ದಕ್ಷಿಣ ಕನ್ನಡ: ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಮಾದರಿಗಳನ್ನು ಪರಿಚಯಿಸಿ ದೇಶಕ್ಕೆ ಮಾದರಿಯಾಗಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿಜಕ್ಕೂ ರೈತರ ಬಂಧು ಎಂದರೆ ತಪ್ಪಾಗಲಿಕ್ಕಿಲ್ಲ. ಕೃಷಿ ಕ್ಷೇತ್ರದ ವಿಸ್ತರಣೆಯ ಜೊತೆಗೆ ರೈತರ ನೆರವಿಗೆ ಸದಾ ನಿಂತಿರುವ ಈ ಯೋಜನೆ ಹೊಸ ಪ್ರಯತ್ನಗಳತ್ತ ಸದಾ ವಾಲುತ್ತಿರುತ್ತದೆ. ಅದರಂತೆ ಈ ವರ್ಷವೂ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತಂದಿದೆ.
ಪ್ರಗತಿ ಬಂಧು ಮತ್ತು ಜಂಟಿ ಬಾಧ್ಯತಾ ಸಂಘ ಕಾರ್ಯಕ್ರಮಗಳು:
ಸಮಾನ ಆರ್ಥಿಕ ಹಿನ್ನೆಲೆ ಹಾಗೂ ಸಮಾನ ಮನಸ್ಸಿನ ನೆರೆಹೊರೆಯ 5-7 ಮಂದಿಯನ್ನು ಒಳಗೊಂಡ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಘಗಳೇ ಪ್ರಗತಿ ಬಂಧು. ಇದರ ವಿಶೇಷತೆ ಎಂದರೆ ಪ್ರತಿ ವಾರ ಒಬ್ಬ ಸದಸ್ಯರ ಹೊಲದಲ್ಲಿ ಶ್ರಮ ವಿನಿಮಯ ಹಾಗೂ ಕನಿಷ್ಠ ಉಳಿತಾಯ ಮಾಡುವುದರ ಮೂಲಕ ತಮ್ಮ ಅಭಿವೃದ್ಧಿಗೆ ತಾವೇ ಮೆಟ್ಟಿಲುಗಳನ್ನು ನಿರ್ಮಿಸುವುದಾಗಿದೆ.
ಹಿಡುವಳಿ ಯೋಜನೆ ಆಧಾರಿತ ಕೃಷಿ ಅಭಿವೃದ್ಧಿ ಕಾರ್ಯಕ್ರಮ:
ಇಲ್ಲಿ ಯೋಜನೆಗೆ ಅನುಗುಣವಾಗಿ ರೈತ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೈತರನ್ನು ಅಭಿವೃದ್ಧಿ ಪಡಿಸುವುದೇ ಇದರ ಮೂಲ ಉದ್ದೇಶ. ಈ ಕಾರ್ಯಕ್ರಮದ ಅಡಿಯಲ್ಲಿ ಅನೇಕ ಯೋಜನೆಗಳು ಜಾರಿಗೆ ಬಂದಿವೆ.
ಕೃಷಿ ಅಭಿವೃದ್ಧಿ ಕಾರ್ಯಕ್ರಮ:
ಪಾಲುದಾರ ಬಂಧುಗಳಿಗೆ ತಾಂತ್ರಿಕ ಮಾಹಿತಿಯೊಂದಿಗೆ ಆರ್ಥಿಕ ಸಹಕಾರ ನೀಡಿ ತಮ್ಮ ಕೃಷಿ ಭೂಮಿಯಲ್ಲಿ ಆಹಾರ ಅಥವಾ ದ್ವಿದಳ ಧಾನ್ಯ, ಎಣ್ಣೆಕಾಳು, ಪುಷ್ಪ ಕೃಷಿ, ತರಕಾರಿ ಬೇಸಾಯ ಮತ್ತು ವಾಣಿಜ್ಯ ಬೆಳೆ, ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆ ಮಾಡಲು ತಾಂತ್ರಿಕ ಮಾಹಿತಿ ಮತ್ತು ಪ್ರಗತಿ ನಿಧಿಯನ್ನು ನೀಡಿ ರೈತರ ಆರ್ಥಿಕ ಅಭಿವೃದ್ಧಿಗೆ ಇದು ಮುನ್ನುಡಿಯಾಗಿದೆ.
