Valentine’s Day: ಮಿಂಚಿನಂತೆ ಬಂದು ‘ಅಣ್ಣ’ ಆಗಿಬಿಟ್ಯಲ್ಲೋ ಹುಡುಗಾ!

|

Updated on: Feb 13, 2021 | 5:48 PM

My Love Story: ನಾನು ಹುಡ್ಗೀರ ಕಾಲೇಜಿನಲ್ಲಿ ಪಿಯುಸಿ ಮುಗ್ಸಿ ಬಂದಿರೋದಕ್ಕೆ ಅನ್ಸುತ್ತೆ, ನಂಗೆ‌ ಹುಡುಗ್ರು‌ ಅಂದ್ರೆ ಅಷ್ಟಕಷ್ಟೆ. ಜೊತೆಗೆ, ಒಂಥರಾ ಭಯನೂ‌ ಆಗ್ತಾ ಇತ್ತು. ಆದ್ರೆ‌ ಅದ್ಯಾವ ಸೈಕಲ್ ಗ್ಯಾಪ್​ನಲ್ಲಿ‌ ನಿನ್ನ ನೋಡಿದ್ನೋ ಆ ಕ್ಷಣಕ್ಕೆ ಸ್ವರ್ಗ ರಪ್ ಅಂತ ಒಂದ್ಸಲ ಪಾಸ್ ಆಯ್ತು.

Valentines Day: ಮಿಂಚಿನಂತೆ ಬಂದು ‘ಅಣ್ಣ’ ಆಗಿಬಿಟ್ಯಲ್ಲೋ ಹುಡುಗಾ!
ನನ್ನ ಫಸ್ಟ್ ಅಂಡ್ ಲಾಸ್ಟ್ ಲವ್ ಸ್ಟೋರಿ ಹಾರಿಬಲ್ ಆಗಿ ಮುಗ್ದು ಹೋಯ್ತು
Follow us on

ಅದೇನ್ ಮೋಡಿ‌ ಮಾಡಿದ್ಯಾ ನೀನು? ನಂಗಂತೂ ಗೊತ್ತಾಗ್ತಾ ಇಲ್ಲ. ಏನ್ ಗೊತ್ತಾ.. ನಿನ್ನ ಯೋಚ್ನೆ ಇಂದ ಹೊರಗೆ ಬರೋಕೆ ಆಗ್ತಾನೇ ಇಲ್ಲ ನಂಗೆ. ನೀನೋ ಸಿಡುಕು ಮೂತಿ‌ ಸಿದ್ದಪ್ಪ (ನನ್ನ ವಿಷ್ಯದಲ್ಲಿ ಮಾತ್ರ) ಇನ್ನೂ ನಾನೋ ಒಂಥರಾ ನನ್ನದೆ‌ ಲೋಕದಲ್ಲಿ ತಲ್ಲೀನತೆಯಲ್ಲಿ ಇರೋಳು. ಮೊದಲ ಸಲ ನಿನ್ನ ಕಾಲೇಜು ಕಾರಿಡಾರಿನಲ್ಲಿ ನೋಡಿದಾಗ ಏನೋ ಅನ್ನಿಸಿತ್ತು. ನಾನು ಹುಡ್ಗೀರ ಕಾಲೇಜಿನಲ್ಲಿ ಪಿಯುಸಿ ಮುಗ್ಸಿ ಬಂದಿರೋದಕ್ಕೆ ಅನ್ಸುತ್ತೆ, ನಂಗೆ‌ ಹುಡುಗ್ರು‌ ಅಂದ್ರೆ ಅಷ್ಟಕಷ್ಟೆ. ಜೊತೆಗೆ, ಒಂಥರಾ ಭಯನೂ‌ ಆಗ್ತಾ ಇತ್ತು. ಆದ್ರೆ‌ ಅದ್ಯಾವ ಸೈಕಲ್ ಗ್ಯಾಪ್​ನಲ್ಲಿ‌ ನಿನ್ನ ನೋಡಿದ್ನೋ ಆ ಕ್ಷಣಕ್ಕೆ ಸ್ವರ್ಗ ರಪ್ ಅಂತ ಒಂದ್ಸಲ ಪಾಸ್ ಆಯ್ತು. ನಿನ್ನ ನೋಡ್ಬೇಕು ಅಂತ ದಿ‌ನದಲ್ಲಿ‌ ಅದೆಷ್ಟು‌ ಸಲ ರೀಸನ್ ಇಲ್ದೆ ಇದ್ರೂ ನಿನ್ನ ಕ್ಲಾಸ್ ಪಕ್ಕ ಸುಮ್ ಸುಮ್ನೆ ಅಲೆಯುತ್ತಾ ಇದ್ದೆ. ನಿನ್ನ ಕದ್ದು ಮುಚ್ಚಿ ನೋಡ್ತಾ ಇದ್ದೆ. ಆದ್ರೆ ನಮ್ಮ್ ಕ್ಲಾಸ್ ಪಕ್ಕದ ಬಿಳಿ‌ ಜಿರಳೆ ನಿಂಜೊತೇನೆ ಇರ್ತಾ ಇದ್ಲು. ನಂಗೆ ಅವ್ಳನ ನೋಡ್ತ ಮೈಯೆಲ್ಲಾ ಉರಿತಾ‌‌ ಇತ್ತು ಗೊತ್ತಾ? ಆದ್ರೇನ್ ಮಾಡ್ಲಿ ಅವ್ಳು‌ ನಿನ್ನ ಗುಡ್ ಫ್ರೆಂಡ್‌ ಅಂತ ಗೊತ್ತಾದ ಮೇಲೆ ಸುಮ್ನೆ ಇರ್ಬೇಕಾಯ್ತು.

