Women’s Day Special: ನಿಂದನೆಗಳಿಗೆಲ್ಲ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಛಲಗಾರ್ತಿ ಈ ರಕ್ಷಿತಾ; ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲವೆಂದು ತೋರಿಸಿದಾಕೆ

Women’s Day 2021: ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು, ನೆರೆಹೊರೆಯವರ, ಸಂಬಂಧಿಕರಿಂದ ನಿಂದನೆಯ ಮಾತುಗಳನ್ನೆಲ್ಲ ಕೇಳುತ್ತ ಬೆಳೆದ ಚಿಕ್ಕಮಗಳೂರಿನ ಈ ಕುವರಿ ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಿದ್ದಾಳೆ..

Women's Day Special: ನಿಂದನೆಗಳಿಗೆಲ್ಲ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಛಲಗಾರ್ತಿ ಈ ರಕ್ಷಿತಾ; ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲವೆಂದು ತೋರಿಸಿದಾಕೆ
ಸಾಧಕಿ ರಕ್ಷಿತಾಗೆ ಪ್ರಧಾನಿ ಮೋದಿಯವರಿಂದ ಅಭಿನಂದನೆ
Follow us
Lakshmi Hegde
|

Updated on: Mar 08, 2021 | 6:29 PM

ನಿಂದಕರಿರಬೇಕು ಇರಬೇಕು ನಿಂದಕರಿರಬೇಕು

ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ.!!

ಅಂದಂದು ಮಾಡಿದ ಪಾಪದ ಮಾಮಲ.!

ತಿಂದು ಹೋಗುವರಯ್ಯ ನಿಂದಕರು.!!

ವಂದಿಸಿ ಸ್ತುತಿಸುವ ಜನರೆಲ್ಲರೂ ನಮ್ಮ

ಹೊಂದಿದ ಪುಣ್ಯವನೊಯ್ಯುವರಯ್ಯಾ..!!

ದುಷ್ಟಜನರು ಈ ಸೃಷ್ಟಿಯೊಳಿದ್ದರೆ.!

ಶಿಷ್ಟ ಜನರಿಗೆಲ್ಲ ಕೀರ್ತಿಗಳು..!!

ಇಷ್ಟಪ್ರದ ಶ್ರೀಕೃಷ್ಣಾ ನಿನ್ನೊಳು.!

ಇಷ್ಟವರವನೂ ಬೇಡುವೆನಯ್ಯಾ..!!

ದುರುಳ ಜನಂಗಳು ಚಿರಕಾಲ ಇರುವಂತೆ.!

ಕರವ ಮುಗಿದು ವರ ಬೇಡುವೆನು.!!

ಪರಿಪರಿ ತಮಸಿಗೆ ಗುರಿಯಾದರಲ್ಲದೆ

ಪರಮ ದಯಾನಿಧಿ ಪುರಂದರ ವಿಠಲ..!!

