ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com
ಯುವಲೇಖಕ ಅಂತಃಕರಣನ ತಂದೆ ಡಾ. ಸರ್ಜಾಶಂಕರ ಹರಳಿಮಠ ಅವರಿಂದ ಮುದ್ದಾಮ್ ಬರೆಸಿದ ಅನುಭವಕಥನ ಇದು.
ಹಲವರಿಗೆ ಇದು ವಿಸ್ಮಯ
ಕೆಲವರಿಗೆ ‘ಇದರಲ್ಲೇನೋ ಇದೆ’ ಎಂಬ ಅನುಮಾನ..
ನಾಲ್ಕು ಐದನೇಯ ತರಗತಿಯ ಹುಡುಗ ವಾರಕ್ಕೆರೆಡು ಅಂಕಣ ಬರೆಯುವುದೆಂದರೇನು? ಹತ್ತಾರು ಕತೆ ಕವಿತೆ ರಚಿಸುವುದೆಂದರೇನು? ಅದರಲ್ಲೂ ಕಾದಂಬರಿ ಬರೆಯುವುದೆಂದರೇನು? ಐದನೇ ತರಗತಿಯಲ್ಲಿ ಐದು ಪುಸ್ತಕ ‘ಅಮ್ಮನ ಸಿಟ್ಟು’ – ಕವಿತೆಗಳ ಪುಸ್ತಕ, ‘ಮೆರವಣಿಗೆ’ – ಕತೆಗಳ ಪುಸ್ತಕ, ‘ಮಿಂಚಿನ ಬೆಳಕು’ – ಅಂಕಣಗಳ ಪುಸ್ತಕ, ‘ಗೇಮ್ಸ್ ಪಿರಿಯಡ್’ – ಕ್ರೀಡಾಲೇಖನಗಳ ಪುಸ್ತಕ, ‘ರಾಮಪುರದ ಗೆಳೆಯರು, ಆಜಾದ್ ನಗರದ ಆಟಗಾರರು’ – ಕಾದಂಬರಿಗಳು..
ವಿಸ್ಮಯಗೊಂಡವರ ವಿಸ್ಮಯ ವಿಸ್ತರಿಸುತ್ತ ಹೋಯಿತು. ಐದನೇ ತರಗತಿಯಲ್ಲಿ ಐದು ಪುಸ್ತಕ ಬರೆದ ಆ ಹುಡುಗ 6ನೇ ಕ್ಲಾಸಿನಲ್ಲಿ 6 ಪುಸ್ತಕ, ಏಳನೇ ಕ್ಲಾಸಿನಲ್ಲಿ 9 ಪುಸ್ತಕ.. ಹೀಗೆ ಹತ್ತನೇ ತರಗತಿ ಮುಗಿಸುವುದರೊಳಗಾಗಿ ಮೂವತ್ತಮೂರು ಪುಸ್ತಕ ಪ್ರಕಟಿಸಿದ್ದ, ಇಂಗ್ಲೀಷಿನಲ್ಲಿಯೂ ಪುಸ್ತಕ ಬರೆದಿದ್ದ.
ನಮ್ಮದೊಂದು ಸಾಂಪ್ರದಾಯಿಕ ಸಮಾಜ. ಹಿಂದೆ ನಡೆದಿದ್ದು ಪುನಃ ನಡೆದರೆ ಮಾತ್ರ ಅದನ್ನು ಒಪ್ಪಿಕೊಳ್ಳುತ್ತದೆ. ತಮಾಷೆ ಎಂದರೆ ‘ಸಂಪ್ರದಾಯ’ಗಳನ್ನು ಅವೈಜ್ಞಾನಿಕ, ಅವೈಚಾರಿಕ ಎಂದು ಕಟುವಾಗಿ ವಿರೋಧಿಸಿ ಪ್ರಗತಿಪರರೆಂದು ಬೀಗುವವರೂ ಇಂತಹ ವಿಚಾರಗಳಲ್ಲಿ ಪರಮ ಸಾಂಪ್ರದಾಯಿಕರು. ‘ಮೂಢನಂಬಿಕೆ’ಯ ಅನುಸರಣೆಗಾರರು. ಅವರು ಹೊಸ ಸಂಗತಿಯೊಂದನ್ನು ಒಪ್ಪಿಕೊಳ್ಳುವುದಿಲ್ಲ.
ಪುಟ್ಟ ಮಕ್ಕಳು ಕ್ರೀಡೆಗಳಲ್ಲಿ, ಹಾಡು, ನೃತ್ಯದಂತಹ ಕಲೆಗಳಲ್ಲಿ ದೊಡ್ಡವರನ್ನು ಮೀರಿಸುವ ಸಾಧನೆ ಮಾಡಿದಾಗ ಹುಬ್ಬೇರಿಸುವ ಈ ವೈಚಾರಿಕ ಸಂಪ್ರದಾಯವಾದಿಗಳು ಸಾಹಿತ್ಯದಲ್ಲಿ ಮಾತ್ರ ಅದು ಅಸಾಧ್ಯವೆಂದು ತಳ್ಳಿಹಾಕುತ್ತಾರೆ. ಯಾಕೆಂದರೆ ಪುಟ್ಟ ಮಕ್ಕಳು ಆಟ, ಸಂಗೀತ, ನೃತ್ಯಗಳಲ್ಲಿ ದೊಡ್ಡ ಸಾಧನೆ ಮಾಡಿದ್ದು ಅವರಿಗೆ ಗೊತ್ತು. ಆದರೆ ಸಾಹಿತ್ಯದಲ್ಲಿ ಅದು ಸಾಧ್ಯವಿಲ್ಲ ಎಂಬುದು ಅವರ ಮುಗ್ದ ನಂಬಿಕೆ.
ಮಕ್ಕಳು ಪುಸ್ತಕ ಪ್ರಕಟಿಸಬಾರದು!
