ಪ್ರೀತಿ ಎಂಬ ಎರಡಕ್ಷರದ ಪದದಲ್ಲಿ ಅದೆಷ್ಟು ಆನಂದ ತುಂಬಿದೆ ಗೊತ್ತೇ? ಅದರಲ್ಲಿ ಒಂದು ಬಾರಿ ಮುಳುಗಿದರೆ ಮತ್ತೆ ಎದ್ದು ಬರುವುದು ಕಷ್ಟ ಸಾಧ್ಯ. ನಾನೀಗ ನಿನ್ನ ನಗೆಗೆ ಮರುಳಾಗಿ ಈ ಪ್ರಚಂಚವನ್ನೇ ಮರೆತು ನಿನ್ನದೇ ಧ್ಯಾನದಲ್ಲಿ ಬದುಕುತ್ತಿದ್ದೇನೆ. ನಾನು ಪ್ರೀತಿಸುತ್ತಿರುವ ವಿಷಯ ಗೊತ್ತಿದ್ದರೂ ಏನೂ ಗೊತ್ತಿಲ್ಲದವನಂತೆ ನಟಿಸುವ ನಿನ್ನ ಕಲೆಗೆ ‘ಆಸ್ಕರ್ ಅವಾರ್ಡ್’ ಕೊಡಲೇಬೇಕು ಬಿಡು. ಬೆಳಗ್ಗೆ ಎದ್ದಾಗಿನಿಂದ ಹಿಡಿದು, ತಿರುಗಿ ಹಾಸಿಗೆಗೆ ಒರಗುವವರೆಗೂ ನಿನ್ನ ನೆನಪಿಸಿಕೊಳ್ಳದೇ ಇರುವ ಕ್ಷಣವಿಲ್ಲ, ದಿನವಿಲ್ಲ. ಯಾರಾದರೂ ನೆನಪಿಸಿಕೊಂಡರೆ ಬಿಕ್ಕಳಿಕೆ ಬರುತ್ತದೆ ಎಂದಾದರೆ ದಿನಪೂರ್ತಿ ನೀನು ಬಿಕ್ಕಳಿಸಲೇ ಬೇಕು ನೋಡು.
ಎಷ್ಟೇ ಆದರೂ ಇದು ವಾಟ್ಸಾಪ್, ಫೇಸ್ಬುಕ್‌ಗಳ ಕಾಲ. ತಂತ್ರಜ್ಞಾನ ಎನ್ನುವುದು ಪ್ರೀತಿ ಹುಟ್ಟುವುದಕ್ಕೆ, ಸಾಗುವುದಕ್ಕೆ ಮಹಾನ್ ವೇದಿಕೆಯಾಗಿದೆ. ಹೇಳಿಕೊಳ್ಳುವುದನ್ನು ಸುಲಭವಾಗಿ ಹೇಳಲು ವಾಟ್ಸಾಪ್ ಸ್ಟೇಟಸ್ ಹೇಳಿ ಮಾಡಿಸಿದ ಮಾರ್ಗ. ಹಾಗಾಗಿ ನನ್ನ ವಾಟ್ಸಪ್ ಸ್ಟೇಟಸ್ ಹಿಂದಿರುವ ತೆರೆಮರೆಯ ನಾಯಕನಂತೂ ನೀನೇ ನೋಡು ಹುಡುಗ. ನೀನೇನಾದರೂ ಸ್ಟೇಟಸ್ನಲ್ಲಿ ಬೇರೆ ಹುಡುಗಿಯ ಜೊತೆ ಬೆಸ್ಟ್ ಫ್ರೆಂಡ್ ಅಂತ ಪೋಸ್ಟ್ ಹಾಕಿದ್ರೆ ನನ್ನಿಂದ ಸಹಿಸಿಕೊಳ್ಳುವುದಕ್ಕೆ ಆಗದೇ, ಯಾವಾಗ ಡಿಲೀಟ್ ಮಾಡುತ್ತೀಯೋ ಅಂತ ಕಾಯುತ್ತೇನೆ. ಅಂತಹದ್ದರಲ್ಲಿ ಕನಸಿನಲ್ಲೂ ಅದೇ ಹುಡುಗಿಯ ಜೊತೆ ಬಂದ್ರೆ, ಹೇಗೆ ತಡೆದುಕೊಳ್ಳಬೇಕು ಹೇಳು ಈ ಬಡಜೀವ?
