New Book : ಶೆಲ್ಫಿಗೇರುವ ಮುನ್ನ ; ಉದ್ಯಮಿ ಹೇಮಾ ಹಟ್ಟಂಗಡಿ ‘ಗೂಡಿನಿಂದ ಬಾನಿಗೆ’ ಹಾರಿದ್ದನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದಾರೆ ಸಂಯುಕ್ತಾ ಪುಲಿಗಲ್

Lift Off - Transforming Conzerv : ‘ಉತ್ಪನ್ನದ ಬೆಲೆ ಅದಕ್ಕಾಗಿ ಬಳಸಿದ್ದ ತಂತ್ರಾಂಶವನ್ನು ಸೇರಿ ನಿಗದಿಯಾಗಿದೆ ಎಂದು ವಿವರಿಸಲು ಪ್ರಯತ್ನಿಸಿದರೆ ನನ್ನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ತೊಡೆಯನ್ನು ತಟ್ಟಿಕೊಂಡು, ಈ ತಮಾಷೆ ನೋಡುತ್ತಿದ್ದ ಮತ್ತೊಬ್ಬ ಕಿರಿಯ ಜೊತೆಗಾರನಿಗೆ, "ನೋಡಿದೆಯಾ, ನಾನು ಹೇಗೆ ಅವಳನ್ನು ಹಿಡಿದುಹಾಕಿದೆ. ಅವಳು ನಮಗೆ ಮೋಸ ಮಾಡುತ್ತಿದ್ದಾಳೆ" ಎಂದು ಕೇಕೆ ಹಾಕಿ ನಗತೊಡಗಿದ.’ ಹೇಮಾ ಹಟ್ಟಂಗಡಿ

New Book : ಶೆಲ್ಫಿಗೇರುವ ಮುನ್ನ ; ಉದ್ಯಮಿ ಹೇಮಾ ಹಟ್ಟಂಗಡಿ ‘ಗೂಡಿನಿಂದ ಬಾನಿಗೆ’ ಹಾರಿದ್ದನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದಾರೆ ಸಂಯುಕ್ತಾ ಪುಲಿಗಲ್
ಅನುವಾದಕಿ ಸಂಯುಕ್ತಾ ಪುಲಿಗಲ್
Follow us
ಶ್ರೀದೇವಿ ಕಳಸದ
|

Updated on:Oct 22, 2021 | 4:55 PM

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com 

ಕೃತಿ : ಗೂಡಿನಿಂದ ಬಾನಿಗೆ (ವಿದ್ಯುತ್ ಉದ್ದಿಮೆಯಲ್ಲಿ ಸೆಣೆಸಿ ಗೆದ್ದ ಹೆಣ್ಣೊಬ್ಬಳ ಸಾಹಸದ ಕಥೆ) ಮೂಲ : ಹೇಮಾ ಹಟ್ಟಂಗಡಿ, ಆಶಿಶ್ ಸೇನ್ ಕನ್ನಡಕ್ಕೆ : ಸಂಯುಕ್ತಾ ಪುಲಿಗಲ್ ಪುಟ : 254  ಬೆಲೆ : ರೂ. 350 ಮುಖಪುಟ ವಿನ್ಯಾಸ : ಅಜಿತ್ ಕೌಂಡಿನ್ಯ ಪ್ರಕಾಶನ : ಮೈಲ್ಯಾಂಗ್ ಬುಕ್ಸ್, ಬೆಂಗಳೂರು

*

ದೆಹಲಿಯಲ್ಲಿ ಹುಟ್ಟಿ, ಧಾರವಾಡದಲ್ಲಿ ಓದಿ ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದ ಹೇಮಾ ಹಟ್ಟಂಗಡಿ ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್​ಗಳಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ. ಇವರ ಬದುಕಿನ ಅನುಭವ ಕಥನ Lift Off – Transforming Conzerv ಕೃತಿಯನ್ನು ಇದೀಗ ಕನ್ನಡಕ್ಕೆ ತಂದಿದ್ದಾರೆ ಅನುವಾದಕಿ ಸಂಯುಕ್ತಾ ಪುಲಿಗಲ್. ನವೆಂಬರ್ 1ರಂದು ನಿಮ್ಮ ಓದಿಗೆ ಲಭ್ಯವಾಗಲಿದೆ ಗೂಡಿನಿಂದ ಬಾನಿಗೆ.

