AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದು ಮಗು ಓದು: ಹೀಗಿದೆ ಮಕ್ಕಳ ಪುಸ್ತಕಗಳ ವ್ಯಾಪಾರ ವಹಿವಾಟು…

ಈ ಸರಣಿಯಲ್ಲಿ ಒಂದುವಾರದ ತನಕ ಇಷ್ಟೆಲ್ಲಾ ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ಹೇಳಿದ್ದನ್ನು ನೀವೆಲ್ಲಾ ಓದಿದಿರಿ. ಈ ವಿಷಯವಾಗಿ ನಮ್ಮ ಪ್ರಕಾಶಕರು ವಹಿವಾಟಿನ ಬಗ್ಗೆ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಏನೆನ್ನುತ್ತಾರೆ? ತಿಳಿದುಕೊಳ್ಳಿ...

ಓದು ಮಗು ಓದು: ಹೀಗಿದೆ ಮಕ್ಕಳ ಪುಸ್ತಕಗಳ ವ್ಯಾಪಾರ ವಹಿವಾಟು...
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
| Updated By: ಶ್ರೀದೇವಿ ಕಳಸದ|

Updated on:Jan 17, 2021 | 8:02 PM

Share

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com

ಕೊರೋನಾ ನಂತರ ಮಕ್ಕಳ ಪುಸ್ತಕಗಳ ಮಾರಾಟ ಹೇಗಿದೆ ಎಂದು ಕೆಲ ಪ್ರಕಾಶಕರನ್ನು ಮಾತನಾಡಿಸಿದಾಗ…

‘ಲಾಕ್ ಡೌನ್ ಆದಾಗ ನಲವತ್ತು ದಿನಗಳ ಕಾಲ ಎಲ್ಲ ಮಳಿಗೆಗಳೂ ಮುಚ್ಚಿದ್ದವು. ಮೇ- ಜೂನ್- ಜುಲೈ ತಿಂಗಳಲ್ಲಿ ಅರ್ಧದಷ್ಟು ಕೂಡಾ ವ್ಯಾಪಾರ ಆಗಲಿಲ್ಲ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಿಧಾನವಾಗಿ ವ್ಯಾಪಾರ ಶುರುವಾಯಿತು. ಕತೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಅಲ್ಲದೆ ನಾನ್ ಫಿಕ್ಷನ್ ಗಳನ್ನೂ ಮಕ್ಕಳು ಖರೀದಿಸಲು ಶುರು ಮಾಡಿದರು. ನಮ್ಮಲ್ಲಿ ಇತಿಹಾಸ, ವಿಜ್ಞಾನ, ಆರೋಗ್ಯದ ಪುಸ್ತಕಗಳೇ ಜಾಸ್ತಿ, ಈಗ ಮತ್ತೆ ಬೇಡಿಕೆ ಶುರುವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧೆ ವಾರ್ಷಿಕೋತ್ಸವ ಬಂದಾಗ ಮಕ್ಕಳಿಗೆ ಬಹುಮಾನ ನೀಡಲು ಹೆಚ್ಚು ಪ್ರಮಾಣದ ಪುಸ್ತಕಗಳನ್ನು ಖರೀದಿ ಮಾಡುತ್ತಿದ್ದರು. ಸದ್ಯ ಅದೆಲ್ಲ ನಿಂತಿದೆ. ಆದರೂ ಮಕ್ಕಳು ಪೋಷಕರೊಂದಿಗೆ ಬಂದು ಪುಸ್ತಕ ಖರೀದಿ ಮಾಡುತ್ತಿರುವುದು ಖುಷಿ ಕೊಡುತ್ತಿದೆ. ಕ್ರಮೇಣ ಶೇ.80 ರಷ್ಟು ವ್ಯಾಪಾರ ವೃದ್ಧಿಸಿದೆ.

