Valentine’s Day: ಗೆಳತಿ, ಮಾತು ಚುಚ್ಚಿ ತೆಗೆವ ಶೂಲ, ಮೌನ ಒಳಗೊಳಗೆ ನಾಟುವ ಮುಳ್ಳು

My Love Story: ಪ್ರತಿ ವಸಂತಕ್ಕೂ ಇಡೀ ಪ್ರಕೃತಿಯೇ ಹೊಸ ವೇಷದಲ್ಲಿ, ಹೊಸ ಚೈತನ್ಯದಲ್ಲಿ ಬದಲಾಗುತ್ತದೆ. ಇನ್ನು ನನ್ನ ಪರಿಸ್ಥಿತಿ ಬದಲಾಗೋದಿಲ್ಲವಾ..? ನನ್ನ ನಂಬು ಗೆಳತಿ, ನಂಬಿಕೆಯೇ ಬದುಕು.

Valentine's Day: ಗೆಳತಿ, ಮಾತು ಚುಚ್ಚಿ ತೆಗೆವ ಶೂಲ, ಮೌನ ಒಳಗೊಳಗೆ ನಾಟುವ ಮುಳ್ಳು
ನಿನ್ನ ಹೊರತು ಬೇರೆನೂ ಬೇಕಿಲ್ಲ ನನಗೆ. ನನ್ನ ಬದುಕಿನ ಮುಖ್ಯ ವೇದಿಕೆಯಲ್ಲಿ ನಿನ್ನದೇ ಅಧ್ಯಕ್ಷತೆ.
Follow us
Skanda
|

Updated on:Feb 12, 2021 | 2:24 PM

ಪ್ರೇಮವೇ.. ನಿನ್ನ ಪರಿಭಾಷೆಯ ಹುಡುಕಾಟದಲ್ಲಿರುವೆ. ನಿನ್ನ ದರ್ಶನ ಪಡೆಯುವ ಹಂಬಲದಲ್ಲಿ ಅನುಯಾಯಿ ಆಗಿರುವೆ. ನೀನೇನೋ ನಿನಗೆ ಗೊತ್ತಿಲ್ಲದಂತೆ ಅನುರಾಗದ ಕಡಲಲ್ಲಿ ನನ್ನನ್ನು ನೂಕಿಬಿಟ್ಟೆ. ಆದರೆ, ನಾನೀಗ ಈಜಲು ಬಾರದೆ ಗೊಂದಲದ ಅಲೆಗಳ ಹೊಡೆತಕ್ಕೆ ಸಿಲುಕಿ ದಡ ಕಾಣದೆ ಕಂಗೆಟ್ಟಿರುವೆ. ನಿನ್ನ ಹಂಬಲದ ಭಾವಕಡಲಲ್ಲಿ ತೇಲುತ್ತಿರುವ ನನ್ನ ಕಣ್ಣುಗಳಲ್ಲಿ ಭರವಸೆಯ ಕನಸು ಬಿತ್ತಲು, ಕಂಗೆಟ್ಟಿರುವ ಈ ಜೀವವನ್ನು ರಕ್ಷಿಸಲು, ಅನುರಾಗದ ನೌಕೆಯಲ್ಲಿ ಪ್ರೇಮದ ಸರಕು ಹೊತ್ತು ಪ್ರೀತಿ ಹುಟ್ಟನ್ನು ಕೈಯಲ್ಲಿ ಹಿಡಿದು ಅಂಬಿಗಳಾಗಿ ಬರುವೆಯಾ?

