ಮೃಗಾಲಯಗಳಲ್ಲಿರುವ ಕೆಲವು ಹುಲಿಗಳಲ್ಲಿ ಕೊರೋನಾ ವೈರಾಣು ಪತ್ತೆಯಾಗಿ ಈಗಾಗಲೇ ಬಸವಳಿದ ಜನಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸಾಕುಪ್ರಾಣಿಗಳಿಂದಲೂ ಕೊರೋನಾ ಬರುವುದೇ ಎಂಬ ಆತಂಕ ಕಾಣಿಸಿಕೊಂಡಿದೆ. ಆನೆಗಳಲ್ಲೂ ಕೊರೋನಾ ವೈರಾಣುಗಳು ಪತ್ತೆಯಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಕೊರೊನಾ ವೈರಾಣುಗಳು ಸಾಕುಪ್ರಾಣಿಗಳು ಮತ್ತು ಜಾನುವಾರುಗಳಿಂದ ಹರಡುತ್ತಿವೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಮ್ಮನೆ ಸುದ್ದಿ ಹಬ್ಬಿಸುತ್ತಿದ್ದಾರೆ. ಇಂಥ ಆತಂಕ ಅನಗತ್ಯ ಎನ್ನುತ್ತಾರೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಬಿ.ಶ್ರೀಧರ.
ನಂಜನಗೂಡಿನಲ್ಲಿ ಕೊರೋನಾ ವೈರಾಣು ರೋಗ ಕುರಿಗಳಿಂದ ಹಬ್ಬುತ್ತದೆ ಎಂದು ಕುರಿಗಾರರು ಊರು ಬಿಡುವಂತೆ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಕೋಳಿಗಳಿಂದ ಕೊರೋನಾ ಕಾಯಿಲೆ ಬರುತ್ತದೆ ಎಂಬ ಮತ್ತೊಂದು ಸುದ್ದಿ ಹಬ್ಬಿ ಕೋಳಿಮಾಂಸದ ಧಾರಣೆ ಪಾತಾಳಕ್ಕಿಳಿದಿದೆ. ಅನೇಕ ಕೋಳಿಫಾರ್ಮ್ನವರು ಕೋಳಿಗಳ ಮಾರಣಹೋಮ ನಡೆಸಿ ಹುಗಿದುಹಾಕಿದ್ದಾರೆ. ಇದು ಈಗ ಇತಿಹಾಸ. ಕೆಲವರು ಬೆಕ್ಕು ಮತ್ತು ನಾಯಿಗಳನ್ನು ಮನೆಯಿಂದ ಓಡಿಸಿರುವ ಘಟನೆ ಸಹ ಬೆಳಕಿಗೆ ಬರುತ್ತಿದೆ. ಸಮಾಜದಲ್ಲಿ ಆತಂಕ ನೆಲೆಗೊಂಡಿರುವ ಈ ಸಂದರ್ಭದಲ್ಲಿ ನಿಜಸ್ಥಿತಿಯನ್ನು ಜನರಿಗೆ ತಿಳಿಸುವುದು ಅತ್ಯವಶ್ಯ ಹಾಗೂ ಜವಾಬ್ದಾರಿ ಸಹ. ಈ ಲೇಖನ ಓದಿದರೆ ವಸ್ತುಸ್ಥಿತಿಯ ಅರಿವಾಗುವುದರಲ್ಲಿ ಸಂಶಯವಿಲ್ಲ.
ಇತ್ತೀಚೆಗಷ್ಟೇ ಚೀನಾದಲ್ಲಿ ಉಗಮವಾದ ಕೊರೊನಾ ವೈರಸ್, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಸಾವು ಮತ್ತು ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದು ಪ್ರಾಣಿಗಳಿಂದ ಬರುವ ಕಾಯಿಲೆಯೇ ಎಂದು ಅನೇಕ ಜನ ಕೇಳುತ್ತಾರೆ. ಉತ್ತರ ಹೌದು. ಆದರೆ ಇದು ಸಾಕುಪ್ರಾಣಿಗಳಿಂದ ಬರುವ ಕಾಯಿಲೆಯೇ ಎಂದರೆ ಖಂಡಿತಾ ಉತ್ತರ ಅಲ್ಲ. ವನ್ಯಪ್ರಾಣಿಗಳಿಂದ ಇದರ ಉಗಮ ಹೇಗಾಯಿತು ಎಂಬುದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
