New Book: ಶೆಲ್ಫಿಗೇರುವ ಮುನ್ನ; ರಾಜಲಕ್ಷ್ಮೀ ಕೋಡಿಬೆಟ್ಟು ಅನುವಾದಿಸಿದ ದೇವಕಿ ಜೈನ್ ‘ಹಿತ್ತಾಳೆ ಬಣ್ಣದ ಪುಸ್ತಕ’

|

Updated on: Mar 22, 2022 | 9:50 AM

The Brass Notebook by Devaki Jain : ತನ್ನ ಪತ್ನಿಯ ಕುರಿತಾಗಿ ತನಗಿರುವ ಕರ್ತವ್ಯ, ಪ್ರೇಯಸಿಯಡೆಗಿನ ಅತೀವ ಆಸಕ್ತಿ ನಡುವೆ ಒಬ್ಬ ಮನುಷ್ಯ ತೊಳಲಾಡುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಅವನಿಗೆ ವಿವೇಕವು ಒಂದು ರೀತಿಯ ಪ್ರೇರಣೆ ನೀಡಿದರೆ, ಮೋಹದ ಮೇಲಿನ ಆಸೆಯು ಮಗದೊಂದು ರೀತಿಯ ಪ್ರೇರಣೆ ನೀಡುವುದು.

New Book: ಶೆಲ್ಫಿಗೇರುವ ಮುನ್ನ; ರಾಜಲಕ್ಷ್ಮೀ ಕೋಡಿಬೆಟ್ಟು ಅನುವಾದಿಸಿದ ದೇವಕಿ ಜೈನ್ ‘ಹಿತ್ತಾಳೆ ಬಣ್ಣದ ಪುಸ್ತಕ’
ಲೇಖಕಿ ರಾಜಲಕ್ಷ್ಮೀ ಕೋಡಿಬೆಟ್ಟು
Follow us on

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

 

ಕೃತಿ: ಹಿತ್ತಾಳೆ ಬಣ್ಣದ ಪುಸ್ತಕ
ಮೂಲ: ದೇವಕಿ ಜೈನ್
ಕನ್ನಡಕ್ಕೆ: ರಾಜಲಕ್ಷ್ಮೀ ಕೋಡಿಬೆಟ್ಟು
ಪುಟ: 244
ಬೆಲೆ: ರೂ. 270
ಮುಖಪುಟ ವಿನ್ಯಾಸ: ಸೌಮ್ಯಾ ಕಲ್ಯಾಣಕರ್

ಆಕ್ಸ್​ಫರ್ಡ್​ನಲ್ಲಿ ಓದುತ್ತಿದ್ದ ಯುವತಿ ದೇವಕಿ, ಇಲ್ಲಿನ ಮಾರ್ಗಪ್ರವರ್ತಕ ಶಿಕ್ಷಣ ತಜ್ಞರ ಜೊತೆಗೆ ಬಹಳ ಆಪ್ತವಾಗಿದ್ದಳು. ಐರಿಸ್ ಮರ್ಡೋಕ್​ರಿಂದ ಹಿಡಿದು, ಜೆನ್ನಿಫರ್ ಹಾರ್ಟ್ ಸೇರಿದಂತೆ ಇನ್ನೂ ಅನೇಕರ ಜೊತೆ, ಗಮನಾರ್ಹ ಸಾಧನೆಗಳನ್ನು ಮಾಡಿದ ಅದ್ಭುತ ವ್ಯಕ್ತಿಗಳ ಉತ್ತಮ ಗೆಳತಿಯಾಗಿದ್ದಳು. ಗ್ಲೋರಿಯಾ ಸ್ಟೆಂನೆಮ್ ಜೊತೆಗೆ ಅವಳು ಸ್ತ್ರೀವಾದದ ಪರಿಕಲ್ಪನೆಗಳಿಗೆ ಸಂಬಂಧಿಸಿದ ಕೆಲಸ ಮಾಡಿದಳು. ಜಗತ್ತಿನಲ್ಲಿ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಚನೆಯಾದ ದಕ್ಷಿಣ ದೇಶಗಳ ಆಯೋಗ (ಸೌತ್ ಕಮಿಷನ್)ದ ಸದಸ್ಯೆಯಾಗುವಂತೆ ಜೂಲಿಯಸ್ ನೈರೆರೆ ಅವರು ದೇವಕಿಯನ್ನು ಪ್ರೋತ್ಸಾಹಿಸಿದ್ದರು. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ, ಡೆಸ್‌ಮಂಡ್ ಟುಟು ಮತ್ತು ಇನ್ನೂ ಅನೇಕ ರಾಜಕೀಯ ನಾಯಕರ ಜೊತೆಗೆ ಕೆಲಸ ಮಾಡಿದಳು.
ಅಮರ್ತ್ಯ ಸೇನ್, ಆರ್ಥಿಕ ತಜ್ಞ