ಪುರಂದರದಾಸರ ಈ ಹಿತನುಡಿಗಳು ಶತ ಶತಮಾನಗಳ ಹಿಂದೆ ನುಡಿದಿದ್ರು. ಅದು ಇಂದಿಗೂ ಪ್ರಸ್ತುತ, ಎಂದೆಂದಿಗೂ ಪ್ರಸ್ತುತ.! ನಮ್ಮನ್ನ ನಿಂದಿಸುವರು, ನಮ್ಮ ಬಗ್ಗೆ ಹಿಂದಿನಿಂದ ಮಾತನಾಡುವವರು ಎಲ್ಲರ ಜೀವನ ಪಯಣದಲ್ಲಿ ಇದ್ದೇ ಇರುತ್ತಾರೆ. ಹಾಗಂತ ಆ ರೀತಿಯ ಮಾತನಾಡುವ ಮಂದಿಗೆಲ್ಲಾ ಬಾಯಿಕೊಟ್ಟು, ವಾದ-ವಿವಾದ ಮಾಡಿಕೊಂಡು ನಮ್ಮ ಅಮೂಲ್ಯವಾದ ಸಮಯವನ್ನ ನಾವೇ ನಮ್ಮ ಕೈಯ್ಯಾರೆ ಹಾಳುಮಾಡಿಕೊಂಡರೆ ಅದು ನಮ್ಮ ಮೂರ್ಖತನ. ಮಾತನಾಡುವರರು ಸದಾ ಮಾತನಾಡುತ್ತಲೇ ಇರುತ್ತಾರೆ, ಮಾತನಾಡೋದೇ ಅವರ ಕಾಯಕವಾಗಿರುವಾದ ಅದಕ್ಕೆಲ್ಲಾ ತುಪ್ಪ ಸುರಿಯುವುದು ನಮ್ಮ ಜಾಯಮಾನ ಆಗಬಾರದು. ನಾವು ನಮ್ಮ ಉನ್ನತಿ ಕಡೆಗೆ, ನಮ್ಮ ಜಯದ ಕಡೆಗೆ ಲಕ್ಷ್ಯ ಹರಿಸಬೇಕು. ಯಾವಾಗ ನಮ್ಮ ಸಾಧನೆ ನೋಡಿ ಜನರು ಮೆಚ್ಚಿಕೊಳ್ಳುತ್ತಾರೋ ಆಗ ಆ ನಿಂದಕರು ಬಾಯಿಗೆ ಬೀಗ ಹಾಕಿಕೊಳ್ತಾರೆ. ಇದನ್ನು ಪುರಂದರ ದಾಸರು ಸ್ಫುಟವಾಗಿ ವಚನಗಳ ಮೂಲಕ ಹೇಳಿದ್ದಾರೆ. ಈ ದಾರಿಯನ್ನು ತುಳಿಯುವುದು ತುಸು ಕಷ್ಟವಾದರೂ, ತುಳಿದರೆ ಖಂಡಿತ ನಮಗೆ ಒಳಿತಾಗುತ್ತದೆ ಎಂಬುದಕ್ಕೆ ಸಾಕ್ಷಿ ಮೂಡಿಗೆರೆ ತಾಲೂಕಿನ ಗುಡ್ಡದಳ್ಳಿ ಎಂಬ ಕುಗ್ರಾಮದ ರಕ್ಷಿತಾ ರಾಜು.

ರಕ್ಷಿತಾ ರಾಜು ಹೆಸರನ್ನು ಒಂದಷ್ಟು ಮಂದಿ ಕೇಳಿರಬಹುದು. ಆದರೂ ಇನ್ನೂ ಹಲವರಿಗೆ ಈ ಛಲಗಾರ್ತಿಯ ಪರಿಚಯ ಇರಲಾರದು. ರಕ್ಷಿತಾ ಹುಟ್ಟುವಾಗಲೇ ದೃಷ್ಟಿಹೀನಳಾಗಿ ಹುಟ್ಟಿದ್ದಳು. ಸಾಮಾನ್ಯವಾಗಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಅಂದ್ರೆ, ಬಾಲ್ಯದಿಂದಲೂ ತಂದೆ-ತಾಯಿ ಸೇರಿ ಮನೆಯ ಇತರ ಸದಸ್ಯರು ಹಾಗೂ ಸ್ಥಳೀಯ ಆಡಳಿತದ ಬೆಂಬಲ, ಪ್ರೋತ್ಸಾಹ, ಸಹಕಾರ ಸಿಗಬೇಕು. ಇದರೊಂದಿಗೆ ದೇಹದ ಎಲ್ಲ ಅಂಗಾಂಗಗಳು ಸರಿಯಾಗಿರಬೇಕು. ಆದರೆ ರಕ್ಷಿತಾ ವಿಚಾರದಲ್ಲಿ ಇವೆಲ್ಲವೂ ತದ್ವಿರುದ್ಧ. ಪುಟ್ಟ ಮಗುವಾಗಿದ್ದಾಗಲೇ ಹೆತ್ತತಾಯಿಯನ್ನು ಕಳೆದುಕೊಂಡವಳಿಗೆ ಆಸರೆಯಾಗಿದ್ದು, ಅಜ್ಜಿ ಲಲಿತಾ.