ಮೂಲಭೂತ ಸೌಕರ್ಯ:
ರೈತರ ನೆರವಿಗಾಗಿ ಹಟ್ಟಿ ರಚನೆ, ಕೃಷಿ ಹೊಂಡ, ಗೋದಾಮು, ಬಾವಿ, ಪಾಲಿ ಹೌಸ್ ಮತ್ತು ಹಸಿರು ಮನೆ, ನೀರಿನ ಸಂಪು ಇವುಗಳನ್ನು ರಚನೆ ಮಾಡಿದ್ದು, ಇದರ ಜೊತೆಗೆ ನೀರಿನ ನ್ಯಾಯಯುತ ಮತ್ತು ಮಿತ ಬಳಕೆಗಾಗಿ ಹೊಸ ತಂತ್ರಜ್ಞಾನದ ಅಳವಡಿಕೆಗೆ ಪ್ರೋತ್ಸಾಹ ನೀಡಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಮಾಹಿತಿ ಮತ್ತು ಸಹಕಾರವನ್ನು ನೀಡುತ್ತಿದ್ದು, ಇದರ ಮುಖ್ಯ ಉದ್ದೇಶ ಕೊಳವೆ ಬಾವಿ, ಅವುಗಳಿಗೆ ಪಂಪು ಖರೀದಿ ಮಾಡುವುದು ಮತ್ತು ನಿರಾವರಿ ವಿಧಾನಗಳನ್ನು ರೂಪಿಸುವುದಾಗಿದೆ.
ಕೃಷಿ ಯಾಂತ್ರೀಕರಣ:
ಕೃಷಿಕರ ಕಾರ್ಯಕ್ಷಮತಾಭಿವೃದ್ಧಿಗಾಗಿ, ಸಕಾಲದಲ್ಲಿ ಉತ್ತಮ ಫಸಲನ್ನು ಪಡೆಯಲು ಮತ್ತು ಕೂಲಿಯಾಳುಗಳ ಸಮಸ್ಯೆಯನ್ನು ನೀಗಿಸಲು ಯೋಜನೆಯ ಆಧುನಿಕ ಕೃಷಿಯಾಂತ್ರೀಕರಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒದಗಿಸುತ್ತಿದೆ.ಇದರ ಜೊತೆಗೆ ಆಧುನಿಕ ಕೃಷಿ ಯಂತ್ರೋಪಕರಣಗಳ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ, ಆರ್ಥಿಕ ಸಹಕಾರ ಹಾಗೂ ಅನುದಾನವನ್ನು ನೀಡುತ್ತಿದೆ.
ಯಂತ್ರಶ್ರೀ ಯೋಜನೆ:
ರೈತರ ಜೀವನಾಡಿಯಾಗಿರುವ ಭತ್ತ ಕೃಷಿಯನ್ನು ಲಾಭದಾಯಕವೂ, ರೈತಸ್ನೇಹಿಯೂ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ವಿನೂತನ ಯಂತ್ರಶ್ರೀ ಎಂಬ ಲಾಭದಾಯಕ ಭತ್ತ ಬೇಸಾಯ ಯೋಜನೆಯನ್ನು ಸಿದ್ಧಪಡಿಸಿದ್ದು, ಇದರಿಂದ ಮುಂದಿನ 3 ವರ್ಷಗಳಲ್ಲಿ ಭತ್ತ ಬೇಸಾಯದ ಕುರಿತಂತೆ ರಾಷ್ಟ್ರದಲ್ಲಿಯೇ ಕ್ರಾಂತಿಕಾರಕ ಬದಲಾವಣೆಯನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದೆ.
ಪ್ರಥಮ ಹಂತದಲ್ಲಿ 2020ರ ಮಳೆಗಾಲದ ಖಾರಿಫ್ ಬೆಳೆಗೆ ಸುಮಾರು 50,000 ಎಕರೆ ಪ್ರದೇಶದಲ್ಲಿ ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದ್ದು, ರೈತರನ್ನು ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದ ಹೊರಬರುವಂತೆ ಮಾಡಿ ಭತ್ತದ ಬೆಳೆಯ ಖರ್ಚು ಕಡಿಮೆ ಮಾಡುವ ಮೂಲ ಉದ್ದೇಶವನ್ನು ಯಂತ್ರಶ್ರೀ ಹೊಂದಿದೆ.