*

ಭಾರತದಲ್ಲಿನ ಉದ್ಯಮ ಜಗತ್ತಿನ ಅನೇಕ ಅಡೆತಡೆಗಳನ್ನು ಎದುರಿಸುತ್ತಲೇ ಹೇಮಾ ಹಟ್ಟಂಗಡಿ ಮತ್ತು ಅವರ ಪತಿ ಅಶೋಕ್ ಅವರಿಗೆ ಕನ್ಸರ್ವ್​ನಂತಹ ಅಸಾಧಾರಣ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಗಿದೆ. ಈ ಕಥೆಯು ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಒಂದು ದಾರಿದೀಪವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಮೆರಿಕಾದ ಬಾಬ್ಸನ್ ಕಾಲೇಜಿನ ಪಠ್ಯದಲ್ಲಿ ಹೇಮಾ ಅವರ ಕನ್ಸರ್ವ್ ಕಟ್ಟಿದ ಕಥೆಯನ್ನು ಸೇರಿಸಿಕೊಂಡಿದ್ದೆವು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪ್ರಕಟಿಸಿದ ಈ ಕಥೆಯನ್ನು Creating and Leading Effective Organisation ಎಂಬ ಎಂಬಿಎ ತರಗತಿಗಾಗಿ ಅಳವಡಿಸಿಕೊಂಡಿದ್ದೆವು. ಜೆ. ಬಿ. ಕಸಾರ್ಜಿಯನ್ ಅಮೆರಿಕಾದ ಬಾಬ್ಸನ್ ಕಾಲೇಜಿನ ನಿರ್ವಾಹಕ ಪ್ರಾಧ್ಯಾಪಕರು

ಒಂದು ಸಂಸ್ಥೆಯನ್ನು ನಡೆಸುವ ಯಾವ ಹಿನ್ನೆಲೆ-ಅನುಭವಗಳೂ ಇರದ ಸಾಧಾರಣ ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಪುರುಷ ಪಾರಮ್ಯದ ಉದ್ಯಮದಲ್ಲೂ ಕೋಟಿಗಟ್ಟಲೆ ಬೆಲೆಬಾಳುವ ಸಂಸ್ಥೆಯನ್ನು ಮೌಲ್ಯಯುತವಾಗಿ ಪ್ರಾಮಾಣಿಕವಾಗಿ ಆತ್ಮವಿಶ್ವಾಸದಿಂದ ಕಟ್ಟಿ ಬೆಳೆಸಬಲ್ಲಳು ಎಂಬುದಕ್ಕೆ ಹೇಮಾ ಅವರ ಈ ಕಥೆ ಉತ್ತಮ ನಿದರ್ಶನವಾಗಿದೆ. ತೀವ್ರತರವಾದ ನಷ್ಟಗಳನ್ನು ಅನುಭವಿಸಿ ಮುಳುಗಿಹೋಗುತ್ತಿರುವ ಸಣ್ಣ ಕೌಟುಂಬಿಕ ಸಂಸ್ಥೆಯೊಂದು ಹೇಮಾ ಅವರ ಆರೈಕೆಯ ನೆರಳಿನಲ್ಲಿ ಪಳಗಿ ಜಾಗತಿಕ ಮಟ್ಟಕಕ್ಕೇರಿ ಶ್ನೇಡರ್ ಎಲೆಕ್ಟ್ರಿಕ್ ನಂತಹ ಬಹುರಾಷ್ಟ್ರೀಯ ದೈತ್ಯದ ಗಮನ ಸೆಳೆಯುವ ಅದ್ಭುತವು ಈ ಪುಸ್ತಕದ ಮೂಲಕ ನಮಗೆ ಅನುಭವವಾಗುತ್ತದೆ. ಸಮಾಜದ ಎಲ್ಲ ಸ್ಥರದ ಜನತೆಗೂ (ಪುರುಷರನ್ನೂ ಸೇರಿಸಿ) ಈ ಪುಸ್ತಕದಲ್ಲಿ ಹಲವಾರು ಒಳನೋಟಗಳು, ಪಾಠಗಳು ಇವೆ. ಈ ಪುಸ್ತಕದ ಅನುವಾದ ನನಗೆ ಅಗಾಧ ಪ್ರಯೋಜನದ ಜೊತೆಗೆ ಆನಂದವನ್ನೂ ಉಂಟು ಮಾಡಿದೆ ಸಂಯುಕ್ತಾ ಪುಲಿಗಲ್, ಅನುವಾದಕಿ