ಹಿರಿಯ ಕತೆಗಾರರೊಬ್ಬರ ಜತೆ ನನ್ನ ಸಾಕಷ್ಟು ಒಡನಾಟ. ನಾನೂ ಒಬ್ಬ ಕತೆಗಾರನಾದ್ದರಿಂದ ಕತೆಗಳ ಬಗ್ಗೆಯೂ ಆಗಾಗ ನಮ್ಮ ನಡುವೆ ಚರ್ಚೆ, ಪುಸ್ತಕಗಳ ವಿನಿಮಯವೂ ನಡೆಯುವುದಿತ್ತು. ಒಮ್ಮೆ ಮಗ ಐದನೇ ತರಗತಿಯಲ್ಲಿ ಬರೆದ ಎರಡು ಪುಸ್ತಕಗಳನ್ನು ಅವರಿಗೆ ಗೌರವಪೂರ್ವಕವಾಗಿ ನೀಡಿದೆ. ಅವರು ಕೆಲದಿನಗಳ ನಂತರ ಆ ಪುಸ್ತಕಗಳನ್ನು ನನಗೆ ವಾಪಸು ನೀಡಲು ಬಂದಾಗ ನನಗೆ ಅಚ್ಚರಿ. ಮಕ್ಕಳು ಈ ವಯಸ್ಸಿನಲ್ಲಿ ತಮಗನಿಸಿದ್ದನ್ನು ಡೈರಿಯಲ್ಲಿ ಬರೆದಿಡಬೇಕು, ಪುಸ್ತಕ ಪ್ರಕಟಿಸಬಾರದು ಅಂದರು. ತಮ್ಮ ವಾದಕ್ಕೆ ಸಮರ್ಥನೆಯಾಗಿ ಅವರು ಘಟನೆಯೊಂದನ್ನು ಹೇಳಿದರು;
ಅವರ ಸಹೋದ್ಯೋಗಿಯೊಬ್ಬರ ಮಗನಿಗೆ ಅವನು ಚಿಕ್ಕವನಿದ್ದಾಗ ಸಾಹಿತ್ಯದಲ್ಲಿ ತುಂಬಾ ಆಸಕ್ತಿಯಿತ್ತಂತೆ. ಹಲವು ಕವಿತೆಗಳನ್ನು ಬರೆದಿದ್ದನಂತೆ. ಮಗ ಬರೆದಿದ್ದನ್ನು ಈ ಹಿರಿಯ ಸಾಹಿತಿಗಳಿಗೆ ತೋರಿಸಿದ ಅವರ ಸಹೋದ್ಯೋಗಿ ಇದನ್ನೊಂದು ಪುಟ್ಟ ಪುಸ್ತಕವಾಗಿ ತರುವ ಅಭಿಲಾಷೆ ವ್ಯಕ್ತಪಡಿಸಿದರಂತೆ. ಆಗ ಅವರಿಗೆ ‘ಬೇಡ, ಬೇಡ ಆತ ಹೀಗೆ ಡೈರಿಯಲ್ಲಿ ಬರೆದಿಡಲಿ, ಬರೆದೂ ಬರೆದೂ ಅವನು ಒಳ್ಳೆಯ ಸಾಹಿತಿಯಾಗುತ್ತಾನೆ. ಆಮೇಲೆ ಪ್ರಕಟಿಸಿರಿ’ ಎಂದು ಮಾರ್ಗದರ್ಶನ ಮಾಡಿದರಂತೆ. ಆ ಹುಡುಗನ ಬಗ್ಗೆ ನನಗೆ ಕುತೂಹಲ ಮೂಡಿತು. ಈಗ ಅವನು ಏನು ಮಾಡುತ್ತಿದ್ದಾನೆ ಎಂದು ಕೇಳಿದೆ. ‘ಅವನೀಗ ಇಂಜಿನಿಯರ್’ ಎಂದರು. ‘ಸಾಹಿತ್ಯ, ಪುಸ್ತಕ?’ ಕೇಳಿದೆ. ‘ಇಲ್ಲ, ಅವನು ಆಗಲೇ ಬರೆಯುವುದನ್ನು ಬಿಟ್ಟ’ ಎಂದರು.
‘ಮಕ್ಕಳು ಪುಸ್ತಕ ಪ್ರಕಟಿಸಬಾರದು’ ಎಂಬ ಅಭಿಪ್ರಾಯ ಯಾಕೆ ಹುಟ್ಟುತ್ತದೆ. ನಾನು ಗ್ರಹಿಸಿದಂತೆ ಇದಕ್ಕೆ ಕಾರಣ ಪುಸ್ತಕ ಪ್ರಕಟಿಸಿದ ತಕ್ಷಣ ಮಕ್ಕಳಿಗೆ ತಾನೇನೋ ಸಾಧಿಸಿದ್ದೇನೆ ಎಂಬ ಅಹಂಕಾರ ಬರಬಹುದು, ಇದು ಅವರ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದಾಗಿರಬಹುದು. ಈ ಅಪಾಯ ಸಾಹಿತ್ಯದಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಕ್ಕಳಿಗೂ ಇರುವಂತಹದ್ದು.
ಮಕ್ಕಳು ಓದಲು ಎಂತಹ ಪುಸ್ತಕಗಳು ಒಳ್ಳೆಯದು?
ಮಕ್ಕಳು ಓದಲು ಎಂತಹ ಪುಸ್ತಕಗಳು ಒಳ್ಳೆಯದು, ಯಾವ ರೀತಿಯ ಪುಸ್ತಕಗಳನ್ನು ಮಕ್ಕಳು ಓದಬೇಕು ಎನ್ನುವ ಸಂಗತಿ ಕುರಿತಂತೆ ನಿರಂತರ ಚರ್ಚೆಗಳು ನಡೆಯುತ್ತಿರುತ್ತವೆ. ಮಕ್ಕಳು ಓದಬೇಕಾದ ಪುಸ್ತಕಗಳ ಪಟ್ಟಿಯನ್ನು ಅನೇಕರು ಮಾಡುತ್ತಾರೆ. ಇದು ಆಗಬೇಕಾದ ಕೆಲಸಗಳೇ. ಇಲ್ಲಿನ ಸಮಸ್ಯೆಯೆಂದರೆ ಬಹುತೇಕ ಮಕ್ಕಳೆಲ್ಲ ಪುಸ್ತಕಗಳನ್ನು ಓದುತ್ತಾರೆ ಎನ್ನುವ ತಿಳಿವಳಿಕೆಯಲ್ಲಿ ಮೇಲಿನ ಚರ್ಚೆಗಳು, ಪುಸ್ತಕಪಟ್ಟಿ ಮಾಡುವ ಕೆಲಸಗಳು ನಡೆಯುತ್ತವೆ. ಆದರೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದಂತಿಲ್ಲ. ಈ ಸಮಸ್ಯೆಗೆ ಮಕ್ಕಳು ಒಂದಿಷ್ಟೂ ಕಾರಣರಲ್ಲ. ಪೋಷಕರಲ್ಲಿ ಓದುವ ಹವ್ಯಾಸವಿದ್ದರೆ ಅದು ಮಕ್ಕಳೂ ಅದನ್ನು ಅನುಸರಿಸುವ ಸಾಧ್ಯತೆಯಿರುತ್ತದೆ. ಓದುವ ಪೋಷಕರ ಮಕ್ಕಳೆಲ್ಲ ಓದುತ್ತಾರೆ ಎನ್ನುವುದು ಇದರ ಅರ್ಥವಲ್ಲ. ಓದುವ ಹವ್ಯಾಸವಿರುವ ಪೋಷಕರ ಹೆಚ್ಚಿನ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಓದುವ ಹವ್ಯಾಸವೇ ಇರದ ಪೋಷಕರಿರುವ ವಾತಾವರಣದಲ್ಲಿ ಬೆಳೆದ ಮಕ್ಕಳು ಆ ಹವ್ಯಾಸವನ್ನು ರೂಢಿಸಿಕೊಳ್ಳುವುದು ಕಡಿಮೆ. ತಮ್ಮ ಶಿಕ್ಷಕರು ಮತ್ತು ಸ್ನೇಹಿತರಿಂದ ಕೆಲವು ಮಕ್ಕಳಿಗೆ ಓದುವ ಹವ್ಯಾಸ ಬರಬಹುದು. ಇಂತಹ ಸಂದರ್ಭದಲ್ಲಿ ಉತ್ತರ ಕಂಡುಕೊಳ್ಳಬೇಕಾದ ಮುಖ್ಯವಾದ ಪ್ರಶ್ನೆಯೇನೆಂದರೆ ಮಕ್ಕಳನ್ನು ಸಾಹಿತ್ಯದ ಪುಸ್ತಕಗಳತ್ತ ಸೆಳೆಯುವುದು ಹೇಗೆ ಎಂಬುದು.
