ಕೋವಿಡ್​ ಸೋಂಕಿತ ಮಾವನನ್ನು ಅಸ್ಸಾಮಿನ ಈ ಮಹಿಳೆ ಬೆನ್ನ ಮೇಲೆ ಆಸ್ಪತ್ರೆಗೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ

|

Updated on: Jun 11, 2021 | 1:31 AM

ನಿಹಾರಿಕಾ ಮಾಡಿರುವ ಒಂದು ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೊಳಗಾಗುತ್ತಿದೆ. ಆಕೆಯ ಸಾಹಸವನ್ನು ನೆಟ್ಟಿಗರು ಮನಸಾರೆ ಕೊಂಡಾಡುತ್ತಿದ್ದಾರೆ. ಹಾಗೆ ನೋಡಿದರೆ ಅಕೆಯ ಕತೆ ಬಹಳಷ್ಟು ಜನಕ್ಕೆ ಗೊತ್ತಾಗುವಂತೆ ಮಾಡಿದ್ದು ಅಸ್ಸಾಮೀ ನಟಿ ಐಮೀ ಬರೂವಾ ಅವರು ನಿಹಾರಿಕಾ ಸಾಹಸವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿದ ನಂತರ.

ಕೋವಿಡ್​ ಸೋಂಕಿತ ಮಾವನನ್ನು ಅಸ್ಸಾಮಿನ ಈ ಮಹಿಳೆ ಬೆನ್ನ ಮೇಲೆ ಆಸ್ಪತ್ರೆಗೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ
ನಿಹಾರಿಕಾ ದಾಸ್
Follow us on

ಕೋವಿಡ್-19 ಪಿಡುಗು ಬದುಕಿನ ಬೇರೆ ಬೇರೆ ಆಯಾಮ, ಸನ್ನಿವೇಶಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ. ಅವುಗಳಲ್ಲಿ ಕೆಲವು ಸ್ಫೂರ್ತಿದಾಯಕವೆನಿಸಿದರೆ ಬೇರೆ ಕೆಲವು ಭಾವುಕರನ್ನಾಗಿ ಮಾಡುತ್ತವೆ. ಎರಡೂ ಬಗೆಯ ಸನ್ನಿವೇಶಗಳು ನಮ್ಮ ಮನಸಿನಲ್ಲಿ ಬಹಳ ದಿನಗಳ ಕಾಲ ಉಳಿಯುವಂಥವೇ. ಅನೇಕರು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಸೋಂಕಿತರ ಪ್ರಾಣವುಳಿಸಲು ನೆರವಾಗುತ್ತಿದ್ದಾರೆ. ಅಂಥವರ ಧೈರ್ಯ, ಸಾಹಸ, ನಿಸ್ವಾರ್ಥ ಮನೋಭಾವ ಮತ್ತು ಅದಕ್ಕೂ ಮಿಗಿಲಾಗಿ ಅವರಲ್ಲಿ ಅಡಗಿರುವ ಮಾನವೀಯ ಗುಣ ನಮ್ಮನ್ನು ದಿಗ್ಮೂಢರನ್ನಾಗಿಸುತ್ತದೆ. ಅವರ ಮಧ್ಯದಲ್ಲಿ ನಾವು ಸಹ ಜೀವಿಸುತ್ತಿರುವ ಬಗ್ಗೆ ಧನ್ಯತಾ ಭಾವ ಮೂಡುತ್ತದೆ. ಹಾಗೆಯೇ, ಸಮಯಕ್ಕೆ ಸರಿಯಾದ ನೆರವು ಸಿಗದೆ ರಸ್ತೆಯಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಗೆ ಸಾಗಿಸುವಾಗ ಅಂಬ್ಯುಲೆನ್ಸ್​ನಲ್ಲಿ ಪ್ರಾಣ ಕಳೆದುಕೊಂಡವರನ್ನು ನೆನೆದು ಕರುಳು ಉಕ್ಕಿ ಬರುತ್ತದೆ. ಆದರೆ, ನಾವಿಲ್ಲಿ ಮಾತಾಡುತ್ತಿರೋದು ಒಬ್ಬ ಧೈರ್ಯವಂಥ ಮತ್ತು ಕರುಣಾಮಯಿ ಮಹಿಳೆಯ ಬಗ್ಗೆ. ಆಕೆ ಆಸ್ಸಾಮಿನವರು ಮತ್ತು ಹೆಸರು ನಿಹಾರಿಕಾ ದಾಸ್.