ಪ್ರಾಣಿಗಳ ಜೊತೆ ಚೀನಿಯರ ಹುಚ್ಚಾಟ ಮತ್ತು ಮೂಢನಂಬಿಕೆಯಿಂದಾಗಿ, ಇಂದು ಪ್ರಪಂಚ ಕೊರೋನಾ ವೈರಾಣುವಿನ ಕಪಿಮುಷ್ಟಿಗೆ ಸಿಲುಕಿತು ಎಂದರೆ ತಪ್ಪಾಗಲಿಕ್ಕಿಲ್ಲ. ಹೇಗೆ ಅಂತಿರಾ? ಈಗಾಗಲೇ ನಿಮಗೆಲ್ಲ ಚೀನಾದ ವೂಹಾನ್ನಲ್ಲಿ ಈ ಕಾಯಿಲೆ ಹುಟ್ಟಿತು ಎಂಬುದು ಗೊತ್ತಿದೆ. ಚೀನಿಯರು ಕಾಡುಪ್ರಾಣಿಗಳು, ಹುಳುಹುಪ್ಪಟೆ, ಇಲಿ, ಹಾವು, ಬಾವಲಿ ಇತ್ಯಾದಿಗಳನ್ನು ತಿನ್ನುವುದು ಎಲ್ಲರಿಗೂ ತಿಳಿದೇ ಇದೆ. ಈ ಪೆಂಗೊಲಿನ್, ಪುನುಗು ಬೆಕ್ಕು, ಬಾವಲಿ ಇತ್ಯಾದಿಗಳನ್ನು ಕಡಿದು ಹುರಿದು ಮುಕ್ಕಿ ಸ್ವಾಹ ಮಾಡುವ ಸಮಯದಲ್ಲಿಯೇ ಅವುಗಳ ಮೂಲಕ ಮಾರಕ ಕೊರೋನಾ ವೈರಾಣು ಬಂದಿದೆ ಎಂಬುದು ಸಂಶೋಧಕರ ಅಂಬೋಣ.
ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್‌ಗಳ ಬೃಹತ್ ಸಮೂಹ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್‌ನಿಂದ ಹಿಡಿದು, ಅತ್ಯಂತ ಅಪಾಯಕಾರಿಯಾದ ಮೆರ್ಸ್ (ಮಿಡಲ್ ಈಸ್ಟ್ ರೆಸ್ಪರ‍್ಪೇರೇಟರಿ ಸಿಂಡ್ರೋಮ್), ಸಾರ್ಸ್ (ಸೀವಿಯರ್ ಅಕ್ಯೂಟ್ ರೆಸ್ಪರ‍್ಪೇರೇಟರಿ ಸಿಂಡ್ರೋಮ್) ಅಥವಾ ಕೊರೊನಾ ವೈರಸ್ ಡಿಸೀಸ್-19 (Covid-19) ಈ ರೋಗವನ್ನುಂಟು ಮಾಡುವ ವೈರಸ್‌ಗಳೂ ಸಹ ಕೊರೋನಾ ವೈರಾಣು ಗುಂಪಿಗೆ ಸೇರುತ್ತವೆ. ಕೊವಿಡ್-19 ಎಂದರೆ ಕೊರೋನಾ ವೈರಸ್ ಡಿಸೀಸ್-2019. ಈ ಕಾಯಿಲೆ ಹೊಸ ಕೊರೊನಾ ವೈರಾಣುವಿನಿಂದ ಬರುವ ಅತ್ಯಂತ ಸಾಂಕ್ರಾಮಿಕ ಕಾಯಿಲೆ.
ವೈರಸ್ಸಿಗೆ ನೋವೆಲ್ ಕೊರೊನಾ ವೈರಸ್ ಎಂದು ಕರೆಯುವುದೇಕೆ?
ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್‌ಗೆ ನೋವೆಲ್ ಕೊರೊನಾ ವೈರಸ್ ಎಂದು ಕರೆಯುತ್ತಾರೆ.
ವೈರಸ್‌ನ ನೈಸರ್ಗಿಕ ಮೂಲ ಯಾವುದು?
ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲಗಳೆಂದರೆ ವನ್ಯಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಸುಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು ಅಥವಾ ಸಿವೆಟ್ ಕ್ಯಾಟ್ ಇದು SARS-CoV ಈ ಕಾಯಿಲೆ ಹಬ್ಬಿಸಿದರೆ, ಒಂಟೆ, ಪೆಂಗೋಲಿನ್ ಮತ್ತು ಬಾವಲಿಗಳು MERS-CoV ಅಥವಾ Covid-19 ಉಂಟು ಮಾಡುವ ವೈರಾಣುಗಳನ್ನು ಹರಡುತ್ತವೆ ಎಂಬ ಬಗ್ಗೆ ದಾಖಲೆ ಇದೆ. ಸಾಕುಪ್ರಾಣಿಗಳೂ ಸೇರಿದಂತೆ ಹಲವು ಪ್ರಾಣಿಗಳಲ್ಲಿಯೂ ಕಾಯಿಲೆ ಮಾಡಬಲ್ಲ ಕೊರೋನಾ ವರ್ಗದ ವೈರಸ್‌ಗಳ ಹಲವು ಪ್ರಭೇದಗಳು ಇರುತ್ತವೆ.
