ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್ ಡೇ’ ಆಗಿ ಆಚರಿಸಲಾಗುತ್ತದೆ. 15ನೇ ಸೆಪ್ಟೆಂಬರ್ 1861ರಂದು ಜನಿಸಿದ ವಿಶ್ವೇಶ್ವರಯ್ಯನವರು ಭಾರತದ ಮೊದಲ ಸಿವಿಲ್ ಎಂಜಿನಿಯರ್. ಮೈಸೂರು ಸಂಸ್ಥಾನದ ದಿವಾನರಾಗಿ ಅವರು ನೀಡಿದ ಹಲವು ಕೊಡುಗೆಗಳಿಂದ ಕರ್ನಾಟಕ ಇಂದಿಗೂ ಲಾಭ ಪಡೆದುಕೊಳ್ಳುತ್ತಿದೆ. 101 ವರ್ಷದ ತುಂಬು ಜೀವನ ನಡೆಸಿದ ವಿಶ್ವೇಶ್ವರಯ್ಯನವರು 14ನೇ ಏಪ್ರಿಲ್ 1962ರಂದು ನಿಧನರಾದರು. ಸೆಪ್ಟೆಂಬರ್ 15, 1968ರಿಂದ ಪ್ರತಿ ವರ್ಷ ಭಾರತದಲ್ಲಿ ವಿಶ್ವೇಶ್ವರಯ್ಯನವರ ಗೌರವಾರ್ಥ ಎಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಈ ಮೂಲಕ ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಯನ್ನು ಸರ್ಕಾರ, ಸರ್ಕಾರಿ ಸಂಸ್ಥೆಗಳು, ಎಂಜಿನಿಯರ್ ಸಂಘಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ನೆನಪಿಸಿಕೊಳ್ಳುತ್ತಾರೆ.
ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಂದಿಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯಲ್ಲಿ 15ನೇ ಸೆಪ್ಟೆಂಬರ್ 1861ರಂದು ಜನಿಸಿದ ವಿಶ್ವೇಶ್ವರಯ್ಯ ಬಾಲ್ಯದಲ್ಲಿ ತೀವ್ರ ಬಡತನ ಎದುರಿಸಿದರು. ಛಲದಿಂದ ಓದಿದ ಅವರು ಪುಣೆಯ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದರು. ನೀರಾವರಿ ಹಾಗೂ ಪ್ರವಾಹ ತಡೆ ಯೋಜನೆಗಳು ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು.
ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಿರುವ ಕೃಷ್ಣರಾಜಸಾಗರ ಅಣೆಕಟ್ಟು ವಿಶ್ವೇಶ್ವರಯ್ಯನವರ ಕನಸಿನ ಕೂಸು. ಪುಣೆ ಸಮೀಪ 1903ರಲ್ಲಿ ನಿರ್ಮಿಸಿದ ಖಡಕ್ ವಾಸ್ಲಾ ಜಲಾಶಯದಲ್ಲಿ ಅಳವಡಿಸಿರುವ ಅಟೊಮ್ಯಾಟಿಕ್ ಬ್ಯಾರಿಯರ್ ವಾಟರ್ ಫ್ಲಡ್‌ಗೇಟ್‌ಗಳು ವಿಶ್ವೇಶ್ವರಯ್ಯ ಅವರ ಕಲ್ಪನೆ ಮತ್ತು ಚಿಂತನೆಯ ಸಾಮರ್ಥ್ಯವನ್ನು ಸಾರಿ ಹೇಳುತ್ತಿವೆ. 1917ರಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಹಿಂದಿನ ಚಾಲಕ ಶಕ್ತಿಯಾಗಿ ವಿಶ್ವೇಶ್ವರಯ್ಯ ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿ ಅದು ‘ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್’ ಎಂದು ಹೆಸರುವಾಸಿಯಾಯಿತು.
ಬ್ರಿಟಿಷ್ ಸರ್ಕಾರವು ವಿಶ್ವೇಶ್ವರಯ್ಯ ಅವರ ಸೇವೆಯನ್ನು ಗುರುತಿಸಿ, ‘ನೈಟ್ ಕಮಾಂಡರ್ ಆಫ್ ದಿ ಬ್ರಿಟಿಷ್ ಇಂಡಿಯನ್ ಎಂಪೈರ್’ ಬಿರುದು ನೀಡಿ ಗೌರವಿಸಿತ್ತು. ವಿಶ್ವೇಶ್ವರಯ್ಯ ಅವರಿಗೆ ಸ್ವತಂತ್ರ ಭಾರತದ ಸರ್ಕಾರವು 1955ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
&
Greetings to all engineers on #EngineersDay. Our nation is blessed to have a skilled and talented pool of engineers who are contributing to nation building. Our Government is working to enhance infrastructure for studying engineering including building more engineering colleges.
— Narendra Modi (@narendramodi) September 15, 2022
ಎಂಜಿನಿಯರ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ
ಎಂಜಿನಿಯರ್ಸ್ ಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಲ್ಲ ಎಂಜಿನಿಯರ್ಗಳಿಗೆ ಶುಭಾಶಯ ಕೋರಿದ್ದಾರೆ. ನಮ್ಮ ದೇಶವು ಅತ್ಯುತ್ತಮ ಕೌಶಲ ಪಡೆಯುವ ಎಂಜಿನಿಯರ್ಗಳ ಸೇವೆ ಪಡೆಯುವ ಭಾಗ್ಯ ಹೊಂದಿದೆ. ಭಾರತದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Published On - 8:56 am, Thu, 15 September 22