ಪ್ರೀತಿ (Love) ಎಂಬ ಎರಡಕ್ಷರಕ್ಕೆ ಇರುವ ಮೌಲ್ಯವನ್ನು ವಿವರಿಸುವುದು ಬಹಳ ಕಷ್ಟ. ಪ್ರೀತಿ ನಾಟಕೀಯ ಬದುಕಲ್ಲ. ಜೊತೆಗೆ ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಸಂಗಾತಿ (Partner) ಹೀಗಿರಬೇಕು, ಹಾಗಿರಬೇಕು ಎಂದು ಕನಸಿನ (Dream) ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಆ ಕನಸಿನ ಸಂಗಾತಿ ಕಣ್ಮುಂದೆ ಬಂದಾಗ ಮಾತ್ರ ಮನಸಿನಲ್ಲಾಗುವ ತಲ್ಲಣ, ಮುಜುಗರ ಸಂದಿಗ್ಧ ಸ್ಥಿತಿಯನ್ನು ತಂದೊಡ್ಡಿ ಎಲ್ಲವನ್ನೂ ಮರೆಸಿಬಿಡಿಸುತ್ತದೆ. ಪ್ರೀತಿಯೇ ಹಾಗೇ.. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆಗಳನ್ನು ಹುಟ್ಟಿಸುವ ಸಾಮರ್ಥ್ಯವಿದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಗಳಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಅದು ಎರಡೂ ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು.
ಹಣ ಕೊಟ್ಟು ಪ್ರಪಂಚದಲ್ಲಿ ಏನನ್ನೂ ಕೊಳ್ಳಬಹುದು. ಆದರೆ ಪ್ರೀತಿಯನ್ನು ಹಣಕೊಟ್ಟು ಪಡೆಯುವುದು ಮಾತ್ರ ಖಂಡಿತಾ ಸಾಧ್ಯವಿಲ್ಲ. ಅದಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ದುಡ್ಡಿಲ್ಲದೆಯಾದರೂ ಬದುಕಬಹುದೇನೋ ಆದರೆ ಪ್ರೀತಿ ಪಡೆಯದೇ, ಇನ್ನೊಬ್ಬರಿಗೆ ಹಂಚದೆ ಒಂದು ನಿಮಿಷವೂ ಜೀವಿಸಲು ಸಾಧ್ಯವಿಲ್ಲ. ಅದೆಷ್ಟೋ ಜನರು ಪ್ರೀತಿಗಾಗಿ ಹಾತೊರೆಯುತ್ತಲೇ ಇರುತ್ತಾರೆ. ಆದರೆ, ಇನ್ನು ಕೆಲವರು ಅದಕ್ಕೆ ತದ್ವಿರುದ್ಧವಾಗಿ ಕೊಟ್ಟ ಪ್ರೀತಿಯನ್ನೇ ಕಾಲು ಕಸದಂತೆ ಕಾಣುತ್ತಾರೆ. ಅದೇನೆ ಇರಲಿ ನಾವು ಈಗ ಹೇಳಲು ಹೊರಟಿದ್ದು, ಪ್ರೀತಿಗೆ ಸಂಬಂಧಿಸಿದ ಪುಟಾಣಿ ಸಾಲುಗಳ (ಕೋಟ್ಸ್) ಬಗ್ಗೆ.
ಈ ಸಾಲುಗಳಲ್ಲಿ ಪದ ಕಡಿಮೆ ಇದ್ದರೂ, ಭಾವ ತುಂಬಿ ತುಳುಕಾಡುತ್ತಿರುತ್ತದೆ. ಇವು ಪ್ರೇಮಿಗಳಿಗೆಷ್ಟು ಅನುಕೂಲ? ಅವುಗಳ ಮೂಲಕ ಪ್ರೀತಿಯನ್ನು ಹೇಗೆ ಹೊರಹಾಕುತ್ತಾರೆ? ಮನಸ್ಸು ಬೆಸೆಯುವುದಕ್ಕೆ ಈ ಕೋಟ್ಸ್ ಎಷ್ಟು ಪ್ರಯೋಜನಕಾರಿ? ಎಂದು ಯೋಚಿಸಿದರೆ ಲೆಕ್ಕವಿಲ್ಲದಷ್ಟು ಸಂಗತಿಗಳು ತೆರೆದುಕೊಳ್ಳುತ್ತವೆ.