ಇನ್ನೊಂದು ‌ವಿಷ್ಯ ಗೊತ್ತ ನನ್ನ ಅಪ್ಪನ ಬರ್ತ್ ಡೇ ದಿನಾನೇ ನಿಂದು‌ ಬರ್ತ್ ಡೇ. ಅದು‌ ನಿನ್ನ ಫೇಸ್ಬುಕ್ ನೋಡಿ‌ ಗೊತ್ತಾಯ್ತು. ಇನ್ನೂ ನಿನ್ನ ಹೆಸ್ರು ತಿಳಿಯೋಕೆ ನನ್ನ ಫ್ರೆಂಡ್ಸ್ ಮಾಡಿದ ಕಿತಾಪತಿ ಒಂದಾ ಎರಡಾ, ಆವಾಗಷ್ಟೆ ಕಾಲೇಜಿಗೆ ಬಂದಿದ್ದೀವಿ‌‌ ನೀನ್ ಬೇರೆ‌ ಫೈನಲ್ ಇಯರ್. ಈ ವಿಷ್ಯಾ ಎಲ್ಲಾ ಗೊತ್ತಾಗಿ ಏನಾದ್ರು ಆದ್ರೆ ಅಂತ ಭಯ. ಹೇಗೋ ನನ್ನ ಕುಳ್ಳಿ ನಿನ್ನ ಹೆಸ್ರು ತಿಳ್ಕೊಂಡು ಬಂದ್ಲು ನೋಡು. ಎಷ್ಟ್ ಖುಷಿ ಆಯ್ತು ಅಂದ್ರೆ ಆ‌ ದಿನ ಪೂರ್ತಿ ನಿನ್ನ ಫೇಸ್ಬುಕ್​ನಲ್ಲಿ ಹುಡ್ಕಾಡಿ ನಿನ್ನ ಇರೋ ಬರೋ ಫೋಟೋಸ್ ಎಲ್ಲಾ ಸೇವ್ ಮಾಡಿ ಇಟ್ಕೊಂಡೆ. ನಿಂಗೊತ್ತ ಆವಗಂತೂ ನನ್ನ ಮೊಬೈಲ್ ಗ್ಯಾಲರಿ ಮತ್ತು ಮನಸಿನ ಗ್ಯಾಲರಿಯಲ್ಲಿ ನಿನ್ನದೇ ಫೋಟೋಗಳು ತುಂಬಿ‌ಕೊಂಡು ಬಿಟ್ಟಿತ್ತು. ದಿನದಲ್ಲಿ‌ ಒಂದು ಹತ್ತು ಸಲನಾದ್ರು ನನ್ನ ಕಣ್ಗಳಿಗೆ ನಿನ್ನ ಬಿಂಬ ಬೀಳ್ಬೇಕಾಗಿತ್ತು. ಇಲ್ಲಾಂದ್ರೆ ಅದು ಕೋಪ ಮಾಡ್ಕೊಳ್ತಾ ಇತ್ತೋ ಏನೋ.