ಎರಡು ತಿಂಗಳಿನಿಂದ ಇ-ಬುಕ್, ಆಡಿಯೊ ಬುಕ್ ಶುರುಮಾಡಿದ್ದೇವೆ ಮಕ್ಕಳಿಗಾಗಿ ಕಥಾ ಸಾಹಿತ್ಯ, ಜೀವನ ಚರಿತ್ರೆಗಳನ್ನು ಇ-ಬುಕ್ ರೂಪದಲ್ಲಿ ತರಲಿದ್ದೇವೆ. ನಮ್ಮಲ್ಲಿ 2000-3000 ಶೀರ್ಷಿಕೆಗಳ ಪೈಕಿ 700-800 ಮಕ್ಕಳ ಪುಸ್ತಕಗಳಿವೆ. ಇವುಗಳಲ್ಲಿ ಶೇ.10 ಪುಸ್ತಕಗಳನ್ನು ಇ-ಬುಕ್ ಮಾಡಲಿದ್ದೇವೆ. ಮುಂದಿನ ತಿಂಗಳು ಫೆಬ್ರುವರಿಯಿಂದ ಆಡಿಯೋ ಪುಸ್ತಕಗಳನ್ನು ಹೊರತರಲಿದ್ದೇವೆ. ಮಕ್ಕಳಿಗೆ ಕಥೆ ಹೇಳುವವರು ಈಗ ಕಡಿಮೆ. ಹಾಗಾಗಿ ಕಥೆ ಪುಸ್ತಕಗಳನ್ನು ಆಡಿಯೊ ಪುಸ್ತಕಗಳಾಗಿಸಲಿದ್ದೇವೆ.’ -ರಮೇಶ್ ಉಡುಪ, ವ್ಯವಸ್ಥಾಪಕ, ನವಕರ್ನಾಟಕ ಪ್ರಕಾಶನ ಬೆಂಗಳೂರು

—–

‘ಕೊರೊನಾ ಮೊದಲು ಪುಸ್ತಕಗಳು ಮಕ್ಕಳ ಕೈ ಸೇರುವುದು ಸುಲಭವಿತ್ತು. ಲಾಕ್ ಡೌನ್ ಸಮಯದಲ್ಲಿ ಪುಸ್ತಕಗಳನ್ನು ಮುದ್ರಿಸಿದರೂ ಅವುಗಳನ್ನು ಮಕ್ಕಳಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಮುದ್ರಣಕ್ಕೆ ಕಳುಹಿಸಲೆಂದು ತಯಾರಿ ಮಾಡಿಟ್ಟ ಪುಸ್ತಕಗಳನ್ನೆಲ್ಲ ಪ್ರಥಮ್ ಬುಕ್ಸ್ ನ ಆನ್ಲೈನ್ ಅಂಗಳ ಸ್ಟೋರಿವೀವರ್​ನಲ್ಲಿ ಪ್ರಕಟಿಸಲಾಯಿತು. ಅದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಬಂದಿತು. ಕೊರೊನಾ ಸಮಯದಲ್ಲೇ ಪ್ರಥಮ್ ಬುಕ್ಸ್ ಮಕ್ಕಳಿಗೆ ಕೊರೊನಾ ಬಗ್ಗೆ ತಿಳಿವಳಿಕೆ ಮೂಡಿಸುವ – ಹೊಸ ಕೊರೊನ ವೈರಸ್: ನಮ್ಮ ರಕ್ಷಣೆ ಹೇಗೆ? ಪುಸ್ತಕವನ್ನು ಪ್ರಕಟಿಸಿತು. https://storyweaver.org.in/stories/130458-hosa-corona-virus-namma-rakshane-hege ಈ ಪುಸ್ತಕದ ವಿಶೇಷತೆ ಏನೆಂದರೆ: ‘ಪ್ರಥಮ್ ಬುಕ್ಸ್’ನ ಕತೆಯ ಪಾತ್ರಗಳೇ ಕೊರೊನಾ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡುವುದು.