*

ನನ್ನ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಅದಾಗಿತ್ತು

ಸಂಸ್ಥೆಯನ್ನು ಮರಳಿ ಕಟ್ಟುವ ಹೊಸ ಅಧ್ಯಾಯದಲ್ಲಿ ನನ್ನ ಮೊಟ್ಟ ಮೊದಲ ಹೆಜ್ಜೆಯು ಉತ್ಪನ್ನಗಳ ಬಗ್ಗೆ ಅರಿತುಕೊಂಡು ಅದನ್ನು ಮಾರಾಟ ಮಾಡುವುದಾಗಿತ್ತು. ಅಶೋಕರಿಂದ ನಾನು ವಿದ್ಯುಚ್ಛಕ್ತಿಯ ಪಾಠಗಳನ್ನು ಕಲಿತು, ಬಿ. ಎಲ್. ಥೆರಾಜಾ ಅವರ ವಿದ್ಯುತ್ ತಂತ್ರಜ್ಞಾನದ ಕುರಿತಾದ ‘ Textbook of Electrical Technology’ ಪುಸ್ತಕವನ್ನು ಓದಿದೆ. ನಮ್ಮ ಉತ್ಪನ್ನಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಕ್ಷಮತೆಯ ಬಗ್ಗೆ ಅರಿತು ಅವು ಅನಲಾಗ್ ಮಾಪನಗಳಿಗಿಂತ ಹೇಗೆ ಭಿನ್ನ ಮತ್ತು ಉತ್ತಮ ಎಂಬುದನ್ನು ಅರಿಯಲು ನಾನು ಹರಸಾಹಸ ಪಟ್ಟೆ. ವಿದ್ಯುಚ್ಛಕ್ತಿಯ ಬಳಕೆಯನ್ನು ಅಳೆಯಲು ಮತ್ತು ನಿಯಂತ್ರಿಸಲು ನಮ್ಮ ಮಾಪನಗಳ ನಿಖರತೆ ಮತ್ತು ಅಳೆಯುವ ಸಾಮರ್ಥ್ಯದ ಮಹತ್ವ ನನಗೆ ಅರಿವಾಯಿತು.

ಎಲ್ಲಕ್ಕಿಂತ ದೊಡ್ಡ ಸವಾಲು ನಾನು ಕಲಿತ ಈ ಎಲ್ಲಾ ತಿಳುವಳಿಕೆಯನ್ನು ಒಂದು ಪರಿಣಾಮಕಾರಿಯಾದ ಪ್ರಚಾರತಂತ್ರವಾಗಿಸಿ ನಮ್ಮ ಸಂಸ್ಥೆಯ ಬಗ್ಗೆ ಹೆಚ್ಚೇನು ತಿಳಿದಿರದ ಡೀಲರುಗಳ ಮನವೊಲಿಸುವುದಕ್ಕೆ ಬಳಸುವುದರಲ್ಲಿತ್ತು.

