ಟು ಜನ ಪರಿಚಯವಾದರು. ಆದರೆ ನನ್ನ ಬದುಕನ್ನು ಘನತೆಯಿಂದ ಕಟ್ಟಿಕೊಳ್ಳು ನೆರವಾದವರು ತಂದೆ ಸಮಾನರು, ಮೆಂಟರ್ ಮತ್ತು ಗುರುಗಳೂ ಆದ ಅಗ್ನಿ ಶ್ರೀಧರ್. ಅವರ ಪತ್ರಿಕೆಯಲ್ಲಿ ಸಿನೆಮಾ ಪತ್ರಕರ್ತೆಯಾಗಿ ಸೇರಿಕೊಂಡೆ. ಹೀಗೇ ಒಂದು ದಿನ ತಂದೆ ತೀರಿದ ಸುದ್ದಿಯೂ ಬಂದಿತು. ಯಾರಿಗೂ ಹೇಳದೆ, ದುಃಖವನ್ನೆಲ್ಲ ಒಳಗೆಳೆದುಕೊಂಡು ಅವತ್ತಿನ ಕೆಲಸ ಮುಗಿಸಿದೆ. ಆ ದಿನ ಅಗ್ನಿ ಸರ್ ಹೇಳಿದ್ದು, ‘ಹೆಣ್ಣುಮಕ್ಕಳು ಸಾಕಷ್ಟು ಆರ್ಥಿಕವಾಗಿ ಸಬಲರಾಗಿದ್ದಾಗ ಏನನ್ನಾದರೂ ಸಾಧಿಸಬಹುದು. ಆ ಆರ್ಥಿಕ ಸಬಲತೆಗೆ ಏನು ಮಾಡಬೇಕು? ವೃತ್ತಿಬದುಕನ್ನು ಕಟ್ಟಿಕೊಳ್ಳಬೇಕು. ಅದೇ ಅವರ ದೊಡ್ಡ ಐಡೆಂಟಿಟಿ’ ಎಂದರು. ನಾನದಕ್ಕೆ ಬದ್ಧಳೂ ಆದೆ. ಎಂಟ್ಹತ್ತು ವರ್ಷಗಳ ಅನುಭವ. ನಮ್ಮದೆಲ್ಲ ಆಲೋಚನೆಯ ಮಾರ್ಗ. ನಿನ್ನದು ಅನುಭವದ ಮಾರ್ಗ. ಫ್ರೆಷ್ ಥಾಟ್ಸ್​! ಎಂದು ದೇವನೂರು ಮಹದೇವ ಮತ್ತು ಶ್ರೀಧರ್ ಸರ್ ಪ್ರೋತ್ಸಾಹಿಸಿದರು.

ಗಯ್ಯಾಳಿಗಳೊಂದಿಗೆ ಅಗ್ನಿ ಶ್ರೀಧರ್

ನಾನು ಓದಿದ್ದು ಪಿಯುಸಿ ಮಾತ್ರ. ಮುಂದೆ ಲೋಕೇಶ್, ವಜ್ರಮುನಿ, ದ್ವಾರಕೀಶ್ ಅವರುಗಳ ಆತ್ಮಕಥನ ಬರೆದೆ. ಗಂಗೂಬಾಯಿ ಹಾನಗಲ್, ಮಾಲತಮ್ಮ ಗುಬ್ಬಿ, ಎಲ್. ವಿ. ಶಾರದಾ, ಕಾಶೀನಾಥ, ರಾಜೇಶ್, ಹರಿಣಿ, ಪ್ರತಿಮಾದೇವಿ ಹೀಗೆ 96 ಕಲಾವಿದರು, ತಂತ್ರಜ್ಞರು ಮಾತನಾಡಿಸಿದ್ದು ಪುಸ್ತಕವಾಯಿತು. ಇದೆಲ್ಲವೂ ಚಿತ್ರರಂಗವನ್ನು ಬಹಳ ಹತ್ತಿರದಿಂದ ಅರ್ಥ ಮಾಡಿಕೊಳ್ಳಲು ನೆರವಾಯಿತು. ಲೋಕೇಶ್​ ಅವರ ಒಡನಾಟದಿಂದ ಆಫ್ ಬೀಟ್ ಸಿನೆಮಾಗಳ ಬಗ್ಗೆ ತಿಳಿವಳಿಕೆ, ದ್ವಾರಕೀಶ್ ಅವರಿಂದ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳು ಗೊತ್ತಾದವು. ಇನ್ನು ಚಿತ್ರರಂಗದ ಒಳಹೂರಣಗಳು ಗೊತ್ತಾಗಿದ್ದು ವಜ್ರಮುನಿಯವರಿಂದ.  ಇದೆಲ್ಲವೂ ಅರ್ಥವಾಗುವ ಹೊತ್ತಿಗೆ, ಶ್ರೀಧರ್ ಅವರ ಮೇಘಾ ಮೂವಿಸ್ನಿಂದ ಆ ದಿನಗಳು, ಚಂಬಾಲಾ, ಎದೆಗಾರಿಕೆ, ಕಳ್ಳರ ಸಂತೆ, ಕಿರುಗೂರಿನ ಗಯ್ಯಾಳಿಗಳನ್ನು ನಿರ್ದೇಶಿಸಿದೆ. ಕೊನೆಗೂ ನಮ್ಮ ತಂದೆಯ ಸಿನೆಮಾ ಕೊಂಡಿ ‘ರೀಲ್’ ಅನ್ನೋದು ಹೀಗೆಲ್ಲ ಸುತ್ತಾಡಿಸಿ ಸುತ್ತುಹಾಕಿಕೊಂಡಿತು.