ಕಷ್ಟಗಳ ಸರಮಾಲೆ ರಕ್ಷಿತಾ ಬಾಲ್ಯ ರಕ್ಷಿತಾ ಕಷ್ಟದಲ್ಲೇ ಬಾಲ್ಯವನ್ನು ಕಳೆದರು. ಸಾಕಿದ ಅಜ್ಜಿಗೆ ಕಿವಿ ಕೇಳುತ್ತಿರಲಿಲ್ಲ.. ಮಾತೂ ಬರುತ್ತಿರಲಿಲ್ಲ. ಆದರೆ ಏನೇ ಕಷ್ಟ ಬಂದರೂ ಅಜ್ಜಿ ಲಲಿತಮ್ಮ ಹೆದರಲಿಲ್ಲ. ತಮ್ಮ ಎದೆಯ ಪ್ರೀತಿಯನ್ನು ಒಣಗಿಸಲಿಲ್ಲ. ಮೊಮ್ಮಗಳಿಗೆ ರಕ್ಷಿತಾ ಎಂದು ಹೆಸರಿಟ್ಟರು. ಹೊರಜಗತ್ತನ್ನೇ ನೋಡದ ರಕ್ಷಿತಾಗೆ ಅಜ್ಜಿಯ ಮಡಿಲು ಸಂತೃಪ್ತಿಯನ್ನು ತಂದುಕೊಟ್ಟಿತ್ತು. ಆ ಮಡಿಲಿನಲ್ಲಿ ದೊರೆತ ಸುರಕ್ಷಿತ ಭಾವ ಅವಳಿಗೆ ಜಗತ್ತಿನ ವಿದ್ಯಮಾನಗಳನ್ನು ಒಳಗಣ್ಣಿನಿಂದ ನೋಡುವ ಶಕ್ತಿಯನ್ನು ಒದಗಿಸಿತ್ತು. ರಕ್ಷಿತಾಗೆ ಇನ್ನೊಬ್ಬ ಸೋದರ ಕೂಡ ಇದ್ದು, ಅವನ ಹೆಸರು ರಂಜಿತ್​. ಇವರಿಬ್ಬರೂ ಅಜ್ಜಿಯ ಜತೆಯೇ ಬೆಳೆಯತೊಡಗಿದರು. ಅಮ್ಮನಿಲ್ಲದ ಈ ಮಕ್ಕಳನ್ನು ಕಂಡರೆ ಸಂಬಂಧಿಕರು, ನೆರೆಹೊರೆಯವರಿಗೆ ಉದಾಸೀನ. ಅದರಲ್ಲೂ ರಕ್ಷಿತಾಳ ದೃಷ್ಟಿಹೀನತೆಯನ್ನು ಎತ್ತಿ ಆಡುತ್ತಾ, ‘ಈ ಅಜ್ಜಿ ಸತ್ತರೆ ಇವುಗಳು ಭಿಕ್ಷೆ ಬೇಡಾದೇ ಸರಿ’ ಎಂದು ಅಣುಕಿಸುತ್ತಾ ಚುಚ್ಚು ಮಾತುಗಳಿಂದ ಎಳೆ ಮನಸುಗಳನ್ನ ನೋಯಿಸುತ್ತಿದ್ದರು.

ಅಜ್ಜಿಗೇನೋ ರಕ್ಷಿತಾಳನ್ನು ಶಾಲೆಗೆ ಸೇರಿಸಬೇಕು ಎಂದು ಆಸೆ. ಆದರೆ ಅಂಧ ಮಗು.. ಹೇಗೆ? ಏನು ಮಾಡುವುದು ಎಂಬ ತೊಳಲಾಟ. ಈ ಗೊಂದಲಕ್ಕೆ ಪರಿಹಾರ ಕೊಟ್ಟಿದ್ದು, ಆಶಾಕಿರಣ ಅಂಧಮಕ್ಕಳ ವಸತಿ ಶಾಲೆ. ಮಗುವನ್ನು ಇಲ್ಲಿಯವರೆಗೆ ಕರೆತಂದರು. ಶಾಲೆಯ ವಾತಾವರಣ ಹಳ್ಳಿಯ ಮನೆಗಿಂತ ಸಾವಿರ ಪಾಲು ಮೇಲಾಗಿದೆ ಎಂಬ ಸಮಾಧಾನದಿಂದ ಮಗುವನ್ನು ಬಿಟ್ಟುಹೋದರು. ಆದರೆ ಅಜ್ಜಿಯನ್ನು ಬಿಟ್ಟು ಬೇರೆ ಪ್ರಪಂಚವೇ ಗೊತ್ತಿರದ ರಕ್ಷಿತಾಗೆ ಇಲ್ಲಿ ಹೊಂದಿಕೊಳ್ಳಲಾಗಲಿಲ್ಲ. ಆತ್ಮೀಯ ಪ್ರೀತಿಯ ಸ್ಪರ್ಶ ಒಂದನ್ನು ಬಿಟ್ಟು ಬೇರೇನೂ ಅವಳಿಗೆ ಬೇಕಾಗಿರಲಿಲ್ಲ. ಐದಾರು ವರ್ಷದ ಮಗುವಿನ ನಿರಂತರ ಯಾತನೆ, ಅಳು, ದುಃಖಗಳು ಮಗುವನ್ನು ಮತ್ತೆ ಹಳ್ಳಿಗೆ ಹಿಂದಿರುಗುವಂತೆ ಮಾಡಿತು. ಹಳ್ಳಿಯಲ್ಲಿ ಮತ್ತೆ ತಮ್ಮನ ಜೊತೆ ಆಡಿಕೊಳ್ಳುತ್ತಾ, ಅಜ್ಜಿಯ ಕೈ ಭಾಷೆಯನ್ನು ಮುಟ್ಟಿಮುಟ್ಟಿ ಅರ್ಥಮಾಡಿಕೊಳ್ಳುತ್ತಾ, 2ಕಿ.ಮೀ ದೂರವಿದ್ದ ವಾಟೆಕಾನಿನ ಪ್ರಾಥಮಿಕ ಶಾಲೆಗೆ ಅಜ್ಜಿ ಕೈಹಿಡಿದು ಹೋಗಿಬರುತ್ತಾ ದಿನ ಕಳೆಯ ತೊಡಗಿದಳು.

