ಅನಾಥ ನಾಯಿಗಳಿಗೆ ಮುಕ್ತಿ: ಮೆಚ್ಚುಗೆಗೆ ಪಾತ್ರವಾಗಿದೆ ಮೈಸೂರು ಶ್ವಾನ ಪ್ರಿಯನ ಅನುಕಂಪ

ನಾಯಿಗಳ ಬಗ್ಗೆ ವಿಶೇಷ ಅಕ್ಕರೆಯಿರುವ ಉಮೇಶ್ ಊಟ, ತಿಂಡಿ, ಓದು, ಪಾಠ ಮರೆತು ತನ್ನ ಪ್ರೀತಿಯ ನಾಯಿಗಳ ಜೊತೆ ಕಾಲ ಕಳೆಯುತ್ತಿದ್ದರು.

ಅನಾಥ ನಾಯಿಗಳಿಗೆ ಮುಕ್ತಿ: ಮೆಚ್ಚುಗೆಗೆ ಪಾತ್ರವಾಗಿದೆ ಮೈಸೂರು ಶ್ವಾನ ಪ್ರಿಯನ ಅನುಕಂಪ
ಶ್ವಾನಪ್ರಿಯ ಉಮೇಶ್
Follow us
sandhya thejappa
|

Updated on:Jan 07, 2021 | 10:47 AM

ಮೈಸೂರು: ಸಾಮಾನ್ಯವಾಗಿ ಯಾವುದಾದರೂ ಬೀದಿ ನಾಯಿ ರಸ್ತೆಯಲ್ಲಿ ಸತ್ತು ಬಿದ್ದಿದ್ದರೆ ಆ ಕಡೆ ನೋಡದೆ ಮುಂದೆ ಸಾಗುವವರೇ ಹೆಚ್ಚು. ಅದು ಕೊಳೆತು ನಾರುತ್ತಿದ್ದರೂ ಮೂಗು ಮುಚ್ಚಿ ಮುಂದೆ ಸಾಗುವುದು ಸಾಮಾನ್ಯ. ಆದರೆ ಸಾಂಸ್ಕೃತಿಕ ನಗರಿ ಮೈಸೂರಿನ ಉಮೇಶ್ ಇದಕ್ಕೆ ವ್ಯತಿರಿಕ್ತ. ರಸ್ತೆಯಲ್ಲಿ ಅನಾಥವಾಗಿ ಸತ್ತ ನಾಯಿಗಳನ್ನು ಮಣ್ಣು ಮಾಡಿ, ಮುಕ್ತಿ ನೀಡುವ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದಾರೆ.

ಯಾರಿದು ಉಮೇಶ್? ಉಮೇಶ್ ಮೈಸೂರಿನ ಶ್ರೀರಾಮಪುರದ ನಿವಾಸಿ. ಏರ್​ ಕ್ರಾಫ್ಟ್​​ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಿರುವ ಉಮೇಶ್​ಗೆ  ಚಿಕ್ಕಂದಿನಿಂದಲೂ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಚಿಕ್ಕವರಿದ್ದಾಗ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುವ ಕೆಲಸ ಮಾಡುತ್ತಿದ್ದರು. ನಾಯಿಗಳ ಬಗ್ಗೆ ವಿಶೇಷ ಅಕ್ಕರೆಯಿರುವ ಉಮೇಶ್ ಊಟ, ತಿಂಡಿ, ಓದು, ಪಾಠ ಮರೆತು ತನ್ನ ಪ್ರೀತಿಯ ನಾಯಿಗಳ ಜೊತೆ ಕಾಲ ಕಳೆಯುತ್ತಿದ್ದರು.

ಇದೇ ಪ್ರೀತಿ ಮುಂದೆ ಒಂದು ದಿನ ನನ್ನ ಕೆಲಸವಾಗುತ್ತದೆ ಎನ್ನುವ ಸಣ್ಣ ಕಲ್ಪನೆಯೂ ಅವರಿಗೆ ಇರಲಿಲ್ಲ. ಆದರೆ ನಾಯಿಗಳ ಬಗ್ಗೆ ಇದ್ದ ಪ್ರೀತಿ ಇಂದು ಅವರನ್ನು ಅದೇ ಉದ್ಯಮಕ್ಕೆ ಕೈಹಿಡಿದು ಕರೆ ತಂದಿದೆ. ಉಮೇಶ್ ತಾಲೂಕಿನ ಉದ್ಬೂರು ಬಳಿ ಪೆಟ್ ರೆಸಾರ್ಟ್​ ಅನ್ನು ಹೊಂದಿದ್ದಾರೆ. ವಿಶೇಷ ಎಂದರೆ ಅದಕ್ಕೆ ಬೌ ಬೌ ಪೆಟ್ ರೆಸಾರ್ಟ್ (Bow Bow Pet Resort) ಎಂಬ ಹೆಸರಿಟ್ಟಿದ್ದಾರೆ.