ಹೇ.. ನನ್ನ ಬದುಕಿನ ‌ನಾಡಿಮಿಡಿತವೇ, ಹೇಗೆ ಮನುಷ್ಯನ ನಾಡಿಮಿಡಿತ ನಿಂತರೆ ಜೀವನವೇ ಶೂನ್ಯವಾಗಿಬಿಡುತ್ತದೋ ಹಾಗೇ ನನ್ನ ಬದುಕಲ್ಲಿ ನೀನಿಲ್ಲವಾದರೆ ಬದುಕು ಶೂನ್ಯ. ನೀ ಸಿಗದಿದ್ದರೆ ಕಡೆಯ ಘಳಿಗೆಗಾಗಿ ಕಾಯುತ್ತಿರುವಂತಹ ವೃದ್ಧಾಪ್ಯದ ವೈರಾಗ್ಯ ಭಾವ ನನ್ನ ಸಂಗಾತಿಯಾಗುವ ಅಪಾಯವಿದೆ. ಏನೋ ಗೊತ್ತಿಲ್ಲ ಗೆಳತಿ.. ನಿನ್ನ ಪ್ರೀತಿಸಲು ಏನು ಕಾರಣ ಕೊಡಲಿ ನಾನು? ಕಾರಣವಿಲ್ಲದೆ ಏನನ್ನೂ ಮಾಡದ ನಾನು, ನಿನ್ನ ಪ್ರೀತಿ ಮಾಡುವುದರಲ್ಲಿ ಕಾರಣ ಹುಡುಕಲು ಪ್ರತಿ ಸಲವೂ ವಿಫಲನಾಗುತ್ತಿರುವೆ. ನೀನೇಕೆ ನನಗೆ ಅಷ್ಟೊಂದು ಇಷ್ಟ?

ಗೆಳತಿ, ಮಾತುಗಳು ಚುಚ್ಚಿ ತೆಗೆದ ಶೂಲವಾದರೆ, ಮೌನವೆನ್ನುವುದು ಒಳಗೊಳಗೆ ನಾಟಿದ ಮುಳ್ಳಿನಂತೆ. ಮೌನ ಯಾವ ಕಡೆ ಇದ್ದರೇನು ಬೆಳೆಸಿದಷ್ಟು ಚುಚ್ಚುತ್ತದೆ. ನಾನು ಮೌನ ಮುರಿದದ್ದಾಗಿದೆ ನೋಡು, ಇದೀಗ ಏನಿದ್ದರೂ ನಿನ್ನ ಸರದಿ. ಮೌನ ಮುರಿದು ಮಾತನಾಡಿಬಿಡು ಗೆಳತಿ. ಸಾಕಾಗಿದೆ ಗೊಂದಲಗಳ ಸಹವಾಸ, ಸಾಕಾಗಿದೆ ಆತಂಕದ ಒಡನಾಟ. ಪ್ರೀತಿ ಜಗತ್ತಿನ ಎಲ್ಲಾ ಎಲ್ಲೆಗಳನ್ನು ಮೀರಿದ್ದು, ಅದಕ್ಕೆ ಸ್ಥಾನಮಾನ, ಪದವಿ, ಪುರಾವೆಗಳ ಹಂಗಿಲ್ಲ. ಪ್ರೀತಿ ಎನ್ನುವುದು ಮನಸ್ಸುಗಳಿಗೆ ಸಂಬಂಧಿಸಿದ್ದು ಪ್ರತಿಷ್ಟೆಗಳಿಗಲ್ಲ. ಸಮಾನ ಮನಸ್ಸುಗಳು ಬೇಕು, ಸಮಾನ ಯೋಗ್ಯತೆಗಳಲ್ಲ. ಯೋಗ್ಯತೆ, ಪ್ರತಿಷ್ಠೆಗಳೇ ಸಂಬಂಧಗಳ ಮಾನದಂಡವಾದರೆ ಗುಣಸ್ವಭಾವ, ಸಚ್ಚಾರಿತ್ರ್ಯಕ್ಕೇನು ಬೆಲೆ?

ನಿನ್ನ ಹೊರತು ಬೇರೆನೂ ಬೇಕಿಲ್ಲ ನನಗೆ. ನನ್ನ ಬದುಕಿನ ಮುಖ್ಯ ವೇದಿಕೆಯಲ್ಲಿ ನಿನ್ನದೇ ಅಧ್ಯಕ್ಷತೆ. ನನ್ನ ಕೊನೆಯ ಕ್ಷಣದಲ್ಲೂ ನಿನ್ನ ಪಿಸುಮಾತು ನನ್ನ ಮನವ ಮೀಟುತ್ತಿರಬೇಕಷ್ಟೇ.. ಮಾತಾಡಿಬಿಡು ಗೆಳತಿ. ನಾನು ಕೊನೆ ಉಸಿರು ಎಳೆಯುವಾಗ ನಿನ್ನ ಮಡಿಲಲ್ಲಿ ಮಲಗಿ, ಕಣ್ಣಲ್ಲಿ ಕಣ್ಣಿಟ್ಟು ಈ ಜನ್ಮದ ವಿದಾಯ ಮುಂದಿನ ಜನ್ಮದ ಆಮಂತ್ರಣವೆಂಬಂತೆ ನಿವೇದಿಸಿಕೊಳ್ಳಲು ಅವಕಾಶ ಮಾಡಿಕೊಡು. ಇಲ್ಲಿ ಬರೆದಿರೋ ಒಂದೊಂದು ಅಕ್ಷರವೂ ನನ್ನ ಮನಸ್ಸಿನ ಪ್ರತಿರೂಪ, ಪ್ರಕೃತಿಯಷ್ಟೇ ಸತ್ಯ