ತುಂಬಾ ಜನ ಪೋಷಕರು ತಮ್ಮ ಮನೆಯಲ್ಲಿ ಕಪಾಟುಗಳ ತುಂಬ ಪುಸ್ತಕಗಳಿದ್ದು ತಮ್ಮ ಮಕ್ಕಳು ಅವುಗಳನ್ನು ಓದುವುದಿಲ್ಲ ಎಂದು ದೂರುತ್ತಾರೆ. ಮೊದಲೇ ಹೇಳಿದ ಪೋಷಕರ ಸಮಸ್ಯೆಯೇ ಇದಕ್ಕೆ ಬಹುತೇಕ ಕಾರಣವಾಗಿರುತ್ತದೆ. ಏನೆಂದರೆ ಈ ರೀತಿ ದೂರುವ ಬಹುತೇಕ ಪೋಷಕರೂ ಕಪಾಟುಗಳನ್ನು ತೆಗೆದು ಪುಸ್ತಕಗಳನ್ನು ಓದುತ್ತಿರುವುದಿಲ್ಲ. ತಮ್ಮ ಮಕ್ಕಳನ್ನು ಪುಸ್ತಕದ ಮಳಿಗೆಗಳಿಗೆ ಕರೆದುಕೊಂಡು ಹೋಗುವ ಪೋಷಕರಲ್ಲಿ ಹಲವರು ಮಕ್ಕಳು ಓದಬೇಕು ಎಂದು ತಮಗೆ ಅನ್ನಿಸುವ ಪುಸ್ತಕಗಳನ್ನು ಕೊಂಡು ಮಕ್ಕಳಿಗೆ ಕೊಡುತ್ತಾರೆಯೇ ವಿನಾ ಮಕ್ಕಳು ಇಷ್ಟಪಟ್ಟು ಕೊಳ್ಳಲಿಚ್ಛಿಸುವ ಪುಸ್ತಕಗಳನ್ನಲ್ಲ. ಪುಸ್ತಕ ಮಳಿಗೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಪೋಷಕರು ಒಂದು ಕನಿಷ್ಟ ಮೊತ್ತವನ್ನು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡು ಆ ಮೊತ್ತದ ಒಳಗೆ ಮಕ್ಕಳಿಗೆ ಪುಸ್ತಕ ಕೊಳ್ಳಲು ತೊಡಗುತ್ತಾರೆ. ಈ ಸಂದರ್ಭಗಳಲ್ಲಿಯೂ ಮಕ್ಕಳು ಇಷ್ಟಪಟ್ಟ ಪುಸ್ತಕಗಳು ಅವರಿಗೆ ಸಿಗದೇ ಹೋಗಬಹುದು.
ಮಕ್ಕಳು ಕೇಳಿದ ಪುಸ್ತಕಗಳನ್ನು ಕೊಡಿಸದೇ ಇರುವ ಪೋಷಕರ ನಿರ್ಧಾರಕ್ಕೆ ಒಂದು ಕಾರಣವೆಂದರೆ ಮಕ್ಕಳು ಕೇಳುವ ದೊಡ್ಡ ಪುಸ್ತಕಗಳನ್ನು ಹೆಚ್ಚಿನ ಬೆಲೆ ನೀಡಿ ಕೊಡಿಸಿದರೂ ಅವರು ಆ ಪುಸ್ತಕವನ್ನು ಪೂರ್ಣ ಓದುವುದಿಲ್ಲ, ಹಾಗಾಗಿ ಅಷ್ಟು ಹಣ ನೀಡಿ ಪುಸ್ತಕ ಕೊಡಿಸುವುದು ವ್ಯರ್ಥ ಎಂಬ ನಿಲುವು. ನಾವು ಕೊಡಿಸಿದ ಎಲ್ಲಾ ಪುಸ್ತಕಗಳನ್ನೂ, ಒಂದು ಪುಸ್ತಕದ ಎಲ್ಲಾ ಪುಟಗಳನ್ನೂ ಮಕ್ಕಳು ಓದದೇ ಇರಬಹುದು ಎನ್ನುವ ಅನುಮಾನ ನಿಜವಾಗುವ ಸಂದರ್ಭಗಳು ಇವೆ. ಆದರೆ ಇದನ್ನು ನಷ್ಟವೆಂದು ಪೋಷಕರು ಭಾವಿಸಬಾರದು. ನಾವು ಮಕ್ಕಳಿಗಾಗಿ ಕೊಂಡು ತರುವ ದುಬಾರಿ ಬಟ್ಟೆಗಳನ್ನು ಮಕ್ಕಳು ಧರಿಸದೇ ಇರಬಹುದು ಅಥವಾ ಒಂದೆರೆಡು ಬಾರಿ ಧರಿಸಿ ಆನಂತರ ಅದನ್ನು ಇಷ್ಟಪಡದಿರಬಹುದು. ಹಾಗೆಂದು ಮಕ್ಕಳಿಗೆ ಬಟ್ಟೆಗಳನ್ನು ಖರೀದಿಸುವುದನ್ನು ನಾವು ನಿಲ್ಲಿಸುವುದಿಲ್ಲ. ಈಗ ಮಕ್ಕಳೊಂದಿಗೆ ಪೋಷಕರು ದುಬಾರಿ ಹೋಟೆಲ್ಲುಗಳಿಗೆ ಆಗಾಗ ಹೋಗುವುದು ಸಾಮಾನ್ಯ. ಅಲ್ಲಿ ಮಕ್ಕಳು ನಾವು ತರಿಸಿದ್ದನ್ನೆಲ್ಲ ತಿನ್ನದಿರಬಹುದು. ಬಟ್ಟೆ ಮತ್ತು ಹೋಟೆಲ್ಲುಗಳ ತಿನಿಸುಗಳ ವಿಚಾರದಲ್ಲಿ ತಲೆಕೆಡಿಸಿಕೊಳ್ಳದ ಪೋಷಕರು ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸುವಾಗ ಮಾತ್ರ ಹಣದ ಲೆಕ್ಕಾಚಾರ ಹಾಕುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ನೀತಿಕಥೆಗಳನ್ನು, ಚಂದಮಾಮದಲ್ಲಿ ಬರುವಂತಹ ಪ್ರಾಣಿ ಪಕ್ಷಿಗಳ ಕಥೆಗಳನ್ನು ಉಳ್ಳ ಪುಸ್ತಕಗಳನ್ನು ಪೋಷಕರು ತಮ್ಮ ಮಕ್ಕಳಿಗೆ ಕೊಡಿಸುತ್ತಾರೆ. ಒಂದು ಹಂತದವರೆಗೆ ಇಂತಹ ಪುಸ್ತಕಗಳನ್ನು ಮಕ್ಕಳೂ ಇಷ್ಟಪಡುತ್ತಾರೆ. ಆದರೆ ಕೊಂಚ ಹೆಚ್ಚು ಓದಿನ ಹವ್ಯಾಸವಿರುವ ಮಕ್ಕಳಿಗೆ ಇಂತಹ ಸಾಹಿತ್ಯ ಒಂದು ಹಂತದಲ್ಲಿ ಬೋರು ಎನಿಸಬಹುದು. ಮಕ್ಕಳಿಗಾಗಿ ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಹೊರತರುವವರೂ ತಮ್ಮ ಸರಕು ಮುಗಿದ ತಕ್ಷಣ ಹಿಂದೆ ಪ್ರಕಟಿಸಿದ್ದನ್ನೇ ಪುನಃ ಪುನಃ ಪ್ರಕಟಿಸುವುದೂ ಅವರಿಗೆ ಅನಿವಾರ್ಯವಾಗುತ್ತದೆ. ಇದನ್ನು ಗಮನಿಸಿದ ಮಕ್ಕಳು ಇಂತಹ ಪತ್ರಿಕೆಗಳನ್ನು ತರಿಸುವುದನ್ನು, ಓದುವುದನ್ನು ನಿಲ್ಲಿಸಿಬಿಡುತ್ತವೆ. ನನ್ನ ಮಗನ ವಿಚಾರದಲ್ಲಿ ಇದು ಸಂಭವಿಸಿದೆ.