ಹೇಳಿ ಕೇಳಿ ಸ್ನೇಹಿತರ ಗುಂಪಲ್ಲಿ ಕೃಷ್ಣ ಎಂದೇ ಹೆಸರಾದವ ನೀನು. ಕೃಷ್ಣ ಎಂದರೆ ಗೋಪಿಕೆಯರು ಇರಲೇಬೇಕು. ನಿನಗೂ ಹುಡುಗಿಯರೇ ಜಾಸ್ತಿ ಫ್ಯಾನ್ಸ್ ಅನ್ನೋದು ಗೊತ್ತು. ಆದರೆ ಅಷ್ಟು ಮಾತ್ರಕ್ಕೆ ನಾನು ನಿನ್ನ ಪ್ರೀತಿಸಿ ರಾಧೆಯಂತೆ ದೂರ ಉಳಿಯಬೇಕು ಎಂದುಕೊಳ್ಳಬೇಡ. ಅರ್ಧಾಂಗಿ ರುಕ್ಮಿಣಿಯೋ, ನಿನ್ನ ದರ್ಶನವ ಬಯಸಿ ಹಂಬಲದಿ ಕಾಯುವ ಸತ್ಯಭಾಮೆಯೋ ಆಗಿರಲು ಇಚ್ಚಿಸುತ್ತೇನೆ. ನಿನ್ನ ನೋಡಿದಾಗಿನಿಂದ ನನ್ನನ್ನೇ ನಾ ಮರೆತಿದ್ದೇನೆ ಎಂಬುದು ಅರಿವಾದಾಗ ಈ ನನ್ನ ತುಂಟ ಹೃದಯ ಲೂಟಿಯಾಗಿದೆ ಎನ್ನುವುದು ಖಾತ್ರಿಯಾಯಿತು. ನಿನ್ನ ವಿಶಾಲ ಹೃದಯದ ಮೂಲೆಯಲ್ಲಿ ನನ್ನ ಹೆಸರಿರಬೇಕು, ಅಲ್ಲಿಯೇ ಪುಟ್ಟ ಪ್ರೇಮದ ಗೂಡನ್ನು ಕಟ್ಟಿ, ‘ಒಲವೆಂಬ ಗುಡಿಯೊಳಗೆ ಒಡೆಯ ನನ್ನವನಿವನು ನಡೆಸಿದಂತೆ ನಡೆವೆ ಕೈ ಹಿಡಿದು ನಿನ್ನ’ ಎಂಬಂತೆ ನೂರು ಕಾಲ ಬಾಳುವಾಸೆ ಇದೆ ನನಗೆ.
ಇಷ್ಟೆಲ್ಲಾ ಬರೆದ ಮೇಲೆ ನಾನು ಹೇಳೋಕೆ ಹೊರಟಿರುವ ವಿಷಯ ಏನೆಂದು ನಿನಗೆ ತಿಳಿದಿರುತ್ತದೆ ಎಂದುಕೊಳ್ಳುತ್ತೇನೆ. ಮತ್ತೆ ತಿಳಿಯದಂತೆ ನಟಿಸಿದರೆ ನನ್ನ ಅನುರಾಗದ ವಿರಹಕ್ಕೆ ನಾಂದಿಯಾಗುತ್ತೀಯ ಜೋಕೆ! ಒಲವಿನ ನೂರಾರು ಅವಸ್ಥಾಂತರಗಳಲ್ಲಿ ಒಂದಾಗಿರುವ ವಿರಹದ ನಿವೇದನೆಗೆ ಯಾವತ್ತಿಗೂ ಒದಗಿಬರುವುದೇ ಪ್ರೇಮಪತ್ರ. ಎದೆಯೊಳಗೆ ಉಕ್ಕುತ್ತಿರುವ ಏಕಮುಖಿ ಸಾಗರದಲ್ಲಿ ಸಣ್ಣದೊಂದು ಆಸೆಯಿಂದ ಈ ಕಾಗದದ ದೋಣಿಯಲ್ಲಿ ನನ್ನ ಒಲವಿನ ಹೂಗಳನಿಟ್ಟು ನಿನ್ನೆಡೆಗೆ ತೂರಿಬಿಟ್ಟಿದ್ದೇನೆ. ಆಡದೇ ಉಳಿದ ನನ್ನೊಳಗಿನ ಮಾತುಗಳೆಲ್ಲವೂ ಓಲೆಯ ಮಾಲೆಯಾಗಿ ನಿನ್ನ ಪ್ರೇಮಗಮ್ಯ ತಲುಪಿದೆ. ಒಂದು ವೇಳೆ ನೀನು ಈ ಪ್ರೀತಿಗೆ ಸಮ್ಮತಿಸಿದೆ ನನ್ನ ದ್ವೇಷಿಸಿದರೂ ನಾ ಮಾತ್ರ ನಿನ್ನಲ್ಲದೇ ಮತ್ಯಾರನ್ನು ಪ್ರೀತಿಸುವುದಿಲ್ಲ.
ಇದನ್ನೂ ಓದಿ: ಗೆಳತಿ, ಮಾತು ಚುಚ್ಚಿ ತೆಗೆವ ಶೂಲ, ಮೌನ ಒಳಗೊಳಗೆ ನಾಟುವ ಮುಳ್ಳು
ಪ್ರೇಮಿಗಳ ದಿನದ ಸಲುವಾಗಿ ನನ್ನ ಪ್ರೀತಿಯ ಒಲವಿನ ಓಲೆ ನಿನಗೆ ತಲುಪಿಸಿದ್ದೇನೆ. ನೀನು ಒಪ್ಪಿದರೆ ಈ ವರ್ಷದಿಂದಲೇ ಪ್ರೇಮಿಗಳ ದಿನವನ್ನು ಜೊತೆಯಾಗಿ ಆಚರಿಸೋಣ. ಹೇಗಿದ್ದರೂ ನಿನ್ನ ಜೇಬಿಗೆ ಕತ್ರಿ ಹಾಕುವಷ್ಟು ಖರ್ಚು ಮಾಡುವವಳಲ್ಲ. ಏಕೆಂದರೆ ನಮ್ಮ ಮುಂದಿನ ಸಂಸಾರಕ್ಕೆ ಕೂಡಿಡಬೇಕಲ್ಲವೇ? ನಿನ್ನನ್ನು ಒಂದು ಮಾತೂ ಕೇಳದೇ ಎಷ್ಟೊಂದು ಕನಸುಗಳನ್ನು ಕಟ್ಟಿದ್ದೀನಿ. ವಿನಮ್ರತೆಯಿಂದ ಬೇಡಿಕೊಳ್ಳುವೆ ಅದು ಎಂದಿಗೂ ಚೂರಾಗದಿರಲಿ.
ಇಂತಿ,
ಕಾವ್ಯ.ಎನ್, ತುಮಕೂರು
Published On - 3:32 pm, Fri, 12 February 21