ತಂದೆ ತೀರಿದ ನಂತರ ನಾನು ಕುಟುಂಬದಿಂದ ಹೊರಬಂದು ಏಕಾಂಗಿ ಪಯಣಕ್ಕೆ ಬಿದ್ದೆ. ಕಂಫರ್ಟ್ ಲೆವೆಲ್ಲಿಗೆ ಬಂದಮೇಲೂ ನನ್ನೊಂದಿಗೆ ಬಂದಿರಲು ತಾಯಿ ಮತ್ತು ತಮ್ಮ ಒಪ್ಪಲಿಲ್ಲ. ಅವರು ಆ ನೆಲಕ್ಕೆ ಒಗ್ಗಿದವರು, ನಾನೆಲ್ಲಿದೀನೋ ಅಲ್ಲಿ ಸಂತೋಷವಾಗಿದೀನಿ ಅಂತ ಅವರ ಹಾರೈಕೆ. ಶ್ರೀಧರ ಸರ್ ಕುಟುಂಬ ನನ್ನನ್ನು ಬಹಳ ಆತ್ಮೀಯವಾಗಿ ಸ್ವೀಕರಿಸಿದ್ದರಿಂದ ನಮ್ಮ ತಾಯಿಗೆ ಅದೇ ಧೈರ್ಯ. ಬಹುಶಃ ನಾವು ಹೆಣ್ಣುಮಕ್ಕಳು ಒಂದು ಊರಿನಿಂದ ಇನ್ನೊಂದು ಊರಿಗೆ ಬೇಗ ಒಗ್ಗಿಕೊಳ್ಳುತ್ತೇವೆ. ಆದರೆ ಅದೇ ಗಂಡುಮಕ್ಕಳಿಗೆ ಬಹಳ ಕಷ್ಟವಾಗುತ್ತೆ ಅನ್ನಿಸುತ್ತೆ.

