Valentine’s Day 2021 | ಪ್ರೇಮಿಗಳ ದಿನ 2021; ಮೊಬೈಲ್ ನೋಡಿಕೊಂಡು ಒಬ್ಬೊಬ್ನೆ ಯಾಕೋ ನಗ್ತಿದೀಯಾ…ಹುಚ್ಚಾ?

Valentine's Day 2021: ನಿನಗಾಗಿ ಕಾಯುತ್ತಿದೆ ನನ್ನ ಮೊಬೈಲ್​​ನ ಮುಖಪುಟ, ಖಾಲಿ ಖಾಲಿ ಗ್ಯಾಲರಿ, ಬೈಕಿನ ಹಿಂದಿನ ಸೀಟು. ಮುಂದೊಂದು ದಿನ ಮನೆಯ ಅಟ್ಟದ ಮೇಲಿನ ಟ್ರಂಕ್ ತೆರೆದು ನೋಡುವಾಗ ನನ್ನ ಈ ಪತ್ರ ಕಂಡು ಹಳೆಯ ನೆನಪುಗಳತ್ತ ಹೆಜ್ಜೆ ಹಾಕುವಂತಾಗಿದೆ ಅನ್ನುವ ಪುಟ್ಟ ಸ್ವಾರ್ಥ ನನ್ನದು!

  • ರಾಮ್ ಮೋಹನ್.ಭಟ್.ಎಚ್
  • Published On - 18:47 PM, 14 Feb 2021
Valentine's Day 2021 | ಪ್ರೇಮಿಗಳ ದಿನ 2021; ಮೊಬೈಲ್ ನೋಡಿಕೊಂಡು ಒಬ್ಬೊಬ್ನೆ ಯಾಕೋ ನಗ್ತಿದೀಯಾ...ಹುಚ್ಚಾ?
ನನ್ನ ಮೌನದ ಪ್ರಶ್ನೆಗೆ ನಿನ್ನ ನಾಚಿಕೆಯ ನೋಟವೇ ಸದ್ಯದ ಉತ್ತರ.

ನನ್ನ ಮನ ಭಾವನೆಗಳ ಬಿರುಸಿನ ಓಟದಿಂದ ಮಾಮರವೇರಿ ಮಂಡಕ್ಕಿ ತಿನ್ನುತ್ತಿದೆ. ಭ್ರಮಾಲೋಕದಲ್ಲೊಂದು ಸಿನೆಮಾ ನಿರ್ಮಿಸುತ್ತಿರುವೆ. ಅದರಲ್ಲಿ ನಾನೇ ಹೀರೋ, ನೀನೇ ಹೀರೋಯಿನ್. ಈ ಮಾತುಗಳೆಲ್ಲ ಬರೀ ತೋರ್ಪಡಿಕೆಗಲ್ಲ, ವಾಸ್ತವದ ಬಿಂಬ. ಪೆನ್ನು ಪೇಪರು ಮನಸ್ಸಿಗೆ ಮೈಕು, ಸ್ಪೀಕರ್ ಇದ್ದಂತೆ. ಇವುಗಳಿಂದ ನನ್ನ ಮನದಾಳದ ಮಾತನ್ನು ಲೋಕಕ್ಕೇ ಸಾರುವೆ. ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ ಅನ್ನೋ ಫಿಲೋಸಪಿಯನ್ನು ನಾನು ನಂಬುವವನಲ್ಲ. ತಾಜ್ ಮಹಲ್ ಸೃಷ್ಟಿಸುವ ಕೆಪಾಸಿಟಿಯೂ ಇಲ್ಲ. ನೆಮ್ಮದಿಯ ಬದುಕಿಗೆ ನಿಷ್ಠೆಯ ಪ್ರೀತಿಯಿಂದ ನಾನಾಗುವೆ ಕಾವಲುಗಾರ. (Valentine’s Day 2021)

