ಹೇ ಹುಡುಗಿ, ನಿನ್ನನ್ನು ಮೊದಲ ಸಲ ನೋಡಿದಾಗ ಮುಂದೆ ನೀ ನನಗೆ ಇಷ್ಟು ಹತ್ತಿರ ಅಗುತ್ತೀಯ ಎಂದು ತಿಳಿದಿರಲಿಲ್ಲ. ಸ್ನೇಹದ ನೌಕೆಯಲ್ಲಿ ಅರಂಭವಾದ ನಮ್ಮಿಬ್ಬರ ಪಯಣ ಪ್ರೀತಿ ಎಂಬ ದಡಕ್ಕೆ ಬಂದು ಸೇರಿದೆ ಎಂದು ತಿಳಿದಿದ್ದೇ ನೀನು ಅಂತರಂಗದ ಒಲವ ಬಿಚ್ಚಿ ಐ ಲವ್ ಯೂ ಅಂದಾಗ. ನಿನ್ನ ಕಾಡಿಸುವ ಸಲುವಾಗಿ ‘ಈಗ ಮನಸಿಲ್ಲ, ಮುಂದೆ ನೋಡೊಣ’ ಎಂದು ಹೇಳಿ ಹೊರಟ್ಟಿದ್ದೆ. ನಾ ಹೇಳಿದ್ದು ನಿಜವಲ್ಲ ಎಂದು ನಿನಗೂ ಗೊತ್ತಿದ್ದರಿಂದ ನೀ ಹೆಚ್ಟು ಮಾತನಾಡಲಿಲ್ಲ. ನಿಜ ಹೇಳಬೇಕೆಂದರೆ ನಾ ನಿನ್ನ ಮೊದಲ ಬಾರಿ ಕಂಡಾಗಲೇ ‘ಸಾಕ್ಷತ್ ದೇವತೆ ಏನಾದರು ಅಡ್ರೆಸ್ ಮಿಸ್ಸಾಗಿ ಭೂಲೋಕಕ್ಕೆ ಇಳಿದುಬಿಟ್ಳಾ?’ ಅಂದುಕೊಂಡಿದ್ದೆ. ಕಡುಕತ್ತಲಲ್ಲಿ ಕೋಟಿ ನಕ್ಷತ್ರಗಳು ಒಮ್ಮೆಲೇ ಮಿಂಚುವಂಥಾ ಅ ನಿನ್ನ ಚೆಲುವಿಗೆ ಯಾರೇ ಆದರು ಸೋಲಲೇಬೇಕು. ಇನ್ನೂ ನಾ ಹೇಗೇ ತಾನೇ ಸೋಲದೆ ಇರಲಿ ಅದರಲ್ಲೂ ನೀನೇ ಮುಂದಡಿ ಇಡುವಾಗ.
ಜಲಪಾತದಲ್ಲಿ ಹರಿವ ನದಿ ತೊರೆಯಂತೆ ಹಣೆ ಮೇಲೆ ಹರಡುವ ಕೇಶ ರಾಶಿ. ಪ್ರೌಢಕ್ಕೆ ಬಂದ ಚಂದಿರನಂತಿರುವ ಆ ನಿನ್ನ ಕಂಗಳು. ಘಾಟಿ ರಸ್ತೆಯಂತೆ ಕ್ಷಣಕ್ಕೊಮ್ಮೆ ಬಳಕುವ ಹುಬ್ಬುಗಳು. ಗಿಣಿ ಮೂಗಿನ ಮೇಲೇ ರವೆಯಷ್ಟೇ ಇರುವ ಮೂಗುತಿ. ನಕ್ಕರೆ ಸಾಕು ಹಾಜರಾತಿ ತೋರುವ ಗುಳಿಕೆನ್ನೆ. ತಾವರೆ ಮೊಗದ ನೋಟ. ಅಬ್ಬಬ್ಬಾ.. ಒಂದಾ.. ಎರಡಾ.. ನಿನ್ನ ಅಂದವ ಹೊಗಳುತ್ತಾ ನಿಂತರೆ ಪತ್ರಕರ್ತ ಅಗಬೇಕೆಂದಿರುವ ನಾನು ಅದೆಲ್ಲಿ ಪ್ರೇಮಕವಿಯಾಗು ಬಿಡುತ್ತೇನೆ ಎನ್ನುವ ಅಂಜಿಕೆ ಶುರುವಾಗುತ್ತೆ. ನಾನು ಸಹ ಎಲ್ಲಾ ಪ್ರೇಮಿಗಳಂತೆ ನಿನಗಾಗಿ ನೂರಾರು ಕನಸು ಕಂಡಿರುವೆ. ಅದರೆ, ನಿನ್ನೆದುರು ಹೇಳಲಾಗದೆ ಪರದಾಡುತ್ತಿದ್ದೇನೆ. ಹೇಗೋ ಧೈರ್ಯಮಾಡಿ ಈ ಪತ್ರದಲ್ಲಿ ಹೇಳುತ್ತಿರುವೆ. ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್ ಮಾಡ್ಕೋ.. ನನಗೆ ನಿನ್ನೊಂದಿಗೆ ಕಾಫೀ ಡೇ ಕಪ್ಪುಗಳಿಗೆ ಮುತ್ತಿಕ್ಕುತ್ತ ಕಣ್ಣಲ್ಲಿ ಕಣ್ಗೂಡಿಸುವಾಸೆ, ತೀಡುವ ತಂಗಾಳಿಯೊಂದಿಗೆ ಕಿರುಬೆರಳ ಹಿಡಿದು ಕಡಲ ತೀರದಲ್ಲಿ ನಡೆಯುವಾಸೆ, ಮಾಗಿ ಚಳಿಯಲ್ಲಿ ಜಗವ ಮರೆತು ಕೊಡಚಾದ್ರಿ ಬೆಟ್ಟವ ಏರಿ ಕುಳಿತುಕೊಳ್ಳುವಾಸೆ, ನನ್ನ ಬುಲೆಟ್ ಬೈಕಿನ ಮೇಲೆ ನಿನ್ನ ಕೂರಿಸಿ ಊರೆಲ್ಲ ಸುತ್ತುವಾಸೆ, ಚಾಚಿದ ಕೈಗಳ ನಿನ್ನನ್ನು ಗೋಲ್ಗುಂಬಜ್ನಲ್ಲಿ ಎತ್ತಿ ಹಿಡಿಯುವಾಸೆ.. ಹೀಗೆ ಆಸೆಗಳೆನೋ ಕೋಟಿ ಇವೆ. ಅದರೆ, ಅದ್ಯಾಕೋ ಕಾಣೇ ಗೆಳತಿ ನಿನ್ನ ಎದುರು ನಿಂತರೆ ಮಾತಾಡುವುದೇ ಮರೆತು ಹೋಗುತ್ತದೆ.
ಇದನ್ನೂ ಓದಿ: ದಿನಪೂರ್ತಿ ಬಿಕ್ಕಳಿಸುವಷ್ಟು ನೆನಪಿಸಿಕೊಳ್ಳುವೆ ನಿನ್ನ, ಗೊತ್ತಿಲ್ಲದಂತೆ ನಟಿಸಬೇಡವೋ
ಇನ್ನು ನಿನ್ನನ್ನು ಕಾಯಿಸಲ್ಲ, ಈ ಸಂಕಷ್ಟದ ದಿನಗಳು ಮುಗಿದ ನಂತರ ಎಂದಿನಂತೆ ನಮ್ಮ ಅಡ್ಡಾದಲ್ಲಿ ಭೇಟಿಯಾಗುವ. ಎದೆಗೂಡಲ್ಲಿ ಬಚ್ಚಿಟ್ಟು ಬಟವಾಡೆಗೊಂಡ ನೂರಾರು ಮಾತುಗಳೊಂದಿಗೆ, ಅಂತರ್ಯದಲ್ಲಿ ಹುದುಗಿಟ್ಟ ಹತ್ತಾರು ಬಾವಗಳೊಂದಿಗೆ ಆ ದಿನ ಎದುರಾಗುವೆ. ಪ್ಲೀಸ್.. ಯಾವತ್ತೂ ದೂರಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು.
ಇಂತಿ ನೀನೇ ಕರೆವಂತೆ ಡುಮ್ಮ
ರೂಪೇಶ್ ಸುಮ್ಮನೆ
Published On - 6:59 pm, Fri, 12 February 21