Kiran Jijiju And Rakshita

ಕ್ರೀಡಾ ಸಚಿವರೊಂದಿಗೆ ರಕ್ಷಿತಾ

ತಂದೆಯನ್ನೂ ಕಳೆದುಕೊಂಡಳು ರಕ್ಷಿತಾಗೆ ಹತ್ತುವರ್ಷವಾದಾಗ ಮತ್ತೊಂದು ಆಘಾತ ಎದುರಾಯಿತು. ತಂದೆ ರಾಜು ಕೂಡ ಪ್ರಾಣ ಬಿಟ್ಟರು. ಆಗ ಮತ್ತೆ ಸಂಬಂಧಿಕರು ಮಕ್ಕಳದ್ದು ಹೀನ ಅದೃಷ್ಟ ಎಂದು ಹೀಯಾಳಿಸತೊಡಗಿದರು. ಆಗಲೇ ಜಗತ್ತಿನ ಮಾತುಕತೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬಂದಿದ್ದರಿಂದ ಮಕ್ಕಳಿಗೆ ಚುಚ್ಚುನುಡಿಗಳೆಲ್ಲ ಅರ್ಥವಾಗಿ ನೋವಿನಲ್ಲಿ ಬೇಯವಂತಾಯಿತು. ಮತ್ತೆ ರಕ್ಷಿತಾ ತಮ್ಮನ ಕೈಹಿಡಿದು ದಿನ ನಾಲ್ಕೈದು ಕಿಲೋಮೀಟರ್ ನಡೆದು ಶಾಲೆಗೆ ಹೋಗಿ ಬರಲು ಪ್ರಾರಂಭಿಸಿದಳು. ವಾಟೆಕಾನ್ ಶಾಲೆಯ ಶಿಕ್ಷಕರಿಗೆ ರಕ್ಷಿತಾಳ ಈ ಪರಿಯ ಕಷ್ಟ ನೋಡಲಾಗಲಿಲ್ಲ. ಅವರು ರಕ್ಷಿತಾಳನ್ನು ಹತ್ತಿರ ಕೂರಿಸಿಕೊಂಡು, ತಲೆಸವರಿ ಮುದ್ದುಮಾಡುತ್ತಾ ಅಂಧಮಕ್ಕಳ ಶಾಲೆಗೆ ಸೇರಿದರೆ ಅವಳಿಗೆ ಏನೆಲ್ಲಾ ಅನುಕೂಲ ಆಗಬಹುದೆಂದು ಬಿಡಿಸಿ ಹೇಳಿದರು. ರಕ್ಷಿತಾಳಿಗೂ ಸರಿಯೆನ್ನಿಸಿತು. ತನಗೆ ಸರಿ ಎನಿಸಿದ್ದನ್ನು ಎಷ್ಟೇ ಕಷ್ಟವಾದರೂ ಮಾಡುವ ರಕ್ಷಿತಾಳ ಛಲದ ಗುಣ ಇಲ್ಲಿಂದ ಅವಳಿಗೆ ಹಗಲಿರುಳ ಸಂಗಾತಿಯಾಯಿತು! ಚಿಕ್ಕಮಗಳೂರಿನ ಆಶಾಕಿರಣ ಶಾಲೆ ಎರಡನೇ ಬಾರಿಗೆ ಅತ್ಯಂತ ಪ್ರೀತಿಯಿಂದ ತನ್ನೆಡೆಗೆ ರಕ್ಷಿತಾಳನ್ನು ಬರಮಾಡಿಕೊಂಡಿತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಲಿತಳು. ಮೂರನೇ ತರಗತಿಯ ಓದಿನ ಜೊತೆಗೆ ಸಂಗೀತದ ಅಭ್ಯಾಸವೂ ಅವಳನ್ನು ಸೆಳೆದುಕೊಂಡಿತು.

