ಚಿತ್ರದುರ್ಗ: ಮನೆ ಮುಂದೆ ರಂಗೋಲಿ ಬಿಡಿಸುವುದರಲ್ಲಿ ತಲ್ಲೀನರಾದ ಮಹಿಳೆಯರು, ಗಿಡ, ಮರಗಳ ಪೋಷಣೆಯಲ್ಲಿ ತೊಡಗಿಸಿಕೊಂಡ ಯುವ ಸಮೂಹ, ಇಡೀ ಊರಿಗೆ ಊರನ್ನೇ ಸ್ವಚ್ಛಗೊಳಿಸುತ್ತಿರುವ ಗ್ರಾಮಸ್ಥರು.. ಈ ದೃಶ್ಯ ಕಂಡು ಬಂದಿದ್ದು ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ.
ಕೋನಸಾಗರ ಗ್ರಾಮದ ಶ್ರೀನಿತ್ಯ ಪರಿವರ್ತನಂ ಸಾಂಭುಯಾ ಟ್ರಸ್ಟ್ ಹೆಸರಿನಲ್ಲಿ ಗ್ರಾಮದ ಯುವಕರು ಕಳೆದ 7 ವರ್ಷಗಳಿಂದ ಸೇವಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ವಚ್ಛತಾ ಕೆಲಸ ಮತ್ತು ಪರಿಸರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವ ಯುವಕರು ಮನರಂಜನೆಗಾಗಿ ವಿವಿಧ ಸ್ಪರ್ಧೆಯನ್ನೂ ಆಯೋಜಿಸುತ್ತಿದ್ದಾರೆ. ಈ ಮೂಲಕ ಯುವ ಸಮೂಹ ಸಕಾರಾತ್ಮಕ ಯೋಚನೆಯಲ್ಲಿ ತೊಡಗಿಸಿಕೊಂಡು ಒಂದಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಯಾವ ಮಟ್ಟದ ಬದಲಾವಣೆಯನ್ನೂ ತರಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಗ್ರಾಮಸ್ಥರೆಲ್ಲರನ್ನೂ ಸೇರಿಸಿಕೊಂಡು ಊರನ್ನು ಚೊಕ್ಕಗೊಳಿಸುತ್ತಾ ಗಿಡಮರ ಬೆಳೆಸುವ ಕಾಯಕದಲ್ಲಿ ತೊಡಗಿಕೊಂಡಿರುವ ಯುವಕರು ಸ್ವಚ್ಛ, ಸುಂದರ ಮತ್ತು ಹಸಿರು ಗ್ರಾಮ ಪರಿಕಲ್ಪನೆಯಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಮತ್ತು ಮಕ್ಕಳನ್ನು ಒಳಗೊಳ್ಳುವ ಉದ್ದೇಶದಿಂದ ವಿವಿಧ ಬಗೆಯ ಸ್ಪರ್ಧೆಗಳನ್ನೂ ಆಯೋಜಿಸಿ ಗಮನ ಸೆಳೆಯುತ್ತಿದ್ದಾರೆ.
ಮಹಿಳೆಯರಿಗಾಗಿ ಏರ್ಪಡಿಸುವ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹2,000, ದ್ವಿತೀಯ ಬಹುಮಾನ ₹1,500, ತೃತೀಯ ಬಹುಮಾನ ₹1,000 ಮತ್ತು 15 ಸಮಾಧಾನಕರ ಬಹುಮಾನ ನೀಡಲಾಗುತ್ತಿದ್ದು, ರಂಗೋಲಿಯ ಸೌಂದರ್ಯದ ಜೊತೆಗೆ ಸ್ವಚ್ಛತೆ ಮತ್ತು ಪರಿಸರ ಕಾಳಜಿ ಬಗ್ಗೆ ಗಮನಹರಿಸಿ ಬಹುಮಾನ ನೀಡುವ ಯುವಕರ ಕ್ರಿಯಾತ್ಮಕ ಆಲೋಚನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮದಲ್ಲಿನ ಬಹುತೇಕ ಮನೆಯವರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಯುವಕರ ಸಾಮಾಜಿಕ ಕಳಕಳಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಆಧುನಿಕತೆಯ ಭರಾಟೆಯಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿ ಸಮಾಜವನ್ನು ಕಡೆಗಣಿಸುವವರ ನಡುವೆ, ಸಮಾಜದ ಒಳಿತಿಗಾಗಿ ಪಣತೊಟ್ಟು ನಿಂತಿರುವ ಕೋನಸಾಗರ ಗ್ರಾಮದ ಯುವಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂತಹ ಕ್ರಿಯಾಶೀಲ ಯೋಜನೆಗಳಲ್ಲಿ ಯುವಸಮೂಹ ಹೆಚ್ಚೆಚ್ಚು ತೊಡಗಿಸಿಕೊಂಡರೆ ಮಾತ್ರ ಒಂದು ಸಧೃಡ ಸಮಾಜವನ್ನು ನಿರ್ಮಿಸುವುದು ಸಾಧ್ಯ.
ಸರ್ಕಾರದ ಯೋಜನೆಗಳಿಗಾಗಿ ಕಾಯದೆ ನಮ್ಮಿಂದಾಗುವ ಕೆಲಸ ನಾವೇ ಮಾಡಿಕೊಳ್ಳುವುದು ಒಳಿತು. ನಮ್ಮ ಗ್ರಾಮವನ್ನು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಊರು ಸುಂದರವಾಗಿದ್ದಷ್ಟೂ ಉತ್ತಮ ಆರೋಗ್ಯ ಮತ್ತು ಖುಷಿ ನಮ್ಮದಾಗುತ್ತದೆ. ಆ ಕಾರಣಕ್ಕಾಗಿ ಕಳೆದ 7 ವರ್ಷಗಳಿಂದ ಸ್ವಚ್ಛತೆ, ಪರಿಸರ ಕಾಳಜಿಯ ಕುರಿತು ಜಾಗೃತಿ ಮೂಡಿಉವ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೇವೆ.
– ಮಲ್ಲಿಕಾರ್ಜುನ್, ಶ್ರೀನಿತ್ಯ ಪರಿವರ್ತನಂ ಸಾಂಭುಯಾ ಟ್ರಸ್ಟ್ ಕಾರ್ಯದರ್ಶಿ
ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ -ಉಲ್ಲಾಸ ಕಾರಂತ