ಈ ಕೊಡು-ಕೊಳ್ಳುವಿಕೆಯ ಕಷ್ಟದ ಮಾತುಕತೆಯೆಲ್ಲ ವಿದ್ಯುಚ್ಛಕ್ತಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ಅಂಗಡಿ, ಮುಂಗಟ್ಟುಗಳಲ್ಲಿ ನಡೆಸಬೇಕಾಗಿತ್ತು. ಅಂತಹ ಪ್ರದೇಶಗಳಲ್ಲಿ ಮುಖ್ಯವಾದದ್ದು ಬೆಂಗಳೂರಿನ ಸದಾ ಕಾರ್ಯನಿರತವಾಗಿರುವ ಎಸ್.ಜೆ.ಪಿ ರಸ್ತೆ. ನಗರಪಾಲಿಕೆಯ ಕೂಗಳತೆಯಲ್ಲಿದ್ದರೂ ಆ ಪ್ರದೇಶವು ಅಲ್ಲಿನ ಕೊಳಕು, ಕೊಳೆತು ನಾರುವ ವಾಸನೆ, ಶಬ್ದಮಾಲಿನ್ಯ ಎಲ್ಲಕ್ಕೂ ಹೆಸರುವಾಸಿಯಾಗಿತ್ತು. ಸದಾ ಜನಜಂಗುಳಿಯ ಸಣ್ಣ ಸಣ್ಣ ಚಿಲ್ಲರೆ ಅಂಗಡಿಗಳು, ನಡುವೆ ಸಂದುಗೊಂದುಗಳಲ್ಲಿ ಕಂಡುಬರುವ ಹೋಟೆಲುಗಳು  ಒಂದಕ್ಕೊಂದು ಭುಜ ತಾಕಿಸಿಕೊಂಡಿದ್ದವು. ಮುರಿದ ಕಟ್ಟಡಗಳು, ಜಗಿದ ಎಲೆಯಡಿಕೆಯುಗಿದ ಕಲೆಗಳ ಗೋಡೆಗಳು ಅಲ್ಲಿ ಎಲ್ಲಿ ನೋಡಿದರಲ್ಲಿದ್ದವು. ವಾತಾವರಣವು ಹೊಗೆ ಮತ್ತು ಮಾಲಿನ್ಯದಿಂದ ತುಂಬಿ ತುಳುಕಿತ್ತು. ಅದಕ್ಕೇ ಇರಬೇಕು ಎಸ್.ಜೆ.ಪಿ ರಸ್ತೆಯನ್ನು ಬೆಂಗಳೂರಿನ “ಧೂಳಿನ ಬಟ್ಟಲು” ಎಂದು ಕರೆಯುತ್ತಾರೆ.

ಇಲ್ಲಿ ಎದುರಾಗುವ ಸವಾಲುಗಳು ನನ್ನ ಎಣಿಕೆ ಮೀರಿದ್ದಾಗಿತ್ತು. “ಡಿಜಿಟಲ್ ವಿದ್ಯುದುತ್ಪನ್ನಗಳನ್ನು ಉಪಯೋಗಿಸಿ. ವಿದ್ಯುತ್ ಉಳಿಸಲು ಹೆಚ್ಚು ನಿಖರತೆ ಮತ್ತು ವಿವರಗಳು ಮುಖ್ಯ. ಹೆಚ್ಚು ವಿದ್ಯುತ್ ಉಳಿಸಿ, ಖರ್ಚು ಕಡಿಮೆ ಮಾಡಲು ವಿದ್ಯುಚ್ಛಕ್ತಿಯನ್ನು ನಾವು ಅಳತೆ ಮಾಡಬೇಕೇ ಹೊರತು ವಿದ್ಯುತ್ ಪ್ರವಾಹ ಮತ್ತು ಅದರ ವೋಲ್ಟೇಜ್ ಅನ್ನು ಅಲ್ಲ” ಎನ್ನುವ ಸಂದೇಶವನ್ನು ನಾನು ತಲುಪಿಸುವ ವಿಧಾನವನ್ನೂ ಕಂಡು ಹಿಡಿಯಬೇಕಾಗಿತ್ತು. ಮುಖ್ಯವಾಗಿ ಇಪ್ಪತ್ತು ಚಿಲ್ಲರೆ ವರ್ಷಗಳ, ಇಂಜಿನಿಯರಲ್ಲದ, ಪುರುಷನಲ್ಲದ – ನಾನು, ಈ ಕೆಲಸವನ್ನು ನಿರೂಪಿಸಬೇಕಾಗಿತ್ತು! ನೆನಪಿರಲಿ, ನಾನು ಮಾತನಾಡುತ್ತಿರುವುದು ಕಾಲು ಶತಮಾನದ ಹಿಂದಿನ ದಿನಗಳ ಕುರಿತು.