ಹಿತ್ತಾಳೆಯು ಚಿನ್ನಕ್ಕಿಂತ ಸಹಿಷ್ಣುವಾದ ಮನೆವಾರ್ತೆಯ ಲೋಹ. ಅದು ಪರಿಪೂರ್ಣತೆಯನ್ನೋ, ಅಥವಾ ಒಗ್ಗಟ್ಟನ್ನೋ ಪ್ರತಿನಿಧಿಸುವುದಿಲ್ಲ, ತನ್ನದೇ ಆದ ಮಿತಿಗಳೊಡನೆ ಹೊಂದಿಕೊಂಡು ಹೋಗಬಲ್ಲ ಒಂದು ಗೌರವಯುತ ಹಾಗೂ ಸ್ಥಿರವಾದ ಅಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ. ನನ್ನ ಕಥೆಗೆ ಬಹುಮಟ್ಟಿಗೆ ಹೊಂದಬಲ್ಲ ಸಂಚಯ ಕೋಶದಂತೆ.
ದೇವಕಿ ಜೈನ್, ಲೇಖಕಿ

(ಆಯ್ದ ಭಾಗ)

ಒಂದು ಘಟನೆ ನನ್ನ ನೆನಪಿನಲ್ಲಿ ಕೊರೆದಿಟ್ಟ ಶಿಲ್ಪದಂತೆ ನಿಂತುಬಿಟ್ಟಿದೆ. ಐರಿಸ್ ನನ್ನ ವಾರದ ಪ್ರಬಂಧಕ್ಕಾಗಿ ವಿಷಯವೊಂದನ್ನು ಕೊಟ್ಟಿದ್ದರು. ‘Reason is, and ought only to be, the slave of the passions…’ (Alexander Hume) ಇಂಥದ್ದು ಆ ಕಾಲದಲ್ಲಿ ಆಕ್ಸ್​ಫರ್ಡ್​ನಲ್ಲಿದ್ದ ಆಕೆಯ ಸಹೋದ್ಯೋಗಿಗಳಂತೆಯೇ ಐರಿಸ್ ಕೂಡ ವಿಚಾರ ಮತ್ತು ಭಾವತೀವ್ರತೆಗೆ ಸಂಬಂಧಿಸಿದಂತೆ ಕೃತಿಗಳಿಂದ ಭಾರೀ ಪಾರಿಭಾಷಿಕ ಪದಗಳ ಅಮೂರ್ತತೆಯನ್ನು ಇಷ್ಟಪಡುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅವರು ಸ್ವತಂತ್ರ ಕಾದಂಬರಿಕಾರ್ತಿಯಾಗುವ ಹಾದಿಯಲ್ಲಿದ್ದರು. ಆ ಕಾಲದ ಫ್ರೆಂಚ್ ಕಾದಂಬರಿಕಾರ ಮತ್ತು ತತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ್, ಆಲ್ಬರ್ಟ್ ಕಮು ಮತ್ತು ಗೇಬ್ರಿಯಲ್ ಮಾರ್ಸೆ ಅವರ ಬರವಣಿಗೆಯ ಶೈಲಿಗೆ ಮಾರುಹೋಗಿದ್ದರು. ಆಕ್ಸ್​ಫರ್ಡ್​ನಲ್ಲಿ ಇಂತಹವರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಹಿರಿಮೆಯ ವ್ಯಕ್ತಿಯಾಗಿದ್ದರು. ನೀತಿಶಾಸ್ತ್ರದ ಪ್ರಾಧ್ಯಾಪಕರಾದ ಆರ್. ಎಂ. ಹೇರ್ ಅವರಂತಹ ಇತರ ಸಹೋದ್ಯೋಗಿಗಳು ಹೆಚ್ಚಾಗಿ ದೈನಂದಿನ ಭಾಷಾ ಪ್ರಯೋಗದ ಬಗ್ಗೆ, ತರ್ಕದ ನಿಕಟ ವಿಶ್ಲೇಷಣೆಯ ಬಗ್ಗೆ ಅದರಲ್ಲಿಯೂ ‘ought, right’ ಎಂಬ ಪದಗಳ ಬಳಕೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಇದಕ್ಕೆ ತದ್ವಿರುದ್ಧ ಎಂಬಂತೆ ಐರಿಸ್, ಮನಶ್ಯಾಸ್ತ್ರ ಮತ್ತು ಮನುಷ್ಯ ಪ್ರೇರಣೆಗಳ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ತವಕಿಸುತ್ತಿದ್ದರು.