ಸಾವನ್ನಪ್ಪಿದ ಶ್ವಾನಗಳ ಸೇವೆಯ ಸತ್ಕಾರ್ಯ ಉಮೇಶ್​ರವರ ಉದ್ಯಮ ಲಾಭದಾಯಕವಾಗಿಯೇ ನಡೆಯುತ್ತಿದೆ. ಮಾಡುವ ಕೆಲಸಕ್ಕೆ ಉಮೇಶ್​ಗೂ ಖುಷಿ ಕೊಟ್ಟಿದೆ. ಇನ್ನು ತನ್ನ ಬದುಕು ರೂಪಿಸಲು ಸಹಕಾರಿಯಾದ ನಾಯಿಗಳಿಗಾಗಿ ಏನಾದರೂ ಮಾಡಬೇಕು ಎಂಬ ತುಡಿತವಿತ್ತು. ಹೀಗಿರುವಾಗ ಒಮ್ಮೆ ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗುವಾಗ ಮೈಸೂರು ಬೆಂಗಳೂರು ರಸ್ತೆಯಲ್ಲಿ ನಾಯಿ ಮರಿ ಸತ್ತು ಬಿದ್ದಿತ್ತು.

ವಾಪಸ್​ ಬರುವಾಗಲೂ ಆ ಸತ್ತ ನಾಯಿಯ ಮೃತದೇಹ ಅಲ್ಲೇ ಇತ್ತು. ಅದರ ಮೇಲೆ ನೂರಾರು ವಾಹನಗಳು ಹರಿದು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇದನ್ನು ಕಂಡ ಉಮೇಶ್ ಮಮ್ಮಲಮರುಗಿದರು. ಅಂದೇ ಉಮೇಶ್ ಅವರು ಅನಾಥವಾಗಿ ಮೃತಪಟ್ಟ ನಾಯಿಗಳಿಗೆ ಮುಕ್ತಿ ನೀಡುವ ನಿರ್ಧಾರ ಕೈಗೊಂಡರು. ಇದುವರೆಗೂ ಉಮೇಶ್ 26 ಅನಾಥ ನಾಯಿಗಳಿಗೆ ಮುಕ್ತಿ ನೀಡಿದ್ದಾರೆ.

ವಾಟ್ಸ್ಆ್ಯಪ್ ಮೂಲಕ ನೀಡಿ ಮಾಹಿತಿ ಎಲ್ಲಾದರೂ ರಸ್ತೆ ಅಪಘಾತ ಅಥವಾ ಬೇರೆ ಕಾರಣಗಳಿಂದ ನಾಯಿ ಮೃತಪಟ್ಟಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಉಮೇಶ್ ಮೊಬೈಲ್ ನಂಬರ್​ಗೆ ( 99862 84468 ) ತಿಳಿಸಿದರೆ ಸಾಕು. ಉಮೇಶ್ ಅಲರ್ಟ್ ಆಗುತ್ತಾರೆ. ತಕ್ಷಣ ಗುದ್ದಲಿ, ಪಿಕಾಸಿ ಹಿಡಿದು ತಮ್ಮ ವಾಹನ ಹತ್ತಿ ಸ್ಥಳಕ್ಕೆ ಧಾವಿಸುತ್ತಾರೆ.

ಮೃತ ನಾಯಿಯ ಅಕ್ಕ ಪಕ್ಕದಲ್ಲೇ ಗುಂಡಿ ತೋಡಿ ನಾಯಿಯ ಮೃತ ದೇಹವನ್ನು ಇಟ್ಟು ಸಂಸ್ಕಾರ ಮಾಡಿ ಅಲ್ಲಿಂದ ವಾಪಸಾಗುತ್ತಾರೆ. ಇದುವರೆಗೂ ಉಮೇಶ್ 26 ನಾಯಿಗಳಿಗೆ ಸಂಸ್ಕಾರಬದ್ದವಾಗಿ ಮಣ್ಣು ಮಾಡಿದ್ದಾರೆ. ಇದರ ಜೊತೆಗೆ ತಮಗೆ ಮಾಹಿತಿ ನೀಡಿದವರು, ಮಣ್ಣು ಮಾಡಿದ ಸ್ಥಳ ಹಾಗೂ ನಾಯಿಯ ವಿವರ ಎಲ್ಲವನ್ನೂ ತಮ್ಮ ಡೈರಿಯಲ್ಲಿ ದಾಖಲು ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡು ತಮಗೆ ಮಾಹಿತಿ ನೀಡಿದವರಿಗೆ ಧನ್ಯವಾದ ಅರ್ಪಿಸುವ ಕೆಲಸ ಮಾಡುತ್ತಾರೆ.