ಒಂದು ಸಂಗತಿಯನ್ನು ಎಲ್ಲಾ ಪೋಷಕರು ಗಮನಿಸಬೇಕು. ಹಲವು ವಿಚಾರಗಳಲ್ಲಿ ಮಕ್ಕಳು ತಮ್ಮ ಪೋಷಕರಿಗಿಂತ ಹೆಚ್ಚು ಬುದ್ಧಿವಂತರು. ನಮಗಿಂತ ಅವರಿಗಿರುವ ಗ್ರಹಿಕೆಯ ಸಾಮರ್ಥ್ಯ ಹೆಚ್ಚು. ಮಕ್ಕಳನ್ನು ಮಕ್ಕಳು ಎಂದು ಅವರನ್ನು ಕೆಳಮಟ್ಟದಲ್ಲಿ (ಅಂಡರ್ ಎಸ್ಟಿಮೇಟ್) ನೋಡಬಾರದು. ಮಕ್ಕಳು ‘ಮಕ್ಕಳ ಸಾಹಿತ್ಯ’ ಎಂದು ನಾವು ತಿಳಿದುಕೊಂಡಿರುವ ಸಾಹಿತ್ಯವನ್ನು ಹೊರತುಪಡಿಸಿಯೂ ಬೇರೆ ಪುಸ್ತಕಗಳನ್ನು ಬಯಸಿದಾಗ ಅದನ್ನು ಅವರಿಗೆ ಕೊಡಿಸಬೇಕು. ಮಕ್ಕಳೇ ಒಂದು ಪುಸ್ತಕವನ್ನು ಇಷ್ಟಪಟ್ಟು ಕೊಂಡುಕೊಳ್ಳಲು ಬಯಸಿದಾಗ ಆ ಪುಸ್ತಕವನ್ನು ಆ ಮಗು ಖಂಡಿತ ಓದುತ್ತದೆ. ನನ್ನ ಮಗ ಐದನೇ ತರಗತಿಯಿಂದ ಅವನ ಆಸಕ್ತಿಯ ಕ್ರೀಡೆಗೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲಿಷಿನ ಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಾನೆ. ಕ್ರೀಡೆಯಂತೆ ಸಿನಿಮಾವೂ ಅವನ ಆಸಕ್ತಿಯ ಕ್ಷೇತ್ರ. ಕನ್ನಡ ಸಿನಿಮಾ ಮಾಸಪತ್ರಿಕೆ ‘ರೂಪತಾರ’ದ ನಿಯಮಿತ ಓದುಗನವನು!
ಮಕ್ಕಳಿಗೆ ಅವರ ವಯಸ್ಸಿನಲ್ಲಿ ಕೆಡಕನ್ನುಂಟುಮಾಡಬಹುದು ಎನಿಸುವ ಕೆಲವು ಪುಸ್ತಕಗಳನ್ನು ಬಿಟ್ಟರೆ ಅವರು ಕೇಳುವ ಯಾವ ಪುಸ್ತಕವನ್ನಾದರೂ ಕೊಡಿಸುವುದರಲ್ಲಿ ತಪ್ಪಿಲ್ಲ. ನಾವು ಕೊಡಿಸಿದ ಪುಸ್ತಕಗಳಲ್ಲಿ ಮಕ್ಕಳು ಕೆಲವೇ ಪುಸ್ತಕಗಳನ್ನು ಮಾತ್ರ ಓದಲಿ, ಒಂದು ಪುಸ್ತಕದಲ್ಲಿ ಕೆಲವೇ ಪುಟಗಳನ್ನಾದರೂ ಓದಲಿ, ಅದನ್ನು ಹುರಿದುಂಬಿಸಬೇಕು. ಇದರಿಂದ ಹಲವು ಲಾಭಗಳಿವೆ. ಮಕ್ಕಳು ಕಡಿಮೆ ಓದಿದರೂ ಅವರ ಓದುವ ಹವ್ಯಾಸ ಬೆಳೆಯುತ್ತದೆ ಮತ್ತು ನಿರಂತರವಾಗಿರುತ್ತದೆ. ಮುಖ್ಯವಾಗಿ ಮಕ್ಕಳು ತಾವು ಇಷ್ಟಪಟ್ಟು ಓದಿದ್ದು ಅವರ ಪ್ರಜ್ಞೆಯ ಭಾಗವಾಗಿ ಬೆಳೆಯುತ್ತ ಹೋಗುತ್ತದೆ. ನಮ್ಮ ಮನೆಯಲ್ಲಿ ಮಗ ಒಂದೆರೆಡು ವರ್ಷದವನಿರುವಾಗ, ಅವನು ಜೋಕಾಲಿ ಆಡುವ ಸನಿಹದ ಗೋಡೆಗೆ ಜೋಕಾಲಿ ಆಡುವಾಗ ಅವನಿಗೆ ಸ್ಪಷ್ಟವಾಗಿ ಕಾಣುವಂತೆ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯ ಚಿತ್ರಗಳೊಂದೊಳಗೂಡಿದ ಪಟಗಳನ್ನು, ಸಂಖ್ಯೆಯ ಪಟಗಳನ್ನು ಅಂಟಿಸಿದ್ದೆವು. ಅವುಗಳನ್ನು ಓದು ಅಥವಾ ಕಲಿ ಎಂದೇನೂ ಅವನಿಗೆ ನಾವು ಹೇಳುತ್ತಿರಲಿಲ್ಲ. ಆದರೆ ಅವುಗಳನ್ನು ನೋಡುತ್ತಲೇ ಅವನು ಅವುಗಳನ್ನು ಕಲಿತಿದ್ದ.