ಆಕಳುಗಳು, ಎಮ್ಮೆ, ಹಂದಿ, ಆಡು, ಕುರಿ, ನಾಯಿ, ಬೆಕ್ಕು, ಕೋಳಿ ಇತ್ಯಾದಿ ಅನೇಕ ಜೀವಿಗಳಲ್ಲಿ ಕೊರೋನಾ ವೈರಾಣುಗಳ ವಿವಿಧ ಪ್ರಬೇಧಗಳು ರೋಗ ತಂದರೂ ಸಹ ಅವುಗಳಿಂದ ಮನುಷ್ಯರಿಗೆ ಬರುವ ಬಗ್ಗೆ ದಾಖಲೆಗಳಿಲ್ಲ.
ಸಾಕುಪ್ರಾಣಿಗಳಲ್ಲಿ ಕೊರೊನಾ ವೈರಾಣು ರೋಗ
ಸಾಕುಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ ಮತ್ತೊಮ್ಮೆ ನೆನಪಿಡಿ; ಸಾಕುಪ್ರಾಣಿಗಳಿಂದ ಕೊರೋನಾ ಸೋಂಕು ಹರಡುವ ಯಾವುದೇ ದಾಖಲೆ ಇಲ್ಲ.
ಸಾಕುಪ್ರಾಣಿಗಳು ಕೊರೊನಾ ವಾಹಕಗಳೇ?
ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ. ಆದರೆ ಈಗ ಬಂದ Covid-19 ರೋಗಕ್ಕೂ ಪ್ರಾಣಿಗಳಲ್ಲಿ ಬರುವ ಕೊರೋನಾ ವೈರಸ್ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಹುವಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಇಲ್ಲಿ ಅನೇಕ ಕಾಡುಪ್ರಾಣಿಗಳು ಮತ್ತು ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತಿತ್ತು. ಪುನುಗು ಬೆಕ್ಕು ಮತ್ತು ಬಾವಲಿಗಳನ್ನು ಸೇರಿಸಿಕೊಂಡು ಇಲ್ಲಿನ ಜನ ಹುರಿದು ಮುಕ್ಕಿದ್ದಕ್ಕೆ ಶಿಕ್ಷೆಯಾಗಿ ಇಡಿ ಪ್ರಪಂಚವನ್ನು ಕೊರೋನಾ ಮಾರಿ ಹುರಿದು ಮುಕ್ಕುತ್ತಿದೆ ಎಂಬುದು ದಾರ್ಶನಿಕರ ನುಡಿ. ಆದರೂ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಟ್ಟಿಲ್ಲ. ಅಲ್ಲಿ ವೈರಸ್ ಪ್ರಥಮವಾಗಿ ಉಗಮವಾಗಿರಬಹುದೇ ಹೊರತು ಯಾವುದೇ ಪ್ರಾಣಿಗಳ ಮಾಂಸ ತಿಂದರೆ ಕೊರೋನಾ ಕಾಯಿಲೆ ಬರುವುದೆಂದು ದೃಢಪಟ್ಟಿಲ್ಲ.
ಬೆಕ್ಕು, ನಾಯಿ, ಹಂದಿ, ಜಾನುವಾರು, ಕುದುರೆ, ಕೋಳಿ, ಇಲಿ ಮತ್ತು ಅಷ್ಟೇಕೆ ಮೀನಿನಲ್ಲಿಯೂ ಸಹ ಕೊರೋನಾ ವೈರಾಣು ಸೋಂಕು ಬರುತ್ತದೆ ಎಂಬ ಪ್ರತೀತಿ ಇದೆ. ಅನೇಕ ಪ್ರಾಣಿಗಳಲ್ಲಿ ಕೊರೋನಾ ವೈರಾಣುಗಳ ವಿವಿಧ ಪ್ರಭೇದಗಳಿಂದ ಕಾಯಿಲೆ ಬರುತ್ತದೆ. ಸುಮಾರು 16ಕ್ಕಿಂತ ಜಾಸ್ತಿ ಕಾಯಿಲೆಗಳು ಈ ವೈರಾಣುವಿನಿಂದ ಪ್ರಾಣಿಗಳಿಗೆ ಬರುತ್ತವೆ. ಪ್ರಾಣಿಗಳಿಗೆ ಬರುವ ಕೊರೋನಾ ವೈರಾಣು ಕಾಯಿಲೆ ಮನುಷ್ಯನಿಗೆ ಹರಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.
(ಮುಂದುವರಿಯಲಿದೆ)
ಇದನ್ನೂ ಓದಿ: ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್ 19 ಅಪಾಯ?
ಇದನ್ನೂ ಓದಿ: ಕೊರೊನಾ ಲಾಕ್ಡೌನ್ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ; ಮುದ್ದಿನ ಸಾಕುಪ್ರಾಣಿಗಳೀಗ ಮಾಲೀಕರಿಗೆ ಭಾರ
(Truth About Pet Animals and Coronavirus Infection Spread of Covid Disease through Animals)
Published On - 7:04 pm, Mon, 14 June 21