ಒಮ್ಮೆ ಅವರು ಅಲೆಕ್ಸಾಂಡರ್ ಹ್ಯೂಮ್ಸ್ ಉದ್ದೇಶಪೂರ್ವಕವಾಗಿ ಪ್ರಚೋದನಕಾರಿಯಾಗಿ ನೀಡುವ ಹೇಳಿಕೆಯನ್ನು ಸ್ಪಷ್ಟಪಡಿಸಲು ಒಂದು ಉದಾಹರಣೆ ಕೊಡುವಂತೆ ನನಗೆ ಹೇಳಿದರು. ನಾನು ತಕ್ಷಣಕ್ಕೆ ನನ್ನ ಮನಸ್ಸಿಗೆ ಹೊಳೆದ ಉದಾಹರಣೆಯೊಂದನ್ನು ಬಹಳ ಕೌಶಲದಿಂದ ಮಂಡಿಸಿದೆ:

ತನ್ನ ಪತ್ನಿಯ ಕುರಿತಾಗಿ ತನಗಿರುವ ಕರ್ತವ್ಯ ಮತ್ತು ಪ್ರೇಯಸಿಯಡೆಗಿನ ಅತೀವ ಆಸಕ್ತಿ ನಡುವೆ ಒಬ್ಬ ಮನುಷ್ಯನು ತೊಳಲಾಡುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಅವನಿಗೆ ವಿವೇಕವು ಒಂದು ರೀತಿಯ ಪ್ರೇರಣೆ ನೀಡಿದರೆ, ಮೋಹದ ಮೇಲಿನ ಆಸೆಯು ಮಗದೊಂದು ರೀತಿಯ ಪ್ರೇರಣೆ ನೀಡುವುದು. ಆದರೆ ಮನುಷ್ಯನ ಆಳದಲ್ಲಿ ಬೇರುಬಿಟ್ಟಿರುವ ಭಾವತೀವ್ರತೆಯ ಬಲದ ಮುಂದೆ ಈ ವಿವೇಕದ ಬಲ ಎಷ್ಟರ ಮಟ್ಟಿಗೆ ಕೆಲಸ ಮಾಡೀತು..? ಆದಾಗ್ಯೂ ಈ ಸವಾಲುಗಳನ್ನು ಎದುರಿಸಿ ಅವನು ವಿವೇಕ ಮತ್ತು ಕರ್ತವ್ಯದ ಕರೆಗೆ ಓಗೊಟ್ಟು ಪತ್ನಿಯೆಡೆಗಿನ ನಿಷ್ಠೆಗೇ ಬದ್ಧನಾಗಿರುತ್ತಾನೆ ಎಂದಿಟ್ಟುಕೊಳ್ಳೋಣ. ಆಗ, ಕರ್ತವ್ಯಕ್ಕೆ ಬದ್ಧನಾಗಿರಬೇಕು ಎಂಬ ಅವನ ಭಾವತೀವ್ರತೆಯೇ ಇದಕ್ಕೆ ಬಲವಾದ ಪ್ರೇರಣೆಯಾಗಿದೆ ಎಂದು ಹೇಳಬೇಕಾಗುತ್ತದೆಯಲ್ಲವೇ? ಆಳದಲ್ಲಿ ಭಾವವೇ ಎಲ್ಲದರ ಹಿಂದಿನ ಪ್ರೇರಣಾ ಶಕ್ತಿ ಎನ್ನಬೇಕಾಗುತ್ತದೆ ಅಲ್ಲವೇ?