ಕೊರೊನಾ ನಂತರ ಪ್ರಥಮ್ ಬುಕ್ಸ್ ನಿಂದ ಮಕ್ಕಳ ಪುಸ್ತಕಗಳ ಮುದ್ರಣ ಮೊದಲಿನಂತೆಯೇ ಆರಂಭಗೊಂಡಿದೆ. ಕನ್ನಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಪುಸ್ತಕಗಳನ್ನು ರಾಜ್ಯದ ಪ್ರತಿ ಅಂಗನವಾಡಿ ಮಕ್ಕಳೂ ಓದಲಿದ್ದಾರೆ.  ಅಲ್ಲದೆ,  ಹೊಸ ವರ್ಷಕ್ಕೆ ಪ್ರಥಮ್ ಬುಕ್ಸ್ ನಿಂದ ಎರಡು ಬಹುಮುಖ್ಯ ಪುಸ್ತಕಗಳು ಪ್ರಕಟವಾಗಿವೆ: 1) ‘ನನ್ನ ಹಾರೈಕೆ’ (https://storyweaver.org.in/stories/228657-i-wish-nanna-haaraike) 2) ‘ನಿಮ್ಮೂರಲ್ಲಿ ಬಿಸಿಲು, ಮಳೆ, ಚಳಿ ಹೇಗಿದೆ?’ (https://storyweaver.org.in/stories/171330-nimmooralli-bisilu-male-chali-hegide) ಇವೆರಡೂ ಪುಸ್ತಕಗಳು ಇನ್ನೇನು ಮಕ್ಕಳ ಕೈ ತಲುಪಲಿವೆ.

ಹೊಸ ಯೋಜನೆಗಳು:

ಸ್ಟೋರಿವೀವರ್‌ ನಲ್ಲಿ ಮಕ್ಕಳು ಆಲಿಸುತ್ತ ಓದಬಹುದಾದ ಸೊಗಸಾದ ಆಡಿಯೊ-ಚಿತ್ರ ಪುಸ್ತಕಗಳ ಸಂಗ್ರಹ ಕನ್ನಡದಲ್ಲೂ ಮಾಡಲಾಗಿದೆ. ಮಗುವಿಗೆ ಖುಷಿಯಾಗಿ ಕಲಿಯುವ ಅನುಭವ ನೀಡುವ ಮಾದರಿಯಲ್ಲಿ ರೀಡ್‌ ಅಲಾಂಗ್ಸ್ ವಿನ್ಯಾಸ ಮಾಡಲಾಗಿದೆ.

ರೀಡ್ ‌ಅಲಾಂಗ್ಸ್ ಕತೆಗಳಿಗೆ ನೀಡಲಾಗಿರುವ ಹಿನ್ನೆಲೆ ಸಂಗೀತ ಮತ್ತು ಪರಿಣತ ಕಲಾವಿದರ ಕತೆಗಳ ಸಹಜ ನಿರೂಪಣೆ ಮಕ್ಕಳನ್ನು ಸೆಳೆಯುತ್ತದೆ. ಇದರ ಜೊತೆಗೆ ಆಡಿಯೋದಲ್ಲಿ ಕೇಳುತ್ತಿರುವ ಸಾಲೇ ಹೈಲೈಟ್ ಆಗುತ್ತ ನಿರೂಪಕರ ಧ್ವನಿ ಜೊತೆಗೆ ಮಕ್ಕಳನ್ನು ಓದುವಂತೆ ಪ್ರೇರೇಪಿಸುತ್ತದೆ.

ರೀಡ್ ‌ಅಲಾಂಗ್ಸ್ ಅನ್ನು ವಿಶೇಷವಾಗಿ 3ರಿಂದ 8 ವರ್ಷದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೀಗೆ ಮಾಡುವುದರಿಂದ ಮಕ್ಕಳು ಅಕ್ಷರಗಳ ಗುರುತಿಸುವಿಕೆ ಮತ್ತು ಉಚ್ಛಾರಣೆಯನ್ನು ಏಕಕಾಲದಲ್ಲಿ ಕಲಿಯುತ್ತಾರೆ. ಜೊತೆಗೆ, ಭಾಷೆಯ ಮೇಲೂ ಹಿಡಿತ ಸಾಧಿಸಬಹುದು. ಸ್ಟೋರಿವೀವರ್, ಮೊನ್ನೆ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಆಚರಿಸಿದೆ. ಈಗ ಹೊಸ ವರ್ಷದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಬೈಲ್ (Braille) ಲಿಪಿಯಲ್ಲೂ ಪ್ರಥಮ್ ಬುಕ್ಸ್ ಪುಸ್ತಕಗಳು ಪ್ರಕಟವಾಗುತ್ತಿವೆ. -ಹೇಮಾ, ಪ್ರಥಮ್ ಬುಕ್ಸ್, ಬೆಂಗಳೂರು.