ಸಾಧನೆಯ ಕನಸು.. 2014ರಲ್ಲಿ ಆಶಾಕಿರಣ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿ ಶವಾದ್, ಸೀನಿಯರ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಬಂದಾಗ ಆತನಿಗೆ ಶಾಲೆಯಲ್ಲಿ ನೀಡಿದ ಗೌರವ ಪ್ರೀತಿಯನ್ನು ಗಮನಿಸಿದ ರಕ್ಷಿತಾ ತಾನೂ ಅಂಥದ್ದೇ ಸಾಧನೆ ಮಾಡಲೇಬೇಕು ಎಂದು ಸಂಕಲ್ಪಿಸಿದಳು. ಅಷ್ಟೇ! ಆ ಸಂಕಲ್ಪದ ಸಾಕಾರಕ್ಕೆ ಅವಳು ಮಾಡಿದ ಪ್ರತಿಯೊಂದು ಪ್ರಯತ್ನ, ಸಕಾಲಕ್ಕೆ ಒದಗಿಬಂದ ಹಿತೈಷಿಗಳ ನೆರವು, ಸಾಧನೆಯ ಹಾದಿಯಲ್ಲಿ ಬಂದೆರಗುತ್ತಿದ್ದ ಗುರುತರವಾದ ವಿಘ್ನಗಳನ್ನು ಸಮಾಧಾನಚಿತ್ತದಿಂದ ಎದುರಿಸುವ ಧೀಶಕ್ತಿ ಎಲ್ಲವೂ ರಕ್ಷಿತಾ ಜತೆಗೂಡಿದುವು. ಆಟದ ಮೈದಾನದಲ್ಲಿ ರಕ್ಷಿತಾಳ ನಿರಂತರ ಅಭ್ಯಾಸ ಕ್ರೀಡಾ ಶಿಕ್ಷಕ ಮಂಜುನಾಥರ ಮಾರ್ಗದರ್ಶನದಲ್ಲಿ ಆರಂಭ ಆಯಿತು. ರಕ್ಷಿತಾಳ ಯಶೋಗಾಥೆಗೆ ಮುನ್ನುಡಿ ಬರೆಯಿತು.