ಮನ ಕಲಕಿದ ನಾಯಿ ಮರಿ ಸಾವು – ಕೃತಜ್ಞತೆ ಸಲ್ಲಿಸಿದ ನಾಯಿ ಮರಿಯ ಅಮ್ಮ ಮೈಸೂರಿನ ರಿಂಗ್ ರಸ್ತೆಯ ಅಪಘಾತದಲ್ಲಿ ಮೃತಪಟ್ಟ ನಾಯಿ ಮರಿಯ ಮಣ್ಣು ಮಾಡಿದ್ದು ಮನಕಲಕುವಂತೆ ಮಾಡಿತ್ತು. ಕಣ್ಣಂಚಲ್ಲಿ ನೀರು ತುಂಬಿತ್ತು. ಉಮೇಶ್ ಎಂದಿನಂತೆ ತಮ್ಮ ಪೆಟ್ ರೆಸಾರ್ಟ್​ನಲ್ಲಿದ್ದ ವೇಳೆ ವಾಟ್ಸ್ಆ್ಯಪ್​ಗೆ ಮೃತ ನಾಯಿ ಮರಿಯ ಫೋಟೋ ಹಾಗೂ ವಿಳಾಸ ಬಂತು. ತಕ್ಷಣ ಉಮೇಶ್ ಆ ಸ್ಥಳಕ್ಕೆ ದೌಡಾಯಿಸಿದರು.

ನಾಯಿ ಮರಿ ಅಪಘಾತದಲ್ಲಿ ಸಾವನ್ನಪ್ಪಿತ್ತು. ಮೆಸೇಜ್ ಕಳುಹಿಸಿದ್ದವರೇ ನಾಯಿ ಮರಿಯ ಮೃತದೇಹವನ್ನು ರಸ್ತೆ ಬದಿಯಲ್ಲಿ ಇಟ್ಟಿದ್ದರು. ಅದರ ಪಕ್ಕದಲ್ಲೇ ಮರಿ ನಾಯಿಯ ತಾಯಿ ನಿಂತಿತ್ತು. ಉಮೇಶ್​ಗೆ ಆ ದೃಶ್ಯ ನೋಡುತ್ತಿದ್ದಂತೆ ದುಃಖ ಉಮ್ಮಳಿಸಿ ಬಂತು. ಅದರ ಹತ್ತಿರ ಹೋದರೂ, ಮರಿಯ ತಾಯಿ ಅಲ್ಲಿಂದ ಕದಲುತ್ತಿರಲಿಲ್ಲ. ನಾಯಿಗಳ ಜೊತೆ ಪಳಗಿದ್ದ ಉಮೇಶ್ ಕಣ್ಣು ಸನ್ನೆ, ಮುಖಭಾವದಲ್ಲೇ ತಾನು ಬಂದಿರುವ ಉದ್ದೇಶವನ್ನು ಆ ನಾಯಿಗೆ ಅರ್ಥ ಮಾಡಿಸಿದರು.