ನಮ್ಮ ಕುಟುಂಬದಲ್ಲಿ ನನ್ನ ಮಗನನ್ನು ಪ್ರಾಥಮಿಕ ಪೂರ್ವ ಶಿಕ್ಷಣಕ್ಕೆ (ಎಲ್.ಕೆ.ಜಿ) ಸೇರಿಸುವಾಗ ಅಲ್ಲಿನ ಶಿಕ್ಷಕಿ ಅವರಿಗೆ ನಾವು ದಂಪತಿಗಳು ಒಂದು ವಿನಂತಿ ಮಾಡಿಕೊಂಡೆವು. ಏನೆಂದರೆ ‘ನಮ್ಮ ಮಗನಿಗೆ ದಯವಿಟ್ಟು ಏನನ್ನೂ ಕಲಿಸಲು ಪ್ರಯತ್ನಿಸಬೇಡಿ. ಅವನಾಗಿಯೇ ಆಸಕ್ತಿ ತೋರಿದಲ್ಲಿ ಮಾತ್ರ ಅವನಿಗೆ ಕಲಿಸಿ. ಅವನು ಪಡೆಯುವ ಅಂಕಗಳ ಬಗ್ಗೆ ನಾವು ಗಮನ ಕೊಡುವುದಿಲ್ಲ. ಅವನು ಶಾಲೆಗೆ ಖುಷಿಯಿಂದ ಬಂದು ಹೋಗಬೇಕು, ಅಷ್ಟೇ ನಮ್ಮ ನಿರೀಕ್ಷೆ’. ಪ್ರಾಥಮಿಕ ಪೂರ್ವ ಶಿಕ್ಷಣದ ಎರಡನೇ ವರ್ಷವೂ (ಯು.ಕೆ.ಜಿ) ಅಲ್ಲಿನ ಶಿಕ್ಷಕಿ ಅವರಿಗೂ ಅದನ್ನೇ ಹೇಳಿದೆವು. ಇಬ್ಬರೂ ಶಿಕ್ಷಕಿಯರೂ ನಮ್ಮ ಮಾತುಗಳನ್ನು ಕೇಳಿ ಅಚ್ಚರಿಪಟ್ಟಿದ್ದರು.
ಚಿಕ್ಕಂದಿನಿಂದಲೂ ಮಗನು ಮಲಗುವ ಹಾಸಿಗೆಯ ಮೇಲೆ ಆಚೀಚೆ ಹೆಚ್ಚಾಗಿ ಚಿತ್ರಗಳಿರುವ ಪುಟ್ಟ ಪುಟ್ಟ ಪುಸ್ತಕಗಳನ್ನು ಇಡುತ್ತಿದ್ದೆವು. ಬೆಳಿಗ್ಗೆ ಅವನು ಏಳುವ ಮುಂಚೆಯೇ ದಿನಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅವುಗಳನ್ನೂ ಕೂಡ ಹಾಸಿಗೆಯ ಮೇಲೆ ಆಚೀಚೆ ಇಡುತ್ತಿದ್ದೆವು. ಈ ಎರಡೂ ಸಂದರ್ಭಗಳಲ್ಲಿಯೂ ಅವುಗಳನ್ನು ಓದು ಎಂದು ಅವನಿಗೆ ಹೇಳುತ್ತಿರಲಿಲ್ಲ. ಇವುಗಳೆಲ್ಲದರ ಪರಿಣಾಮ ಏನಾಗಿದೆ ಎಂದರೆ ಈಗ ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮೊದಲೇ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆದಿದೆ. ಆಗಾಗ ಪುಸ್ತಕದ ಅಂಗಡಿಗಳಿಗೆ ಹೋಗುವ ಅಭ್ಯಾಸ ಬೆಳೆದಿದೆ. ಈಗಂತೂ ಆನ್ ಲೈನಿನಲ್ಲಿ ಒಮ್ಮೆಗೆ ನಾಲ್ಕೈದು ಸಾವಿರ ಬೆಲೆಯ ಪುಸ್ತಕ ತರಿಸಿಕೊಳ್ಳುತ್ತಾನೆ. ಆತ ‘ಪುಸ್ತಕ ಕೊಳ್ಳಬೇಕು, ಒಂದು ಲಕ್ಷ ರೂಪಾಯಿ ಬೇಕು’ ಎಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಾಲ ಮಾಡಿಯಾದರೂ ನೀಡುತ್ತೇನೆ.
ಮಕ್ಕಳ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸೋಣ
ಈ ಸಂದರ್ಭದಲ್ಲಿಯೇ ಮಗನ ಬಗ್ಗೆ ಕೆಲವಿಚಾರ ಹೇಳಬೇಕೆನಿಸುತ್ತಿದೆ. ನನಗೆ ಬೇಜಾರಿನ ಸಂಗತಿಯೆಂದರೆ ಎಲ್ಲರೂ ತಮ್ಮದೊಂದು ಪುಸ್ತಕ ಪ್ರಕಟವಾದರೆ ಅದನ್ನು ಎಲ್ಲರೆದುರಿಗೆ ಬಿಡುಗಡೆ ಮಾಡಿ ಸಂಭ್ರಮಿಸಲು ಬಯಸುತ್ತಾರೆ. ಆದರೆ ತಾನು ಹೈಸ್ಕೂಲಿನಲ್ಲಿದ್ದಾಗ ಬರೆದು ಪ್ರಕಟಿಸಿದ 13 ಪುಸ್ತಕಗಳನ್ನು ಬಿಡುಗಡೆ ಮಾಡಲು ಅವನು ನಮಗೆ ಅನುಮತಿಯನ್ನೇ ನೀಡಲಿಲ್ಲ. ಈ ಪುಸ್ತಕಗಳನ್ನು ಕಳೆದ ಮಕ್ಕಳ ದಿನಾಚರಣೆಯ ದಿದದಂದು ಬಿಡುಗಡೆ ಮಾಡಿಸಬೇಕೆಂದು ಯೋಜಿಸಿದ್ದೆವು. ಈ ಬಗ್ಗೆ ಅವನಲ್ಲಿ ಕೇಳಿದಾಗ ಸುಮ್ಮನೆ ನಗುತ್ತಾನೆ. ಅವನ ಪುಸ್ತಕಗಳ ಬಗೆಗಿನ ಸಂಗತಿ ಇದಾಗಿರುವುದರಿಂದ ಅವನ ಅನುಮತಿ ಇಲ್ಲದೆ ನಾವು ಮುಂದುವರಿಯುವಂತಿರಲಿಲ್ಲ.
ಮಕ್ಕಳು ದಿನದಿನಕ್ಕೂ ಬೆಳೆಯುತ್ತಿದ್ದಂತೆ ಖುಷಿ, ಅಚ್ಚರಿಯೊಂದಿಗೆ ಎಲ್ಲೋ ಒಂದು ಮೂಲೆಯಲ್ಲಿ ಏನೋ ಕಳೆದುಕೊಂಡ ಭಾವವೂ ನಮ್ಮನ್ನಾವರಿಸುತ್ತದೆ. ಮಗ ಎಲ್.ಕೆ.ಜಿಯಲ್ಲಿರುವಾಗಲಿಂದ ಆರಂಭಿಸಿ ಅವನು ಒಂಬತ್ತನೇ ತರಗತಿಯಲ್ಲಿರುವ ತನಕವೂ, ಅಂದರೆ ನಾನು ಉದ್ಯೋಗ ನಿಮಿತ್ತ ಮೈಸೂರಿಗೆ ಬರುವವರೆಗೂ ಅವನಿಗೆ ಶಾಲೆಗೆ ಬಿಡಲು, ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದೆ. ಅವನ ಗೆಳೆಯ ಗೆಳತಿಯರೆಲ್ಲ ಈ ಸಂದರ್ಭ ನನ್ನನ್ನು ಮುತ್ತಿಕೊಳ್ಳುತ್ತಿದ್ದರು. ಅವರೊಂದಿಗೆ ಶಾಲೆಯ ಅಂಗಳದಲ್ಲಿ ಕಳೆಯುವ ಆ ಖುಷಿ, ಮಗನ ಬ್ಯಾಗು ಹೊತ್ತು ಅವನೊಂದಿಗೆ ಮಾತನಾಡುತ್ತ ಹೋಗಿ ಬರುವ ಆ ಕ್ಷಣಗಳು… ಇವೆಲ್ಲ ಮತ್ತೆ ಸಿಗುವುದೇ?