ಪ್ರಶಸ್ತಿಗಳ ಬೇಟೆ ಶುರುಮಾಡಿದ ಛಲಗಾರ್ತಿ..! 2016ರ ಡಿಸೆಂಬರ್​​​ನಲ್ಲಿ ದೆಹಲಿಯಲ್ಲಿ ನಡೆದ 20ನೇ ಐಬಿಎಸ್ಎ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಪಡೆದ ಚಿನ್ನದ ಪದಕ, 100 ಮೀಟರ್ ಓಟದಲ್ಲಿ ಪಡೆದ ಬೆಳ್ಳಿ ಪದಕದೊಂದಿಗೆ ರಕ್ಷಿತಾಳ ಆತ್ಮವಿಶ್ವಾಸ ವೃದ್ಧಿಯಾಯಿತು. ನಂತರ ಜೈಪುರದಲ್ಲಿ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಒಲಂಪಿಕ್ ಕ್ರೀಡಾಕೂಟ, ಹರಿಯಾಣದ ರಾಷ್ಟ್ರೀಯ ಜ್ಯೂನಿಯರ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟ, ಹರಿಯಾಣದ ಪಂಚಕುಳ, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ, ನವದೆಹಲಿಯ 21ನೇ ಐಬಿಎಸ್ಎ ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ 1500ಮೀಟರ್, 800ಮೀಟರ್, 400ಮೀಟರ್ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದಳು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಬೇಟೆ ರಕ್ಷಿತಾಳ ಪದಕ ಬೇಟೆ ರಾಷ್ಟ್ರಮಟ್ಟಕ್ಕಷ್ಟೇ ಸೀಮಿತಗೊಳ್ಳಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವಳು ಮಿಂಚತೊಡಗಿದಳು. 2018 ಪ್ಯಾರಿಸ್​​​ನಲ್ಲಿ ಪ್ಯಾರಿಸ್ ಪ್ಯಾರ ಅಥ್ಲೆಟಿಕ್ ಫ್ರಿಕ್ಸ್ ನಲ್ಲಿ ಬಂಗಾರ, ಅದೇ ವರ್ಷ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಪ್ಯಾರಾ ಏಷಿಯನ್​ ಗೇಮ್ಸ್​​ನಲ್ಲಿ 150 ಮೀ.ಓಟದಲ್ಲಿ ಚಿನ್ನದ ಪದಕ, 2019ರಲ್ಲಿ ಮತ್ತೆ ಪ್ಯಾರಿಸ್​ ಪ್ಯಾರಾ ಅಥ್ಲೆಟಿಕ್ ಫ್ರಿಕ್ಸ್ ನಲ್ಲಿ ಬಂಗಾರ ಗೆದ್ದ ಜ್ಯೂನಿಯರ್​ ಚಾಂಪಿಯನ್​ಶಿಪ್​ ವಿಜೇತೆ ಈ ರಕ್ಷಿತಾ. ಅಷ್ಟೇ ಅಲ್ಲದೆ, 2019ರಲ್ಲಿ ಸ್ವಿಟ್ಜ್​ರ್ಲ್ಯಾಂಡ್​ನಲ್ಲಿ ನಡೆದ 1500 ಮೀ.ಓಟದ ಸ್ಪರ್ಧೆಯಲ್ಲೂ ಚಿನ್ನ ಗೆದ್ದಿದ್ದಾಳೆ. ಹಾಗೇ, ಈ ವರ್ಷ ಫೆಬ್ರವರಿಯಲ್ಲಿ ದುಬೈನಲ್ಲಿ ಅಂತರರಾಷ್ಟ್ರೀಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ ಫ್ರೀನಲ್ಲಿ ಕಂಚಿನ ಪದಕ ವಿಜೇತಳಾಗಿದ್ದಾಳೆ. ಕಳೆದವಾರ ಕೇಂದ್ರ ಸಚಿವ ಕಿರಣ್​ ರಿಜಿಜು ಅವರು ಬೆಂಗಳೂರಿಗೇ ಬಂದು ರಕ್ಷಿತಾಳನ್ನು ಸನ್ಮಾನಿಸಿದ್ದಾರೆ.

Rakshita Raju CKM

ಪ್ರಧಾನಿ ಮೋದಿಯವರಿಂದಲೂ ಸನ್ಮಾನ, ವಿರಾಟ್​ ಕೊಹ್ಲಿಯಿಂದ್ಲೂ ಮೆಚ್ಚುಗೆ ಕುಗ್ರಾಮದಿಂದ ಬಂದು ತಂದೆ-ತಾಯಿಯ ಪ್ರೀತಿಯಿಂದ ವಂಚಿತಳಾದರೂ, ಕಂಗೆಡದೆ ದೇಶ-ವಿದೇಶದಲ್ಲಿ ಭಾರತದ ಪತಾಕೆಯನ್ನ ಎತ್ತಿಹಿಡಿದ ಈ ಕರುನಾಡ ಕುವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ತಲೆಬಾಗಿದ್ದಾರೆ.. 2018ರಲ್ಲಿ ಮೊದಲ ಬಾರಿಗೆ ಬಂಗಾರದ ಬೇಟೆಯಾಡಿದ ರಕ್ಷಿತಾ ಬಗ್ಗೆ ಸ್ವತಃ ತಾವೇ ಮಾಹಿತಿ ಪಡೆದು, ರಕ್ಷಿತಾಳ ಸಾಧನೆಯನ್ನ ಕೊಂಡಾಡಿದಲ್ಲದೇ ಸನ್ಮಾನಿಸಿದ್ದರು. ಹಾಗೇ 2019ರಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯ ಕೊಳ್ಳೆ ಹೊಡೆದ ರಕ್ಷಿತಾಳ ಸಾಧನೆ ಕಂಡು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಫೌಂಡೇಶನ್ ವತಿಯಿಂದ ‘ಡಿಫರೆಂಟ್ಲಿ ಏಬಲ್ಡ್ ಸ್ಪೋರ್ಟ್ಸ್ ವಿಮೆನ್ -2019′ ಅವಾರ್ಡ್ ನೀಡಿ ಗೌರವಿಸಲಾಯ್ತು. ಈ ಸಂದರ್ಭದಲ್ಲೂ ಕೂಡ ಕೋಟ್ಯಾಂತರ ಅಭಿಮಾನಿಗಳ ಹಾಟ್ ಫೇವರಿಟ್ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿನೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವಾರ್ಡ್ ನೀಡಿ ರಕ್ಷಿತಾಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು ಆಸ್ಪೈರ್ ಇಂಡಿಯಾ ವತಿಯಿಂದ ನೀಡಲಾಗುವ ‘ಟೈ- ಆಸ್ಪೈರ್ ಯಂಗ್ ಅಚೀವರ್ಸ್ ಅವಾರ್ಡ್-2018’ ಕೂಡ ರಕ್ಷಿತಾ ಪಾಲಾಗಿದೆ.