“ಮೊಬೈಲ್ ನೋಡಿಕೊಂಡು ಒಬ್ಬೊಬ್ನೆ ಯಾಕೋ ನಗ್ತಿದೀಯಾ…ಹುಚ್ಚಾ” ಎಂಬ ಅಮ್ಮನ ಬೈಗುಳಕೆ ಹೊಣೆ ನೀನೇ. ಕಳೆದ ನಿನ್ನೆಗಳಲ್ಲಿ ಕನಸಾಗಿ ನೀ ಬಂದೆ, ಇಂದು ನೆನಪಾಗಿರುವ ನೀನು ನಾಳೆ ಯಾರಾಗುವೆ ಎಂಬ ಪ್ರಶ್ನೆಗೆ ಉತ್ತರ ನೀಡುವೆಯಾ? ಹೂ,ಹಣ್ಣು,ನಕ್ಷತ್ರಕ್ಕೆ ಹೋಲಿಸಿ ನಿನ್ನನ್ನು ಬಣ್ಣಿಸಲು ನಾ ಕವಿಯಲ್ಲ.ಆದರೆ ನಾ ಗೀಚುವ ಸಾಲುಗಳಲ್ಲಿ ನೀನೇ ಜೀವಂತ.

ಕಾಲೇಜಿನ ಕಾರಿಡಾರಲ್ಲಿ ಒಂದು ಕ್ಷಣ ನಿನ್ನ ದರ್ಶನವಾದರೂ ಸಾಕು, ದಿನಗಳ ಮುಂದಿನ ಬೇಟಿಯ ತನಕ ಆ ಗುಂಗಲ್ಲೇ ಕಳೆದುಬಿಡುವೆ. ಮುಂಗುರಳ ಸರಿಸಿ ನೋಟದ ಬಾಣವ ಪ್ರಹರಿಸುವ ಮಾಟಗಾತಿ ನೀ, ತಿಳಿಸದೆ ಮಾಯವಾಗುವೆ ಮರೀಚಿಕೆಯಂತೆ.ಕಮಿಟ್​ಮೆಂಟ್ ಎಂಬ ಒತ್ತಡಕ್ಕೆ ಸಿಲುಕಿದ ದೂರುಪೆಟ್ಟಿಗೆಗಳನ್ನು ಕಂಡು ಪ್ರೇಮದ ಮೇಲೆ ಜಿಗುಪ್ಸೆ ಹುಟ್ಟಿತ್ತು.ಸುಂದರ ಗಾರ್ಡನ್ ಸೃಷ್ಟಿಸಿ ಹಾರಾಡುತ್ತಿದ್ದ ಪ್ರೇಮಪಕ್ಷಿಗಳನ್ನು ಕಂಡು ಖುಷಿ ಜೊತೆಗೆ ಗೊಂದಲವಾಗುತ್ತಿತ್ತು. ಆದ್ರೆ ಈ ಗೊಂದಲಕ್ಕೆ ತೆರೆ ಎಳೆದವಳು ನೀನು.

ನಿನಗಾಗಿ ಕಾಯುತಿದೆ..

ಸಿಗರೇಟು ಬಿಯರ್ ಬಾಟಲಿಗಳ ನಡುವೆ ಸಿಲುಕಿ ಭಗ್ನ ಪ್ರೇಮಿಗಳ ಸಾಲಿಗೆ ನಾನಂತೂ ಸೇರುವುದಿಲ್ಲ.ನೀ ಜೊತೆಯಾದರೆ ಭೂಮಿಗೆ ಮುಂಗಾರಿನ ಪನ್ನೀರು ಬೆರೆತ ಘಮ.ಇಲ್ಲವೇ ನೆನಪುಗಳ ಬುತ್ತಿಯಲಿ ಸವಿ ನೀಡೋ ಏಲಕ್ಕಿ.ಗೆಳೆಯ ಸದಾ ಪ್ರೇಯಸಿಯೊಂದಿಗೆ ಮೊಬೈಲ್​ನಲ್ಲಿ ನೇತಾಡುವಾಗ ನೀನೇ ನೆನಪಾಗುತ್ತಿ.ನನಗೂ ಹೊಟ್ಟೆ ಕಿಚ್ಚಿದೆ ಅನ್ನೋದನ್ನ ಪದೇ ಪದೆ ನೆನಪು ಮಾಡುತ್ತಿ. ನಾವ್ಯಾವಾಗ ಮೊಬೈಲ್​​ನಲ್ಲಿ ಪಿಸುಗುಡುತ್ತಾ, ಅರಿವಿಲ್ಲದೇ ನಗುತ್ತಾ, ಕಾಲ ಬೆರಳಲ್ಲಿ ಗುಂಡಿ ತೋಡುತ್ತಾ ಸಮಯ ಕಳೆಯುವುದು?