ನಿಹಾರಿಕಾ ಮಾಡಿರುವ ಒಂದು ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೊಳಗಾಗುತ್ತಿದೆ. ಆಕೆಯ ಸಾಹಸವನ್ನು ನೆಟ್ಟಿಗರು ಮನಸಾರೆ ಕೊಂಡಾಡುತ್ತಿದ್ದಾರೆ. ಹಾಗೆ ನೋಡಿದರೆ ಅಕೆಯ ಕತೆ ಬಹಳಷ್ಟು ಜನಕ್ಕೆ ಗೊತ್ತಾಗುವಂತೆ ಮಾಡಿದ್ದು ಅಸ್ಸಾಮೀ ನಟಿ ಐಮೀ ಬರೂವಾ ಅವರು ನಿಹಾರಿಕಾ ಸಾಹಸವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿದ ನಂತರ. ಕೋವಿಡ್-19ಸೋಂಕಿತ ತನ್ನ ಮಾವನನ್ನು (ಪತಿಯ ತಂದೆ) ಆಸ್ಪತ್ರೆಗೆ ಸೇರಿಸಲು ನಿಹಾರಿಕಾ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಮನಮಿಡಿಯುವಂತಿದೆ.

ತಮ್ಮ ಟ್ವೀಟ್​ನಲ್ಲಿ ಬರೂವಾ ಅವರು, ‘ರಾಹಾದ ನಿಹಾರಿಕಾ ದಾಸ್​ ಹೆಸರಿನ ಒಬ್ಬ ಯುವತಿಯು ಕೊವಿಡ್​ ಸೋಂಕಿತ ತನ್ನ ಮಾವ ತುಲೇಷ್ವರ್ ದಾಸ್ ಅವರನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ಈ ದೃಶ್ತ ಇಂದಿನ ಮಹಿಳೆಯರ ಧೀಶಕ್ತಿಯನ್ನು ಪ್ರದರ್ಶಿಸುತ್ತದೆ. ಆಕೆಗೂ ಸೋಂಕು ತಾಕಿರುವು ಗೊತ್ತಾಯಿತು. ಈ ಸ್ಫೂರ್ತಿದಾಯಕ ಮಹಿಳೆ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.

ಜೂನ್ ಎರಡರಂದು, ನಗಾಂವ್​ನ ರಾಹಾ ಎಂಬಲ್ಲಿ ಅಡಿಕೆ ವ್ಯಾಪಾರ ಮಾಡುವ ನಿಹಾರಿಕಾ ಅವರ ಮಾವ ತುಲೇಶ್ವರ್ ಅವರಲ್ಲಿ ಕೋವಿಡ್​ ಸೋಂಕಿನ ಲಕ್ಷನಗಳು ಕಾಣಿಸಲಾರಂಭಿಸಿದ್ದವು. ನಿಹಾರಿಕಾ ಏನೆಲ್ಲ ಪ್ರಯತ್ನ ಮಾಡಿ ಒಂದು ಆಟೋರಿಕ್ಷಾದ ಏರ್ಪಾಟು ಮಾಡಿದರಾದರೂ ಅವರ ಮನೆಗೆ ಹೋಗುವ ದಾರಿ ಅತ್ಯಂತ ಕಿರಿದಾಗಿದ್ದರಿಂದ ವಾಹನ ಅಲ್ಲಿಯವರೆಗೆ ಹೊಗುವಂತಿರಲಿಲ್ಲ. ಧೃತಿಗೆಡದ ನಿಹಾರಿಕಾ ಆಟೋವನ್ನು ಮುಖ್ಯರಸ್ತೆಯಲ್ಲೇ ನಿಲ್ಲ್ಲುವಂತೆ ಹೇಳಿ, ಮಾವನನ್ನು ಬೆನ್ನ ಮೇಲೆ ಹೊತ್ತುಕೊಂಡು ಕಡಿದಾದ ರಸ್ತೆಗಳ ಮೂಲಕ ಆಟೋವನ್ನು ತಲುಪಿ ಆಸ್ಪತ್ರೆಗೆ ಹೋದರು.