ತಕ್ಷಣ ಆ ನಾಯಿ ಪಕ್ಕಕ್ಕೆ ಸರಿದು ನಿಂತಿತ್ತು. ಅಲ್ಲೇ ಪಕ್ಕದಲ್ಲೇ ಒಂದು ಜಾಗ ನೋಡಿ ಗುಂಡಿ ತೆಗೆದು ಆ ನಾಯಿ ಮರಿಯನ್ನು ಮಣ್ಣು ಮಾಡಿದರು. ಅಷ್ಟೆಲ್ಲಾ ಕೆಲಸ ಆಗುವರೆಗೂ ಅದರ ಅಮ್ಮ ಅಲ್ಲಿಯೇ ನಿಂತಿತ್ತು. ಕೆಲಸ ಮುಗಿಸಿ ಅಲ್ಲಿಂದ ಹೊರಟಾಗ ಆ ನಾಯಿ ಇವರಿಗೆ ಕೃತಜ್ಞತೆ ಅರ್ಪಿಸುತ್ತಾ ಉಮೇಶ್ ವಾಹನ ಕಣ್ಮೆರೆಯಾಗುವವರೆಗೂ ಉಮೇಶ್ ವಾಹನವನ್ನೇ ನೋಡುತ್ತಾ ನಿಂತಿತ್ತು. ಆ ಅಪರೂಪದ ದೃಶ್ಯವನ್ನು ಉಮೇಶ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಲಾಕ್​ಡೌನ್ ಆದ ಸಂದರ್ಭದಿಂದಲೂ ನಾನು ಈ ಕೆಲಸ ಮಾಡುತ್ತಿದ್ದೇನೆ. ನಿಜಕ್ಕೂ ಈ ಕೆಲಸ ನನಗೆ ತೃಪ್ತಿ ನೀಡಿದೆ. ವಾಹನ ಸವಾರರ ಅತಿ ವೇಗವೇ ನಾಯಿಗಳು ಸಾವನ್ನಪ್ಪಲು ಕಾರಣ. ಸ್ವಲ್ಪ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ನಾಯಿಗಳ ಸಾವನ್ನು ತಪ್ಪಿಸಬಹುದು. ಇನ್ನು ಯಾರಾದರೂ ನಾಯಿಯ ಮೃತದೇಹ ನೋಡಿದರೆ ನನ್ನ ಮೊಬೈಲ್​ಗೆ ಮಾಹಿತಿ ನೀಡಿ ನಾನು ಅದನ್ನು ಮಣ್ಣು ಮಾಡುವ ಕೆಲಸ ಮಾಡುತ್ತೇನೆ.

ನಾನು ಆರಂಭಿಸಿರುವ ಈ ಕೆಲಸಕ್ಕೆ ಸ್ನೇಹಿತರು ಹಿತೈಷಿಗಳು ಬೆಂಬಲವಾಗಿ ನಿಂತಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ನನಗೆ ಆತ್ಮ ಸಂತೃಪ್ತಿ ನೀಡಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಈ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಶ್ವಾನಪ್ರಿಯರಾದ ಉಮೇಶ್ ತಿಳಿಸಿದರು.

ಉಮೇಶ್​ಗೊಂದು ಸಲಾಂ ಸತ್ತ ಮನುಷ್ಯರನ್ನೇ ಅನಾಥ ಶವವಾಗಿಸುವ ಈ ಕಾಲಘಟ್ಟದಲ್ಲಿ ಉಮೇಶ್ ಅವರ ಶ್ವಾನ ಪ್ರೀತಿ ನಿಜಕ್ಕೂ ಶ್ಲಾಘನೀಯ. ನಾಯಿಗಳು ಸಹ ನಮ್ಮಂತೆ, ಅವುಗಳಿಗೂ ಜೀವಿಸುವ ಹಕ್ಕಿದೆ. ನಾವು ರಸ್ತೆಯಲ್ಲಿ ಮನುಷ್ಯರ ಬಗ್ಗೆ ಮಾತ್ರ ಕಾಳಜಿ ವಹಿಸಿ ವಾಹನ ಚಲಾಯಿಸಿದರೆ ಸಾಲದು. ಪ್ರಾಣಿ ಪಕ್ಷಿಗಳ ಬಗ್ಗೆಯೂ ಕಾಳಜಿ ವಹಿಸಬೇಕು.

ಇದು ಕೇವಲ ಉಮೇಶ್​ರವರ ಒಬ್ಬರ ಕೆಲಸವಲ್ಲ ನಾಗರಿಕ ಸಮಾಜದಲ್ಲಿರುವ ನಮ್ಮೆಲರ ಕರ್ತವ್ಯವೂ ಆಗಿದೆ. ಈ ನಿಟ್ಟಿನಲ್ಲಿ ಉಮೇಶ್ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸೋಣ. ಈ ಮೂಲಕ ಮಾನವೀಯತೆ ಮೆರೆಯೋಣ. ಇನ್ನು ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಇಂತಹ ಸತ್ಕಾರ್ಯ ಮಾಡುತ್ತಿರುವ ಶ್ವಾನಪ್ರಿಯ ಉಮೇಶ್​ರವರಿಗೊಂದು ಟಿವಿ9 ಡಿಜಿಟಲ್ ತಂಡದಿಂದ ಸಲಾಂ.

1702 ಅನಾಥ ಶವಗಳಿಗೆ ಮುಕ್ತಿ ಕೊಡಿಸಿರುವ ಅಪರೂಪದ ಮಹಿಳೆ.. ಯಾರಿರಬಹುದು?

Published On - 10:45 am, Thu, 7 January 21