ಚಹಾ ಮಾರಿ ತಿಂಗಳಿಗೆ 15ಲಕ್ಷ ರೂಪಾಯಿ ಗಳಿಕೆ! ಎಲ್ಲಿ, ಯಾರು ಮಾರಾಟ ಮಾಡುತ್ತಿರುವುದು?
ಪುಣೆ: ಚಹಾ ಅಂದರೆ ವಾಹ್ ಎನ್ನುವರು ಭಾರತೀಯರು. ಯಾವುದೇ ಹೊತ್ತಿನಲ್ಲಾದರೂ ಚಹಾ ಬೇಕಾ ಎಂದು ಕೇಳಿದರೆ ಬೇಡ ಎನ್ನುವವರು ತೀರಾ ಅಪರೂಪ. ಜೊತೆಗೆ ಚಹಾ ಮಾರಿ ತಮ್ಮ ಜೀವನ ಕಟ್ಟಿಕೊಂಡ ಮಂದಿಯಲ್ಲಿ ಪ್ರಧಾನಿ ಮೋದಿ ಸಹ ಒಬ್ಬರು. ಅಂತೆಯೇ ಕೇವಲ ಚಹಾ ಮಾರಿ ತಿಂಗಳಿಗೆ ಕನಿಷ್ಠ 15 ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವ ಮಹಾರಾಷ್ಟ್ರದ ಪುಣೆಯ ಈ ಚಾಯ್ವಾಲಾಗಳ ಕಥೆ ಇಲ್ಲಿದೆ. ಹೌದು, ಈ ಕಥೆ ಶುರುವಾಗೋದು 80ರ ದಶಕದಲ್ಲಿ. ಪುಣೆಗೆ ಕೆಲಸವನ್ನು ಅರಸಿ ಬರುವ 16 […]
ಪುಣೆ: ಚಹಾ ಅಂದರೆ ವಾಹ್ ಎನ್ನುವರು ಭಾರತೀಯರು. ಯಾವುದೇ ಹೊತ್ತಿನಲ್ಲಾದರೂ ಚಹಾ ಬೇಕಾ ಎಂದು ಕೇಳಿದರೆ ಬೇಡ ಎನ್ನುವವರು ತೀರಾ ಅಪರೂಪ. ಜೊತೆಗೆ ಚಹಾ ಮಾರಿ ತಮ್ಮ ಜೀವನ ಕಟ್ಟಿಕೊಂಡ ಮಂದಿಯಲ್ಲಿ ಪ್ರಧಾನಿ ಮೋದಿ ಸಹ ಒಬ್ಬರು. ಅಂತೆಯೇ ಕೇವಲ ಚಹಾ ಮಾರಿ ತಿಂಗಳಿಗೆ ಕನಿಷ್ಠ 15 ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವ ಮಹಾರಾಷ್ಟ್ರದ ಪುಣೆಯ ಈ ಚಾಯ್ವಾಲಾಗಳ ಕಥೆ ಇಲ್ಲಿದೆ.
ಹೌದು, ಈ ಕಥೆ ಶುರುವಾಗೋದು 80ರ ದಶಕದಲ್ಲಿ. ಪುಣೆಗೆ ಕೆಲಸವನ್ನು ಅರಸಿ ಬರುವ 16 ವರ್ಷದ ಬಾಲಕ ದಶರಥ ಯೆವಳೆ ಅವರಿಂದ. ಅವಿದ್ಯಾವಂತನಾದರೂ ದಶರಥನಿಗೆ ಬದುಕು ಕಟ್ಟಿಕೊಳ್ಳುವ ಮಹದಾಸೆ. ಪುಣೆಯಲ್ಲಿ ಹಾಲು ಮಾರಲು ಪ್ರಾರಂಭಿಸಿದವ ಕೊನೆಗೆ ಟೀ ಮಾರುವ ಯೋಚನೆ ಹುಟ್ಟಿ ನಗರದ ಕ್ಯಾಂಪ್ ಭಾಗದಲ್ಲಿ ಪುಟ್ಟದಾದ ಚಹದಂಗಡಿ ಹಾಕಿಕೊಳ್ಳುತ್ತಾನೆ.
ತನ್ನ ಸತತ ಪರಿಶ್ರಮದಿಂದ ಕೊನೆಗೆ 1983ರಲ್ಲಿ ಸ್ಯಾಲಿಸ್ಬರಿ ಪಾರ್ಕ್ನ ಬಳಿ ಸ್ಪೆಷಲ್ ಟೀ ಸ್ಟಾಲ್ ಪ್ರಾರಂಭಿಸುತ್ತಾನೆ. ಅಲ್ಲಿಂದ ಶುರುವಾಯ್ತು ನೋಡಿ ಪುಣಿಯ ಪ್ರಸಿದ್ಧ ಯೆವಳೆ ಅಮೃತಾಲಯದ ಯಶೋಗಾಥೆ. ಬಹುಬೇಗ ಜನಪ್ರಿಯವಾದ ತಮ್ಮ ಅಂಗಡಿಯ ಮತ್ತೆರಡು ಶಾಖೆಗಳನ್ನೂ ಸಹ ತೆರೆದರು.