ಮಕ್ಕಳು ದಿನದಿನಕ್ಕೂ ಬೆಳೆಯುತ್ತಿರುತ್ತಾರೆ. ಅವರ ಜಗತ್ತು ವಿಸ್ತರಿಸುತ್ತಿರುತ್ತದೆ. ಅದು ಸಂತೋಷವೇ. ಆದರೆ ಪ್ರತಿ ಅಪ್ಪ ಅಮ್ಮನಿಗೆ ತಮ್ಮ ಮಕ್ಕಳ ಜಗತ್ತಿನಲ್ಲಿ ನಮ್ಮ ಜಾಗ ಕಡಿಮೆಯಾಗುತ್ತಿದೆಯೇನೋ ಎಂಬ ಆತಂಕ ಶುರುವಾಗುತ್ತದೆ. ಈ ಆತಂಕ ಸಹಜವೆಂದು ಅದರಿಂದ ಹೊರಬಂದು ಮಕ್ಕಳನ್ನು ಅವರಷ್ಟಕ್ಕೆ ಅವರನ್ನು ಬಿಟ್ಟರೆ ಸಮಸ್ಯೆಯಿಲ್ಲ. ಆದರೆ ಈ ಆತಂಕ ಮಕ್ಕಳನ್ನು ತಮ್ಮ ಹತೋಟಿಯಲ್ಲಿಡಲು ಅಪ್ಪ ಅಮ್ಮರಿಗೆ ಪ್ರೇರೇಪಿಸಿದರೆ ಅದು ನಮಗೂ, ಮಕ್ಕಳಿಗೂ ಸಮಸ್ಯೆಯನ್ನು ತಂದೊಡ್ಡುತ್ತದೆ. ಮಕ್ಕಳು ಎಷ್ಟೇ ಬುದ್ಧಿವಂತರಿರಲಿ, ಈಗಿನ ಶಾಲಾವ್ಯವಸ್ಥೆ ಪ್ರತಿ ಮಗುವಿಗೂ ವಿಪರೀತ ಒತ್ತಡವನ್ನು ಸೃಷ್ಟಿ ಮಾಡುತ್ತಿದೆ. ಮಗ ಒಂಬತ್ತನೇ ತರಗತಿಯಲ್ಲಿದ್ದಾಗ ಒಂದು ಘಟನೆ ನಡೆಯಿತು.
ನಾನು ಆಗಷ್ಟೇ ಮೈಸೂರಿಗೆ ಬಂದಿದ್ದೆ. ಮಗನ ಶಾಲೆಯಿಂದ ಒಂದು ಫೋನ್. ‘ನಿಮ್ಮ ಮಗ ತಲೆ ಸುತ್ತು ಬಂದು ಬಿದ್ದಿದ್ದಾನೆ. ತಕ್ಷಣ ಬನ್ನಿರಿ’ ಎಂದು. ನಾನು ತಕ್ಷಣ ನನ್ನ ಶ್ರೀಮತಿಯವರಿಗೆ ಫೋನ್ ಮಾಡಿದೆ. ಅವರು ಗಾಬರಿಗೊಂಡು ಆಟೋ ಮಾಡಿ ಶಾಲೆಗೆ ಹೋದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಂಥದ್ದೇನೂ ಆಗಿರಲಿಲ್ಲ. ‘ಹಿಂದಿನ ರಾತ್ರಿ ನಿದ್ದೆ ಬಂದಿಲ್ಲದ ಕಾರಣ, ಬೆಳಗಿನ ತಿಂಡಿ ಸರಿಯಾಗಿ ಸೇರಿಲ್ಲದ ಕಾರಣ ತಲೆ ಸುತ್ತು ಬಂದಿರಬಹುದು’ ಎಂದ. ಆದರೆ ನಂತರದ ದಿನಗಳಲ್ಲಿ ಅವನ ಸ್ನೇಹಿತರು ನೀಡಿದ ಮಾಹಿತಿ ಎಂದರೆ ಅವನು ಒಂದು ಪುಸ್ತಕ ಶಾಲೆಗೆ ತೆಗೆದುಕೊಂಡು ಹೋಗಿರಲಿಲ್ಲವೆಂದು ಆ ವಿಷಯದ ಶಿಕ್ಷಕರು ಇಡೀ ತರಗತಿಯ ಅವಧಿಯಲ್ಲಿ ಅವನಿಗೆ ನಿಂತುಕೊಳ್ಳುವ ಶಿಕ್ಷೆ ಕೊಟ್ಟಿದ್ದರು. ಮಗ ಆ ವಿಷಯದಲ್ಲಿ ತುಂಬ ಚೆನ್ನಾಗಿದ್ದ. ಒಂದು ದಿನ ಒಂದು ಪುಸ್ತಕ ತೆಗೆದುಕೊಂಡು ಹೋಗದಿದ್ದುದಕ್ಕೆ ಇದೆಂತಹಾ ಶಿಕ್ಷೆ, ಒಮ್ಮೆ ವಾರ್ನ್ ಮಾಡಿ ಬಿಟ್ಟು ಮತ್ತೆ ಅದೇ ತಪ್ಪು ಮಾಡಿದ್ದರೆ ಈ ರೀತಿ ಶಿಕ್ಷೆ ಕೊಡಬಹುದಿತ್ತು ಎನಿಸಿತು. ‘ಇದನ್ನು ನಿಮ್ಮ ಶಿಕ್ಷಕರ ಬಳಿ ಬಂದು ಪ್ರಶ್ನಿಸುತ್ತೇನೆ’ ಎಂದು ನಾವು ಅಪ್ಪ ಅಮ್ಮ ಮಗನಿಗೆ ಹೇಳಿದೆವು. ಮಗ ‘ಬೇಡ’ ಎಂದ. ‘ನೀವು ಈ ರೀತಿ ಬಂದು ಕೇಳಿದರೆ ಎಲ್ಲಾ ಪೋಷಕರು ಬಂದು ಇದೇ ರೀತಿ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಬೇರೆ ವಿದ್ಯಾರ್ಥಿಗಳು ಈ ತಪ್ಪಿನ ಚಾಳಿ ಮುಂದುವರಿಸಬಹುದು, ಮುಖ್ಯವಾಗಿ ಆ ಶಿಕ್ಷಕರು ತುಂಬ ನಿಷ್ಪಕ್ಷಪಾತದಿಂದ ನಡೆದುಕೊಳ್ಳುವವರು’ ಎಂದ.