Rakshitha And Virat Kohli

ವಿರಾಟ್​ ಕೊಹ್ಲಿಯವರೊಂದಿಗೆ ರಕ್ಷಿತಾ

ರಕ್ಷಿತಾ ಸಾಧನೆ ಹಿಂದೆ ಇದ್ದಾರೆ ಕೋಚ್ ರಾಹುಲ್..! ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಕ್ಷಿತಾ ಚಿನ್ನದ ಬೇಟೆಯಾಡಲು ಪ್ರಮುಖ ಕಾರಣ ಆಕೆಯ ಕೋಚ್​ ರಾಹುಲ್.. 2016ರಲ್ಲಿ ರಾಷ್ಟ್ರಮಟ್ಟದಲ್ಲಿ ರಕ್ಷಿತಾ ಸ್ಪರ್ಧೆ ಮಾಡುವಾಗ ಆಕೆಯೊಳಗಿರುವ ನೈಜ ಪ್ರತಿಭೆಯನ್ನ ಗುರುತಿಸಿದ ರಾಹುಲ್, ಅಂತಾರಾಷ್ಟ್ರೀಯಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸುವ ತಾಕತ್ತು ರಕ್ಷಿತಾಗೆ ಇದೆ ಅನ್ನೋದನ್ನ ಅಂದೇ ನಿರ್ಧರಿಸಿದ್ದರು. ಅದಕ್ಕೆ ಅನುಗುಣವಾಗಿ ರಕ್ಷಿತಾಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತ ಬಂದರು. ಈ ಮೂಲಕ ಆಕೆ ತಾನೇನು ಎಂಬುದನ್ನ ವಿದೇಶಗಳಲ್ಲೂ ಸಾಬೀತು ಮಾಡಲು ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೆರವಾದರು. ಒಬ್ಬಳು ಯಶಸ್ವಿ ಕ್ರೀಡಾಳು ಜೊತೆ ಒಬ್ಬ ಉತ್ತಮ ಕೋಚ್ ಗಟ್ಟಿಯಾಗಿ ನಿಂತರೆ ಯಾವ ಫಲಿತಾಂಶ ಬರುತ್ತೆ ಅನ್ನೋದನ್ನ ಸದ್ಯ ಇಡೀ ಜಗತ್ತಿಗೆ ತೋರಿಸುತ್ತಿದ್ದಾರೆ ರಕ್ಷಿತಾ-ರಾಹುಲ್. ಯಶಸ್ಸಿನ ಉತ್ತುಂಗದಲ್ಲಿರೋ ರಕ್ಷಿತಾ ಜೂನ್​​ನಲ್ಲಿ ಮೊರಕ್ಕೊದಲ್ಲಿ ನಡೆಯಲಿರುವ ವರ್ಲ್ಡ್ ಗ್ರ್ಯಾನ್ ಫ್ರಿಕ್ಸ್ , ಸೆಪ್ಟೆಂಬರ್​​ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್​ನಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಹುಟ್ಟುತ್ತಲೇ ದೃಷ್ಟಿದೋಷವಿದ್ರೂ, ಬರೀ ಚುಚ್ಚುಮಾತುಗಳನ್ನೇ ಕೇಳುತ್ತ ಬೆಳೆದರೂ ಒಂದಿನಿತೂ ಆತ್ಮವಿಶ್ವಾಸವನ್ನು ಕುಗ್ಗಿಸಿಕೊಳ್ಳದೆ ಮುನ್ನುಗ್ಗುತ್ತಿರುವ ರಕ್ಷಿತಾ ನಿಜಕ್ಕೂ ಮಾದರಿ.