ನಾನು ಆಯ್ದುಕೊಂಡಿದ್ದು ಗಂಡಸರ ಜಗತ್ತು; ಸಿನೆಮಾ ಕ್ಷೇತ್ರ. ಸಿನೆಮಾ ಅನ್ನುವುದು ಹೆಣ್ಣನ್ನೇ ಕೇಂದ್ರೀಕರಿಸಿದ್ದರೂ ಈ ಕ್ಷೇತ್ರದ ಪ್ಯಾಬಲ್ಯ ಇರುವುದು ಗಂಡಸರ ಕೈಯಲ್ಲಿ. ಹೀಗಿರುವಾಗ ಈ ರಂಗಕ್ಕೆ ಪ್ರವೇಶಿಸುವ ಸಂದರ್ಭ ಮತ್ತು ಛಾಪು ಮೂಡಿಸುವುದು ಹೆಚ್ಚು ಸವಾಲಿನದ್ದು. ಸ್ವಲ್ಪ ಯೋಚಿಸಿ, ಶೂಟಿಂಗ್ ಸೆಟ್​ನಲ್ಲಿ ಕ್ಯಾಮೆರಾ ಎದುರು ಕುಳಿತಾಗ, ಅದು ಗಂಡೋ ಹೆಣ್ಣೋ ಎಂದು ಕೇಳುವುದಿಲ್ಲವಲ್ಲ. ಯಾರು ಶೂಟ್ ಮಾಡಿದರೂ ಅದದೇ ಫಲ ಕೊಡುತ್ತದೆ. ಯಾವುದೋ ಮೂಲೆಯಲ್ಲಿ ಕೂತು ನೋಡುವ ವ್ಯಕ್ತಿ ಕೂಡ ನಿರ್ಮಿಸಿದ್ದು, ನಿರ್ದೇಶನ ಮಾಡಿದ್ದು ಹೆಣ್ಣೋ ಗಂಡೋ ಅಂತ ಕೂಡ ಕೇಳಲ್ಲ. ನೋಡುಗರಿಗೆ ಮನರಂಜನೆ ಬೇಕು ಅಷ್ಟೇ. ಆದರೆ ಸಿನೆಮಾ ತಯಾರಾದ ನಂತರ ಮಾರಾಟಕ್ಕೆ ಹೋಗುವ ಹಂತ ಇದೆಯಲ್ಲ, ಅಲ್ಲಿ ಗಂಡೋ ಹೆಣ್ಣೋ ಎಂಬ ಮಾತುಗಳು ಕೇಳಿಬರುತ್ತವೆ! ನಂತರ ಸೆನ್ಸಾರ್ ಗೆ ಹೋದಾಗಲೂ ಬಿಡುಗಡೆಗೆ ತಯಾರಾದಾಗಲೂ ಧುತ್ತನೇ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಅವಕಾಶ ಕೊಡೋದೇನೂ ಬೇಡ. ಆದರೆ ಎಷ್ಟು ಪ್ರೋತ್ಸಾಹ ಕೊಟ್ಟಿದ್ದೀರಿ? ಗಂಟಲು ಹರಿದುಕೊಂಡು ಮಾತನಾಡುವವರೆಲ್ಲ, ಅವಾರ್ಡ್​ ಬಂದಾಗ, ಸಿನೆಮಾ ಓಡಿದಾಗ ಒಂದು ಫೋನ್​ ಮಾಡಿ ಶುಭಾಶಯ ತಿಳಿಸಲು ಮನಸ್ಸು ಮಾಡಿದ್ದಿದೆಯೇ? ಹೆಣ್ಣುಮಕ್ಕಳೆಂದರೆ ನಟನೆಗೆ ಮಾತ್ರವೇ? ಹೀಗೆ ತೆರೆ ಹಿಂದೆಯೂ, ಮುಂದೆಯೂ ಕ್ಷಣಕ್ಷಣದಲ್ಲಿ ಸವಾಲಿನಲ್ಲೇ ಎಷ್ಟು ದಿನ ಸಾಗುತ್ತಿರಬೇಕು. ಗಂಡಸರಿಗೆ ಈಗಾಗಲೇ ಒಂದು ದೊಡ್ಡ ರಹದಾರಿ ಇದೆ. ನಾವು ಇನ್ನೂ ಕಾಲುದಾರಿಯಲ್ಲೇ ಹೊರಟಿದ್ದೇವೆ. ಕಲ್ಲು, ಮುಳ್ಳುಗಳ ದಾರಿ ಇನ್ನೂ ಮುಗಿದೇ ಇಲ್ಲ. ಅದೆಷ್ಟೋ ಕಲಾವಿದರುಗಳನ್ನು ಹುಡುಕಿ ಪೋಷಿಸಿ ಅವಕಾಶವನ್ನೂ ಕೊಟ್ಟು ಚಿತ್ರರಂಗದಲ್ಲಿ ನೆಲೆನಿಲ್ಲುವಂತೆ ಮಾಡಿದರೂ ಈ ಹೆಣ್ಣುಮಗಳಿಂದ ಇಂಡಸ್ಟ್ರೀಗೆ ಬಂದೆ. ಈ ಹೆಣ್ಣುಮಗಳಿಂದ ಬರಹಗಾರನಾದೆ, ನಟನಾದೆ ಎಂದು ಹೇಳಿಕೊಳ್ಳಲು ಸಂಕೋಚಪಡುತ್ತಿರುವ ಗಂಡಸರ ನಡುವೆ ಈವತ್ತು ಬದುಕುತ್ತಿದ್ದೇವೆ. ಎಷ್ಟೊಂದು ತಾರತಮ್ಯ? ಹೆಚ್ಚು ಬುದ್ಧಿವಂತರಾಗಬಾರದು, ಪ್ರತಿಭಟಿಸಬಾರದು. ಪ್ರಶ್ನಿಸಬಾರದು. ನಮ್ಮ ತಲೆಯನ್ನು ಮನೆಯಲ್ಲಿಟ್ಟು ಆಲೋಚನೆನ್ನು ಅಲ್ಲಿಯೇ ಕಟ್ಟಿಟ್ಟು ದೇಹ ಮಾತ್ರ ಓಡಾಡುವಂತಿರಬೇಕು. ಈ ಥರ ಚಿತ್ರರಂಗ ಬಯಸುತ್ತದೆ. ಹೀಗಿರುವಾಗ ಹೆಣ್ಣುಮಕ್ಕಳು ತಮ್ಮದೇ ಆದ ಸ್ಥಾನಮಾನದಿಂದ ಗುರುತಿಸಿಕೊಳ್ಳಬೇಕೆಂದರೆ ಅದೆಷ್ಟು ಕಷ್ಟಪಡಬೇಕು.

