Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ರೊಚ್ಚು (ಕಾದಂಬರಿ)
ಮರಾಠಿ ಮೂಲ : ಶರಣಕುಮಾರ ಲಿಂಬಾಳೆ
ಕನ್ನಡಕ್ಕೆ : ಪ್ರಮೀಳಾ ಮಾಧವ
ಪುಟ : 232
ಬೆಲೆ : ರೂ. 225
ಮುಖಪುಟ ವಿನ್ಯಾಸ : ರವಿ ಅಜ್ಜೀಪುರ
ಪ್ರಕಾಶನ : ನವಕರ್ನಾಟಕ ಪ್ರಕಾಶನ, ಬೆಂಗಳೂರು
*
ಹಲವು ಶಿಕ್ಷಕರ ಜೀವನದ ಅನುಭವ ನನ್ನನ್ನು ವ್ಯಥಿತನನ್ನಾಗಿ ಮಾಡಿದೆ. ಈ ಶಿಕ್ಷಣ ವ್ಯವಸ್ಥೆಯಿಂದ ಅನೇಕ ದಲಿತ ಅಧ್ಯಾಪಕರು ಬಲಿಯಾಗಿದ್ದಾರೆ. ಅನೇಕ ದಲಿತ ವಿದ್ಯಾರ್ಥಿಗಳ ಬದುಕು ಹಾಳಾಗಿದೆ. ಅವುಗಳನ್ನು ಕೂಲಂಕಷವಾಗಿ ಸಂಪಾದಿಸಿ ಅಧ್ಯಯನ ಮಾಡುವ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆಯನ್ನು ಕುರಿತು ಬರೆಯಬೇಕೆನ್ನುವ ಉದ್ದೇಶದಿಂದ ರಚಿಸಿರುವುದಾದರೂ ಈ ಕಾದಂಬರಿಯಲ್ಲಿ ದಲಿತತ್ವದ ಬಲಿಷ್ಠ ಕವಚವಿದೆ. ಇದನ್ನು ಒಂದು ತಿಂಗಳಲ್ಲಿ ಬರೆದು ಪೂರ್ಣಗೊಳಿಸಿದೆ. ಅನಂತರ ಶುದ್ಧಪ್ರತಿ ಮಾಡಿದೆ. ಇನ್ನೊಮ್ಮೆ ತಿದ್ದಿ ಬರೆಯಬೇಕೆಂದು ಯೋಚಿಸಿದೆ. ಅದಾಗಲಿಲ್ಲ. ಬಹಿಷ್ಕೃತ ಕಾದಂಬರಿಯನ್ನು ಮುಂದಿಟ್ಟುಕೊಂಡು ಈ ಕಾದಂಬರಿಯನ್ನು ರಚಿಸುವುದೆಂದು ಭಾವಿಸಿದ್ದೆ. ಆದರೆ ನನ್ನ ಯೋಜನೆ ಸಂಪೂರ್ಣ ಅಯಶಸ್ವಿಯಾಯಿತು. ಏಕೆಂದರೆ ಕಾದಂಬರಿಯ ನಾಯಕ ತನ್ನ ಜಾತಿಯನ್ನು ಮುಚ್ಚಿಟ್ಟುಕೊಂಡು ಊರಲ್ಲಿ ವಾಸಿಸುತ್ತಾನೆಂಬ ವಿಚಾರ ಅಚಾನಕವಾಗಿ ಮನಸ್ಸಿಗೆ ಹೊಳೆದದ್ದೇ ಇಡೀ ಕಾದಂಬರಿ ಆ ದೃಷ್ಟಿಯಲ್ಲಿಯೇ ವಿಕಸಿತವಾಗುತ್ತ ಸಾಗಿತು. ಹಾಗಾಗಿ ಬರೆಯಲು ಯೋಚನೆ ಮಾಡಿದ್ದೇ ಒಂದು, ಬರೆದು ಪೂರ್ಣಗೊಳಿಸಿದ್ದೇ ಬೇರೊಂದು.