Shelfigeruva Munna Goodinindha Baanige Hema Hattangadi Ashish Sen Samyuktha Puligal Mylang Books

ಇ ಬುಕ್, ಆಡಿಯೋ ಬುಕ್​ನಲ್ಲಿಯೂ ಲಭ್ಯ

ನಾನು ಅಪಹಾಸ್ಯ, ಸಿನಿಕತೆಗೆ ಒಳಗಾದೆ. ಕೆಲವು ಕಡೆ ಖಡಾಖಂಡಿತ ನಿರಾಕರಣೆಗೆ ತುತ್ತಾದೆ. ಬೆಂಕಿಯಲ್ಲಿ ಬೇಯುವಂತಹ ಸ್ಥಿತಿ ನನ್ನದಾಗಿತ್ತು. ಸಂಸ್ಥೆಯೊಂದಕ್ಕೆ ಬ್ರಾಂಡಿಂಗ್ ಎಷ್ಟು ಮುಖ್ಯ ಅನ್ನುವುದು ನನಗೆ ಅಂದು ನಿಚ್ಚಳವಾಗಿತ್ತು. ಬ್ರ್ಯಾಂಡ್ ಕಟ್ಟುವುದು, ಬೆಳೆಸುವುದು, ಅದು ಗ್ರಾಹಕರಿಗೆ ನೀಡುವ ಭರವಸೆಯನ್ನು ಈಡೇರಿಸುವುದು ಇವುಗಳೆಲ್ಲದರ ಮಹತ್ವ ನನಗೆ ಚೆನ್ನಾಗಿ ಮನದಟ್ಟಾಯಿತು. “ನೀವು ಹೇಳುವುದೆಲ್ಲ ಸರಿ. ಆದರೆ ಯಾವ ಸಂಸ್ಥೆ ನಿಮ್ಮದು? ಎಂದೂ ಕೇಳೇ ಇಲ್ಲ? ನೀವೊಬ್ಬ ಇಂಜಿನಿಯರೇ? ಒಬ್ಬ ಹುಡುಗಿ ಈ ವ್ಯವಹಾರದಲ್ಲಿ ಹೇಗೆ ಇಳಿದಿದ್ದಾಳೆ? ನಿಮ್ಮ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಗಂಡಸರು ಯಾರೂ ಇಲ್ಲವಾ?” ಎಂಬಿತ್ಯಾದಿ ಪ್ರಶ್ನೆಗಳನ್ನು ದಿನಂಪ್ರತಿ ಕೇಳಬೇಕಾಗಿತ್ತು.

ಈ ಎಲ್ಲ ಅನಗತ್ಯ ಪ್ರಶ್ನೆಗಳ ನಂತರ ಉತ್ಪನ್ನಗಳ ಕುರಿತ ಪ್ರಶ್ನೆಗಳು ಹೀಗಿದ್ದವು: “ನಾವು ಒಂದು ಡಿಜಿಟಲ್ ಮಾಪನವನ್ನು ಮಾರುವ ಕಡೆ ಒಂಬತ್ತು ಅನಲಾಗ್ ಮಾಪನವನ್ನು ಮಾರಾಟ ಮಾಡುತ್ತೇವೆ. ಡಿಜಿಟಲ್ ಮಾಪನಗಳಿಂದ ನಮಗೇನು ಲಾಭ? ನೀವು ಹೇಳುವ ಆ ನಿಖರತೆ, ಮಾಹಿತಿಗಳನ್ನು ಇಟ್ಟುಕೊಂಡು ನಾವೇನು ಮಾಡುವುದು? ನಿಖರತೆ ಕಡಿಮೆಯಾದಷ್ಟೂ ಬೆಲೆ ಕಡಿಮೆಯಾಗುತ್ತದೆ! ಬಳಕೆದಾರರಿಗೆ ವಿದ್ಯುತ್ ಪ್ರವಾಹ ಮತ್ತು ವೋಲ್ಟೇಜ್ ಮಾಪನ ಸಾಕಾಗಿರುವಾಗ ನಾವು ವಿದ್ಯುಚ್ಛಕ್ತಿ ಮತ್ತು ಸಾಮರ್ಥ್ಯದ (kWh ಮತ್ತು kW) (energy ಮತ್ತು power) ಮಾಪನವನ್ನು ಏಕೆ ಮಾಡಬೇಕು?”