ಅಲ್ಲಿ ಪಾಂಡಿಚೇರಿಯ ಅಪ್ಪುಗೆಯಲ್ಲಿ ಇಲ್ಲಿ ಮೂಡಿಗೆರೆಯ ರಾಜೇಶ್ವರಿ ತೇಜಸ್ವಿಯವರ ಪಕ್ಕದಲ್ಲಿ

ನೂರು ಸಿನೆಮಾಗಳ ನಡುವೆ ನನ್ನದೂ ಒಂದು. ಬಿಡುಗಡೆಯಾದರೆ ಅದಕ್ಕೇನು ಅವಾರ್ಡ್​, ಮೀಸಲಾತಿ ಇರುವುದಿಲ್ಲ. ಥಿಯೆಟರ್ ನಿಗದಿ ಮಾಡುವಾಗ ನಿರ್ದೇಶಕಿ ಹೆಣ್ಣುಮಗಳೆಂದು ರಿಯಾಯ್ತಿಯೂ ಇರುವುದಿಲ್ಲ. ಅಯ್ಯೊ, ಲೇಡಿ ಡೈರೆಕ್ಟರ್​ ಗೆ ಕಾಲ್​ಶೀಟ್ ಕೊಡಬೇಕಾ? ಇಲ್ಲಿ ಎಲ್ಲದಕ್ಕೂ ಸ್ಪರ್ಧಿಸಬೇಕು. ನಮ್ಮ ಕನ್ನಡ ಚಿತ್ರರಂಗ ಈ ತಾರತಮ್ಯದಿಂದ ಹೊರಬಂದು ನಿಲ್ಲೋದಕ್ಕೆ ಒಂದು ಶತಮಾನ ಬೇಕು ಅನ್ನಿಸುತ್ತೆ. ಒಂದು ಮಧ್ಯರಾತ್ರಿ ಫೋನ್ ಬಂದಿತು. ನನ್ನನ್ನು ಸಂದರ್ಶಿಸಿದ ಮಹಿಳೆ, ‘ಕ್ಷಮಿಸಿ ಮೇಡಮ್​ ನಿಮ್ಮ ಸಂದರ್ಶನ ಪ್ರಕಟಿಸಲಾಗುತ್ತಿಲ್ಲ’ ತಮ್ಮ ಅಸಹಾಯಕತೆ ತೋಡಿಕೊಂಡರು. ಕಾರಣ, ಆ ಪತ್ರಿಕೆಗೆ ಜಾಹೀರಾತು ಕೊಟ್ಟಿಲ್ಲ ಎಂಬ ಕಾರಣಕ್ಕೆ ನನ್ನ ಸಂದರ್ಶನ ಪ್ರಕಟವಾಗಲಿಲ್ಲ. ಮಾಧ್ಯಮಗಳೂ ಹೀಗೇ ಯೋಚಿಸಿದರೆ? ಈಗಂತೂ ನೇತ್ಯಾತ್ಮಕ ನಡೆವಳಿಕೆಗಳೇ ಪ್ರಚಾರ ತಂತ್ರಗಳಿಗೆ ಮೂಲ ಎಂಬಂತಹ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ನಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳೋದಕ್ಕೆ ಎಷ್ಟಂತ ಹೋರಾಡಬೇಕು? ಸೋಶಿಯಲ್ ಮೀಡಿಯಾದಲ್ಲಿ ಈವತ್ತು ಸಾಕಷ್ಟು ಹೆಸರುಗಳು ರಾರಾಜಿಸುತ್ತಿವೆ. ಅವುಗಳ ಮಾನದಂಡಗಳ ಮುಂದೆ ನಮ್ಮ ನಿಜವಾದ ಶ್ರಮ? ಇವೆಲ್ಲವೂ ಬಹಳ ವಿಷಾದವನ್ನುಂಟು ಮಾಡುತ್ತವೆ.