ಹೇ ಇನ್ನೊಂದು ವಿಷ್ಯ ಗೊತ್ತ ನನ್ನ ಕುಳ್ಳಿ ನಿನ್ನ ಫ್ರೆಂಡ್​ಶಿಪ್ ಮಾಡ್ಕೊಂಡಿದ್ದೇ, ನನ್ನ ನಿನ್ನ ಒಂದು‌ ಮಾಡೋಕೆ. ಆದ್ರೆ ಏನ್ ಮಾಡೋದು‌ ಹಾಳು ಭಯ ಮತ್ತೆ ಎಲ್ಲಿ ನೀನು ಓಕೆ‌ ಎನ್ನೋದಿಲ್ವೋ ಅನ್ನೋ ಯೋಚ್ನೆಯಲ್ಲಿ‌ ಆ ಕೆಲ್ಸ ಮಾಡೋ ಧೈರ್ಯನೇ ಬಂದಿಲ್ಲ. ಅವ್ಳು ಎಷ್ಟು ಹೆಲ್ಪ್ ಮಾಡ್ತ ಇದ್ಲು ಅಂದ್ರೆ ಕಾಲೇಜ್ ಡೇ ದಿನ ನಿಂಜೊತೆ ಒಂದು ಸೆಲ್ಫಿ ಬೇಕು ಅಂತ ಕೇಳಿದ್ಲು ನೆನ್ಪಿದ್ಯಾ? ಅದು ನನ್ನ ಆಸೆ ತೀರ್ಸೋಕೆನೆ ಆಗಿತ್ತು ಗೊತ್ತಾ? ಇನ್ನೊಂದು ವಿಷ್ಯ ಗೊತ್ತಾ ಆ ದಿನ ನಾನು ನಿನ್ನ ಪಕ್ಕ ನಿಂತಿದ್ದೆ‌. ಆ ಫೋಟೊ ಅಂತೂ ನನ್ನ ವ್ಯಾಟ್ಸಾಪ್ ವಾಲ್ ಪೇಪರ್ ಆಗಿತ್ತು ತುಂಬಾ‌ ದಿನ. ಆದ್ರೇ ಏನ್ ಮಾಡ್ಲಿ ಅಷ್ಟು ಹೊತ್ತಿಗಾಗ್ಲೆ ನಿಂದು‌ ಫೈನಲ್ ಇಯರ್ ಕೊನೆ‌ ಹಂತಕ್ಕೆ ಬಂದಿತ್ತು.

ಇದನ್ನೂ ಓದಿ: ಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದು..

ನಂಗಿನ್ನೂ ನೆನ್ಪಿದೆ ಆ ದಿನ ನೀನು‌ ಕಾಲೇಜ್ ಗ್ರೌಂಡ್ ಪಕ್ಕ ಒಬ್ನೇ ಕೂತಿದ್ಯ. ನಾವು ತ್ರಿಮೂರ್ತಿಗಳು ಅಲ್ಲೇ ಪಕ್ಕ ಸುತ್ತಾಡ್ತಿದ್ವಿ. ನೀನು ಸಡನ್ನಾಗಿ ನನ್ನ ಕರ್ದು‌ ನಮ್ಮ ಊರಿನ್ ಹೆಸ್ರು ಹೇಳಿ ಅಲ್ಲಿ ಅವ್ಳು ಅಲ್ವ ಅಂತ ಕೇಳಿದ್ಯ. ಅಯ್ಯೋ ಎಷ್ಟ್ ಖುಷಿ ಆಯ್ತು ಆಂದ್ರೆ‌ ನಂಗೆ‌ ‌ಉತ್ತರ ಕೊಡೋಕೆ ಆಗಿಲ್ಲ. ಆಮೇಲೆ ನೀನ್ ಹೇಳಿದ ಮಾತು ಇದ್ಯಲ್ಲ. ಅದು ನನ್ನ ಹೃದಯಕ್ಕೆ ಒಂಥರಾ ಆಕ್ಸಿಡೆಂಟ್ ಆಗೋ‌ ತರ ಇತ್ತು. ನಾನು ನೀನು ಅಣ್ಣ ತಂಗಿ ಆಗ್ಬೇಕು ಕುಟುಂಬದಲ್ಲಿ ಅನ್ನೋವಾಗ ಕರೆಂಟ್ ಶಾಕ್ ಹೋಡ್ದ ಕಾಗೆ ತರ ಆಗಿ‌ ಹೋದೆ. ಆಮೇಲೆ‌ ತಿಳೀತು ನೋಡು ನಿನ್ನ ಮನೇನೆ ನಮ್ದು ಮೂಲ ಮನೆ‌ ಅಂತ. ಆದ್ರೆ ಹೋಗೋದು ಬರೋದು ಅಷ್ಟಿಲ್ಲ ಅಂತ‌. ಅಲ್ಲಿಗೆ ನಾನು ಕಂಡ ನಿನ್ನ ಬಗೆಗಿನ ಕನಸಿನ ಲೋಕ ಎಲ್ಲಾ ಛಿದ್ರ ಆಗೋಯ್ತು. ಹಾಗೇ ನನ್ನ ಫಸ್ಟ್ ಅಂಡ್ ಲಾಸ್ಟ್ ಲವ್ ಸ್ಟೋರಿ ಹಾರಿಬಲ್ ಆಗಿ ಮುಗ್ದು ಹೋಯ್ತು.

ಸ್ವಾತಿ ನಾಯಕ್