ನಾನು ಈ ರೀತಿ ಮಂಡಿಸಿದ ಪ್ರಬಂಧವನ್ನು ಓದಿ ಐರಿಸ್ ಅವರಿಗೆ ಬಹಳ ಮೆಚ್ಚುಗೆಯಾಯಿತು. ಅವರು ಕಾಲೇಜಿನಲ್ಲಿ ತಮಗಿರುವ ವರ್ಚಸ್ಸನ್ನು ಬಳಸಿ, ಆಕ್ಸ್​ಫರ್ಡ್​ನ ಭಾಷೆಯಲ್ಲಿ ಹೇಳುವುದಾದರೆ ನನಗೆ ಒಂದು ವಿದ್ಯಾರ್ಥಿ ವೇತನ ಕೊಡಿಸಲು ಪ್ರಯತ್ನಿಸಿದರು. ಅದರಿಂದ ಮತ್ತೆ ಕೆಲವು ತಿಂಗಳುಗಳ ಕಾಲಕ್ಕೆ ತಕ್ಕಷ್ಟು ಹಣಕಾಸಿನ ವ್ಯವಸ್ಥೆಯಾಯಿತು. ನನಗಿನ್ನೂ ಸರಿಯಾಗಿ ನೆನಪಿದೆ, ನಾನೊಮ್ಮೆ ಲೇಡಿ ಓಗಿಲ್ವೀ ಅವರ ಕೊಠಡಿಗೆ ಬಹಳ ಅಳುಕಿನಿಂದಲೇ ಹೋಗಿದ್ದೆ. ತಮ್ಮ ಡೆಸ್ಕಿನ ಮುಂದೆ ಏನೋ ಕೆಲಸದಲ್ಲಿ ಮುಳುಗಿದ್ದ ಅವರು ನನ್ನನ್ನು ಗಮನಿಸಿದ ಕೂಡಲೇ ಬಹಳ ಭರವಸೆಯ ದೃಷ್ಟಿಯಿಂದ ನೋಡುತ್ತ, ‘ನೀನೊಂದು ಅತ್ಯುತ್ತಮವಾದ ಪ್ರಬಂಧ ಮಂಡಿಸಿದ್ದಿ ಎಂದು ಮಿಸ್ ಮುರ್ಡೋಕ್ ಹೇಳಿದರು. ಅದರ ಬಗ್ಗೆ ಸ್ವಲ್ಪ ಹೇಳು’ ಎಂದರು. ನಾನು ನನ್ನ ವಾದವನ್ನು ಮತ್ತೊಮ್ಮೆ ಅವರ ಮುಂದೆ ಮಂಡಿಸಿದೆ.

ಇದನ್ನೂ ಓದಿ : New Book : ಶೆಲ್ಫಿಗೇರುವ ಮುನ್ನ ; ಉದ್ಯಮಿ ಹೇಮಾ ಹಟ್ಟಂಗಡಿ ‘ಗೂಡಿನಿಂದ ಬಾನಿಗೆ’ ಹಾರಿದ್ದನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದಾರೆ ಸಂಯುಕ್ತಾ ಪುಲಿಗಲ್

ನನ್ನ ವಿದ್ಯಾಭ್ಯಾಸಕ್ಕೆ ಒಂದು ಹಂತದಲ್ಲಿ ಟ್ರಸ್ಟ್​ನಿಂದ ಯಾವುದೇ ಅನುದಾನ ಬರದೇ ಇರುವ ಸ್ಥಿತಿ ನಿರ್ಮಾಣವಾದಾಗ, ಐರಿಸ್ ಮುಂದೆ ಬಂದು ತಮ್ಮ ಸ್ವಂತ ಹಣವನ್ನು ಬಳಸಿ ನನ್ನ ಕಾಲೇಜು ಶುಲ್ಕ ಭರಿಸಿದರು. ಅವರು ನಿಜವಾಗಿಯೂ ಒಬ್ಬ ಮುಕ್ತ ಮನೋಭಾವದ ಉಪನ್ಯಾಸಕಿ ಆಗಿದ್ದರು. ಅವರ ಸಹೋದ್ಯೋಗಿಗಳಿಗೆ ಪಾಶ್ಚಾತ್ಯ ನಾಗರಿಕತೆ ಮತ್ತು ಅದರ ಬೌದ್ಧಿಕ ಪರಂಪರೆ ಎಲ್ಲದರ ಮೇಲೂ ವಿಜಯ ಸಾಧಿಸಿದ್ದು ಎಂಬ ಧೋರಣೆಯಿದ್ದರೆ, ಐರಿಸ್ ಮಾತ್ರ ಉತ್ತಮ ವಿಚಾರಗಳು ಎಲ್ಲಿಂದಲೇ ಬರಲಿ, ಅದನ್ನು ಸ್ವೀಕರಿಸುವ ಮುಕ್ತ ಮನೋಭಾವ ಹೊಂದಿದ್ದರು. ಇನ್ನೂ ಒಂದು ವಿಷಯ ಹೇಳಬೇಕೆಂದರೆ, ತತ್ವಶಾಸ್ತ್ರದ ಅವರ ಇತರ ಸಹೋದ್ಯೋಗಿಗಳಿಗಿಂತ ಬಹಳ ಭಿನ್ನವಾಗಿ ಬೌದ್ಧ ಧರ್ಮದ ಬಗ್ಗೆ, ಗಾಂಧೀಜಿಯವರ ಬಗ್ಗೆ ಬಹಳ ಕುತೂಹಲಿಯಾಗಿದ್ದರು. ಅಹಂಕಾರವನ್ನು ಕಳಚಿಕೊಳ್ಳಬೇಕು ಎಂದು ಪ್ರತಿಪಾದಿಸುವ ಭಾರತೀಯ ಅಧ್ಯಾತ್ಮ ಪರಂಪರೆಯ ಬಗ್ಗೆ ಬಹಳ ಆಕರ್ಷಿತರಾಗಿದ್ದರು.