ಡಾ. ಶರಣಕುಮಾರ ಲಿಂಬಾಳೆ, ಲೇಖಕರು
‘ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಎಲ್ಲ ಸಮಯಗಳಲ್ಲೂ ದಲಿತರು ಹೋರಾಟ ಮಾಡಬೇಕಾದ ಅಗತ್ಯವಿಲ್ಲ. ಭೂತಕಾಲದಲ್ಲಿ ದಲಿತರ ಮೇಲೆ ಅತ್ಯಾಚಾರ ನಡೆದಿರುವುದು ಸತ್ಯವಾದ ವಿಚಾರ. ಅಂದಮಾತ್ರಕ್ಕೆ ಭೂತಕಾಲದ ಬಗ್ಗೆಯೇ ಯೋಚನೆ ಮಾಡಿಕೊಂಡು ಸೇಡು ತೀರಿಸಿಕೊಳ್ಳಬೇಕಾಗಿಯೇನೂ ಇಲ್ಲ. ಇತಿಹಾಸವನ್ನು ಚೆನ್ನಾಗಿ ಅರಿತುಕೊಂಡು ಮುಂದಾಲೋಚನೆಯಿಂದ ಭವಿಷ್ಯದ ಬದುಕನ್ನು ಚೆನ್ನಾಗಿ ರೂಪಿಸಿ ಮುಂದುವರಿಯುವುದು ಅಗತ್ಯ. ಸವರ್ಣೀಯರೂ ದಲಿತರೂ ಪೀಳಿಗೆಯಿಂದ ಪೀಳಿಗೆಗೆ ಪರಸ್ಪರ ಮಿತ್ರತ್ವದ ಭಾವನೆಯಲ್ಲಿ ಮುಂದುವರಿದು ಇತಿಹಾಸವನ್ನು ದರ್ಶಿಸಿದರೆ ಸಮಾಜದಲ್ಲಿ ಸದ್ಭಾವನೆ ಮೂಡುವುದು ಸಾಧ್ಯವಾಗುತ್ತದೆ.’ ಕಾದಂಬರಿಯ ಭೂಮಿಕೆಯಲ್ಲಿ ಸಾವಯವಗೊಂಡಿರುವ ಈ ಮಾತುಗಳು ಗಮನಾರ್ಹ. ಮುಖ್ಯಕಥಾಪಾತ್ರದ ಮೂಲಕ ಪ್ರಸ್ತುತವಾಗುವ ಈ ಆಶಯ ಕಾದಂಬರಿಯ ಜೀವಾಳವಾಗಿದೆ. ಶೋಷಿತ ಸಮುದಾಯ ತಮಗಾಗುತ್ತಿರುವ ಅನ್ಯಾಯ, ಅಕ್ರಮಗಳನ್ನು ಪ್ರತಿಭಟಿಸುವ ಶಕ್ತಿ ಸಾಮರ್ಥ್ಯಗಳನ್ನು ರೂಢಿಸಿಕೊಂಡಿದೆಯೆನ್ನುವ ಅಂಶವೂ ಕಾದಂಬರಿಯ ಮೌಲ್ಯವನ್ನು ಹೆಚ್ಚಿಸಿದೆ.
ಡಾ. ಪ್ರಮೀಳಾ ಮಾಧವ, ಅನುವಾದಕರು
*
ಆಯ್ದ ಭಾಗ
ಶಾಸಕರಾದ ಗಜಾನನರಾವ್ ಪಿಸಾಲ್‌ರವರು ತಲೆಬಗ್ಗಿಸಿ ಕುಳಿತಿದ್ದರು. ಬಾಬೂ ಬಾರ್‌ಬೋಲೇ ಅವರಿಗೆ ಮಾಲೀಷ್ ಮಾಡುತ್ತಿದ್ದ. ಆತ ಅವರ ಮೈಗೆಲ್ಲ ಎಣ್ಣೆಯನ್ನು ಹಚ್ಚಿ ಮಾಲೀಷ್ ಮಾಡುತ್ತಿದ್ದ. ಜೋಷಿಯವರು ಶಾಸಕರ ಮುಂದೆ ಆಜ್ಞಾಧಾರಕ ಮಗುವಿನಂತೆ ಕುಳಿತಿದ್ದರು.