‘ನನ್ನ ಮಾವ ಎದ್ದು ನಿಲ್ಲಲೂ ತ್ರಾಣವಿಲ್ಲದಷ್ಟು ನಿಶಕ್ತರಾಗಿದ್ದರು. ನನ್ನ ಪತಿ ಕೆಲಸಕ್ಕೆ ಸಿಲಿಗುರಿಗೆ ಹೋಗಿದ್ದರು. ಹಾಗಾಗಿ ಅವರನ್ನು ಬೆನ್ನ ಮೇಲೆ ಹೊತ್ತೊಯ್ಯದೆ ಬೇರೆ ಮಾರ್ಗವಿರಲಿಲ್ಲ. ನಾವಿರುವ ಮನೆಯ ಓಣಿ ತುಂಬಾ ಕಿರಿದಾಗಿದೆ, ಮನೆವರೆಗೆ ಆಟೋ ಬರೋದು ಸಾಧ್ಯವಿಲ್ಲ. ಪರಿಸ್ಥಿತಿ ಹಾಗಿದ್ದ ಕಾರಣ ನಾನು ಅವರನ್ನು ಹೊತ್ತುಕೊಂಡು ಹೋದೆ,’ ಎಂದು ಪತ್ರಿಕೆಯೊಂದರ ಜೊತೆ ಮಾತಾಡುವಾಗ ನಿಹಾರಿಕಾ ಹೇಳಿದ್ದಾರೆ.

ಆರು ವರ್ಷದ ಮಗುವಿನ ತಾಯಿಯಾಗಿರುವ ನಿಹಾರಿಕಾ ಸಂಕಷ್ಟದ ಕತೆ ಅಲ್ಲಿಗೆ ಮುಗಿಯಲಿಲ್ಲ. ತುಲೇಶ್ವರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ 21 ಕಿಲೋಮೀಟರ್ ದೂರ ಇರುವ ಕೋವಿಡ್​ ಆಸ್ಪತ್ರೆಯೊಂದಕ್ಕೆ ಸೇರಿಸಬೇಕೆಂದು ವೈದ್ಯರು ಹೇಳಿದರು. ಅಷ್ಟು ದೂರ ಆಟೋ ಹೋಗುವುದು ಸಾಧ್ಯವಿರದ ಕಾರಣ ನಿಹಾರಿಕಾ ಒಂದು ಕಾರನ್ನು ಗೊತ್ತು ಮಾಡಿಕೊಂಡರು. ನಂತರ ಆಸ್ಪತ್ರೆಯಲ್ಲಿದ್ದ ಮಾವನನ್ನು ಕಾರಿನವರೆಗೆ ಪುನಃ ಬೆನ್ನಿನ ಮೇಲೆ ಹೊತ್ತುಕೊಂಡು ಬಂದರು. ಅಷ್ಟರಲ್ಲಾಗಲೇ ದೈಹಿಕ ಮತ್ತು ಮಾನಸಿಕವಾಗಿ ದಣಿದಿದ್ದ ತುಲೇಶ್ವರ್ ಪ್ರಜ್ಞೆ ಕಳೆದುಕೊಂಡಿದ್ದರು. ಆ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಮಾತು ಹಾಗಿರಲಿ ಸ್ಟ್ರೆಚರ್ ಕೂಡ ಲಭ್ಯವಿರಲಿಲ್ಲ, ಎಂದು ನಿಹಾರಿಕಾ ಪತ್ರಿಕೆಗೆ ಹೇಳಿದರು.

ತಮ್ಮ ಸಹಾಯಕ್ಕೆ ಯಾರೂ ಬರಲಿಲ್ಲವೆಂದು ಹೇಳಿರುವ ನಿಹಾರಿಖಾ ತಾನು ಪಟ್ಟ ಬವಣೆ ಯಾರೂ ಪಡಬಾರದು ಎಂದಿದ್ದಾರೆ.

ಇದನ್ನೂ ಓದಿ: Women’s Day Special: ನಿಂದನೆಗಳಿಗೆಲ್ಲ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಛಲಗಾರ್ತಿ ಈ ರಕ್ಷಿತಾ; ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲವೆಂದು ತೋರಿಸಿದಾಕೆ

Published On - 8:27 pm, Thu, 10 June 21