ನಮ್ಮನ್ನೂ ಒಳಗೊಂಡಂತೆ ಬಹುಷಃ ಪ್ರತಿ ಅಪ್ಪ-ಅಮ್ಮನಿಗೂ ತಮ್ಮ ಮಕ್ಕಳ ಆಟಪಾಠದ ಚಂದ, ಅವರ ಸಣ್ಣಪುಟ್ಟ ಸಾಧನೆಗಳನ್ನಾದರೂ ತಮ್ಮ ಸ್ನೇಹಿತರಲ್ಲಿ ಹೇಳಿಕೊಂಡು ಖುಷಿಪಡುವ ತವಕ. ಆದರೆ ಮಕ್ಕಳ ಜಗತ್ತೇ ಬೇರೆ ಅನ್ನಿಸುತ್ತದೆ. ಮಗ ತಾನು 5ನೇ ತರಗತಿಯಿಂದ ಆರಂಭಿಸಿ ಇದುವರೆಗೆ ಬರೆದ 33 ಪುಸ್ತಕಗಳಲ್ಲಿ ಒಂದು ಪುಸ್ತಕವನ್ನೂ ಅಂದಿನಿಂದ ಇಂದಿನವರೆಗೂ ತನ್ನ ಶಿಕ್ಷಕರಿಗಾಗಲೀ, ಕುಟುಂಬವರ್ಗದವರಿಗಾಗಲಿ, ತನ್ನ ಸ್ನೇಹಿತರಿಗಾಗಲಿ ಕೊಟ್ಟಿಲ್ಲ. ‘ನೋಡಿ, ಇದು ನನ್ನ ಸಾಧನೆ’ ಎಂದು ಬಿಂಬಿಸಿಕೊಳ್ಳಲು ಅವನಿಗಿಷ್ಟವಿಲ್ಲ. ಅದು ಅವನಿಗೆ ಮುಜುಗರದ ಸಂಗತಿ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅವನ ಅಂಕಣಗಳನ್ನು, ಕಥೆ, ಕವಿತೆ, ಲೇಖನಗಳನ್ನು ಅವನು ನೋಡುವುದೇ ಅಪರೂಪ. ಬರೆಯುವದಷ್ಟೇ ನನ್ನ ಖುಷಿ ಎನ್ನುತ್ತಾನೆ. ನಮ್ಮ ಬಗ್ಗೆ ಯಾರಾದರೂ ಬರೆದರೆ ನಾವು ಅದನ್ನು ಮತ್ತೆ ಮತ್ತೆ ಓದುತ್ತೇವೆ. ಆದರೆ ತನ್ನ ಬಗ್ಗೆ ಬಂದ ಹತ್ತಾರು ಲೇಖನಗಳನ್ನು ಮಗ ಕೊಂಚವೂ ಆಸಕ್ತಿಯಿಂದ ನೋಡದಿರುವುದನ್ನು ನೋಡಿ ನಮಗೆ ಅಚ್ಚರಿ.
ಕೆಲವು ಸಮಯದ ಹಿಂದೆ ಮನೆಯ ಕಪಾಟಿನಲ್ಲಿ ಪುಸ್ತಕಗಳು ಇತ್ಯಾದಿ ಇದ್ದು, ಹೊಸದಾಗಿ ಕೊಂಡ ಪುಸ್ತಕಗಳನ್ನು ಜೋಡಿಸಬೇಕಾಗಿತ್ತಾದ್ದರಿಂದ ಮಗನಿಗೆ ಹೇಳಿದೆ: ‘ನಿನಗೆ ಈ ಕಪಾಟಿನಲ್ಲಿರುವ ಯಾವ ಪುಸ್ತಕಗಳು ಮತ್ತು ಫೈಲುಗಳು ಅಗತ್ಯವಿಲ್ಲ ಎನಿಸುತ್ತವೆಯೋ ಅದನ್ನು ಹೊರಗೆ ತೆಗೆದಿಡು. ಅವನ್ನು ಬಾಕ್ಸಿಗೆ ಹಾಕಿ ಸದ್ಯ ಅಟ್ಟದಲ್ಲಿಡುತ್ತೇನೆ’. ಒಂದೆರೆಡು ತಾಸಿನಲ್ಲಿಯೇ ಮಗ ಆ ಕೆಲಸ ಮಾಡಿದ. ಅವನು ತನಗೆ ಅಗತ್ಯವಿಲ್ಲವೆಂದು ತೆಗೆದಿಟ್ಟ ಪುಸ್ತಕಗಳು ಯಾವುವೆಂದರೆ, ‘ಇದು ನಮ್ಮ ಮಗ ಬರೆದ ಪುಸ್ತಕಗಳು’ ಎಂದು ನಾವು ಹೆಮ್ಮೆಯಿಂದ ಕಪಾಟಿನಲ್ಲಿ ಜೋಡಿಸಿಟ್ಟ ಅವನ ಆವರೆಗಿನ 24 ಪುಸ್ತಕಗಳು ಮತ್ತು ಅವನ ಕುರಿತು ಬಂದ ಸಚಿತ್ರ ಲೇಖನಗಳ ಫೈಲುಗಳು!
ಮೊನ್ನೆ ಮೊನ್ನೆ ಕೂಡ ಅವನು ಎಸ್ಸೆಸ್ಸೆಲ್ಸಿಯಲ್ಲಿ ಅದ್ಭುತ ಫಲಿತಾಂಶ ಪಡೆದಾಗ ‘ಅದನ್ನು ವಾಟ್ಸಪ್, ಫೇಸ್ಬುಕ್ಕುಗಳಲ್ಲಿ ಪ್ರಕಟಿಸಬೇಡಿ, ಕೋರಾನಾ ಕಾರಣದಿಂದ ತುಂಬಾ ವಿದ್ಯಾರ್ಥಿಗಳು ಫೇಲಾಗಿದ್ದಾರೆ, ಇದರ ಮುಂದೆ ನಮ್ಮದೇನು?’ ಎಂದಿದ್ದ. ‘ಅಲ್ಲಾ ಮಗನೆ, ನೀನು ಈ ಕೋರೊನಾದ ಆತಂಕದ ಸಂದರ್ಭದಲ್ಲೂ, ನಿನ್ನ ಹಲವು ಚಟುವಟಿಕೆಗಳ ನಡುವೆ ಇಷ್ಟು ಅಂಕ ಪಡೆದಿದ್ದಿ, ಇದನ್ನು ಗಮನಿಸಿ ಬೇರೆ ಪೋಷಕರು ತಮ್ಮ ಮಕ್ಕಳಿಗೆ ಬರೀ ಓದಲು ಒತ್ತಡ ಹಾಕದೆ, ಓದಿನೊಂದಿಗೆ ಅವರ ಆಸಕ್ತಿಯ ಚಟುವಟಿಕೆಗಳಲ್ಲಿ ತೊಡಗಲು ಬಿಡಬಹುದು, ಅದಕ್ಕಾಗಿ ಫೇಸ್ಬುಕ್ಕಿನಲ್ಲಿ ಹಾಕುವುದು ಒಳ್ಳೆಯದಲ್ಲವೇ?’ ಎಂದೆ. ‘ಇಲ್ಲ, ನೀವು ಹೀಗೆ ಮಾಡುವುದರಿಂದ ಅದು ಮಕ್ಕಳಿಗೆ ಇನ್ನೂ ಅಪಾಯ’ ಎಂದು ನಕ್ಕ. ‘ಪೋಷಕರು ತಮ್ಮ ಮಕ್ಕಳಿಗೆ ನನ್ನ ಉದಾಹರಣೆ ಕೊಟ್ಟು ನೋಡು, ಅವನು ಏನೇನೋ ಚಟುವಟಿಕೆ ಮಾಡುತ್ತ, ಬರೆಯುತ್ತ ಅಷ್ಟು ಅಂಕ ಪಡೆದಿದ್ದಾನೆ, ಏನೂ ಮಾಡದ ನೀನು ಯಾಕೆ ಇಷ್ಟೇ ಅಂಕ ಪಡೆದೆ ಎಂದು ಬೈಯ್ಯುತ್ತಾರೆ’ ಎಂದ! ನಮ್ಮಲ್ಲಿ ಉತ್ತರ ಇರಲಿಲ್ಲ.