ಒಮ್ಮೆ ನಾವು ಹೀಗೇ ಮಾತನಾಡುತ್ತಿದ್ದಾಗ, ಜಿನೇವಾದ ತತ್ವಜ್ಞಾನಿ ರೂಸೋ ಹೆಸರು ಮತ್ತು ಅವನು ಮಂಡಿಸಿದ ಸಾಮೂಹಿಕ ಸಂಕಲ್ಪ ಪರಿಕಲ್ಪನೆ ಕುರಿತ ಪ್ರಸ್ತಾಪ ಬಂತು. ಸಾಮೂಹಿಕ ಸಂಕಲ್ಪ ಎಂದರೆ ಅದು ವೈಯಕ್ತಿಕ ಹಕ್ಕುಗಳ ಬದಲಿಗೆ ಸಮುದಾಯದ ಸದಸ್ಯರೆಲ್ಲರಿಗೆ ಹಕ್ಕುಗಳನ್ನು ನೀಡುವ ಪರಿಕಲ್ಪನೆಯಾಗಿರುತ್ತದೆ. ಆಗ ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯದ ಹಿತಾಸಕ್ತಿಯ ಬಗ್ಗೆ ಹೆಚ್ಚು ಒಲವಿರುತ್ತದೆ. ಜನರೂ ಕೂಡ ತಮ್ಮ ವೈಯಕ್ತಿಕ ಆಸಕ್ತಿಗಳ ಆದ್ಯತೆಗಳನ್ನು ಮೀರಿ ಯೋಚಿಸುವುದನ್ನು ಕಲಿಯುತ್ತಾರೆ. ಆದರೆ ಈ ಪರಿಕಲ್ಪನೆಯು ಒಂದು ಐತಿಹಾಸಿಕ ನಿರ್ಮಿತಿ ಎಂದು ಐರಿಸ್ ಭಾವಿಸಿದ್ದರು. ಅವರ ಮಾತುಗಳನ್ನು ಕೇಳಿದ ನಾನು, ಭಾರತದಲ್ಲಿ ವಿನೋಬಾ ಭಾವೆಯವರ ಭೂದಾನ ಚಳವಳಿಯ ಕುರಿತು ವಿವರಿಸಿದೆ. ‘ಭಾರತದಲ್ಲೊಬ್ಬ ವ್ಯಕ್ತಿ ದೇಶದ ಉದ್ದಗಲಕ್ಕೆ ಸಂಚರಿಸಿ, ಭೂಮಿ ಉಳ್ಳವರು, ಭೂಮಿ ಇಲ್ಲದವರಿಗೆ ದಾನ ಮಾಡಬೇಕು ಎಂಬ ಬೃಹತ್ ಅಭಿಯಾನ ನಡೆಸಿದರು. ಭೂಮಿಯ ಒಡೆತನವನ್ನು ಸಾಮೂಹಿಕವಾಗಿ ಹೊಂದಿರಬೇಕು ಎಂದು ಕರೆ ನೀಡಿದ್ದರು. ಅಂದರೆ ಅದರರ್ಥ ಸಾಮೂಹಿಕ ಪರಿಕಲ್ಪನೆಯೇ ಆಗಿದೆ’ ಎಂದು ನನ್ನ ಅನುಭವದ ಮಾತುಗಳನ್ನು ಹೇಳಿದೆ.