ಈ ಕೊರೋನಾ ಕಾಲದಲ್ಲಿ ಮೇನ್​ ಸ್ಟ್ರೀಮ್ ಬಿಟ್ಟರೆ ನಮ್ಮ ಆಫ್​ ಬೀಟ್ ಸಿನೆಮಾಗಳಿಗೆ ಬಂಡವಾಳವನ್ನೆಲ್ಲಿಂದ ತರುವುದು? ಮುಂದಿನ ದಿನಗಳಲ್ಲಿ ನಮ್ಮ ಆರ್ಥಿಕ ಮೂಲಗಳು ಯಾವಾಗಬಲ್ಲವು? ಓಟಿಟಿ ಪ್ಲ್ಯಾಟ್​ಫಾರ್ಮ್​ಗಳಲ್ಲಿ ಎಲ್ಲರಿಗೂ ಅವಕಾಶ ಲಭ್ಯವೆ? ಈಗಂತೂ ಮನೆಯಲ್ಲಿ ಕುಳಿತೇ ಜನ ಸಿನೆಮಾ ನೋಡಲು ಶುರುಮಾಡಿದಾಗಿನಿಂದ ಅವರ ಅಭಿರುಚಿಯೂ ಬದಲಾಗಿದೆ. ಕಂಟೆಂಟ್ ಇರುವ, ದೇಶವಿದೇಶದ ಸಿನೆಮಾಗಳನ್ನು ನೋಡಿ ಅವರು ಆ ಬಗ್ಗೆ ಮಾತನಾಡೋದಕ್ಕೆ ಶುರ ಮಾಡಿದ್ಧಾರೆ. ಹಾಗಾಗಿ ನಾವು ಮಾಡಿದ್ದನ್ನೇ ನೀವು ನೋಡಬೇಕು ಎಂಬ ಕಾಲದಲ್ಲಿ ಚಿತ್ರರಂಗವಿಲ್ಲ. ಪ್ರೇಕ್ಷಕರಲ್ಲಿ ತಿಳಿವಳಿಕೆ ಹೆಚ್ಚುತ್ತಿದೆ. ಇಂತ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತಿರುವುದೆಂದರೆ ಇರಾನಿ ಚಿತ್ರರಂಗ. ಆ ಮಾದರಿಯಲ್ಲಿ ನಾವು ಹೆಚ್ಚು ಕೆಲಸ ಮಾಡುವ ಅನಿವಾರ್ಯತೆ ಇದೆ. ಪರ್ಯಾಯಕ್ಕೆ ಇದು ದೊಡ್ಡ ಸಕಾಲ. ಎಲ್ಲರೂ ಒಟ್ಟಾಗಿ ಸೇರಬೇಕು, ಕೂತು ಮಾತನಾಡುವವರು ಯಾರು? ಬೆಳಗಾದರೆ ಬೇಡದಿರುವಂಥ ವಿವಾದಗಳಲ್ಲಿ, ಕೆಲಸಕ್ಕೆ ಬಾರದಂಥ ಘಟನೆಗಳನ್ನೇ ಹಿಡಿದೆಳೆದಾಡುವಲ್ಲಿ ನಾವು ಮುಳುಗಿ ಹೋಗಿದ್ದೀವಿ. ಬೇಕಾದ ವಿಷಯಗಳ ಬಗ್ಗೆ ಮಾತನಾಡುವವರು ಯಾರು?