‘ಸರ್, ನೀವು ಹೇಳುತ್ತ ಹೋಗಿ. ನಾನು ಕೇಳಿಸಿಕೊಳ್ಳುತ್ತೇನೆ.’
ಲೋ, ಸ್ವಲ್ಪ ಪೃಷ್ಠಭಾಗಕ್ಕೆ ಎಣ್ಣೆ ಹಚ್ಚಿ ಮಾಲಿಷ್ ಮಾಡೋ.
ಶಾಸಕರು ಜೋಷಿಗೂ ಬಾರ್ಬೋಲೆಗೂ ಏಕಕಾಲಕ್ಕೆ ಕೆಲಸ ಹಚ್ಚಿದರು. ಎಣ್ಣೆ ನೀವುತ್ತಿದ್ದಂತೆ ಶಾಸಕರು ‘ಹಾ..ಹೂ..’ ಅನ್ನುತ್ತ ಅದಕ್ಕೆ ಸ್ಪಂದಿಸುತ್ತಿದ್ದರು. ಬಾರ್‌ಬೋಲೇ ಮಂಡಿಯೂರಿ ಕುಳಿತು ಶಾಸಕರ ಬಲದ ಕಾಲನ್ನು ತನ್ನ ತೊಡೆಯ ಮೇಲಿಟ್ಟು ಎಣ್ಣೆ ಹಚ್ಚುತ್ತಿದ್ದ. ಆತ ಬೆವರುತ್ತಿದ್ದ.
‘ಅಂಗಾಲು ಉಜ್ಜಿ ಕೊಡಲೇ?’ ಜೋಷಿ ಆತ್ಮೀಯತೆಯಿಂದ ಕೇಳಿದ.
‘ಬೇಡ, ಬೇಡ, ನೀವು ಹೇಳಿರಿ.. ಅರೇ, ಇದೇನು ಹೆಂಗಸಿನ ಕಾಲಲ್ಲ ಕಣೋ. ಎಂ.ಎಲ್.ಎ.ಯವರ ಕಾಲು. ಸ್ವಲ್ಪ ಒತ್ತಿ ಉಜ್ಜು.’
ಎಂ.ಎಲ್.ಎ.ಯವರ ಒರಟು ಧ್ವನಿಗೆ ಬಾರ್‌ಬೋಲೇ ಇನ್ನಷ್ಟು ಜೋರಾಗಿ ಒತ್ತಿ ಎಣ್ಣೆ ನೀವಿದ. ಅವರ ಬೆಳ್ಳಗಿನ ತೆರೆದ ತೊಡೆಗಳು ಮಾದಕತೆಯನ್ನು ಉಕ್ಕಿಸುವಂತಿದ್ದುವು.
‘ಈಗ ಇನ್ನೊಂದು ಕಾಲಿಗೆ ಹಚ್ಚು.’
ಎಂ.ಎಲ್.ಎ. ತಮ್ಮ ಎಡಗಾಲನ್ನು ಬಾರ್ಬೋಲೆಯ ತೊಡೆಯ ಮೇಲಿಟ್ಟರು. ವಾಸು ಕಾಲಪಾಂಡೇ ಜೋಷಿಯವರಿಗೆ ಚಹಾ ಕೊಟ್ಟ. ಜೋಷಿ ಚಹಾ ಹೀರುತ್ತ ಮಾತು ಆರಂಭಿಸಿದರು.
‘ಹೊಸ ಅಧ್ಯಾಪಕರು ಕೆಲಸಕ್ಕೆ ಸೇರಲು ಬಂದಿದ್ದಾರೆ.’