ಅವನ ಫಲಿತಾಂಶ ನೋಡಿ ಶಿವಮೊಗ್ಗದ ಜವಳಿ ಸಂಸ್ಥೆಯೊಂದು ಅವನಿಗೆ ಉದ್ದನೆಯ ಅಭಿನಂದನೆಯ ಪತ್ರ ಬರೆಯಿತು. ಅದನ್ನು ಫೇಸ್ಬುಕ್ಕಿನಲ್ಲಿ ಹಾಕಲಾ ಕೇಳಿದೆ. ‘ಬೇಡ ಅದರಲ್ಲಿ ಅವರು ನನ್ನ ಅಂಕಗಳನ್ನು ನಮೂದಿಸಿದ್ದಾರೆ’ ಎಂದ! ಮೊನ್ನೆ ಒಂದು ಸಂಸ್ಥೆ ರಾಜ್ಯಮಟ್ಟದ ಆನ್ ಲೈನ್ ಕವಿಗೋಷ್ಠಿಗೆ ಅವನನ್ನು ಕಳಿಸಲು ಕೋರಿತು. ಮಗ ಆಸಕ್ತಿಯನ್ನೇ ತೋರಿಸಲಿಲ್ಲ. ಈ ರೀತಿ ಕವಿಗೋಷ್ಠಿ, ಸನ್ಮಾನ, ಕಾರ್ಯಕ್ರಮಗಳಿಗೆ ಅವನು ಆಸಕ್ತಿ ತೋರದಿರುವುದು ಇದು ಮೊದಲಲ್ಲ. ನಮಗೆ ಅಚ್ಚರಿ. ಆದರೆ ಅವನ ನಿಲುವನ್ನು ನಾವು ಪ್ರಶ್ನಿಸುವುದಿಲ್ಲ.
ಈಗ ಪದವಿಪೂರ್ವ ಕಾಲೇಜುಗಳು ನಡೆಯುತ್ತಿಲ್ಲ. ಎಲ್ಲಾ ಆನ್ ಲೈನ್. ಎರಡು ವಾರದ ಹಿಂದೆ ತಾತನ ಹಳ್ಳಿಮನೆಗೆ ಹೋಗಿದ್ದ. ಅಮ್ಮಮ್ಮ ಸೇರಿದಂತೆ ಅಲ್ಲಿನವರೆಲ್ಲ ಶಿವಮೊಗ್ಗಕ್ಕೆ ಬಂದರೂ ತಾತ ಮೊಮ್ಮಗ ಹಳ್ಳಿಯಲ್ಲಿಯೇ ಉಳಿದಿದ್ದರು. ಅಲ್ಲಿ ಆತ ಪಲಾವು, ನೀರುದೋಸೆ, ಚಿತ್ರಾನ್ನ, ರೊಟ್ಟಿ ಹೀಗೆ… ದಿನಕ್ಕೊಂದು ಅಡಿಗೆ ಮಾಡುತ್ತಾ, ಮುಂಜಾವಿನಲ್ಲಿ ಸೂರ್ಯೋದಯದ ಫೋಟೊ ತೆಗೆಯುತ್ತಾ, ಕೈಗೆ ಸಿಕ್ಕ ಪುಸ್ತಕ ಓದುತ್ತಾ, ಐಪಿಎಲ್ ಮ್ಯಾಚು ನೋಡುತ್ತಾ, ತನ್ನಿಷ್ಟದ ಸಿನಿಮಾ ನೋಡುತ್ತಾ, ಜತೆಗೆ ಆನ್ ಲೈನಿನಲ್ಲಿ ತರಗತಿಗಳನ್ನು ಅಟೆಂಡ್ ಮಾಡುತ್ತಾ ಅರಾಮಾಗಿದ್ದ.
ಮಕ್ಕಳಿಂದ ತಾವೇನೋ ದೊಡ್ಡವರು ಎಂದು ಹಲವು ಪೋಷಕರು ಅವರಿಂದ ಪಾದಪೂಜೆ ಮಾಡಿಸಿಕೊಳ್ಳುವುದನ್ನು ನೋಡಿ ಅವರ ಬಗ್ಗೆ ಕನಿಕರವೆನಿಸುತ್ತದೆ. ನಾವು ಕನಿಷ್ಟ ನಮ್ಮ ಮಕ್ಕಳ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸೋಣ ಎಂದು ನನಗೆ ಮತ್ತೆ ಮತ್ತೆ ಅನ್ನಿಸುತ್ತದೆ.
ಪರಿಚಯ: ಲೇಖಕ, ಚಿಂತಕ, ಡಾ. ಸರ್ಜಾಶಂಕರ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹತ್ತು ವರ್ಷಗಳ ತನಕ ಉದ್ಯೋಗಿಯಾಗಿ ನಂತರ ರಾಜೀನಾಮೆ ನೀಡಿ ಊರಿಗೆ ಮರಳಿ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಗಳಿಸಿದರು. ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಕನ್ನಡ ಪ್ರಾಧ್ಯಾಪಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದರು. ಸದ್ಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರಾಳ (ಸಾಹಿತ್ಯ ಸಂಕಲನ), ಬೆಚ್ಚಿ ಬೀಳಿಸಿದ ಬೆಂಗಳೂರು (ಅಂಕಣಬರಹಗಳು), ಜೀವದನಿ (ಅಂಕಣ ಬರಹಗಳು), ಬಾರಯ್ಯ ಬೆಳದಿಂಗಳೇ (ಕಥಾ ಸಂಕಲನ), ಸುಡುಹಗಲ ಸೊಲ್ಲು (ಲೇಖನಗಳ ಸಂಕಲನ) ಪ್ರಕಟಗೊಂಡ ಕೃತಿಗಳು.
ಓದು ಮಗು ಓದು: ಶಿವಮೊಗ್ಗದ ಹದಿನಾರರ ಹುಡುಗ 33 ಪುಸ್ತಕಗಳನ್ನು ಬರೆದದ್ದು ಹೀಗೆ…
Published On - 6:37 pm, Sun, 17 January 21