——-

‘ಶಾಲೆ ಇದ್ದಾಗ ಯಾವ ರೀತಿ ವಹಿವಾಟು ಆಗುತ್ತಿತ್ತೋ, ಆ ರೀತಿ ಈಗ ಇಲ್ಲ. ಮಕ್ಕಳೆಲ್ಲರೂ ಮನೆಯಲ್ಲಿದ್ದಾರೆ. ಮನೆಯಲ್ಲಿರುವ ಮಕ್ಕಳು ಪಠ್ಯಪುಸ್ತಕ ಓದುತ್ತಾರೆ ವಿನಾ ಇತರ ಪುಸ್ತಕಗಳ ಓದು ಕಡಿಮೆಯಾಗಿದೆ. ಹೆಚ್ಚಾಗಿ ಮಕ್ಕಳು ಆಯ್ದುಕೊಳ್ಳುವುದು ಸಾಹಸ ಕತೆಗಳು, ನಿಗೂಢ, ಕಾಮಿಕ್ಸ್ ಮತ್ತು ಪಂಚ ತಂತ್ರ ಕಥೆಗಳನ್ನು. ಇತ್ತೀಚೆಗೆ ನಾವು ‘ಗಿರಿಜಾ ಪರಸಂಗ’ ಆಡಿಯೊ ಬುಕ್ ಮತ್ತು ಇಬುಕ್ ತಂದಿದ್ದೇವೆ. ಕ್ರಮೇಣ ಬೇರೆ ಬೇರೆ ಆಡಿಯೊ ಮತ್ತು ಇಬುಕ್ ಗಳನ್ನು ಹೊರತರಲಿದ್ದೇವೆ. ಅದರಲ್ಲಿ ಮಕ್ಕಳಿಗೂ ಪಾಲಿದೆ.’

-ಪ್ರಕಾಶ್ ಕಂಬತ್ತಳ್ಳಿ, ಅಂಕಿತ ಪುಸ್ತಕ, ಬೆಂಗಳೂರು

—–

‘ಕೊರೊನಾ ಶುರುವಾದಾಗಿನಿಂದ ಮಕ್ಕಳ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗುತ್ತಾ ಬಂದಿದ್ದಕ್ಕೆ ಕಾರಣ ಲಾಕ್​ಡೌನ್​. ಎಲ್ಲಿದ್ದರೂ ಆನ್​ಲೈನ್​ ಶಾಲೆಯೇ ತಾನೇ ಎಂದು ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೊರಟುಬಿಟ್ಟರು. ಮೊದಲು ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಳೆಲ್ಲ ನಡೆಯುತ್ತಿದ್ದವು, ಅದರ ತಯಾರಿಗಾಗಿ ಪರವೂರುಗಳಿಂದ ಬಂದು ಇಲ್ಲಿ ನೆಲ ನಿಂತವರ ಮಕ್ಕಳು ಪಠ್ಯೇತರ ಪುಸ್ತಕಗಳನ್ನು ನಿರಂತರವಾಗಿ ಕೊಳ್ಳುತ್ತಿದ್ದರು. ಇನ್ನು ನಗರವಾಸಿ ಮಕ್ಕಳು ಕಥೆ, ವ್ಯಕ್ತಿತ್ವ ವಿಕಸನಕ್ಕೆ ಕುರಿತ ಪುಸ್ತಕಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ.

ಸ್ಪರ್ಧಾತ್ಮಕ ಜಗತ್ತಿಗೆ ಬೇಕಾಗಿರುವ ಸಕಾರಾತ್ಮಕ ಚಿಂತನೆಗಳಿಂದ ಕೂಡಿದ ಪುಸ್ತಕಗಳು, ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನಾವು ಮುಂದಿನ ಯೋಜನೆಗಳ ಮೂಲಕ ಪ್ರಕಟಿಸಲಿದ್ದೇವೆ.’

-ಆರ್. ದೊಡ್ಡೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಸಪ್ನಾ ಪ್ರಕಾಶನ, ಬೆಂಗಳೂರು.