‘ಸೇರಿಸಿ. ಇಂಗ್ಲಿಷಿಗಲ್ಲವೇ? ಇನ್ನು ಕಾಂಬ್ಳೇಯ ಅಲವೆನ್ಸ್ ನಿಲ್ಲಿಸಿ.’
‘ಕಾಂಬ್ಳೇ ಕೋಪ ಮಾಡಿಯಾನು.’
‘ಕೋಪವೇಕೆ? ಆತನನ್ನು ನೇಮಕ ಮಾಡಿರುವುದು ಹೈಸ್ಕೂಲಿಗೆ. ಜ್ಯೂನಿಯರ್‌ಗೆ ಫುಲ್‌ಟೈಮ್ ಕೆಲಸ ಕೊಡಬೇಕು. ಹೊಸಬರಿಗೆ ಕೆಲಸ ಕೊಡಿ.’
‘ಸಿಎಚ್‌ಬಿನಲ್ಲಿ ತುಕಾರಾಮ್ ಕಾಲೇಯನ್ನು ತೆಗೆದುಕೊಂಡಿದ್ದೇವೆ. ಎರಡೂವರೆ ಸಾವಿರ ಸಂಬಳ ನಿಗದಿಯಾಗಿದೆ. ಅವರು ಹಿಂದಿ ಕಲಿಸುತ್ತಾರೆ. ಪಿ.ಟಿ. ಕೂಡ ಅವರಿಗೇ ಕೊಡಿ. ಅವರ ಇನ್ನೂರೈವತ್ತು ರೂ. ಅಲವೆನ್ಸ್ ಅವರಿಗೇ ಸಿಗುತ್ತದೆ.’
‘ವಾಸುವಿನ ಸಹಿ ತೆಗೆದುಕೊಳ್ಳಿ. ಬರ‍್ತಿದ್ದಾನಲ್ಲವೇ?’
‘ಹೌದು.’
‘ಕಾಂಬ್ಳೇ ಮೇಲೆ ಸಾಕಷ್ಟು ಒತ್ತಡ ಹಾಕಿ. ಅವನ ಹಿಂದೆ ಜನಬಿಡಿ. ಆತ ಸಂಸ್ಥೆಗೆ ತುಂಬ ತಲೆನೋವಾಗಿದ್ದಾನೆ. ಅವನ ವಿರುದ್ಧ ಫೈಲ್ ಸಿದ್ಧಪಡಿಸಿ ಮೆಮೋ ಕೊಡಿ. ಅವನು ಸಂಸ್ಥೆ ಬಿಟ್ಟು ತೊಲಗಬೇಕು.’
‘ಕಾಂಬ್ಳೇ ತುಂಬ ಬುದ್ಧಿವಂತ. ಅವನು ಯಾವ ತಪ್ಪೂ ಮಾಡುವುದಿಲ್ಲ.’
‘ಅವನ ವಿರುದ್ಧ ಬರೆಸಿ. ದಾಖಲೆ ಸಿದ್ಧಪಡಿಸಿ. ಆಮೇಲೆ ಕೇಸು ಬುಕ್ಕು ಮಾಡಿ. ಈಗ ಬಂದ ಹೊಸ ಶಿಕ್ಷಕನ ಹೆಸರೇನು?’
‘ಆನಂದ ಸುದಾಮ ಕಾಶೀಕರ್.’
‘ತರುಣ ಅಧ್ಯಾಪಕ. ಒಳ್ಳೆಯ ಹುಡುಗ. ಮುಕ್ತ ವರ್ಗದಿಂದ ಆಯ್ಕೆಯಾದವನು. ಅವನನ್ನು ಪ್ರೋತ್ಸಾಹಿಸಿ. ನಾನು ಸ್ನಾನಕ್ಕೆ ಹೋಗಬೇಕು. ಇನ್ನೇನಾದರೂ ಹೇಳುವುದಿದೆಯೇ?’
‘ಇಲ್ಲ.’
‘ವಾಸುವಿನ ದಸ್ಕತ್ತು ತೆಗೆದುಕೊಳ್ಳಿ.’