ಹಣವೇ ಎಲ್ಲವೂ ಅಲ್ಲ. ಬುದ್ಧಿಯೂ ಪ್ರತಿಭೆಯೂ ಬೇಕು. ನಮ್ಮ ಪಕ್ಕದ ತಮಿಳಿನಲ್ಲೇ ನೋಡಿ. ಹೆಣ್ಣುಮಗಳು ಏನು ಮಾಡಿದರೂ ಒಟ್ಟಾಗಿ ಹಾರೈಸುತ್ತಾರೆ. ಬಿಡುಗಡೆಗೆ ಸಮಸ್ಯೆಯಾದರೆ ಸಹಕಾರ ನೀಡುತ್ತಾರೆ. ಪ್ರತೀ ಹಂತದಲ್ಲಿಯೂ ಜವಾಬ್ದಾರಿಯಿಂದ ಪ್ರೋತ್ಸಾಹಿಸುತ್ತಾರೆ. ನನ್ನ ಸ್ನೇಹಿತೆ, ನಿರ್ದೇಶಕಿ ಕಳೆದ ವರ್ಷ ಬಿಡುಗಡೆ ಸಮಯದಲ್ಲಿ ಸಮಸ್ಯೆ ಎದುರಿಸಿದರು. ಆಗ ವಿತರಕರು ಒಟ್ಟಾಗಿ ಸಿನೆಮಾ ನಿಲ್ಲಬಾರದೆಂದು ಸಹಕಾರ ನೀಡಿದರು. ನಂತರ ಆ ಸಿನೆಮಾ ಯಶಸ್ಸನ್ನೂ ಕಂಡಿತು. ಅಲ್ಲಿ ತಾಂತ್ರಿಕ ವರ್ಗ, ಛಾಯಾಗ್ರಹಣ, ಸಂಕಲನ ಸಾರ್ವಜನಿಕ ಸಂಪರ್ಕ, ವಸ್ತ್ರವಿನ್ಯಾಸದಲ್ಲಿಯೂ ಹೆಣ್ಣುಮಕ್ಕಳೇ ಇದ್ಧಾರೆ. ಇದು ಮರಾಠಿಯಲ್ಲಿಯೂ ಹೊರತಾಗಿಲ್ಲ.

ನೀ ಯೋಳ್ದಂಗೆ ಕೇಳ್ತಿದೀವಲ್ಲಕ್ಕೋ….

ಬಹುಮುಖ್ಯವಾದ ವಿಷಯವೆಂದರೆ ಗಾಡ್ ಫಾದರ್ ಎನ್ನುವ ಪರಿಕಲ್ಪನೆಯಿಂದಾಚೆಗೆ ನಾವೀವತ್ತು ಬೆಳೆಯುತ್ತಿದ್ದೇವೆ. ಹೆಣ್ಣೋ ಗಂಡೋ ನಮ್ಮ ಪ್ರತಿಭೆಯನ್ನು ಗುರುತಿಸುವುದೇ ಇನ್ನೊಂದು ಪ್ರತಿಭೆ. ಅಂತಹ ವ್ಯಕ್ತಿಶಕ್ತಿ ಪ್ರತಿಯೊಬ್ಬ ಪ್ರತಿಭಾವಂತರಿಗೂ ಖಂಡಿತ ಬೇಕಾಗುತ್ತದೆ. ನನ್ನ ಪಾಲಿಗೆ ಶ್ರೀಧರ್ ಸರ್ ಅಂಥ ಅದ್ಭುತ ಶಕ್ತಿ. ಹೃದಯವೈಶಾಲ್ಯವಿದ್ದವರಲ್ಲಿ ಮಾತ್ರ ಪ್ರೊತ್ಸಾಹಿಸುವ ಗುಣವೂ ಇರುತ್ತದೆ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ.

ಆದರೆ ಈ ಕ್ಷಣದಲ್ಲೂ ಕಾಡುತ್ತಿರುವುದು ಸಿನೆಮಾ ಕ್ಷೇತ್ರ ಹೊರತುಪಡಿಸಿ ನಮ್ಮ ಸುತ್ತಮುತ್ತಲಿರುವ ಹಳ್ಳಿಹಳ್ಳಿಗಳ ಹೆಣ್ಣುಮಕ್ಕಳು ಮೌನ ಮುರಿದು ಮಾತನಾಡಲು, ಪ್ರತಿಭಟಿಸಲು, ಪ್ರಶ್ನಿಸಲು ಕಲಿತಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಮಸ್ಯೆಗಳಿಗೆ ಪರಿಹಾರಸೂತ್ರವನ್ನೂ ತಾವೇ ಕಂಡುಹಿಡಿದುಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ಕಾಲ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಇನ್ನೂ ಯಾಕೆ ಕಾಣುತ್ತಿಲ್ಲ?’

ಇದನ್ನೂ ಓದಿ: Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

Published On - 6:25 pm, Mon, 8 March 21