ರಕ್ಷಿತಾಳಿಗೆ ಪಾಸ್ ಫೋರ್ಟ್ ಮಾಡಿಸಲು ತುಂಬಾನೇ ತೊಂದರೆಯಾಯ್ತು. ಹೀಗಾಗಿ ನಾಲ್ಕು ವರ್ಷದ ಹಿಂದೆ ಯೂತ್ ಏಷ್ಯನ್ ಗೇಮ್ಸ್ ಮಿಸ್ ಮಾಡಿಕೊಳ್ಳಬೇಕಾಗಿ ಬಂತು. ಆಕೆ ತುಂಬಾ ಕಷ್ಟಪಟ್ಟಿದ್ದಾಳೆ. ಖಂಡಿತವಾಗಿಯೂ ವಿಶ್ವವೇ ಬೆರಗಾಗುವ ಸಾಧನೆಯನ್ನ ರಕ್ಷಿತಾ ಮುಂದಿನ ದಿನಗಳಲ್ಲಿ ಮಾಡುತ್ತಾಳೆ ಎಂಬ ಅಚಲ ನಂಬಿಕೆ ನನಗಿದೆ. | ಕೋಚ್ ರಾಹುಲ್

ನಾನು ಒಲಿಂಪಿಕ್​ಗೆ ಅರ್ಹತೆ ಪಡೆದು ಸ್ಪರ್ಧೆ ಮಾಡುತ್ತಿದ್ದೇನೆ, ಆದರೆ ನನ್ನೂರಿಗೆ ಹೋಗಿ-ಬರಲು ಈಗಲೂ ಸರಿಯಾದ ರಸ್ತೆಯಿಲ್ಲ. ಮನೆಯಲ್ಲಿ ಅಜ್ಜಿ, ನನ್ನ ತಮ್ಮ ಮಾತ್ರ ಇದ್ದಾರೆ. ಅವರಿಗೆ ಕಿವಿ ಕೇಳುವುದಿಲ್ಲ, ಮಾತು ಬರೋದಿಲ್ಲ. ಹೀಗಾಗಿ ಇಲ್ಲಿಂದ ಅಜ್ಜಿ ಜೊತೆ ಮೊಬೈಲ್​​ನಲ್ಲಿ ಮಾತನಾಡಲು ನನಗೆ ಆಗುತ್ತಿಲ್ಲ. ನಮ್ಮ ಮನೆಯವರು ಈಗಲೂ ಕಷ್ಟದ ಜೀವನ ನಡೆಸುತ್ತಿದ್ದಾರೆ. ಆದರೆ ಯಾವುದೇ ರೀತಿಯ ಸಹಾಯವೂ ಸರ್ಕಾರದಿಂದ ಸಿಗುತ್ತಿಲ್ಲ | ರಕ್ಷಿತಾ

Rakshita Raj 1

ನಿರೂಪಣೆ -ಪ್ರಶಾಂತ್, ಚಿಕ್ಕಮಗಳೂರು

ಇದನ್ನೂ ಓದಿ:International Women’s Day 2021 | ಸಮಾಜ ಸೇವೆಯೇ ಸುಶೀಲಮ್ಮನವರ ಜೀವನ..; ಒಳಿತಿಗಾಗಿ ನಿರಂತರ ಹೋರಾಟ

Women’s Day Special: ಮಗ್ಗುಲ ಮುಳ್ಳಂತಿದ್ದ ಕ್ಯಾನ್ಸರ್​ ಜತೆ ಹೋರಾಡುತ್ತ, ಕೊರೊನಾ ರೋಗಿಗಳ ಸೇವೆ ಮಾಡಿದ ನರ್ಸ್​ ಕೃಪಾ ಶಿಲಬದ್ರ