ಎಸ್.ಜೆ.ಪಿ ರಸ್ತೆಯ ಅಂಗಡಿಗಳ ಮಾಲೀಕರು ಈಗಲೂ ನನ್ನನ್ನು ಅನಲಾಗ್ ಬದಲು ಡಿಜಿಟಲ್ ಮಾಪನಗಳನ್ನು ಕೊಳ್ಳಲು ಮನವರಿಕೆ ಮಾಡಲು ಬರುತ್ತಿದ್ದ “ಲಡ್ಕಿ” (ಹುಡುಗಿ) ಎಂದೇ ನೆನಪಿಸಿಕೊಳ್ಳುತ್ತಾರೆ. ಆ ಪ್ರಯತ್ನದಲ್ಲಿ ಮೊದಲ ಮತ್ತು ಕಠಿಣ ವಿತರಕರಲ್ಲಿ ಒಬ್ಬರು ಕೆ.ಎಸ್.ಜೈನ್ ಅವರು. ಅವರು ನಾನು ಒಬ್ಬ ಮಾರಾಟ ಮಾಡುವ ಹುಡುಗಿಯಿಂದ ಒಂದು ಸಂಸ್ಥೆಯ ಸಿಇಒ ಆಗುವವರೆಗಿನ ಪಯಣಕ್ಕೆ ಸಾಕ್ಷಿಯಾಗಿದ್ದಾರೆ. ವರ್ಷಗಳ ನಂತರ, 2005ರಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಮ್ಮ ಹೊಚ್ಚ ಹೊಸ ಕಾರ್ಪೊರೇಟ್ ಸಂಸ್ಥೆಯಲ್ಲಿ ಕುಳಿತಿದ್ದಾಗ, ಅವರು “ನೀನು ಒಂದು ಬೆಂಕಿಯುಂಡೆಯನ್ನು ಹಿಡಿದಿದ್ದೆ. ನಿನ್ನ ಬಳಿ ಎರಡು ಆಯ್ಕೆಗಳಿದ್ದವು. ಸುಡುತ್ತಿದೆ ಎಂದು ಅದನ್ನು ಎಸೆಯುವುದು ಅಥವಾ ಅದನ್ನು ಹಿಡಿದು ವೇಗವಾಗಿ ಓಡಿ ಆ ಬೆಂಕಿಯನ್ನು ಆರಿಸಿ ಬಿಡುವುದು. ನೀನು ಆ ಓಟಗಾರ್ತಿಯಾದೆ” ಎಂದು ಹೇಳಿದ್ದರು.