ಬೆಟ್ಟದಷ್ಟು ಪ್ರೀತಿ ಇರುತ್ತದೆ. ಆದರೆ ತಿಳಿಸುವ ಮಾರ್ಗ ಗೊತ್ತಿರುವುದಿಲ್ಲ. ಇದಕ್ಕೆ ಕಾರಣ ಮುಜುಗರ ಅಥವಾ ಭಯವೂ ಇರಬಹುದು. ಹೇಳಲು ಹೊರಟ ಅದೆಷ್ಟೋ ಮಾತುಗಳು ಸಂಗಾತಿಯನ್ನು ನೋಡುತ್ತಿದ್ದಂತೆ ಗಂಟಲಲ್ಲೇ ಕೂರುತ್ತವೆ. ಭಾವನೆಯನ್ನು ಪದಗಳಲ್ಲಿ ಹಂಚಿಕೊಳ್ಳಲು ಸಾಕಷ್ಟು ಪ್ರೇಮಿಗಳು ಸೋತು ಹೋಗುತ್ತಾರೆ. ಇಂತಹವರ ನೆರವಿಗೆ ಬರುವುದು ಪ್ರೀತಿ ತುಂಬಿದ ಸಾಲುಗಳು ಅಥವಾ ಕೋಟ್ಸ್!
ಪ್ರೇಮಿಗೊಂದು ಪತ್ರ
ಮೊದಲೆಲ್ಲಾ ಪ್ರಿಯತಮ/ಪ್ರಿಯತಮೆಗೆ ತನ್ನ ಪ್ರೀತಿಯ ಸಾರವನ್ನು ಎಳೆ ಎಳೆಯಾಗಿ ತಿಳಿಸಬೇಕೆಂದರೆ ಒಂದು ಪ್ರಶಾಂತ ಜಾಗಕ್ಕೆ ಹೋಗಿ, ನಿಸರ್ಗವನ್ನು ನೋಡುತ್ತ, ಹಕ್ಕಿಗಳ ಕಲರವ ಕೇಳುತ್ತಾ ನಿಸರ್ಗಕ್ಕೆ ತನ್ನ ಸಂಗಾತಿಯನ್ನು ಹೋಲಿಸುತ್ತಾ ಮನಸಿನಲ್ಲಿ ಮೂಡುವ ಪ್ರೀತಿಯನ್ನು ಪತ್ರದಲ್ಲಿ ಅಕ್ಷರಗಳ ಮೂಲಕ ನಿವೇದನೆಗಳನ್ನು ಅಚ್ಚುಕಟ್ಟಾಗಿ ಪತ್ರದಲ್ಲಿ ಬರೆಯುತ್ತಿದ್ದರು. ಇಡೀ ಬದುಕಿನ ಆಸೆ, ಆಕಾಂಕ್ಷೆಗಳನ್ನು ಪ್ರೀತಿಸಿದವರಿಗೆ ಅಕ್ಷರಗಳ ಮೂಲಕ ಎಳೆ ಎಳೆಯಾಗಿ ತಿಳಿಸುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಕೈಗೆ ಸಿಗದ ಮಟ್ಟಿಗೆ ಬೆಳೆದು ನಿಂತಿದೆ. ಪತ್ರ ಬರೆಯಬೇಕಾದ ಕೈಗಳು ಫೋನ್, ಕಂಪ್ಯೂಟರ್ಗಳನ್ನು ಹಿಡಿದಿವೆ. ಇವುಗಳ ಮೂಲಕವೇ ಮನಸ್ಸಲ್ಲಿ ಅಡಗಿದ ಪ್ರೀತಿಯ ಸಾರವನ್ನು ಸಂಗಾತಿಗೆ ತಲುಪಿಸಲು ಸಾಕಷ್ಟು ದಾರಿಗಳೂ ಹುಟ್ಟಿಕೊಂಡಿವೆ.
ಪ್ರೀತಿಗೆ ಶಕ್ತಿ ತುಂಬುವ ಸಾಲುಗಳಿವು..
ಪ್ರೀತಿ ಇಲ್ಲದ ಮೆಲೆ ಹೂವು ಅರಳಿದರೇನು? ತಾರೆಗಳು ಮಿನುಗಿದರೇನು? ಗಾಳಿ ಕಂಪು ಸೂಸಿದರೇನು? ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ, ಬರಡು ಭೂಮಿಯಂತೆ..
ಇದು ಎಲ್ಲಾ ಪ್ರೇಮಿಗಳ ಬಾಯಲ್ಲಿ ರಾರಾಜಿಸುತ್ತದೆ. ಏಕೆಂದರೆ ಈ ಸಾಲುಗಳಲ್ಲಿ ವಾಸ್ತವ ಸಂಗತಿಗಳೇ ಎದ್ದು ಕಾಣಿಸುವಂತಿವೆ. ಹೌದು, ಪ್ರೀತಿಯೊಂದಿದ್ದರೆ ಏನನ್ನೂ ಗೆಲ್ಲಬಹುದು. ಆದರೆ ಪ್ರೀತಿಯೇ ಕುಂಠಿತವಾಗಿದ್ದರೆ ಬದುಕು ನೀರಿಲ್ಲದ ಬರಡು ಭೂಮಿಯಂತಾಗುತ್ತದೆ.
ಬಿಟ್ಟು ಸಾಯುವುದು ತುಂಬಾ ಸುಲಭ..
ಆದರೆ ಬಿಟ್ಟುಕೊಟ್ಟು ಬದುಕೋದಿದೆಯಲ್ಲಾ ನರಕಕ್ಕಿಂತ ನರಕ..