ಪಶುಸಂಗೋಪನೆ:
ಕೃಷಿಯ ಜೀವನಾಡಿಯಾದ ಹೈನುಗಾರಿಕೆ ಮತ್ತು ಇತರ ಪಶಸಂಗೋಪನೆಯನ್ನು ರೈತರಲ್ಲಿ ಅನುಷ್ಠಾನ ಮಾಡಲು ತಾಂತ್ರಿಕ ಮತ್ತು ಆರ್ಥಿಕ ಪ್ರೇರಣೆ ಇದಾಗಿದ್ದು, ಸಾಕಾಣಿಕೆ ಮೂಲಕ ಒಳಸುರಿಗಳಲ್ಲಿ ಸ್ವಾಲಂಬನೆ, ಗೋಬರ್ ಗ್ಯಾಸ್, ಎರೆ ಗೊಬ್ಬರ ತಯಾರಿ ಹಾಗೂ ಕ್ಷೀರೋತ್ಪಾದನೆ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ನೀಡಿದೆ.
ಹಸಿರು ಇಂಧನ ಕಾರ್ಯಕ್ರಮ:
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನಶಿಸುತ್ತಿರುವ ಸ್ವಾಭಾವಿಕ ಇಂಧನ ಮೂಲಗಳಿಗೆ ಪರಿಹಾರವಾಗಿ ಹಸಿರು ಇಂಧನ ಮೂಲವಾದ ಸೋಲಾರ್, ಗೋಬರ್ ಗ್ಯಾಸ್, ಪರಿಸರ ಸ್ನೇಹಿ ಅಡುಗೆ ಒಲೆಯ ಮಹತ್ವ ಹಾಗೂ ಬಳಕೆಯ ಬಗ್ಗೆ ಮಾಹಿತಿ ಮತ್ತು ತಾಂತ್ರಿಕ ಚಿಂತನೆಯೊಂದಿಗೆ ಅನುದಾನ ಮತ್ತು ಆರ್ಥಿಕ ಸಹಕಾರದ ಒದಗಣೆ ಮಾಡಲಾಗಿದೆ.
ಕೃಷಿಕ ಒಂದು ಬೆಳೆಗೆ ಮಾತ್ರ ಸೀಮಿತವಾಗಿರುವುದು ಬೇಡ ನಾನಾ ರೀತಿಯ ಬೆಳೆಗಳನ್ನು ಬೆಳೆಯಬೇಕು ಆ ಮೂಲಕ ಒಂದು ಕೃಷಿಯಲ್ಲಿ ನಷ್ಟ ಹೊಂದಿದರೆ ಮತ್ತೊಂದು ಬೆಳೆಯಲ್ಲಿ ರೈತರು ಲಾಭ ಪಡೆಯಬಹುದು ಎನ್ನುವುದಾಗಿದ್ದು, ಸಮಗ್ರ ಕೃಷಿ ಪದ್ಧತಿಯನ್ನು ಜಾರಿಗೆ ತರಲಾಗಿದೆ.
ಇದರ ಜೊತೆ ಜೊತೆಗೆ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವಲ್ಲಿ ಯಂತ್ರಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು, ಭತ್ತ ಹಾಕುವುದರಿಂದ ಹಿಡಿದು ಕೊಯ್ಲಿನವರೆಗೆ ಎಲ್ಲವನ್ನು ಯಾಂತ್ರೀಕರಣ ಮಾಡಲಾಗಿದೆ. ಇದರಿಂದ ಸಮಯದ ಉಳಿತಾಯ, ಖರ್ಚು ಕಡಿಮೆಯಾಗುತ್ತದೆ, ಇಳುವರಿ ಹೆಚ್ಚಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಹೇಳಿದ್ದಾರೆ.
ಇದರ ಜೊತೆಯಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳು, ಅನುದಾನಿತ ಕೃಷಿ ಅಭಿವೃದ್ಧಿ ಕಾರ್ಯಕ್ರಮ, ಕಾಮಧೇನು ಗೋಶಾಲೆ, ಸಿರಿಧಾನ್ಯ ಯೋಜನೆಯನ್ನು ಕೂಡ ನಡೆಸುತ್ತಿದ್ದು, ಒಟ್ಟಾರೆಯಾಗಿ ರೈತರ ಸರ್ವಾಂಗಿಣ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದು ಕೃಷಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೊಂದಿದೆ.
National Farmers Day 2020 ರೈತರಿಗೆ ಧನ್ಯವಾದ ತಿಳಿಸಿದ ‘ಒಡೆಯ’.. ನೀವೇ ನಿಜವಾದ ವೀರರು ಅಂದರು!
Published On - 4:03 pm, Wed, 23 December 20