ಭಾರತದಲ್ಲಿ ತಾಂತ್ರಿಕ ಉದ್ಯಮವು (ಆಗಲೂ ಮತ್ತು ಈಗಲೂ) ಪುರುಷಪ್ರಧಾನವಾಗಿದೆ. ಒಮ್ಮೆ ಸೇಲ್ಸ್ ಕರೆಯೊಂದನ್ನು ಮುಗಿಸುವ ಹೊತ್ತಿಗೆ ನಾನು ಕಣ್ಣೀರಾಗಿದ್ದೂ ಇದೆ. ಮಧುರೈನ ದೇವಸ್ಥಾನದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಅರುಪುಕೊಟ್ಟೈನಲ್ಲಿ ಒಬ್ಬ ಜವಳಿ ಗಿರಣಿ ಉದ್ಯಮಿಗೆ ಸಾಗಿಸಲು ಸುಲಭವಾದ ಗರಿಷ್ಟ ಬೇಡಿಕೆಯ ವಿಶ್ಲೇಷಕ ಯಂತ್ರದ (portable maximum demand analyser) ಡೆಮೊ ನೀಡಲು ಹೋಗಿದ್ದೆ. ಡೆಮೊ ನೋಡುವ ಬದಲು, ಆ ವ್ಯಕ್ತಿ ನಮ್ಮ ಉತ್ಪನ್ನವನ್ನು ಬಿಡಿಸಿ, ಅದರ ಭಾಗಗಳನ್ನು ಹೆಸರಿಸಿ, ಒಂದೊಂದು ಭಾಗದ ಬೆಲೆಯನ್ನು ನಮೂದಿಸಿ, ಎಲ್ಲವನ್ನೂ ಕೂಡಿ ಮೊತ್ತವನ್ನು ಹೇಳಲು ಕೇಳಿಕೊಂಡ. ಉತ್ಪನ್ನದ ಎಲ್ಲ ಭಾಗಗಳು ಸುಮಾರು 30,000 ರೂ. ಬೆಲೆಗೆ ದೊರೆತರೆ, ಪೂರ್ತಿ ಉತ್ಪನ್ನದ ಬೆಲೆ 70,000 ರೂ. ಯಾಕೆ? ಎಂದು ಆತ ಕೇಳಿದ. ಉತ್ಪನ್ನದ ಬೆಲೆ ಅದಕ್ಕಾಗಿ ಬಳಸಿದ್ದ ತಂತ್ರಾಂಶವನ್ನು ಸೇರಿ ನಿಗದಿಯಾಗಿದೆ ಎಂದು ವಿವರಿಸಲು ಪ್ರಯತ್ನಿಸಿದರೆ ನನ್ನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ತೊಡೆಯನ್ನು ತಟ್ಟಿಕೊಂಡು, ಈ ತಮಾಷೆ ನೋಡುತ್ತಿದ್ದ ಮತ್ತೊಬ್ಬ ಕಿರಿಯ ಜೊತೆಗಾರನಿಗೆ, “ನೋಡಿದೆಯಾ, ನಾನು ಹೇಗೆ ಅವಳನ್ನು ಹಿಡಿದುಹಾಕಿದೆ. ಅವಳು ನಮಗೆ ಮೋಸ ಮಾಡುತ್ತಿದ್ದಾಳೆ” ಎಂದು ಕೇಕೆ ಹಾಕಿ ನಗತೊಡಗಿದ.

*

ಸಂಯುಕ್ತಾ ಪುಲಿಗಲ್ : ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವೀಧರರಾದ ಇವರು, ‘ಪರ್ವತದಲ್ಲಿ ಪವಾಡ’ ಮತ್ತು ‘ರೆಬೆಲ್ ಸುಲ್ತಾನರು’ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಲ್ಯಾಪ್​ಟಾಪ್​ ಪರದೆಯಾಚೆಗೆ’ ಅಂಕಣ ಬರಹ, ಆಪರೇಷನ್ ಬೆಳಕಿನ ಕಿಡಿಗಳು ಕಿರು ಕಾದಂಬರಿ ಪ್ರಕಟವಾಗಿವೆ.

(ಮುದ್ರಿತ, ಇ ಬುಕ್ ಮತ್ತು ಆಡಿಯೋ ಬುಕ್​ಗಾಗಿ ಸಂಪರ್ಕಿಸಿ : ಮೈಲ್ಯಾಂಗ್ ಬುಕ್ಸ್​)

ಇದನ್ನೂ ಓದಿ : Bhagat Singh Birth Anniversary : ಶೆಲ್ಫಿಗೇರುವ ಮುನ್ನ ; ಇಂದಷ್ಟೇ ಬಿಡುಗಡೆಗೊಂಡ ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್’

Published On - 4:40 pm, Fri, 22 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