ರೂಸೋ ಪರಿಕಲ್ಪನೆಯೊಂದಿಗೆ ಭೂದಾನ ಚಳವಳಿಯನ್ನು ಸಮೀಕರಿಸಿ ನಾನು ಆಡಿದ ಮಾತುಗಳನ್ನು ಅವರು ತೆಗೆದುಹಾಕಲಿಲ್ಲ. ನಿಜಕ್ಕೂ ಕಾಲೇಜಿನ ಇತರ ಬೋಧಕರಾಗಿದ್ದರೆ ನನ್ನ ಈ ಹೋಲಿಕೆಯನ್ನು ನಿರಾಕರಿಸಿಬಿಡುತ್ತಿದ್ದರೇನೋ. ಆದರೆ ಐರಿಸ್ ಭೂದಾನ ಚಳವಳಿಯ ಬಗ್ಗೆ ಇನ್ನಷ್ಟು ವಿವರಿಸುವಂತೆ ಹೇಳಿದರು. ನನ್ನ ಮಾತುಗಳನ್ನೆಲ್ಲ ಆಲಿಸಿದ ಮೇಲೆ ಮುಂದೊಂದು ದಿನ ಭಾರತಕ್ಕೆ ಭೇಟಿ ನೀಡಿ, ವಿನೋಬಾ ಬಾವೆ ಜೊತೆ ಹೆಜ್ಜೆ ಹಾಕಬೇಕು ಎಂದು ಹೇಳಿದರು. ತನಗೆ ಗೊತ್ತಿಲ್ಲದ ಹೊಸ ವಿಚಾರಗಳನ್ನು ಕಲಿಯಲು ಅವರು ವಿನಮ್ರತೆಯಿಂದ ಸದಾ ಸಿದ್ಧರಾಗಿದ್ದರು. ಅವರು ಸಾಧಿಸಿದ್ದ ಬೌದ್ಧಿಕ ಉನ್ನತಿಯ ವಲಯದಲ್ಲಿ ಈ ರೀತಿಯ ನಡವಳಿಕೆಯು ಅಪರೂಪದ್ದಾಗಿತ್ತು.

ಭಾರತ ದೇಶ. ಭಾರತದಲ್ಲಿನ ಹಿಂದುತ್ವ , ಬೌದ್ಧಧರ್ಮ , ಅಧ್ಯಾತ್ಮ ಮತ್ತು ತತ್ವಜ್ಞಾನ ಪರಂಪರೆಯ ಕುರಿತು ಐರಿಸ್ ಮರುಳಾಗಿದ್ದರು. ಆದ್ದರಿಂದ ಅವರು ಭಾರತದತ್ತ ಬಹಳ ಆಕರ್ಷಿತರಾಗಿದ್ದರು. ಹಲವು ವರ್ಷಗಳ ಬಳಿಕ ಅವರ ಈ ಕನಸು ನನಸಾಗಲು ಅವಕಾಶವೊಂದು ಲಭ್ಯವಾಯಿತು. ಇಂದಿರಾಗಾAಧಿ ಅವರು ಪ್ರಧಾನಿಯಾಗಿದ್ದಾಗ ದುಂಡುಮೇಜಿನ ಸಭೆಗೆ ಜಗತ್ತಿನ ವಿವಿಧೆಡೆಗಳಿಂದ ಶ್ರೇಷ್ಠ ಬುದ್ಧಿಜೀವಿಗಳನ್ನು ಆಹ್ವಾನಿಸಲಾಗಿತ್ತು ಹೀಗೆ ಆಹ್ವಾನಿತರಾದವರಲ್ಲಿ ಐರಿಸ್ ಕೂಡ ಒಬ್ಬರು.

(ಪುಸ್ತಕದ ಖರೀದಿಗೆ: 9449174662)

ಇದನ್ನೂ ಓದಿ : ಶೆಲ್ಫಿಗೇರುವ ಮುನ್ನ; ‘ಪುನೀತ್ ರಾಜಕುಮಾರ್; ಮುಗ್ಧ ನಗುವೊಂದರ ಕಣ್ಮರೆ’ ಕೃತಿ ಮಾರ್ಚ್ 17ರಿಂದ ಲಭ್ಯ

Published On - 9:18 am, Tue, 22 March 22