ಎಂ.ಎಲ್.ಎ. ಸ್ನಾನಕ್ಕೆಂದು ಹೋದರು. ಜೋಷಿ ವಾಸುವಿಗೆ ರಿಜಿಸ್ಟರ್ ಬುಕ್ಕು ಕೊಟ್ಟರು. ವಾಸು ಒಂದು ತಿಂಗಳಿಗೆ ಬೇಕಾದಷ್ಟು ಸಹಿ ಹಾಕಿದ. ವಾಸು ಕಾಲಪಾಂಡೇ ಸಾಹೇಬರ ಪಿ.ಎ. ಆಗಿ ಕೆಲಸ ಮಾಡುತ್ತಿದ್ದ. ವಾಸುವಿನ ಹೆಸರಿನಲ್ಲಿ ನವನಾಥ್ ಹತಾಲೇ ಡಮ್ಮಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಶಿಕ್ಷಕನ ಹೆಸರು ವಾಸುವಿನದ್ದು. ಸಹಿ ಹಾಕುವವನೂ ಅವನೇ. ಪೂರ್ಣ ಸಂಬಳವನ್ನೂ ಅವನೇ ತೆಗೆದುಕೊಳ್ಳುತ್ತಿದ್ದ. ನವನಾಥ್ ಹತಾಲೇ ವಾಸು ಮಾಡಬೇಕಾದ ಸಮಸ್ತ ಕೆಲಸವನ್ನೂ ಮಾಡುತ್ತಿದ್ದ. ಅವನಿಗೆ ವಾಸುವಿನ ಕಡೆಯಿಂದ ಅರ್ಧ ಸಂಬಳ ಸಂದಾಯವಾಗುತ್ತಿತ್ತು. ಇದರಿಂದ ಹತಾಲೇಯ ಹೆಸರು ಡಮ್ಮಿಯಾಗಿತ್ತು. ಬಾಬೂ ಬಾರ್‌ಬೋಲೇ ಶಾಲೆಯ ಸೇವಕನಾಗಿದ್ದ. ಆದರೆ ಅಲ್ಲಿ ಸಹಿ ಹಾಕುವುದು ಮಾತ್ರ. ಅವನ ಕೆಲಸವೆಲ್ಲವೂ ಸಾಹೇಬರ ಮನೆಯಲ್ಲಿ. ಎಂ.ಎಲ್.ಎ. ತಮ್ಮ ಸಂಬಂಧಿಕರನ್ನೇ ಸಂಸ್ಥೆಯಲ್ಲಿ ನಿಯೋಜಿಸಿದ್ದರು.
ವಾಸು ಎಂ.ಎಲ್.ಎ.ಯವರ ಮುಂಬೈ ಆಫೀಸು ನೋಡಿಕೊಳ್ಳುತ್ತಿದ್ದ. ಬಾರ್ ಬೋಲೇ ಊರಿನ ಅವರ ಮನೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ದೀನಾನಾಥ್ ಮುಜುಮುದಾರ್‌ರು ಸಾಹೇಬರು ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯದರ್ಶಿ ಯಾಗಿದ್ದರು. ಮಾತ್ರವಲ್ಲ ಆತ ಎಂ.ಎಲ್.ಎ.ಯವರ ಭಾವ ಮೈದುನ. ಆತ ಸಂಸ್ಥೆ ಮತ್ತು ಚುನಾವಣಾ ಕ್ಷೇತ್ರದ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದರು. ಜೋಷಿ ಕಾಶೀನಾಥ ವಿದ್ಯಾಲಯದ ಮುಖ್ಯೋಪಾಧ್ಯಾಯರಾಗಿದ್ದರು. ಈ ನಾಲ್ವರ ಭಯ ಮತ್ತು ನಿಯಂತ್ರಣದಿಂದಲೇ ಊರಿನ ಬದುಕು ಸಾಗುತ್ತಿತ್ತು.