ಸಂಗಾತಿಯ ಆಸೆಯೆಲ್ಲ ತನ್ನದೆಂದು ತಿಳಿದು ಬದುಕಿನ ಕನಸನ್ನು ಹೊತ್ತ ಪ್ರೇಮಿಗಳು ತನ್ನ ಪ್ರಿಯತಮೆ/ ಪ್ರಿಯಕರನನ್ನು ಇನ್ನೊಬ್ಬರಿಗೆ ಬಿಟ್ಟು ಕೊಡುವುದು ಸಾಧ್ಯನಾ? ಅಬ್ಬಾ..! ಯೋಚಿಸಲು ಕಷ್ಠವಾಗುತ್ತದೆ. ಬಿಟ್ಟು ಸಾಯಬಹುದೇನೋ ಆದರೆ ಬಿಟ್ಟುಕೊಟ್ಟು ಬದುಕುವುದು ನರಕಕ್ಕಿಂತ ನರಕವಾಗಿರುತ್ತದೆ.
ಯಾಕೋ ಗೊತ್ತಿಲ್ಲ ನಿನ್ನ ಜೊತೆ ಕಳೆದ ಸಮಯ ಖುಷಿ ನೀಡುತ್ತಿದೆ..
ನಿನ್ನ ಕಾಳಜಿಗೆ ಕಳೆದು ಹೋದೆ ನಾನು ನನ್ನಲ್ಲೇ
ದೇವರೇ ಇವಳನ್ನು ಕೊಟ್ಟು ಬಿಡು ನನಗೆ..
ಹುಟ್ಟಿನಿಂದ ಸಾಯುವವರೆಗೆ ಪ್ರತಿಯೊಬ್ಬರ ಜೀವನದಲ್ಲಿ ಗೆಳೆಯರಂತೆ ಹಲವರು ಬಂದು ಹೋಗುತ್ತಾರೆ. ಬಂದವರಿಗೆಲ್ಲ ಕೊಡಬೇಕಾದ ಪ್ರೀತಿಯನ್ನು ಕೊಟ್ಟು ಒಂದು ಸ್ಥಾನವನ್ನು ನೀಡಲಾಗುತ್ತದೆ. ಅವರೊಂದಿಗೆ ಕಳೆಯುವ ಸಮಯ ಸಂತಸವನ್ನು ನೀಡುತ್ತದೆ. ಆದರೆ ತನ್ನ ಸಂಗಾತಿಯೊಂದಿಗೆ ಇದ್ದಾಗ ಸಮಯ ಸಾಗುವುದೇ ತಿಳಿಯುವುದಿಲ್ಲ. ಎಲ್ಲವನ್ನೂ ಮರೆತು ಅವರು ನೀಡುವ ಕಾಳಜಿಗೆ ಮನಸೋತು ಅವರೊಂದಿಗೆ ಜೀವನಪೂರ್ತಿ ಇರಬೇಕೆನ್ನಿಸುತ್ತದೆ.
ಕುರುಡಾದ ನನ್ನ ಮನಕೆ ಬೆಳಕಾಗಿ ಬಂದೆ ನೀನು..
ಬರಡಾದ ನನ್ನ ಮನಕೆ ಮಳೆಯಾಗಿ ಬಂದೆ ನೀನು..
ಯಾರಲ್ಲೂ ನಿನ್ನನ್ನು ನೋಡೆನು ನಾನು..
ನೀ ತಂದ ಪ್ರೀತಿಗೆ ಕಾರಣವೇನು..?
ಕತ್ತಲೆಯಿಂದ ಆವರಿಸಿದ ನನ್ನ ಬದುಕಿಗೆ ನೀನು ಬೆಳಕಾಗಿ ಬಂದೆ ಎಂದಾಗ ಸಂಗಾತಿಗೆ ಆಗುವ ಸಂತೋಷ ಬೆಟ್ಟದಷ್ಟು. ನೀರು, ಬೆಳೆಯಿಲ್ಲದ ಬರಡಾದ ಭೂಮಿ ಎಂಬ ಹೃದಯಕ್ಕೆ ಮಳೆಯಾದ ಸಂಗಾತಿಯ ಪ್ರೀತಿ ಕೈಗೆ ಎಟುಕದಷ್ಟಿರುತ್ತದೆ. ಯಾರಲ್ಲೂ ಸಿಗದ ಪ್ರೀತಿ ಸಂಗಾತಿಯಿಂದ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಅವರ ಮೇಲಿಟ್ಟಿರುವ ನಂಬಿಕೆಯೂ ಹೌದು.
(ಪ್ರೀತಿಯ ಸಾಲುಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ)
ಇದನ್ನೂ ಓದಿ: ಪ್ರೇಮದ ಸಂಕೇತವಾಗಿ ಟೆಡ್ಡಿಬೇರ್ ಉಡುಗೊರೆ.. ಹುಡುಗಿಯರಿಗೆ ಯಾಕಿಷ್ಟ?