ನಿನ್ನಲೇ ನಾನಾಗಿ ನನ್ನಲೇ ಒಂದಾಗಿ ಬಾಳಬೇಕೆಂಬ ಈ ಜೀವನಕ್ಕೆ ನಿನ್ನದೇ ಒಲವು, ನಿನ್ನದೇ ಧ್ಯಾನ. ನಿನ್ನ ಪ್ರತಿ ಹೆಜ್ಜೆಯ ಗುರುತು ನನ್ನ ಹೃದಯ ಮಿಡಿತವನ್ನು ಹೆಚ್ಚಿಸುತ್ತಿದೆ. ನೀ ಸನಿಹವಿದ್ದರೆ ನನ್ನಲ್ಲಿನ ಆಸೆಗೊಂದು ವಿರಾಮ ಸಿಕ್ಕಿದಂತೆ. ನಿನ್ನ ನೋಡುವುದೇ ಈ ಜಗದ ಅತಿ ಸುಂದರ ಸೋಜಿಗವೆನಿಸುತ್ತದೆ. ನಿನ್ನ ಆ ಮಾತಿನ ವೈಖರಿಗೆ ನನ್ನ ಮನ ಸೋತು ನೀರಾಗುತ್ತದೆ. ನೀನು ನನ್ನವನು ಎಂಬ ಭಾವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀನು ನನ್ನ ದೇವರಾಗಿ, ನನ್ನಲೇ ಒಬ್ಬನಾಗಿ ಕೊನೆಯವರೆಗೆ ಉಳಿದುಬಿಡು ಎಂದು ಕೋರಿಕೊಳ್ಳುವೆ. ನಿನ್ನ ಆಗಮನಕ್ಕಾಗಿ ನನ್ನೊಳಗಿನ ತಾಳ್ಮೆ ಸೂತ್ರ ಹಿಡಿದು ಕೊನೆವರೆಗೂ ಕಾಯುವೆ. ನೀನು ನನ್ನವನಾಗಿ ಬಾಳುವವರೆಗೂ ನಿನ್ನದೇ ಅಮಲಿನಲಿ ಕಾಯುವೆನು!
ನಿನ್ನ ಆಗಮಕ್ಕಾಗಿ ಕಾಯುತ್ತಾ ಹಲವು ಹರ್ಷಗಳೇ ಕಳೆದು ಹೋದವು. ನಿನ್ನ ರೂಪ ನನಗೆ ತಿಳಿದಿಲ್ಲ, ನಿನ್ನ ಮಾತು ನಾನಿನ್ನು ಕೇಳಿಲ್ಲ, ನಿನ್ನ ಬಗ್ಗೆ ನನಗೆ ಯಾವುದೆ ಮಾಹಿತಿಯೂ ಇಲ್ಲ. ಆದರೂ ನೀನು ನನ್ನವನು ಎಂಬ ಭಾವನೆ ಬಿಗಿಯಾಗಿದೆ. ನೀನು ನನ್ನ ಹೃದಯದ ಬಾಗಿಲು ತೆರೆದು ಒಳಗಡೆ ಬರುವವರೆಗೂ ನನ್ನ ನಿನ್ನ ಒಲವಿನ ಈ ಕಣ್ಣಾಮುಚ್ಚಾಲೆಯಾಟ ಹೀಗೇ ಸಾಗಲಿದೆ ನೋಡು. ಮನಸ್ಸಿನಲ್ಲಿ ಜ್ಞಾಪಿಸುತ್ತಾ, ಕನಸಿನಲ್ಲಿ ಕನವರಿಸುತ್ತಾ, ನಿನ್ನನ್ನೇ ನನ್ನ ಜಗತ್ತಾಗಿಸಿಕೊಂಡಿದ್ದೇನೆ. ನಿನ್ನ ಪ್ರತಿ ಹೆಜ್ಜೆಗೂ ಪ್ರೋತ್ಸಾಹ ನೀಡಿ ನಿನ್ನನ್ನು ನನ್ನವನಾಗಿಸಿಕೊಳ್ಳುವ ಕಲ್ಪನೆಯಲ್ಲಿ ತೇಲಾಡುತ್ತಾ ಸಾಗಿದ್ದೇನೆ. ಇಷ್ಟು ದಿನಗಳವರೆಗೆ ನೀನು ಯಾರದೋ ಮಗ, ಅಣ್ಣ,ತಮ್ಮನಾಗಿರಬಹುದು. ಆದರೆ, ನೀನು ನನ್ನವನಾದ ಮೇಲೆ ಅವರೆಲ್ಲರೂ ನೀಡುವ ಪ್ರೀತಿಯನ್ನು ನಾನೊಬ್ಬಳೇ ನೀಡುವೆ. ನಿನ್ನ ಪ್ರತಿ ದಾರಿಗೂ ದೀಪವಾಗಿ ಉರಿದು ನಿನ್ನನ್ನು ಈ ಜಗತ್ತಿನ್ನಲ್ಲಿ ಬೆಳಗಿಸಲು ಪ್ರಯತ್ನಿಸುವೆ ಕಣೋ.
ಇದನ್ನೂ ಓದಿ: ಕಡಲಿನ ಅಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳು ನಿನ್ನದೇ ಆಗಲಿ ಗೆಳೆಯ!
ನಿನ್ನ ಬರುವಿಕೆ ಆದಷ್ಟು ಬೇಗ ಈಡೇರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತಿರುವೆ. ನೀನು ಹೇಗೇ ಇರು, ಎಲ್ಲೇ ಇರು ಆದರೆ ಎಂದೆಂದಿಗೂ ನನ್ನವನಾಗಿ ನನ್ನ ಪ್ರಾಣಕ್ಕೆ ಪ್ರಾಣವಾಗಿ ಇರು ಎನ್ನುವುದಷ್ಟೇ ನನ್ನ ಬೇಡಿಕೆ. ನನ್ನೊಳಗಿನ ಪ್ರೇಮವನ್ನು ನಿನ್ನಲ್ಲಿ ಹೀಗೆ ಹೇಳಿಕೊಳ್ಳುತ್ತಿರುವೆ. ಆದರೆ ನೀ ನನ್ನ ಮುಂದೆ ಬಂದಾಗ ನನಗೆ ಇಷ್ಟು ಧೈರ್ಯ ಇರುತ್ತದೋ ಇಲ್ಲವೋ ಗೊತ್ತಿಲ್ಲ. ನಾನೇನಾದರೂ ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ತಡವರಿಸಿದರೆ ನೀನೇ ನನಗೆ ನಿನ್ನ ಭಾವನೆಯನ್ನು ತಿಳಿಸಿಬಿಡು. ಎಷ್ಟೆಂದರೂ ನಾನು ಹೆಣ್ಣು ಕಣೋ.. ತುಸು ನಾಚಿಕೆ ಹೆಚ್ಚಿರುವುದು ಸಹಜ.
ಮಧುರಾ ಎಲ್.ಭಟ್ಟ
ಪ್ರಥಮ ವರ್ಷ ಪತ್ರಿಕೋದ್ಯಮ
ಸ್ನಾತಕೋತ್ತರ ಪದವಿ ವಿಭಾಗ
ಎಸ್.ಡಿ.ಎಮ್ ಕಾಲೇಜು, ಉಜಿರೆ
Published On - 6:02 pm, Thu, 11 February 21