ಇದನ್ನೂ ಓದಿ: ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ!

ಭವಿಷ್ಯದ ಲೆಕ್ಕಾಚಾರದ ಬಲೆಯಲ್ಲಿ ಪ್ರೀತಿಯನ್ನು ಬಲಿ ಕೊಡಬೇಡ. ಪ್ರತಿ ವಸಂತಕ್ಕೂ ಇಡೀ ಪ್ರಕೃತಿಯೇ ಹೊಸ ವೇಷದಲ್ಲಿ, ಹೊಸ ಚೈತನ್ಯದಲ್ಲಿ ಬದಲಾಗುತ್ತದೆ. ಇನ್ನು ನನ್ನ ಪರಿಸ್ಥಿತಿ ಬದಲಾಗೋದಿಲ್ಲವಾ..? ನನ್ನ ನಂಬು ಗೆಳತಿ, ನಂಬಿಕೆಯೇ ಬದುಕು. ನಿನ್ನಡಿಯಲ್ಲಿ ಕೈಯೊಡ್ಡಿ ಅಂಗಲಾಚಿ ಬೇಡುತಿರುವೆ, ನಿನ್ನ ಪ್ರೀತಿಯ ಪರಮಾನ್ನ ಉಣ್ಣುವ ಅಧಿಕಾರ ನನಗೆ ಕೊಡುವೆಯಾ.. ನೂರಾರು ಜನ ನಿನ್ನ ಬಗ್ಗೆ ನೂರು ಮಾತನಾಡಿದರೂ ಅವೆಲ್ಲಾ ನನಗೆ ಲೆಕ್ಕಕ್ಕಿಲ್ಲ. ಹಟಮಾರಿ ಮಗು ಉಳಿದವರಿಗೆಲ್ಲಾ ಬೇಡವಾದರೂ ತನ್ನ ತಾಯಿಗೆ ಮುದ್ದು ಮುದ್ದಾಗಿಯೇ ಕಾಣುತ್ತೆ. ಹಾಗೆಯೇ ನೀನು ನನಗೆ. ಆ ಕ್ಷಣಕ್ಕೆ ಕೋಪ ಬಂದರೂ ಮರುಕ್ಷಣ ಪ್ರೀತಿಯ ಹಿಮ ಸೋಕಿ ತಣ್ಣಗಾಗಿಬಿಟ್ಟಿರುತ್ತೆ. ಮಾತಾಡಿಬಿಡು ಗೆಳತಿ ಮೌನ ಮುರಿದು ಬಿಡು. ನಿನ್ನ ಪದಾರ್ಪಣೆಗೆ ನನ್ನ ಮನದ ಮಂದಿರ ಸದಾ ತೆರೆದಿರುತ್ತೇನೆ. ಯಾವ ಸಮಯದಲ್ಲಾದರೂ, ಯಾವ ಕ್ಷಣದಲ್ಲಾದರೂ ಬಂದುಬಿಡು. ನಿನಗಾಗಿ ಕಾಯುತ್ತಿರುವೆ.

ಇಂತಿ, ನಿನ್ನನ್ನು ಎಲ್ಲೆ ಮೀರಿ ಪ್ರೀತಿಸುವವ ಲಕ್ಷ್ಮೀಕಾಂತ ಜೋಶಿ ಕಲಬುರಗಿ

Published On - 2:23 pm, Fri, 12 February 21