ಶಾಸಕರಾದ ಪಿಸಾಲ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಊರಿನಲ್ಲಿ ಹೈಸ್ಕೂಲು ಆರಂಭಿಸಿದ್ದರು. ಸಣ್ಣ ನೆಲಮಾಳಿಗೆಯಲ್ಲಿ ಆರಂಭವಾಗಿದ್ದ ಶಾಲೆ ಅತಿ ಕ್ಷಿಪ್ರಕಾಲದಲ್ಲೇ ಬಹುದೊಡ್ಡ ಬಂಗಲೆಗೆ ವರ್ಗಾವಣೆಗೊಂಡಿತ್ತು. ಕಾಶೀನಾಥ್ ವಿದ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಎಂ.ಎಲ್.ಎ. ಸಾಹೇಬರು ಮುಖ್ಯಮಂತ್ರಿಗಳನ್ನೇ ಕರೆದುಕೊಂಡು ಬಂದಿದ್ದರು. ರಾನ್ಮಸಲೇಯಲ್ಲಿ ಹೈಸ್ಕೂಲು ಮತ್ತು ಜ್ಯೂನಿಯರ್ ಕಾಲೇಜು ಆರಂಭವಾದ ಬಳಿಕ ಊರಿನ ಮತ್ತು ಸುತ್ತುಮುತ್ತಲಿನ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಲಭಿಸಿತ್ತು. ಪ್ರೌಢಶಾಲೆಯ ತರಗತಿಗಳು ಪೂರ್ವಾಹ್ನ ೭-೧೦ರಿಂದ ಮಧ್ಯಾಹ್ನ ೧೨-೧೫ರ ವರೆಗೆ ನಡೆಯುತ್ತಿತ್ತು. ಅನಂತರ ಅದೇ ಕಟ್ಟಡದಲ್ಲಿ ಮಧ್ಯಾಹ್ನ ೧೨-೨೦ರಿಂದ ಸಂಜೆ ೫.೩೦ರ ವರೆಗೆ ಮಾಧ್ಯಮಿಕ ತರಗತಿಗಳು ನಡೆಯುತ್ತಿದ್ದುವು.
ನಾರಾಯಣ ಪಡವಲ ಎಂ.ಎಲ್.ಎ.ಯವರ ಮಿತ್ರ. ಅವನನ್ನು ಶಾಸಕರು ‘ನಾರಯ’ ಎಂದು ಕರೆಯುತ್ತಿದ್ದರು. ಇದರಿಂದ ಆತನಿಗೆ ಧನ್ಯತೆಯ ಭಾವ ಮೂಡುತ್ತಿತ್ತು. ಎಂ.ಎಲ್.ಎ.ಯವರಿಗೆ ತಾನೆಷ್ಟು ಹತ್ತಿರವಾಗಿದ್ದೇನೆಂಬ ಭಾವನೆ ಅವನಿಗೆ ಉಂಟಾಗುತ್ತಿತ್ತು. ಯಾರಾದರೂ ಕೇಳಿದರೆ ‘ನಾನು ಎಂ.ಎಲ್.ಎ.ಯವರ ನಾರಯ’ ಎಂದೇ ಪರಿಚಯಿಸುತ್ತಿದ್ದ. ಜನರು ಆತನನ್ನು ತಮಾಶೆಯಾಗಿ ‘ಹುಚ್ಚ ನಾರಯ’ನೆಂದು ಹೇಳುತ್ತಿದ್ದರು.
ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ನವಕರ್ನಾಟಕ ಪ್ರಕಾಶನ
ಇದನ್ನೂ ಓದಿ : Book Release : ಅಚ್ಚಿಗೂ ಮೊದಲು ; ಸತೀಶ್ ಚಪ್ಪರಿಕೆಯವರ ‘ಥೇಮ್ಸ್ ತಟದ ತವಕ ತಲ್ಲಣ’ ಈ ಭಾನುವಾರ ಬಿಡುಗಡೆ
Published On - 2:33 pm, Thu, 23 December 21