——

‘ಪುಸ್ತಕ ವ್ಯಾಪಾರ ತುಂಬಾ ಚೆನ್ನಾಗಿದೆ ಅಂದರೆ ಉತ್ಪ್ರೇಕ್ಷೆ ಆಗಿ ಬಿಡುತ್ತದೆ. ಮಕ್ಕಳ ಪುಸ್ತಕ ಜನರಿಗೆ ತಲುಪುತ್ತಿಲ್ಲ. ಓದುಗರು ಪಾರಂಪರಿಕ ಪುಸ್ತಕಗಳನ್ನೇ ಕೊಳ್ಳುತ್ತಿದ್ದಾರೆಯೇ ಹೊರತು ಡಿಜಿಟಲ್ ಪುಸ್ತಕಗಳತ್ತ ಒಲವು ಕಡಿಮೆ. ಯಾಕೆಂದರೆ ಯಾವುದೇ ಡಿವೈಸ್ ಅಥವಾ ಮೊಬೈಲ್ ನಲ್ಲಿ ತುಂಬಾ ಪುಟಗಳನ್ನು ಓದಲು ಸಾಧ್ಯವಿಲ್ಲ. ಪುಸ್ತಕ ಡೌನ್​ಲೋಡ್​ ಮಾಡಿಕೊಳ್ಳುತ್ತಾರೆ, ಆದರೆ ಓದುವ ಆಸಕ್ತಿ? ಮೊಬೈಲ್​ನಲ್ಲಿ ಪುಸ್ತಕ ಓದಿ ಎಂದು ಮಕ್ಕಳಿಗೆ ಕೊಟ್ಟರೆ ಸ್ಪಲ್ಪ ಹೊತ್ತು ಓದಬಹುದು. ಆಮೇಲೆ ಬೇರೊಂದು ನೋಟಿಫಿಕೇಷನ್ ಬಂದರೆ ಗಮನ ಆ ಕಡೆಗಿರುತ್ತದೆ. ಪುಸ್ತಕಗಳು ಹಾಗಲ್ಲ. ಅವು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ಮಕ್ಕಳು ಪುಸ್ತಕ ಓದಿನತ್ತ ಗಮನ ಹರಿಸಬೇಕು ಅಂದರೆ ಸರ್ಕಾರವೂ ಅದಕ್ಕೆ ಪ್ರೋತ್ಸಾಹ ನೀಡಬೇಕು. ಈ ಹಿಂದೆ ಮಕ್ಕಳಿಗೆ ಶಾಲೆಯಲ್ಲಿ ಪಠ್ಯೇತರ ಪುಸ್ತಕಗಳನ್ನು ಓದಿಸುವ ಅಭ್ಯಾಸ ಇತ್ತು. ಈಗ ಅದು ಇಲ್ಲ. ಕಪ್ಪು ಹಲಗೆ, ಸರ್ವ ಶಿಕ್ಷಣ ಅಭಿಯಾನದಂತ ಕಾರ್ಯಕ್ರಮಗಳು ಇದ್ದವು. ಆದರೆ ಈಗ ಏನಾಗುತ್ತಿದೆ? ಮಕ್ಕಳಿಗೆ ಓದುವ ರುಚಿ ಹತ್ತಿಸುವ ಕಾರ್ಯಕ್ರಮವನ್ನು ಸರ್ಕಾರ ಮಾಡಬೇಕು. ಶಾಲಾ ದಿನಗಳಿಂದಲೇ ಈ ರೀತಿ ಕಾರ್ಯ ಯೋಜನೆ ಮಾಡಿದರೆ ಮಕ್ಕಳು ಪುಸ್ತಕಗಳತ್ತ ಒಲವು ತೋರುತ್ತಾರೆ.’ -ನಾಗೇಶ್, ಸೃಷ್ಟಿ ಪ್ರಕಾಶನ, ಬೆಂಗಳೂರು

ಓದು ಮಗು ಓದು : ಕನ್ನಡದ ಪ್ರಕಾಶಕರೇ ಇತ್ತ ಒಮ್ಮೆ ಗಮನಿಸಿ…

Published On - 7:50 pm, Sun, 17 January 21

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್