ನೀನೆದುರು ಬಂದಾಗ ಈ ತುಂಟತನವೆಲ್ಲ ಸದ್ದಿಲ್ಲದೆ ಮೂಕವಾಗುತ್ತದೆ. ನನ್ನ ಮೌನದ ಪ್ರಶ್ನೆಗೆ ನಿನ್ನ ನಾಚಿಕೆಯ ನೋಟವೇ ಸದ್ಯದ ಉತ್ತರ. ನಿನಗಾಗಿ ಕಾಯುತ್ತಿದೆ ನನ್ನ ಮೊಬೈಲ್​​ನ ಮುಖಪುಟ, ಖಾಲಿ ಖಾಲಿ ಗ್ಯಾಲರಿ, ಬೈಕಿನ ಹಿಂದಿನ ಸೀಟು.

ಮೊದಲ ಪ್ರೀತಿಯೇ ಹಾಗೆ ಎಂದೂ ಮರೆಯದ ಹಾಡು; ಹೃದಯದ ಆಲ್ಬಮ್​ನಲ್ಲಿ ಮಾಸದ ಪುಟ್ಟ ಗೂಡು. ಕೆಲವರಿಗೆ ಲೈಲಾ ಮಜನೂ, ಇನ್ನೂ ಕೆಲವರಿಗೆ ರೋಮಿಯೋ ಜೂಲಿಯೆಟ್ ಜೀವನ ಪ್ರೇಮದ ಪಾಠ. ಆದರೆ ಪ್ರೀತಿಗೆ ಸೂಕ್ತ ಪರ್ಯಾಯ ಪದ ಅಪ್ಪ ಅಮ್ಮ. ಕಾಳಜಿಯೇ ಪ್ರೀತಿ, ಜವಾಬ್ದಾರಿ ಅದರ ರೀತಿ. ನಮ್ಮ ಬಾಳಿಗೆ ಇವರೇ ಸ್ಪೂರ್ತಿ.

ಈ ಎಲ್ಲಾ ಪ್ರಶ್ನೆಗಳನ್ನು, ಭಾವನೆಗಳನ್ನು ವಾಟ್ಸಾಪ್ ನಲ್ಲಿ ತೆರೆದಿಡಬಹುದಿತ್ತು.ಆದರೆ ಪ್ರೇಮಿಗಳ ದಿನದ ವಿಶೇಷತೆಯ ಜೊತೆಗೆ ಇದೊಂದು ವಿಭಿನ್ನತೆ ಇರಲಿ. ಮುಂದೊಂದು ದಿನ ಮನೆಯ ಅಟ್ಟದ ಮೇಲಿನ ಟ್ರಂಕ್ ತೆರೆದು ನೋಡುವಾಗ ನನ್ನ ಈ ಪತ್ರ ಕಂಡು ಹಳೆಯ ನೆನಪುಗಳತ್ತ ಹೆಜ್ಜೆ ಹಾಕುವಂತಾಗಿದೆ ಅನ್ನುವ ಪುಟ್ಟ ಸ್ವಾರ್ಥ ನನ್ನದು!

ರಾಮ್ ಮೋಹನ್.ಭಟ್.ಎಚ್

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಹತೋಟಿಗೆ ಸಿಗದೇ ಹುಚ್ಚು ಕುದುರೆಯಂತೆ ಓಡುವ ನನ್ನ ಪ್ರೀತಿಗೆ ಮುನ್ನುಡಿ ಬರೆಯುವೆಯಾ ಗೆಳೆಯಾ?