ಪರಂಪರಾಗತವಾಗಿ ಪಾರಂಗತವಾದ ಯೆವಳೆ ಟೀ ಹೌಸ್! 2001 ರಲ್ಲಿ ದಶರಥರ ನಿಧನದ ನಂತರ ಅವರ ಮಕ್ಕಳು ಮತ್ತು ಸಹೋದರರು ಉದ್ದಿಮೆಯನ್ನ ಸಂಭಾಳಿಸಿದರು. ತಂದೆಯ ಪರಿಶ್ರಮವನ್ನ ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಲು ಮುಂದಾದರು. ಚಹಾ ಮಾಡುವ ವಿಧಾನದಲ್ಲಿ ಮೊದಲು ಪರಿಣಿತಿಯನ್ನು ಸಾಧಿಸಿದರು. ಹಾಲು, ಟೀ ಪುಡಿ ಮತ್ತು ಸಕ್ಕರೆಯ ಸೂಕ್ತ ಪ್ರಮಾಣ ಹಾಗೂ ತಯಾರಿಕೆಯಲ್ಲಿ ಪಾರಂಗತರಾದರು. ಇವರ ಪರಿಶ್ರಮದ ಪ್ರತಿಫಲವೆಂಬಂತೆ ಇದೀಗ ಇಡೀ ಪುಣೆಯಲ್ಲಿ ನಾಲಿಗೆಗೆ ನಾಟುವ, ಮನಸ್ಸಿಗೆ ಮುದನೀಡುವಂಥ ಚಹಾ ಸಿಗುವ ಏಕೈಕ ಸ್ಥಳ ಅಂದ್ರೆ ಅದು ಯೆವಳೆ ಅಮೃತಾಲಯನೇ ಅಂತಾ ಜನರ ಬಾಯಲ್ಲಿ ಬರುವಷ್ಟು ಜನಪ್ರಿಯರಾಗಿದ್ದಾರೆ.
ಪ್ರಯತ್ನಕ್ಕೆ ತಕ್ಕ ಫಲ, ತಿಂಗಳಿಗೆ ಹತ್ತಾರು ಲಕ್ಷ ರೂ ಆದಾಯ ದಿನಕ್ಕೆ ಐದಾರು ಸಾವಿರ ಕಪ್ ಚಹಾ ಮಾರುವ ಯೆವಳೆ ಅಮೃತಾಲಯ ಪ್ರತಿ ಕಪ್ಗೆ 10 ರೂಪಾಯಿ ಮಾತ್ರ ಪಡೆಯುತ್ತದೆ. ಆದರೂ ತಿಂಗಳ ಕೊನೆಗೆ ಇವರ ಒಟ್ಟು ಆದಾಯ ಹತ್ತಾರು ಲಕ್ಷ ರೂ ಉಕ್ಕಿರುತ್ತದೆ. ಆದರೆ, ಇಷ್ಟಕ್ಕೇ ಸೀಮಿತವಾಗಲು ಇಚ್ಛಿಸದ ಯೆವಳೆ ಕುಟುಂಬ ಇನ್ನೂ 100 ಶಾಖೆಗಳನ್ನು ತೆರೆದು ತಮ್ಮ ತಂದೆಯಂತೆ ನೌಕರಿ ಅರಸಿ ಬರುವ ಹುಡುಗರಿಗೆ ಉದ್ಯೋಗ ನೀಡುವ ಯೋಚನೆಯಲ್ಲಿದ್ದಾರೆ.
ಒಟ್ನಲ್ಲಿ, ಈ ಚಹಾದಲ್ಲಿ ಏನೋ ಅಡಗಿದೆ ಎಂಬ ಮಾತಿನಂತೆ ಒಂದು ಕಪ್ ಚಹಾದಿಂದ ಇಡೀ ಸಾಮ್ರಾಜ್ಯವನ್ನೇ ಕಟ್ಟಬಹುದು ಎಂಬ ನಿದರ್ಶನವನ್ನ ನೀಡಿರುವ ಯೆವಳೆ ಕುಟುಂಬಕ್ಕೆ ಅರೇ ಹುಜೂರ್! ಬರೀ ವಾಹ್ ಅಲ್ಲ.. ವಾಹ್ ವಾಹ್ ಬೋಲಿಯೆ!!! ಅನ್ನಬೇಕು.
Published On - 1:44 pm, Sat, 27 June 20